ಐವರ್ನಾಡು | ಆಕಸ್ಮಿಕ ಬೆಂಕಿ – ಹೊತ್ತಿ ಉರಿದ ಗುಡ್ಡ | ಬೇಸಗೆಯಲ್ಲಿ ಮುಂದುವರೆದ ಬೆಂಕಿ ಅವಘಡ

ಸುಳ್ಯ : ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸಮೀಪ ಆಕಸ್ಮಿಕವಾಗಿ ಗುಡ್ಡಕ್ಕೆ ಬೆಂಕಿಹತ್ತಿಕೊಂಡಿದ್ದು ಬೆಂಕಿ ಉರಿದು ಅಪಾರ ಸಸ್ಯ ಸಂಕುಲ‌ ಸುಟ್ಟು ಕರಕಲಾಗಿದೆ.

ಸುಳ್ಯದಿಂದ ಅಗ್ನಿಶಾಮಕದಳದವರು ಬೆಂಕಿ ನಂದಿಸಿದರು.
ಬಿಸಿಲಿಗೆ ಬೆಂದು ಒಣಗಿ ಹೋಗಿರುವ ಗುಡ್ಡ ಪ್ರದೇಶಗಳು ಬಹುಬೇಗ ಬೆಂಕಿ ಹೊತ್ತಿಕೊಂಡು ಹರಡಲು ಕಾರಣವಾಗಿವೆ. ಒಂದೊಮ್ಮೆ ಕೃಷಿ ಭೂಮಿಗೆ ಬೆಂಕಿ ಹೋತ್ತಿಕೊಂಡರೆ ಆರಿಸುವುದು ಕೂಡ ಕಷ್ಟ. ಯಾಕೆಂದರೆ ಎಲ್ಲಾ ಕೃಷಿ ಭೂಮಿಗಳಿಗೆ ಎಲ್ಲಕಡೆಯಿಂದಲೂ ರಸ್ತೆಯ ಸಂಪರ್ಕ ಇರುವುದಿಲ್ಲ. ಮೊನ್ನೆ ಸುಳ್ಯದಲ್ಲಿ ಹಿಂದಷ್ಟೇ ಗುಡ್ಡಕ್ಕೆ ಬೆಂಕಿ ಬಿದ್ದಿತ್ತು ಅದನ್ನು ಆರಿಸಲು ಅಲ್ಲಿಗೆ ರಸ್ತೆ ಸರಿ ಇಲ್ಲ ಎಂಬ ಕಾರಣ ನೀಡಿ ಅಗ್ನಿಶಾಾಮಕ ದಳದವರು ಬೆಂಕಿ ಆರಿಸದೇ ವಾಪಸ್ಸು ಹೋಗಿದ್ದರು.

ಕೃಷಿ ಭೂಮಿಗೆ ಗುಡ್ಡಕ್ಕೆ ಬೆಂಕಿ ಬೀಳಲು ಮುಖ್ಯಕಾರಣ ಪಕ್ಕದಲ್ಲಿ ಹಾದು ಹೋಗುತ್ತಿರುವ ವಿದ್ಯುತ್ ಸಂಪರ್ಕ ಲೈನ್ ಗಳು. ಅವುಗಳಿಂದ ಹಿಡಿಯುವ ಕಿಡಿ ಅಥವಾ ಟ್ರಾನ್ಸ್ ಫಾರ್ಮರ್ ಗಳಿಂದ ಕೆಲವೊಮ್ಮೆ ಹೊರಚಿಮ್ಮುವ ಬೆಂಕಿ ಹೊತ್ತಿಕೊಂಡು ಹರಡಲು ಕಾರಣವಾಗುತ್ತದೆ. ಈ ಬೇಸಗೆಯ ಸಮಯದಲ್ಲಿ ರಬ್ಬರ್ ತೋಟದ ಕೆಳಗೆ ಇರುವ ಹುಲ್ಲು ಕಡ್ಡಿ ತರಗೆಲೆಗಳು ಮುಂತಾದ ಸುಲಭವಾಗಿ ಬೆಂಕಿ ಹೊತ್ತುಕೊಳ್ಳುವ ವಸ್ತುಗಳು ಒಣಗಿದ್ದು ಬೆಂಕಿಗೆ ಸುಲಭವಾದ ಉರುವಲು ಆಗಿರುತ್ತವೆ. ನಿಮ್ಮ ರಬ್ಬರ್ ತೋಟದ ಮೂಲಕ ಅಥವಾ ರಬ್ಬರ್ ತೋಟದ ಬದಿಯಲ್ಲಿ ವಿದ್ಯುತ್ ಸಂಪರ್ಕದ ಲೈನು ಹೋಗಿದ್ದರೆ ಜಾಗ್ರತೆ ವಹಿಸುವುದು ಮುಖ್ಯ. ವಿದ್ಯುತ್ ಲೈನ್ ನ ಎರಡು ಬದಿಯಲ್ಲೂ ಕನಿಷ್ಠ ಹತ್ತು ಹತ್ತು ಅಡಿಗಳಷ್ಟು ದೂರದ ತರಗೆಲೆ-ಒಣಹುಲ್ಲು ಗುಡಿಸಿ ತೆಗೆಯಬೇಕು. ವಿದ್ಯುತ್ ಕಿಡಿ ಉಂಟಾದರೂ, ಬೆಂಕಿ ಹೊತ್ತಿಕೊಳ್ಳಲು ಅಲ್ಲಿ ತರಗೆಲೆಗಳು ಹುಲ್ಲು ಯಾವುದು ಇರಬಾರದ ರೀತಿ ನೋಡಿಕೊಳ್ಳಬೇಕು.

ಅಷ್ಟೇ ಅಲ್ಲದೆ ನಿಮ್ಮ ರಬ್ಬರ್ ಪ್ಲಾಟಿನ ಬದಿಯಿಂದ ರಸ್ತೆ ಹಾದು ಹೋಗಿದ್ದರೆ ರಸ್ತೆಯ ಉದ್ದಕ್ಕೂ ನೀವು ತರಗೆಲೆ ಮತ್ತು ಒಣ ಹುಲ್ಲು ತೆಗೆದು ಕ್ಲೀನ್ ಮಾಡಿಟ್ಟು ಕೊಳ್ಳಬೇಕು. ಯಾರಾದರೂ ಸೇದಿ ಎಸೆದ ಬೀಡಿ ಅತ್ತ ಕಡೆ ಬಿಸಾಕಿದರೂ ಬೆಂಕಿ ಹೊತ್ತಿಕೊಳ್ಳದಂತೆ ನೋಡಿಕೊಳ್ಳಬೇಕು. ಮುಂಜಾಗ್ರತೆ ವಹಿಸುವುದು ಬಹುಮುಖ್ಯ. ತಪ್ಪಿದರೆ ವರ್ಶಾಂತರಗಳಿಂದ ಸಾಕಿ ಸಲಹಿ ಬೆಳೆದ ಬೆಳೆಯನ್ನು ಕೆಲವೇ ಗಂಟೆಗಳಲ್ಲಿ ಕಳೆದುಕೊಳ್ಳುವ ಸಂಭವ ಇರುತ್ತದೆ.

Leave A Reply

Your email address will not be published.