ಸವಣೂರು ಸಂತೆಗೆ ತುಂಬಿತು ವರ್ಷ!

ಸವಣೂರು: ಗ್ರಾಮೀಣ ಭಾಗದಲ್ಲಿ ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆಯ ಸ್ಥಳೀಯವಾಗಿಯೇ ದೊರೆಯಲಿ ಎನ್ನುವ ಮಹತ್ವಾಕಾಂಕ್ಷೆ ಇಟ್ಟುಕೊಂಡು ಸವಣೂರಿನಲ್ಲಿ ಆರಂಭವಾದ ವಾರದ ಸಂತೆಗೆ ಫೆ.14ಕ್ಕೆ ವರುಷ ತುಂಬಿದೆ. ಒಂದು ವರ್ಷದಿಂದ ಪ್ರತೀ ಗುರುವಾರ ವಾರದ ಸಂತೆ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಇದರಿಂದ ಸಾರ್ವಜನಿಕರಿಗೂ ,ಕೃಷಿಕರಿಗೂತುಂಬಾ ಅನುಕೂಲವಾಗಿದೆ. ಈತನ್ಮದ್ಯೆ ಸುಸಜ್ಜಿತ ಸಂತೆ ಮಾರುಕಟ್ಟೆ ನಿರ್ಮಿಸಲು ಈ ಭಾಗದದವರೇ ಆದ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ಮುತುವರ್ಜಿ ವಹಿಸಿದ್ದು,ಅದಕ್ಕೆ ಸವಣೂರು ಗ್ರಾ.ಪಂ.ಪೂರಕವಾಗಿ ಸ್ಪಂದಿಸಿದೆ.ಅದರ ತಾಂತ್ರಿಕ ಕಾರ್ಯಗಳು ಪ್ರಗತಿಯಲ್ಲಿದೆ. ಎಪಿಎಂಸಿ ತನ್ನ ಅನುದಾನದಲ್ಲಿ 1 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲಿದೆ. ಈ ಮೂಲಕ ಸಂತೆ ಮಾರುಕಟ್ಟೆ ನಿರ್ಮಾಣದ ಆಶಾಭಾವನೆ ವ್ಯಕ್ತವಾಗಿದೆ.

ಸವಣೂರಿನಲ್ಲಿ 2019ರ ಫೆ. 14ರಿಂದ ಪ್ರತೀ ಗುರುವಾರ ವಾರದ ಸಂತೆ ಆರಂಭ ಆಗಿದೆ. ಈ ನಿಟ್ಟಿನಲ್ಲಿ ಸಂತೆ ಮಾರುಕಟ್ಟೆ ನಿರ್ಮಾಣ ಹೊಸ ಸಾಧ್ಯತೆ ತೆರೆದಿಟ್ಟಿದೆ.

ಸವಣೂರಿನಲ್ಲಿ ಸಂತೆ ಆರಂಭವಾಗಬೇಕೆಂಬ 10 ವರ್ಷಗಳ ಬೇಡಿಕೆ 2019 ರ ಫೆ.14ಕ್ಕೆ ಈಡೇರಿದೆ. ತಾಲೂಕಿನಲ್ಲಿ ನಡೆಯುವ ವಿವಿಧ ಸಂತೆಗಳಿಗೆ ತೆರಳಿ ಅಲ್ಲಿನ ವ್ಯಾಪಾರಿಗಳನ್ನು ಸಂಪರ್ಕಿಸಿ, ಸವಣೂರಿನಲ್ಲಿ ಪ್ರತೀ ಗುರುವಾರ ನಡೆಯುವ ಸಂತೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿತ್ತು. ಅದರಂತೆ ವಿವಿಧ ಭಾಗಗಳಿಂದ ವ್ಯಾಪಾರಸ್ಥರು ಆಗಮಿಸಿ, ನಿರಂತರವಾಗಿ ಸಂತೆ ಯಶಸ್ವಿಯಾಗಿ ನಡೆಯುತ್ತಿದೆ.

ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸವಣೂರು ಕೇಂದ್ರ ಹಲವು ಊರಿಗೆ ಸಂಪರ್ಕಿಸಲು ಜಂಕ್ಷನ್‌ ಆಗಿರುವ ಸವಣೂರಿನಲ್ಲಿ ಸಂತೆ ಆರಂಭವಾಗಿದ್ದರಿಂದ ಹಲವು ಕೃಷಿಕರಿಗೆ ವರದಾನವಾಗಿದೆ. ಸವಣೂರು ಸುತ್ತಮುತ್ತ ಹಲವರು ತರಕಾರಿ ಬೆಳೆಯುತ್ತಿದ್ದಾರೆ. ಅವರಿಗೆ ನೇರ ಮಾರುಕಟ್ಟೆ ದೊರೆತಿದೆ. ಗ್ರಾಹಕರಿಗೂ ತಾಜಾ ತರಕಾರಿ ಹಾಗೂ ಇತರ ವಸ್ತುಗಳು ಒಂದೇ ಸೂರಿನಡಿ ಸಿಗಲಿವೆ. ಸಂತೆ ಮಾರುಕಟ್ಟೆಯೂ ನಿರ್ಮಾಣವಾದಲ್ಲಿ ವ್ಯಾಪಾರಿಗಳಿಗೆ, ಗ್ರಾಹಕರಿಗೆ ಶಾಶ್ವತ ಸೂರು ಸಿಗಲಿದೆ. ಈಗ ಸಂತೆ ನಡೆಯುವ ಸ್ಥಳ ಪುದುಬೆಟ್ಟು ಜಿನ ಮಂದಿರಕ್ಕೆ ಒಳಪಟ್ಟಿದೆ. ಒಟ್ಟಿನಲ್ಲಿ ಬಹು ವರ್ಷಗಳ ಸವಣೂರು ಸಂತೆಯ ಕನಸು ಸಾಕಾರಗೊಂಡು ವರ್ಷವೊಂದು ತುಂಬಿದೆ.

Leave A Reply

Your email address will not be published.