ಹರಿದು ಬಂದಿದೆ ಭಕ್ತ ಸಮುದ್ರ : ಬಂಡಾಡಿ ಉಳತ್ತೋಡಿ ಷಣ್ಮುಖ ಬ್ರಹ್ಮಕಲಶೋತ್ಸವದ ಕೊನೆಯ ದಿನ
ಇಂದು ಹಿರೇಬಂಡಾಡಿಯ ಉಳತ್ತೋಡಿ ಷಣ್ಮುಖ ದೇವಾಲಯದ ಬ್ರಹ್ಮಕಲಶೋತ್ಸವದ ಒಂಬತ್ತನೆಯ ಮತ್ತು ಕೊನೆಯ ದಿನ.
ಇಂದು ಮು೦ಜಾನೆ ಮಹಾಗಣಪತಿ ಹೋಮ, ಕವಾಟ ಉದ್ಘಾಟನೆ, ದೇವರಿಗೆ ತೈಲಾಭಿಷೇಕ, ಪಂಚಾಮೃತಾಭಿಷೇಕ, ಪ್ರಾಯಶ್ಚಿತ್ತ ಶಾಂತಿ, ತತ್ವ ಹೋಮಗಳ ಕಲಾಭಿಶೇಕ, ಮಹಾಬಲಿ ಪೀಠ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮುಂತಾದ ವೈದಿಕ ಕಾರ್ಯಕ್ರಮಗಳು ಜರುಗಿದವು.
ಇಂದು ಮಧ್ಯಾಹ್ನದ ಮಹಾಪೂಜೆ ವೇಳೆಗೆ ಹರಿದುಬಂತು ಜನಪ್ರವಾಹ. ದೊಡ್ಡ ಸಂಖ್ಯೆಯ ಭಕ್ತರು ಊರು ಪರವೂರುಗಳಿಂದ ನಿರಂತರವಾಗಿ ಬರುತ್ತಿದ್ದಾರೆ. ದೇವಸ್ಥಾನದ ಒಳಗೆ ದೇವರ ದರ್ಶನಕ್ಕಾಗಿ ಉದ್ದವಾದ ಕ್ಯೂ ನಿಂತಿದ್ದು ಕಂಡುಬಂತು. ಅಂತೆಯೇ ಮಧ್ಯಾಹ್ನದ ಊಟದ ವೇಳೆಗೆ ಛತ್ರದಲ್ಲಿ ಜನರು ಗುಂಪುಗುಂಪಾಗಿ ಬಂದು ನಿಂತುಕೊಂಡೇ ಊಟ ಸವಿದರು. ಇಂದಿನ ಮಧ್ಯಾಹ್ನದ ಊಟದ ರುಚಿ ಅತ್ಯದ್ಭುತವಾಗಿದ್ದು, ವಿಶೇಷವಾಗಿ ಪರಿಮಳಭರಿತ ರಸಂ ಅನ್ನು ಜನರು ಇಷ್ಟಪಟ್ಟು ಸವಿಯುತ್ತಿರುವುದು ಕಂಡುಬಂತು.
ಸಂಜೆಯ ಕಾರ್ಯಕ್ರಮ
ಸಂಜೆ ಐದು ಮೂವತ್ತರ ಸುಮಾರಿಗೆ ದೀಪಾರಾಧನೆ ಪ್ರಾರಂಭವಾಗಲಿದ್ದು ಆನಂತರ 7:30 ಕ್ಕೆ ಮಹಾಪೂಜೆ, ದೇವರ ಬಲಿ, ಭೂತ ಉತ್ಸವ , ವಸಂತ ಕಟ್ಟೆ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ನಿನ್ನೆ ನಡೆದ ಧಾರ್ಮಿಕ ಸಭೆಯಲ್ಲಿ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಮಾತನಾಡಿದರು. ನಿನ್ನೆಯ ಸಭಾ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠ೦ದೂರು, ಸುಳ್ಯ ಶಾಸಕ ಅಂಗಾರ ತಾಲೂಕು ಪಂಚಾಯತ್ ಸದಸ್ಯ ಶ್ರೀ ಕೇಶವ ಗೌಡ ಬಜತ್ತೂರು, ಕ್ಷೇತ್ರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ ಜನಾರ್ದನ ಗೌಡ ಶಾಂತಿತಡ್ದ ಮತ್ತು ದೇವಪ್ಪ ಬಸವ ಸಮಿತಿಯ ಅಧ್ಯಕ್ಷ ಪೂಜಾರಿ ಪಡ್ಪೂ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿನ್ನೆಯ ಸಮಾರಂಭಕ್ಕೆ ಆಗಮಿಸಬೇಕಿದ್ದ ಮಂಗಳೂರು ಸಂಸದ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಇಂದು ಬೆಳಗ್ಗೆ ಆಗಮಿಸಿದ್ದರು.
ಇವತ್ತು ಬ್ರಹ್ಮಕಲಶೋತ್ಸವವು ಕೊನೆಯಾದರೂ ನಾಳೆ ಮತ್ತು ನಾಡಿದ್ದು ಎರಡು ದಿನ ವಾರ್ಷಿಕ ಜಾತ್ರೋತ್ಸವವು ನಡಯಲಿದೆ.