ಲಾಕ್​ಡೌನ್ ವೇಳೆ PRESS ಎಂದು ಕಾರಿಗೆ ಸ್ಟಿಕ್ಕರ್ ಅಂಟಿಸಿ ಓಡಾಟ | ಇನೋವಾದೊಂದಿಗೆ ಚಾಲಕ ಲಾಕ್ !

ವರ್ಷಪೂರ್ತಿ ಬೇಕಾದರೆ ಲಾಕ್ ಡೌನ್ ಇರಲಿ, ಕಾರಿಗೆ PRESS ಎಂದು ಸುಳ್ಳು ಚೀಟಿ ಅಂಟಿಸಿ ಕೊಂಡು ಹೋದರಾಯಿತು. ಎಲ್ಲಿಗೆ ಬೇಕಾದರೂ ಹೋಗಬಹುದು. ನಮ್ಮನ್ನು ಯಾರೂ ನಿಲ್ಲಿಸುತ್ತಾರೆ ? ನಮ್ಮನ್ನು ಲಾಕ್ ಮಾಡುವವರು ಯಾರು ? ಎಂದು ರಾಜಾರೋಷವಾಗಿ ತಿರುಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಾಹನ ಸಮೇತ ಲಾಕ್ ಮಾಡಿದ್ದಾರೆ.

ಮಾಧ್ಯಮ ಎಂದು ಸುಳ್ಳು ಗುರುತಿನ ಚೀಟಿ ಅಂಟಿಸಿ ಓಡಾಡುತ್ತಿದ್ದ ಇನ್ನೋವಾ ಕಾರನ್ನು ವಶಪಡಿಸಿಕೊಂಡ ಕಂಕನಾಡಿ ನಗರ ಠಾಣಾ ಪೊಲೀಸರು ಆರೋಪಿ ಚಾಲಕನನ್ನೂ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ವಿವೇಕನಗರದ ಕಾರು ಚಾಲಕ ಹುಸೈನ್ ಅಲಿ ನೇ ಬಂಧಿತ ವ್ಯಕ್ತಿ.

ನಿನ್ನೆ ಸಂಜೆ 6.45 ಸುಮಾರಿಗೆ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಇನೋವಾ ಕಾರನ್ನು ಸಂಚಾರ ದಕ್ಷಿಣ ಪೊಲೀಸ್ ಇನ್ಸ್ಪೆಕ್ಟರ್ ಅವರು ತಡೆದು ಪರಿಶೀಲನೆ ಮಾಡಿದಾಗ ಕಾರಿನ ಮುಂದಿನ ಮತ್ತು ಹಿಂದಿನ ಗಾಜಿನಲ್ಲಿ “PRESS”  “ದಿ ಹಿಂದೂ” ಮತ್ತು ಅರ್ಜೆಂಟ್ ಎಂಬ ಸ್ಟಿಕ್ಕರನ್ನು ಅಂಟಿಸಲಾಗಿತ್ತು.

ಆದರೆ ಕಾರಿನಲ್ಲಿ ಮಾಧ್ಯಮಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿ ಅಥವಾ ಸಂಬಂಧಿಸಿದ ಕಾಗದ ಪತ್ರಗಳು ಇರಲಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಮಾಧ್ಯಮ ಎಂದು ಸುಳ್ಳು ಚೀಟಿ ಅಂಟಿಸಿ ಸಂಚರಿಸುತ್ತಿರುವುದು ಇದರಿಂದ ತಿಳಿದು ಬಂದಿದೆ‌.

ವಾಹನವನ್ನು ವಶಕ್ಕೆ ಪಡೆದು ಚಾಲಕನನ್ನು ವಿಚಾರಿಸಿದಾಗ ಪ್ರಕರಣ ಹೊರ ಬಂದಿದೆ. ಕಾರು ಮತ್ತು ಚಾಲಕನನ್ನು ದಸ್ತಗಿರಿ ಮಾಡಲಾಗಿದೆ.  ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave A Reply

Your email address will not be published.