ಪ್ರಾಡಕ್ಟ್ಸ್ಆಫ್ VC ಜರ್ನಲಿಸಂ । ಮತ್ತೆ ಹರಡಿತು ಕಂಬಳ ಜ್ವರ

ತುಳುನಾಡು ವೈಶಿಷ್ಟ್ಯಗಳ ಗೂಡು. ತುಳುನಾಡಿನ ಕಲೆಗೆ ಬೆಲೆ ಕಟ್ಟಲಾಗದು. ತುಳುನಾಡಿನ ಅನೇಕ ಜನಪದ ಕ್ರೀಡೆಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಕ್ರೀಡೆ ಎಂದರೆ ಕಂಬಳ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಮಾತ್ರವಲ್ಲದೆ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಂಬಳ ಕಾಣಸಿಗುತ್ತದೆ. ಕಂಬಳ ಎಂದರೆ ಕೋಣಗಳ ಓಟದ ಸ್ಪರ್ಧೆ.ಕಂಬಳದಲ್ಲಿ ಬಲಿಷ್ಠ ಮತ್ತು ಗಟ್ಟಿಮುಟ್ಟಾದ ಕೋಣಗಳು ಆಕರ್ಷಣೆಯ ಕೇಂದ್ರವಾಗಿದ್ದರೆ, ಎಳೆಯ ಕೋಣಗಳು ಕುತೂಹಲದ ಕೇಂದ್ರವಾಗುತ್ತದೆ.

ಇದು ಕಂಬಳ ಸೀಸನ್. ಕರಾವಳಿಯಲ್ಲಿ ಮಾತ್ರ ಕಾಣಸಿಗುವ ಈ ವಿಶೇಷ ಕ್ರೀಡೆಯಲ್ಲಿ ಗ್ರಾಮೀಣ ರೈತರಿಗೆ ಪ್ರಧಾನ ಮನೋರಂಜನೆ ದೊರಕುತ್ತದೆ. ಅಲ್ಲದೆ ಕರಾವಳಿಗರಲ್ಲಿ ಜೋರಾಗಿಯೇ ಕಂಬಳ ಜ್ವರ ಹರಡುತ್ತದೆ. ಅಲ್ಲಿ ಕಂಬಳ ನಡೆಯುತ್ತದೆ ಎಂಬ ಸುಳಿವು ಸಿಕ್ಕರೆ ಸಾಕು, ಎಲ್ಲೆಡೆಯಿಂದ ಜನ ಸಾಗರ ಹರಿದು ಬರುತ್ತದೆ. ಕಂಬಳವನ್ನು ವೀಕ್ಷಿಸುವುದೇ ಒಂದು ರೋಮಾಂಚನ. ದೂರದ ಊರುಗಳಿಂದ ಕೋಣಗಳನ್ನು ಸ್ಪರ್ಧೆಗೆ ಇಳಿಸಲು ಅನೇಕ ತಂಡಗಳು ಬರುತ್ತವೆ.

ಕರಾವಳಿಗರಿಗೆ ಹೆಚ್ಚು ಇಷ್ಟವಾಗುವುದೆಂದರೆ ಒಂದು ಯಕ್ಷಗಾನ ಮತ್ತೊಂದು ಕಂಬಳ. ಹೀಗಾಗಿ ಕರಾವಳಿಗರಿಗೆ ಕಂಬಳ ಕೋಣಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿರುತ್ತದೆ. ಅಲ್ಲದೆ ಕೋಣ ಓಡಿಸುವವರ ಬಗ್ಗೆ, ಹಲಗೆ, ಹಗ್ಗ ಹೀಗೇ ಎಲ್ಲದರ ಬಗ್ಗೆಯೂ ತಿಳಿದಿರುತ್ತದೆ. ಮನೋರಂಜನೆ ಮತ್ತು ಕಲೆಯನ್ನು ಉಳಿಸುವ ಪ್ರಯತ್ನಕ್ಕಾಗಿ ಕಂಬಳವನ್ನು ಇಂದಿಗೂ ನಡೆಸಿಕೊಂಡು ಬರಲಾಗುತ್ತಿದೆ. ಸುಗ್ಗಿ ಕಳೆದ ನಂತರ ಕಂಬಳವನ್ನು ನಡೆಸಲಾಗುತ್ತದೆ. ಸಾಂಪ್ರದಾಯಿಕ ನಿಯಮದಂತೆ ಕಂಬಳ ನಡೆಸುವ ದಿನವನ್ನು ನಿಗದಿಪಡಿಸಲಾಗುತ್ತದೆ.

ಕಂಬಳಕ್ಕಿಂತ ಮೊದಲು ಕಂಬಳ ಗದ್ದೆಯಲ್ಲಿ ನಾಗಧ್ವಜವನ್ನು ಸ್ಥಾಪಿಸುವ ಪದ್ಧತಿ ಇದೆ. ನಂತರ ಅದಕ್ಕೆ ಹಾಲಿನ ಅಭಿಷೇಕ ಮಾಡಿ ಪ್ರಾರ್ಥನೆ ಸಲ್ಲಿಸಿ ದಿನ ನಿಶ್ಚಯ ಮಾಡಿದ ಮೇಲೆ ಕೆಲವು ಮಂದಿ ಕೋಲು ಬೆಣೆ ಬಡಿದುಕೊಂಡು ಡೋಲು ಬಾರಿಸಿ ನಲಿದು ಬೀದಿ ಸುತ್ತುತ್ತಾ ಕಂಬಳದ ಬಗೆಗಿನ ವಿಶೇಷ ಮಾಹಿತಿಯನ್ನು ನೀಡುತ್ತಾರೆ.

‘ಕಂಬಲತ್ತಾಯ’ ಎಂಬ ದೇವರು ಕಂಬಳ ಕ್ರೀಡೆಯ ಅಧಿದೇವತೆ. ಕಂಬಳ ಎಲ್ಲಿ ನಡೆಯುತ್ತದೋ, ಆ ಗದ್ದೆಯ ಯಜಮಾನನು ಗದ್ದೆಯ ಅಂಚಿನಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಿ ಬಲಿಪೂಜೆಯನ್ನು ನೆರವೇರಿಸುತ್ತಾನೆ. ಕಂಬಳ ನಡೆಸುವವರು ಗದ್ದೆ ಯಜಮಾನನ ಮನೆಯಲ್ಲಿ ಸೇರಿ ಕಂಬಳದ ಬಗೆಗಿನ ವಾದ ವಿವಾದಗಳನ್ನು ಬಗೆಹರಿಸಿಕೊಂಡು ತೀರ್ಮಾನಕ್ಕೆ ಬರುತ್ತಾರೆ.

ಕಂಬಳ ಕ್ರೀಡೆಗೆ ತನ್ನದೇ ಆದ ನೀತಿ ನಿಯಮಗಳಿರುತ್ತವೆ. ಗದ್ದೆಯಲ್ಲಿ ಇಂತಿಷ್ಟೇ ನೀರು ಇರಬೇಕು ಎಂಬ ನಿಯಮವಿದೆ. ಅಲ್ಲದೆ ಗದ್ದೆಯಲ್ಲಿ ಟ್ರ್ಯಾಕ್‍ಗಳನ್ನು ನಿಗದಿ ಮಾಡಿರುತ್ತಾರೆ. ಕೋಣಗಳು ನಿಗದಿತ ಟ್ರ್ಯಾಕ್‍ಗಳಲ್ಲೇ ಓಡಬೇಕು. ಓಡದಿದ್ದಲ್ಲಿ ಫೌಲ್ ಎಂಬ ತೀರ್ಮಾನಕ್ಕೆ ಬದ್ಧರಾಗಬೇಕಾಗುತ್ತದೆ. ಕೋಣಗಳ ಓಟವನ್ನು ಸೂಕ್ಷ್ಮವಾಗಿ ಗಮನಿಸಿ ಸೋಲು ಗೆಲುವನ್ನು ನಿರ್ಧರಿಸಲು ಸಮರ್ಥ ತೀರ್ಪುಗಾರರು ಇರುತ್ತಾರೆ.

ಅಲ್ಪ ಅವಧಿಯಲ್ಲಿ ನಿರ್ದಿಷ್ಟ ಗುರಿ ತಲುಪುವ ಕೋಣಗಳು ಜಯಶಾಲಿಯಾಗುತ್ತದೆ. ಸಮಯದ ಆಧಾರದ ಮೇಲೆ ಗೆಲುವನ್ನು ನಿರ್ಧರಿಸಲಾಗುತ್ತದೆ. ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕೋಣಗಳ ಜೊತೆಯನ್ನು ಓಡಿಸಲಾಗುತ್ತದೆ. ತೀರ್ಪುಗಾರರು ಕೋಣಗಳ ನಡಿಗೆ, ಹಾಗೆಯೇ ಓಟದ ವೈಖರಿ ಮತ್ತು ದೇಹದಾಢ್ಯವನ್ನು ಗಮನಿಸಿ ಬಹುಮಾನ ನೀಡುತ್ತಾರೆ.

ಕಂಬಳದಲ್ಲಿ ‘ನಿಶಾನಿ’ ಅಥವಾ ‘ಗೋರಿ’ ಎಂದು ಕರೆಯಲ್ಪಡುವ ಸ್ಪರ್ಧೆ ಅತ್ಯಂತ ರೋಮಾಂಚನವಾಗಿರುತ್ತದೆ. ನೀರು ತುಂಬಿದ ಕಂಬಳ ಗದ್ದೆಯ ನಡುವಿನಲ್ಲಿ ಸರಿಸುಮಾರು ಮೂವತ್ತು ಅಡಿ ಎತ್ತರದಲ್ಲಿ ಬಿಳಿ ವಸ್ತ್ರವನ್ನು ಕಟ್ಟಿರುತ್ತಾರೆ. ಆ ವಸ್ತ್ರಕ್ಕೆ ಯಾವ ಕೋಣಗಳ ಜೋಡಿ ನೀರು ಚಿಮ್ಮಿಸಲು ಸಮರ್ಥವಾಗುತ್ತದೋ ಅದು ಗೆಲುವನ್ನು ಸಾಧಿಸಿದಂತೆ.

ಓಡುವ ಕೋಣಗಳಿಗಿಂತಲೂ ಚಾಣಕ್ಷತೆ ಮತ್ತು ಸಾಮಥ್ರ್ಯ ಓಟಗಾರನಲ್ಲಿರಬೇಕು. ತುದಿ ಮುಟ್ಟುವ ಕೋಣಗಳ ಓಟಗಾರ ಅವುಗಳ ಹಿಂದಿನಿಂದ ಓಡಿಬರುತ್ತಾನೆ. ಆದರೆ ಹಲಗೆ ಕಂಬಳದಲ್ಲಿ ಆತ ಕೋಣಗಳಿಗೆ ಕಟ್ಟಿದ ಒಂದೂವರೆ ಅಡಿ ಅಗಲದ ಹಲಗೆಯಲ್ಲಿ ಒಂಟಿ ಕಾಲಲ್ಲಿ ನಿಂತಿರುತ್ತಾನೆ. ಇದು ಅತ್ಯಂತ ಕ್ಲಿಷ್ಟ. ಇದಕ್ಕೆ ಕಠಿಣ ಪರಿಶ್ರಮ ಅಗತ್ಯವಾಗಿರುತ್ತದೆ.

ಇಲ್ಲಿ ಬಹುಮಾನಕ್ಕಿಂತ ಪ್ರಶಂಸೆಗೆ ಅಧಿಕ ಬೆಲೆಯಿರುತ್ತದೆ. ಗೆದ್ದವರಿಗೆ ಸಾಂಪ್ರದಾಯಿಕವಾಗಿ ಒಂದು ಗೊನೆ ಬಾಳೆಹಣ್ಣು , ಎಳನೀರಿನ ಗೊನೆ , ವೀಳ್ಯದೆಲೆ ಪಟ್ಟಿ ಕೊಡಲಾಗುತ್ತದೆ. ಇತ್ತೀಚೆಗೆ ನಗದು, ಚಿನ್ನ, ಬೆಳ್ಳಿ ಪದಕ ಮುಂತಾದವನ್ನೂ ನೀಡಲಾಗುತ್ತಿದೆ.

ತುಳುನಾಡಿನ ವಿಶಿಷ್ಟವಾದ ಜನಪದ ಕ್ರೀಡೆ ಕಂಬಳ. ಇಂದು ಕಂಬಳಾಭಿಮಾನಿಗಳು ಕಡಿಮೆಯಾಗುತ್ತಿದ್ದಾರೆ. ಸಿಗುತ್ತಿರುವ ಪ್ರೋತ್ಸಾಹವೂ ಕಡಿಮೆಯಾಗುತ್ತಿದೆ. ನಮ್ಮ ನೆಲದ ಕ್ರೀಡೆಯನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ನಮ್ಮ ಕಂಬಳವನ್ನು ನಾವು ಉಳಿಸದೆ ಇನ್ಯಾರು ಉಳಿಸುತ್ತಾರೆ…? ನಮ್ಮ ಕಂಬಳ ನಮ್ಮ ಹೆಮ್ಮೆಯಾಗಬೇಕು. ಕಂಬಳವನ್ನು ಉಳಿಸಿ ಬೆಳೆಸೋಣ. ಕಂಬಳದಲ್ಲಿ ದಾಖಲೆ ನಿರ್ಮಿಸುತ್ತಿರುವ ನಮ್ಮ ತುಳುನಾಡಿನ ಕಂಬಳಪಟುಗಳನ್ನು ಪ್ರೋತ್ಸಾಹಿಸೋಣ. ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸೋಣ.

Leave A Reply

Your email address will not be published.