ಸಮಾರಂಭಗಳ ಲಾಕ್ಡೌನ್ ಮತ್ತೆ ನಾಲ್ಕು ವಾರ ಮುಂದೂಡಿಕೆ ಬಹುತೇಕ ಫಿಕ್ಸ್

ನವದೆಹಲಿ : ದೇಶಾದ್ಯಂತ ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕು ತಡೆಗಟ್ಟುವ ವಿಷಯದಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದಿದ್ದರೂ ಕೊರೋನಾ ವ್ಯಾಧಿ ಹಬ್ಬುವ ವೇಗ ಮತ್ತು ತೀವ್ರತೆಯ ಮುಂದೆ ಈಗ ಮಾಡಿದ ಸಾಧನೆ ಏನೇನೂ ಅಲ್ಲ.

ಆದ್ದರಿಂದ ಈಗಿನ ಲಾಕ್ ಡೌನ್ ಅಂತ್ಯವಾಗುವ ಏ.14 ರ ನಂತರವೂ ದೇಶಾದ್ಯಂತ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ಚಿಂತನೆ ನಡೆಸಿದೆ. 

ಲಾಕ್ ಡೌನ್ ಮುಂದುವರೆಸುವುದರ ಪರವಾಗಿ ಭಾರತದ ಬಹುತೇಕ ರಾಜ್ಯಗಳೂ ಕೂಡ ಬೇಡಿಕೆ ಇಟ್ಟಿವೆ. ಹಲವು ರಾಜ್ಯಗಳ ಮನವಿಯನ್ನು ಕೇಂದ್ರ ಸರ್ಕಾರ ಪರಿಗಣಿಸಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ಕೇಂದ್ರ ಸರಕಾರವು ತಜ್ಞರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದೆ.

ನಿನ್ನೆ ನಡೆದ ರಾಜ್ ನಾಥ್ ಸಿಂಗ್ ನೇತೃತ್ವದ, ಗೃಹಮಂತ್ರಿ ಅಮಿತ್ ಶಾ ಮತ್ತು ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್ ಭಾಗವಹಿಸಿದ್ದ ಕೇಂದ್ರ ಉನ್ನತ ಸಚಿವರ ಸಭೆಯಲ್ಲಿ, ಲಾಕ್ ಡೌನ್ ಬಗ್ಗೆ ಚರ್ಚೆ ನಡೆದಿದ್ದು ವಿದ್ಯಾಕೇಂದ್ರಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು, ವಿವಾಹ ಮುಂತಾದ ಸಮಾರಂಭಗಳು ಖಂಡಿತವಾಗಿಯೂ ಮತ್ತೆ ನಾಲ್ಕು ವಾರಗಳ ಕಾಲ ಲಾಕ್ ಡೌನ್ ಗೆ ಒಳಪಡಲಿವೆ ಎನ್ನುವುದು ಬಹುತೇಕ ಫಿಕ್ಸ್. ಘೋಷಣೆಯೊಂದೇ ಬಾಕಿ ಉಳಿದಿರುವುದು.

ಲಾಕ್ ಡೌನ್ ಮುಂದುವರೆಸುವ ಬಗ್ಗೆ ಈವರೆಗೂ ಕೇಂದ್ರ ಸರ್ಕಾರ ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲವಾದರೂ, ಇವತ್ತಿನ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಅಲ್ಲದೆ ಬೇರೆ ಯಾವುದೇ ಇನ್ನೊಂದು ವಿಧಾನ ಇಲ್ಲವಾದುದರಿಂದ ನಾವೆಲ್ಲ ಮತ್ತೊಂದಷ್ಟು ದಿನದ ಲಾಕ್ ಡೌನ್ ಗೆ ಮಾನಸಿಕವಾಗಿ ತಯಾರಾಗಿ ನಿಲ್ಲಬೇಕಷ್ಟೆ. ಆದರೆ ಮುಂದಿನ ಹಂತದ ಲಾಕ್ ಡೌನ್ ನ ಮಾದರಿ ಬೇರೆಯೇ ತೆರನಾಗಿದ್ದು , ಹಲವು ರೀತಿಯ ಸಡಿಲಿಕೆ ಇರುವುದರಿಂದ ದೈನಂದಿನ ಕಟ್ಟುಪಾಡುಗಳಿದ್ದರೂ ಸ್ವಲ್ಪ ಮಟ್ಟಿಗಿನ ವ್ಯಾಪಾರ ವಹಿವಾಟು ಮತ್ತು ಕೈಗಾರಿಕೆಗಳಿಗೆ ಅವಕಾಶ ಇರುತ್ತದೆ ಎನ್ನಲಾಗುತ್ತಿದೆ.

Leave A Reply

Your email address will not be published.