ಪುತ್ತೂರು ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ | ಗೊನೆ ಮೂಹೂರ್ತ ಸಂಪನ್ನ
ಪುತ್ತೂರಿನ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಗೊನೆ ಮೂಹೂರ್ತವು ಇಂದು, ಏಪ್ರಿಲ್ ಒಂದರಂದು ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ವಸಂತ ಕೆದಿಲಾಯ ಮತ್ತು ವೆಂಕಟೇಶ ಸುಬ್ರಹ್ಮಣ್ಯ ಭಟ್ ಅವರು ಜೊತೆಗೂಡಿ ಗೊನೆ ಮುಹೂರ್ತ ನೆರವೇರಿಸಿದರು.
ಗೊನೆ ಮುಹೂರ್ತ : ಏಪ್ರಿಲ್ 1 ರಂದು || ಧ್ವಜಾರೋಹಣ / ಜಾತ್ರೋತ್ಸವ ಪ್ರಾರಂಭ : ಏಪ್ರಿಲ್ 10 ಕ್ಕೆ
ಇಂದು ನಡೆದ ಸರಳ ಸಮಾರಂಭದಲ್ಲಿ ಪುತ್ತೂರಿನ ಶಾಸಕರಾದ ಶ್ರೀ ಸಂಜೀವ ಮಠಂದೂರು, ದೇವಳದ ವಾಸ್ತು ಶಾಸ್ತ್ರಜ್ಞ ಶ್ರೀ ಜಗನ್ನಿವಾಸ ರಾವ್, ಆಡಳಿತಾಧಿಕಾರಿ ನವೀನ್ ಭಂಡಾರಿ, ಲೋಕೇಶ್ ಪಿ, ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ಮತ್ತಿತರ ಪ್ರಮುಖರಷ್ಟೇ ಹಾಜರಿದ್ದರು.
ಲಾಕ್ ಡೌನ್ ಆಗಿ ದೇಶ ಸ್ಥಬ್ದವಾಗಿದ್ದರೂ ಪುತ್ತೂರು ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯು ಶಾಸ್ತ್ರೋಕ್ತವಾಗಿಯೇ ನಡೆಯಲಿದೆ. ಆ ಮೂಲಕ ಜಾತ್ರೆ ನಡೆಯುತ್ತಾ ಇಲ್ಲವಾ ಎಂದು ಭಕ್ತರಲ್ಲಿದ್ದ ಅನಿಶ್ಚಿತತೆ ಕೊನೆಯಾಗಿದೆ. ಆದರೆ ಎಂದಿನ ಜನ, ಗೌಜಿ, ಅಬ್ಬರ, ಜಾತ್ರೆ, ಸಂತೆ ಇಲ್ಲದೆ ಸರಳವಾಗಿ ನಡೆಸಲು ಉದ್ದೇಶಿಸಲಾಗಿದೆ. ತಂತ್ರಿಗಳು, ದೇವಾಲಯದ ಅರ್ಚಕರು, ಮತ್ತು ಆಯ್ದ ನೌಕರರು ಮತ್ತು ಆಯ್ದ ಮುಖ್ಯಸ್ಥರು ಮಾತ್ರ ಹಾಜರಿರುತ್ತಾರೆ. ಈ ಬಾರಿ ಯಾರೇ ಜನಸಾಮಾನ್ಯರಿಗೆ ಜಾತ್ರೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ. ಆದರೂ, ದೇವರ ಪೂಜೆ ಮತ್ತು ಜಾತ್ರಾಮಹೋತ್ಸವಗಳು ಶಾಸ್ತ್ರೋಕ್ತವಾಗಿ ನಡೆಯುತ್ತದಲ್ಲ ಎಂಬ ತೃಪ್ತಿ ಜನರದ್ದು.