ಕೇರಳ – ಕರ್ನಾಟಕ ಗಡಿ ವಿವಾದ ಕೇಂದ್ರದ ಮಧ್ಯಸ್ಥಿಕೆಯಲ್ಲಿ ಸೌಹಾರ್ದಯುತವಾಗಿ ಅಂತ್ಯ | ತುರ್ತು ಅಗತ್ಯಕ್ಕೆ ಮಾತ್ರವೇ ಗಡಿ ತೆರವು

ಮಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿವಾದಕ್ಕೆ ಕಾರಣವಾಗಿದ್ದ ಕೇರಳ ಹಾಗೂ ಕರ್ನಾಟಕದ ಗಡಿ ವಿವಾದವು ಕೇಂದ್ರ ಸರಕಾರದ ಮಧ್ಯಸ್ಥಿಕೆಯಲ್ಲಿ ಬಗೆ ಹರಿದಿದೆ.

ಕೊರೊನಾ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ಮಂಗಳೂರು – ಕಾಸರಗೋಡು ರಸ್ತೆಯನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಆದರೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರದ ಮದ್ಯಸ್ಥಿಕೆಯಲ್ಲಿ ಎರಡೂ ರಾಜ್ಯಗಳು ವಿವಾದವನ್ನು ಬಗೆ ಹರಿಸಿಕೊಳ್ಳುವಂತೆ ಸೂಚನೆಯನ್ನು ನೀಡಿತ್ತು. ಇದೀಗ ಕೇಂದ್ರದ ಮಧ್ಯಸ್ಥಿಕೆಯಲ್ಲಿ ಕರ್ನಾಟಕ ಮತ್ತು ಕೇರಳ ಸರಕಾರಗಳ ನಡುವೆ ಸೌಹಾರ್ದಯುತವಾಗಿ ಬಿಕ್ಕಟ್ಟು ಬಗೆಹರಿದಿದೆ.

ಇವತ್ತು ಸುಪ್ರೀಂಕೋರ್ಟಿನಲ್ಲಿ ಕರ್ನಾಟಕ ಸರಕಾರ ಸಲ್ಲಿಸಿದ್ದ ಮೇಲ್ಮನವಿಯ ಎರಡನೇ ಕಂತಿನ ವಿಚಾರಣೆ ಬರಬೇಕಿತ್ತು. ಆದರೆ ಅಷ್ಟರೊಳಗೆ ಬಿಕ್ಕಟ್ಟು ಬಗೆಹರಿದ ಕಾರಣ ಸುಪ್ರೀಂಕೋರ್ಟಿಗೆ ಕರ್ನಾಟಕ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆದುಕೊಳ್ಳುತ್ತೇವೆ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರಕಾರದ ಸಾಲಿಸೇಟರ್ ಜನರಲ್ ತುಷಾರ್ ರೇಣುಕಾ ಅವರು ಮಾಹಿತಿ ನೀಡಿದ್ದಾರೆ.

ಅಗತ್ಯ ವಸ್ತುಗಳ ಸಾಗಾಟ ಹಾಗೂ ಕೊರೊನಾ ಹೊರತು ಪಡಿಸಿ ಉಳಿದ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ಗಡಿಯನ್ನು ತೆರವು ಮಾಡಲು ಎರಡೂ ರಾಜ್ಯಗಳು ಒಪ್ಪಿಗೆಯನ್ನು ಸೂಚಿಸಿವೆ. ಆದರೆ ಕೇರಳ ಸರಕಾರದ ಕಡೆಯಿಂದ ಬರುವ ಕೋರೋನಾ ಸೋಂಕಿತರಲ್ಲದ ರೋಗಿಗಳಿಗೆ ಮಾತ್ರ ಅವಕಾಶ. ಅಲ್ಲದೆ ಅವರನ್ನು ಹೊತ್ತೊಯ್ಯುವ ಅಂಬುಲೆನ್ಸ್ ಜೊತೆಗೆ ಬರುವ ರೋಗಿಗಳಿಗೆ ಸೋಂಕೂ ಇಲ್ಲ ಎಂಬ ಪ್ರಮಾಣ ಪತ್ರದೊಂದಿಗೆ ಬರಬೇಕು.

ಹೀಗಾಗಿ ಗಡಿಯಲ್ಲಿ ತುರ್ತು ಸಂದರ್ಭದಲ್ಲಿ ಮಾತ್ರವೇ ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ಕೂಡ ಕರ್ನಾಟಕ ಸರಕಾರಕ್ಕೆ ತುರ್ತು ಅಗತ್ಯವಿದ್ದಲ್ಲಿ ಮಾತ್ರವೇ ಗಡಿಯನ್ನು ತೆರವು ಮಾಡುವಂತೆ ಸೂಚನೆ ನೀಡಿದೆ.

Leave A Reply

Your email address will not be published.