” ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ ” | ವಿನಾಯಕ ಪ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಬಲ್ನಾಡು

ಲೇ : ವಿಶಾಖ್ ಸಸಿಹಿತ್ಲು

” ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ …” ಎಂಬ ಸಂಘದಂಗಳದಲ್ಲಿ ಜನಜನಿತವಾಗಿರುವ ಹಾಡಿಗೆ ಮೂರ್ತ ರೂಪವೆಂಬಂತೆ ಕಾರ್ಯ ನಿರ್ವಹಿಸುತ್ತಿರುವ ಸಂಘಟನೆ ವಿನಾಯಕ ಪ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಬಲ್ನಾಡು.

ಕೆಲವು ವರ್ಷಗಳ ಹಿಂದೆ ಒಂದಷ್ಟು ಸಮಾನ ಮನಸ್ಕ ಯುವಕರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪ್ರೇರಣೆಗೊಂಡು ಕಟ್ಟಿದಂತಹ ಸಂಘಟನೆ ಈ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್. ಆರಂಭದ ದಿನಗಳಲ್ಲಿ ಈ ಹುಡುಗರಿಂದ ಏನು ಮಾಡಲು ಸಾಧ್ಯ ಎಂದು ಮೂಗು ಮುರಿದವರೇ ಹೆಚ್ಚು. ಜನರ ಕೊಂಕು ಮಾತಿನ ನಡುವೆ ಹುಟ್ಟಿದ ಊರಿಗೆ ಸೇವೆ ಮಾಡಲೇಬೇಕೆಂಬ ದೃಢ ಸಂಕಲ್ಪದೊಂದಿಗೆ ಮುನ್ನಡೆದ ಸಂಘಟನೆಯ ಸದಸ್ಯರು ನಂತರದ ದಿನಗಳಲ್ಲಿ ಮಾಡಿದ ಸೇವಾ ಕಾರ್ಯ ಅಪರಿಮಿತವಾದದ್ದು.

ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಖರ್ಚು, ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಧನ ಸಹಾಯ, ಗ್ರಾಮವನ್ನು ಸ್ವಚ್ಛವಾಗಿರಿಸಲು ಸ್ವಚ್ಛತಾ ಅಭಿಯಾನ, ಗ್ರಾಮದಲ್ಲಿ ನಡೆಯುವ ಎಲ್ಲಾ ಸಾಮಾಜಿಕ ಧಾರ್ಮಿಕ ಕಾರ್ಯಗಳ ಮುಂದಾಳುತ್ವ ವಹಿಸಿ ಯಶಸ್ವಿಯಾಗಿ ನಿರ್ವಹಿಸಿ ಅದೆಷ್ಟೋ ಕುಟುಂಬಗಳ ಬಾಳನ್ನು ಬೆಳಗಿದ ಕೀರ್ತಿ ವಿನಾಯಕ ಫ್ರೆಂಡ್ಸ್ ಸದಸ್ಯರಿಗೆ ಸಲ್ಲುತ್ತದೆ.

ಪ್ರಸ್ತುತ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್-19 (ಕೊರೋನ) ವೈರಸ್ ಭಾರತದಲ್ಲೂ ತನ್ನ ಕಬಂಧಬಾಹುಗಳನ್ನು ಚಾಚುತ್ತಿದೆ. ಇಂತಹ ಕ್ಲಿಷ್ಟಕರವಾದ ಸಂದರ್ಭದಲ್ಲಿ ಬಲ್ನಾಡು ಗ್ರಾಮದ ಜನರಿಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂಬ ದೃಷ್ಟಿಯನ್ನಿಟ್ಟುಕೊಂಡು, ಕಾನೂನಿನ ಚೌಕಟ್ಟನ್ನು ಮೀರದೆ, ಅಗತ್ಯ ಸುರಕ್ಷಾ ಕ್ರಮಗಳನ್ನು ಪಾಲಿಸಿ, ಕೋವಿಡ್- 19 ವೈರಸ್ ಕುರಿತು ಜಾಗೃತಿ ಮೂಡಿಸುವ ಕಾರ್ಯ, ಬಡ ಬಗ್ಗರಿಗೆ ದಿನಸಿ ಸಾಮಾಗ್ರಿಗಳ ವಿತರಣೆ, ತುರ್ತು ಸಂದರ್ಭದಲ್ಲಿ ರಕ್ತದಾನ, ಅಗತ್ಯ ಔಷಧಿಗಳನ್ನು ಮನೆಗೇ ತಲುಪಿಸುವುದೂ, ಮನೆ ಮನೆಗೆ ತೆರಳಿ ತರಕಾರಿ ಮಾರುವವರಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡುತ್ತಿದೆ.

ಅಂದ ಹಾಗೆ ಇಷ್ಟೆಲ್ಲಾ ಸೇವಾ ಕಾರ್ಯವನ್ನು ಮಾಡುತ್ತಿರುವ ಈ ಸಂಘಟನೆಯ ಸದಸ್ಯರಲ್ಲಿ ಯಾರೊಬ್ಬರೂ ಆಗರ್ಭ ಶ್ರೀಮಂತರಲ್ಲ. ದೈನಂದಿನ ದುಡಿಮೆಯಲ್ಲಿ ಬದುಕು ನಡೆಸಿ, ತನ್ನ ದುಡಿಮೆಯ ಒಂದಂಶವನ್ನು ಈ ಸಮಾಜಕ್ಕೆ ನೀಡಬೇಕೆನ್ನುವ ಯೋಚನೆ ನಮಗೆಲ್ಲರಿಗೂ ಆದರ್ಶಪ್ರಾಯವಾಗಲಿ.

ಲೇ : ವಿಶಾಖ್ ಸಸಿಹಿತ್ಲು

Leave A Reply

Your email address will not be published.