ಕಡಬ | ಸ್ಪೋಟಕ ಸಿಡಿದು ಹಸು ಮೃತಪಟ್ಟ ಪ್ರಕರಣ | ನನ್ನ ಮೇಲೆ ವೃಥಾ ಅರೋಪ – ಜೋನ್ಸನ್

ಕಡಬ : ಸಂಪಡ್ಕದಲ್ಲಿ ಹಂದಿ ಬೇಟೆಗೆ ಇಟ್ಟಿದ್ದ ಸ್ಪೋಟಕವನ್ನು ಹಸು ತಿಂದು ಮಾರಣಾಂತಿಕ ಗಾಯವಾಗಿ ಅದರ ಸಾವಿಗೆ ನಾನು ಕಾರಣ ಎಂದು ನನ್ನ ಮೇಲೆ ತಪ್ಪು ಆರೋಪವನ್ನು ಹೊರಿಸಲಾಗಿದೆ.

ನಾನು ಯಾವ ಪುಣ್ಯ ಕ್ಷೇತ್ರದಲ್ಲಿ ಬೇಕಾದರೂ ಸತ್ಯ ಪ್ರಮಾಣಕ್ಕೂ ಸಿದ್ದ ಎಂದು ಜೋನ್ಸನ್ ಪಿ.ಜೆ. ಅವರು ಹೇಳಿದರು.

ಕಡಬ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಫೆ.17 ರಂದು ಮಧ್ಯಾಹ್ನದ ವೇಳೆ ಹುಲ್ಲು ಮೇಯಲು ಬಿಟ್ಟ ನನ್ನ ಹಸುವನ್ನು ತರಲು ಹೊಳೆ ಬದಿಗೆ ಹೋದ ವೇಳೆ ಹಸುವೊಂದರ ಮುಖದಲ್ಲಿ ರಕ್ತ ಹರಿಯುತ್ತಿದ್ದು ಕಂಡು ನನಗೂ ಭಯವಾಗಿದೆ. ಈ ಹಸುವಿನ ಮಾಲಕರಿಗೆ ತಿಳಿಸಿಲು ನಾನು ತೆರಳುವ ಸಮಯದಲ್ಲಿ ಅವರು ಎದುರುಗಡೆಯಿಂದ ಬರುತ್ತಿದ್ದರು, ದನವನ್ನು ಹುಲಿ ಅಥವಾ ಕೆನೆನಾಯಿ ಹಿಡಿದಿದೆ ಎಂದು ಅವರಿಗೆ ಸಂಶಯಾಸ್ಪದವಾಗಿ ಹೇಳಿದ್ದೆ.

ನಾನು ನಡೆದ ಘಟನೆಯನ್ನು ತಿಳಿಸಲು ಹೋಗಿರುವುದೇ ನನ್ನ ಮೇಲೆ ತಪ್ಪು ಆರೋಪವನ್ನು ಹೊರಿಸಲಾಗುತ್ತಿದೆ. ಬಗ್ಗೆ ನಾನು ಈಗಾಗಲೇ ಪೋಲಿಸರಿಗೆ ಮಾಹಿತಿ ನೀಡಿದ್ದು, ನಾನು ಸ್ಪೋಟಕ ಇಟ್ಟಿಲ್ಲ ಎಂದು ಯಾವ ಪುಣ್ಯ ಕ್ಷೇತ್ರದಲ್ಲಿ ಬೇಕಾದರೂ ಪ್ರಮಾಣ ಮಾಡಬಲ್ಲೆ, ಇಂತಹ ಆರೋಪಗಳಿಂದ ನನಗೆ ತುಂಬಾ ನೋವಾಗಿದೆ. ನನಗೆ ಎಂಡೋ ಪೀಡಿತ ಸುಮಾರು 21 ವರ್ಷದ ವಿಕಲಾಂಗ ಮಗನಿದ್ದು ಅವನ ಆರೈಕೆಯೂ ಮಾಡಬೇಕಿದ್ದು ಇದರಿಂದ ನನಗೆ ತುಂಬಾ ಕಷ್ಟವಾಗುತ್ತಿದೆ. ಈ ಸತ್ಯ ವಿಚಾರವನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದರು ಜೋನ್ಸನ್ .

ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ತಾಲೂಕು ಅಧ್ಯಕ್ಷ ಕ್ಸೇವಿಯರ್ ಬೇಬಿ ಮಾತನಾಡಿ, ಹಸುವಿನ ಮಾಲಕರಾದ ಬಾಲಚಂದ್ರ ಅವರ ಮನೆಗೆ ನಾವು ಮಾನವೀಯತೆ ದೃಷ್ಠಿಯಿಂದ ಭೇಟಿ ನೀಡಿ ಅವರಿಗೆ ಸಹಾಯ ಮಾಡುವ ಬಗ್ಗೆ ಮಾತನಾಡಿದ್ದೆವು. ಆದರೆ ಅದನ್ನು ಅವರು ಒಪ್ಪದೆ ಸ್ಪೋಟಕ ಇಟ್ಟವರನ್ನು ಹೇಳಿ ಎಂದು ಹೇಳಿದ್ದರು. ನಮಗೆ ಸ್ಪೋಟಕ ಇಟ್ಟವರು ಯಾರು ಎಂದು ಹೇಳಲು ಸಾಧ್ಯವಿಲ್ಲ ಅದನ್ನು ಪೊಲೀಸರು ತನಿಖೆ ಮಾಡುತ್ತಾರೆ.

ಮೊದಲೇ ಕಷ್ಟದ ಪರಿಸ್ಥಿತಿಯಲ್ಲಿರುವ ಜೋನ್ಸನ್ ಅವರ ಮೇಲೆ ವೃಥಾ ಆರೋಪ ಮಾಡುತ್ತಿರುವುದು ಸರಿಯಲ್ಲ .ಈಗಲಾದರೂ ಸತ್ಯವನ್ನು ಅರಿತುಕೊಂಡು ಸುಮ್ಮನೆ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ರಾಯ್ ಅಬ್ರಹಾಂ, ಜೋಣಿ ಪಿ.ಟಿ, ರಾಜು.ಪಿ.ಜೆ, ತೋಮಸ್ ಪಿ.ಯು, ಸನೋಷ್ ಕೆ.ಎಂ. ಉಪಸ್ಥಿತರಿದ್ದರು.

Leave A Reply