ಶಬರಿಮಲೆಯಲ್ಲಿ ಸಂಕ್ರಮಣಕ್ಕೆ ಸಕಲ ಸಿದ್ಧತೆ | ಮಕರ ಜ್ಯೋತಿಯನ್ನುಕಣ್ಣು ತುಂಬಿಕೊಳ್ಳಲು ಕ್ಷಣಗಣನೆ

ಶಬರಿಮಲೆಯಿಂದ ನೇರ ವರದಿ : ಪ್ರವೀಣ್ ಚೆನ್ನಾವರ

ಶಬರಿಮಲೆ : ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ಅಯ್ಯಪ್ಪ ಸ್ವಾಮೀ ಸನ್ನಿಧಾನದಲ್ಲಿ ಮಕರ ಸಂಕ್ರಮಣ ದೀಪೋತ್ಸವ ಹಾಗೂ ಮಕರ ಜ್ಯೋತಿ ದರ್ಶನ ಬುಧವಾರ ನಡೆಯಲಿದೆ.

ಸೋಮವಾರ ಭಾರಿ ಪೊಲೀಸ್‌ ಭದ್ರತೆಯೊಂದಿಗೆ ಪಂದಳ ಅರಮನೆಯಿಂದ ಶೋಭಾಯಾತ್ರೆಯ ಮೂಲಕ ಹೊರಟ ಅಯ್ಯಪ್ಪ ಸ್ವಾಮಿಯ ತಿರುವಾಭರಣಂ ಮೆರವಣಿಗೆ ಆರಂಭಗೊಂಡಿದ್ದು,ಮಕರ ಉತ್ಸವ ಪೂಜೆಯಂದು ಯೋಗಮುದ್ರೆಯಲ್ಲಿರುವ ಅಯ್ಯಪ್ಪ ಸ್ವಾಮಿಯ ವಿಗ್ರಹಕ್ಕೆ ತಿರುವಾಭರಣಗಳನ್ನು ತೊಡಿಸಿ ಪೂಜೆ ಮಾಡಲಾಗುತ್ತದೆ.ಜ.12ವರೆಗೆ ಪಂದಳ ಅರಮನೆಯಲ್ಲಿ ಅಯ್ಯಪ್ಪ ಸ್ವಾಮಿಯ ತಿರುವಾಭರಣವನ್ನು ಭಕ್ತರ ದರ್ಶನಕ್ಕಾಗಿ ಇಡಲಾಗಿತ್ತು. ಬಳಿಕ ಸೋಮವಾರ ಪೂಜೆ,ವೈಧಿಕ ಕಾರ್ಯಕ್ರಮ ಮುಗಿದ ಬಳಿಕ ಮೆರವಣಿಗೆ ಯ ಮೂಲಕ ಶಬರಿಮಲೆ ಸನ್ನಿಧಾನಕ್ಕೆ ತರಲಾಗುತ್ತಿದೆ.ಸನ್ನಿಧಾನದಲ್ಲಿ ಅಯ್ಯಪ್ಪ ಸ್ವಾಮಿಯ ತಿರುವಾಭರಣಂವನ್ನು ವಿಗ್ರಹಕ್ಕೆ ತೊಡಿಸಿ ದೀಪಾರಾಧನೆ ಹಾಗೂ ಪೂಜೆ,ಪುನಸ್ಕಾರ ಮತ್ತಿತರ ವೈಧಿಕ ಕ್ರಿಯೆಗಳು ನಡೆಯಲಿದೆ.

ಈ ಬಾರಿ ಶಬರಿಮಲೆ ಸನ್ನಿಧಾನದಲ್ಲಿ ಅಯ್ಯಪ್ಪ ಭಕ್ತ ಸಂದಣಿಯು ಹೆಚ್ಚಿದ್ದು,ಕಳೆದ ವರ್ಷ ಈ ಅವಧಿಯಲ್ಲಿ ಭಕ್ತರ ದಟ್ಟನೆ ಕಡಿಮೆಯಾಗಿತ್ತು.ಕಳೆದ ವರ್ಷ ಮಹಿಳೆಯರ ಪ್ರವೇಶ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಈ ಬಾರಿ ಮಂಡಲ ಉತ್ಸವ ಸಮಯದಲ್ಲಿಯೇ ಭಕ್ತರ ಸಂಖ್ಯೆ ಹೆಚ್ಚಳವಾಗಿತ್ತು.ಅದೇ ಪ್ರಮಾಣದಲ್ಲಿ ಈಗಲೂ ಕ್ಷೇತ್ರದತ್ತ ಅಯ್ಯಪ್ಪ ಭಕ್ತರು ಆಗಮಿಸುತ್ತಿದ್ದು,ಹದಿನೆಂಟು ಮೆಟ್ಟಲು ಎದುರುಗಡೆ ಭಾರೀ ಸರದಿ ಸಾಲು ಇದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಜನ ಸಂದಣಿ‌ ಹತ್ತುಪಟ್ಟು ಹೆಚ್ಚಳವಾಗಿದೆ.

ಜ.15ರಂದು ಮುಂಜಾನೆ ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಾದಾರ್ಪಣೆ ಮಾಡಿ ಧನುರಾಶಿಯಿಂದ ಮಕರ ರಾಶಿಗೆ ಬದಲಾಗುವ ಮಕರಜ್ಯೋತಿ ಶುಭದಿನವಾದ ಬುಧವಾರ ಮಕರ ಸಂಕ್ರಮಣ ಪೂಜೆ ನಡೆಯಲಿದೆ.

ಸಂಜೆಯ ವೇಳೆ ಪೊನ್ನಂಬಲ ಮೇಡುವಿನಲ್ಲಿ ಮಕರ ಜ್ಯೋತಿ ದರ್ಶನವಾಗುತ್ತದೆ.

ಮಕರ ವಿಳಕ್ಕು ಉತ್ಸವದ ಅಂಗವಾಗಿ ಜ.21ರ ತನಕ ಭಕ್ತರಿಗೆ ಅಯ್ಯಪ್ಪ ದರ್ಶನಕ್ಕೆ ಅವಕಾಶವಿದೆ. ಅಂದು ಸಂಜೆ 5 ಗಂಟೆಗೆ ಪಂಪಾ ಗಣಪತಿ ಕ್ಷೇತ್ರದ ಬಳಿ ತಲುಪುವರಿಗೆ ದರ್ಶನ ಲಭಿಸುವುದು.

ರಾತ್ರಿ 9.30ಕ್ಕೆ ಅತ್ತಾಳ ಪೂಜಾ ನಡೆದ ಬಳಿಕ ಗುಡಿ ಮುಚ್ಚಲಾಗುತ್ತದೆ.

Leave A Reply