ಕಾರ್ಯಕರ್ತರು ಸ್ಥೆರ್ಯ ಕಳೆದುಕೊಳ್ಳಬೇಡಿ | ಆಶಾ ಕಾರ್ಯಕರ್ತೆ ನಿವಾಸದಲ್ಲಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ
ಬೆಂಗಳೂರು : ಬೆಂಗಳೂರಿನ ಸಾದಿಕ್ ನಗರದಲ್ಲಿ ದಾದಿಯರು ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನಾ ಸ್ಥಳಕ್ಕೆ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆ ನಂತರ ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆ ಕೃಷ್ಣ ವೇಣಿ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದರು. ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ದೂರು ಸ್ವೀಕರಿಸದ ಪೊಲೀಸರ ವಿರುದ್ಧ ಕ್ರಮಕ್ಕೆ ಡಿಸಿಪಿಗೆ ಸೂಚನೆ ನೀಡಿದರು.
ಬಳಿಕ ಮಾತನಾಡಿದ ಅವರು, ಯಾರೇ ಹಲ್ಲೆ ಮಾಡಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಇಲ್ಲಿ ಜಾತಿ, ಧರ್ಮ ಮುಖ್ಯವಲ್ಲ. ಎಲ್ಲರಿಗೂ ಅಗತ್ಯ ಭದ್ರತೆ ನೀಡುತ್ತೇವೆ. ಹೆದರುವುದು ಬೇಡ ಎಂದು ಅಭಯ ನೀಡಿದರು. ಸ್ವತಃ ಉಪಮುಖ್ಯಮಂತ್ರಿಯವರು ಆಶಾ ಕಾರ್ಯಕರ್ತೆಯ ಮನೆಗೆ ಬಂದು ಭರವಸೆ ನೀಡಿದ್ದು ಆಶಾ ಕಾರ್ಯಕರ್ತೆಯರು ಮಾತ್ರವಲ್ಲ, ಕೊರೋನಾ ವಿರುದ್ಧ ಕಾರ್ಯಾಚರಿಸುತ್ತಿರುವ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ಉತ್ಸಾಹ ಮತ್ತು ಸ್ಥೈರ್ಯವನ್ನು ಮರುಸ್ಥಾಪಿಸಿದೆ.