ಕುದ್ಮಾರು| ಲಾಕ್‌ಡೌನ್‌ನಿಂದ ಅರ್ಧದಲ್ಲೇ ಬಾಕಿ ಯಾದ ರಸ್ತೆ ಕಾಮಗಾರಿ, ಮನೆ ಅಂಗಳಕ್ಕೆ ಮಳೆ ನೀರು
ಸವಣೂರು : ಕುದ್ಮಾರು ಹಾಗೂ ಆಲಂಕಾರು ಗ್ರಾಮಗಳ ಮಧ್ಯೆ ಬರುವ ಶಾಂತಿಮೊಗರು ಎಂಬಲ್ಲಿ ಕುಮಾರಧಾರ ನದಿಗೆ ನಿರ್ಮಾಣವಾದ ಸೇತುವೆಯ ಸಂಪರ್ಕ ರಸ್ತೆಯ ಮರು ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಕುದ್ಮಾರು ದ್ವಾರದ ಬಳಿಯಿಂದ ಸುಮಾರು ಎಂಟು ನೂರು ಮೀಟರ್ ರಸ್ತೆ ಡಾಮರೀಕರಣ ಕಾರ್ಯಕ್ಕಾಗಿ ರಸ್ತೆ ಅಗಲೀಕರಣ ಹಾಗೂ ಇತರ ಕಾರ್ಯಗಳು ನಡೆಯುತ್ತಿವೆ.
ಆದರೆ ಲಾಕ್‌ಡೌನ್ ಆದ ಪರಿಣಾಮ ಕಾಮಗಾರಿ ಅರ್ಧದಲ್ಲೆ ಬಾಕಿಯಾಗಿದೆ. ಇದರಿಂದಾಗಿ ಎ.7ರಂದು ಸಂಜೆ ಸುರಿದ ಅಕಾಲಿಕ ಮಳೆಯಿಂದಾಗಿ ರಸ್ತೆಯ ಬದಿಯಲ್ಲಿ ಇದ್ದ 2 ಮನೆಗಳ ಅಂಗಳಕ್ಕೆ ಮಣ್ಣು ಮಿಶ್ರಿತ ಮಳೆ ನೀರು ಬಂದು ಸೇರಿಕೊಂಡಿದೆ.
ಶಾಂತಿಮೊಗರು ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯ ಎ.೩ರಿಂದ ಪ್ರಾರಂಭವಾಗ ಬೇಕಿತ್ತು.ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಎ.3 ಕ್ಕೂ ಮುನ್ನ ಈ ಭಾಗದ ಕಾಮಗಾರಿ ಮುಗಿಯಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು.
ಅಲ್ಲದೆ ಕುದ್ಮಾರಿನಿಂದ ಶಾಂತಿಮೊಗರು ತನಕ ನಡೆಯುವ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ, ಧೂಳು ತುಂಬಿ ರೋಗ ಹರಡುವ ಭೀತಿ ಎದುರಾಗಿತ್ತು,ಅಲ್ಲದೆ ನಿಧಾನಗತಿಯ ಕಾಮಗಾರಿಯಿಂದಾಗಿ ಮಾರ್ಚ್ ಅಂತ್ಯದೊಳಗೆ ರಸ್ತೆ ಅಗಲೀಕರಣ ಡಾಮರೀಕರಣ ಪೂರ್ಣವಾಗದೆಂಬ ಆತಂಕದಿಂದ ಇಲ್ಲಿನ ಸಾರ್ವಜನಿಕರು ಸಭೆ ಸೇರಿ ಪ್ರತಿಭಟನೆ ನಡೆಸುವ ಸಿದ್ದತೆ ನಡೆಸಿದ್ದರು. ಬಳಿಕ ಅಽಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಕಾಮಗಾರಿ ನಿಗದಿತ ದಿನದೊಳಗೆ ಮುಗಿಸುವ ಕುರಿತು ಭರವಸೆ ನೀಡಿದ್ದರು.
ಲಾಕ್‌ಡೌನ್‌ನಿಂದಾಗಿ ಕಾಮಗಾರಿ ಮುಂದುವರಿಯಲಿಲ್ಲ.ಆದರೆ ಮಳೆ ಬಂದ ಪರಿಣಾಮ ೨ ಮನೆಯ ಅಂಗಳಕ್ಕೆ ಮಳೆ ನೀರು ಸೇರಿಕೊಂಡಿದೆ.
ಇನ್ನೂ ಮಳೆಗಾಲ ಆರಂಭಕ್ಕೂ ಮುನ್ನ ಈ ರಸ್ತೆಯ ಕಾಮಗಾರಿ ಹಾಗೂ ಈ ಮನೆಯವರ ಸಮಸ್ಯೆ ಗೆ ಪರಿಹಾರ ಮಾಡದೇ ಇದ್ದಲ್ಲಿ ಸಂಪೂರ್ಣವಾಗಿ ಮಣ್ಣಿನಿಂದ ಆವೃತವಾಗಲಿದೆ ಎಂಬ ಭಯ ಮನೆಯವರಿಗೆ ಕಾಡಿದೆ.
ಕೂಡಲೇ ಈ ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಇಲಾಖೆ ಗಮನ ಹರಿಸಬೇಕಿದೆ.