ಬೆಳ್ತಂಗಡಿಯ ಟೈಗರ್ । ‘ಬಂಗೇರ ‘ ಬ್ರಾಂಡ್ ನ ಜನಕ, ವಸಂತ ಬಂಗೇರ !
ವಸಂತ ಬಂಗೇರರು ತಮ್ಮ75 ವಸಂತಗಳ ಸಾಧನೆಯ ತುಂಬು ಜೀವನವನ್ನು ಕಳೆದಿದ್ದಾರೆ, ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಯಾವುದರೊಂದಿಗೂ ರಾಜಿಗೆ ರೆಡಿಯಿಲ್ಲದ, ಭ್ರಷ್ಠರಲ್ಲವೇ ಅಲ್ಲದ, ಸ್ವಲ್ಪ ಕೂಡಾ ದುಡ್ಡುಕಾಸಿನ ಆಸೆಯಿಲ್ಲದೆ ಬದುಕಿದವರು ವಸಂತ ಬಂಗೇರರು.
ಬೆಳ್ತಂಗಡಿಯಲ್ಲಿ ತಮ್ಮದೇ ‘ ಬಂಗೇರ ‘ ಎಂಬ ಸೋಲನರಿಯದ ಬ್ರಾಂಡ್ ಅನ್ನು ಸೃಷ್ಟಿದವರು ಬಂಗೇರರು. ಅದು 1983 ರ ಸಮಯ. ವಸಂತ ಬಂಗೇರರು ಮೊದಲ ಬಾರಿಗೆ ವಿಧಾನ ಸಭೆಯ ಮೆಟ್ಟಲೇರಿದ್ದು. ಆನಂತರ ಹಲವು ಬಾರಿ ಅವರು ಗೆದ್ದಿದ್ದಾರೆ ; ಮಧ್ಯೆ ಮಧ್ಯೆ ಸೋತಿದ್ದಾರೆ ಕೂಡ. ಪ್ರತಿ ಬಾರಿ ಸೋತಾಗಲೂ ಕುಗ್ಗದೆ ಮತ್ತೆ ಚೆಂಡಿನಂತೆ ಪುಟಿದೆದ್ದಿದ್ದಾರೆ.
ಗೆದ್ದಿರಲಿ, ಸೋತಿರಲಿ, ಯಾವತ್ತೂ ಜನರಿಂದ ದೂರವಾಗಿ ಬದುಕಿದವರಲ್ಲ. ಇವತ್ತಿಗೂ ತಮ್ಮ ಬೆಳ್ತಂಗಡಿ-ಗುರುವಾಯನಕೆರೆ ರಸ್ತೆಯಲ್ಲಿನ ಹಳೆಯ ಮನೆಯಲ್ಲಿ ಯಾವತ್ತೂ ಅವರು ಜನರಿಗೆ ಲಭ್ಯವಿದ್ದಾರೆ.
ವಸಂತ ಬಂಗೇರರ ವ್ಯಕ್ತಿತ್ವವನ್ನುಕೆಲವೇ ವಾಕ್ಯಗಳಲ್ಲಿಕಟ್ಟಿ ಹಾಕುವುದು ಕಷ್ಟ. ಹೇಗೆ ಬಳಸಿ ಕಟ್ಟಿ ಹಾಕಲು ಪ್ರಯತ್ನಿಸಿದರೂ ಅವರು ಅದರಿಂದ ಕೊಸರಿಕೊಂಡು ಹೊರಬಂದು ನಿಲ್ಲುತ್ತಾರೆ.
ವಸಂತ ಬಂಗೇರರ ಓರಗೆಯವರಿಗೆ ಗೊತ್ತಿದೆ. ಆಗ ವಸಂತ ಬಂಗೇರರು ಬೆಳ್ತಂಗಡಿಯ ಗವರ್ನ್ ಮೆಂಟ್ ಹೈಸ್ಕೂಲಿನಲ್ಲಿ ಓದುತ್ತಿದ್ದರು. ಅದು 1957-1962 ರ ಸಮಯ. ಆಗ ಉಜಿರೆಯಲ್ಲಿ ಕರ್ನಾಟಕ ವಿದ್ಯಾಲಯ ಅಂತ ಹೈಸ್ಕೂಲ್ ಒಂದಿತ್ತು. ಬೆಳ್ತಂಗಡಿಯ ಹುಡುಗರೂ, ಉಜಿರೆಯ ಹೈಸ್ಕೂಲಿನ ಹುಡುಗರೂ ಯಾವಾಗಲೂ ಕಬಡ್ಡಿಯಲ್ಲಿ ಎದುರಾಳಿಗಳು. ವಸಂತ ಬಂಗೇರರು, ಬೆಳ್ತಂಗಡಿಯ ಗವರ್ನ್ ಮೆಂಟ್ ಹೈಸ್ಕೂಲಿನ ಪರವಾಗಿ ಆಗ ಆಡುತ್ತಿದ್ದರು.
ಹೆಚ್ಚಿನ ಸಂದರ್ಭಗಳಲ್ಲಿ ವಸಂತ ಬಂಗೇರ ಪ್ರತಿನಿಧಿಸುತ್ತಿದ್ದ ಬೆಳ್ತಂಗಡಿ ಹೈಸ್ಕೂಲ್ ವಿಜಯಿಯಾಗುತ್ತಿತ್ತು. ಹೇಳಿ ಕೇಳಿ ವಸಂತ ಬಂಗೇರರು ರೈಡರ್. ಅವತ್ತು ಕೂಡಾ ಅವರನ್ನು ಅಷ್ಟು ಸುಲಭಕ್ಕೆ ಹಿಡಿಯುವುದು ಸಾಧ್ಯವಿರಲಿಲ್ಲ. ಅದು ಇವತ್ತಿಗೂ ಯಾರಿಂದಲೂ ಸಾಧ್ಯವಾಗಿಲ್ಲ !
ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿ ರಾಜಕೀಯ ಜೀವನ ಕಂಡುಕೊಂಡ ವಸಂತ ಬಂಗೇರ ಅವರು ಮೊದಲು ಬಿಜೆಪಿಯಲ್ಲಿ ಶಾಸಕರಾದವರು. ನಂತರ ಕಾಂಗ್ರೆಸ್ ಸೇರಿ, ಕಾಂಗ್ರೆಸ್ಸಿನಲ್ಲೇ ಉಳಿದು ಇವತ್ತಿಗೆ 20 ವರ್ಷದ ಮೇಲೆ ಆಯಿತು.
ನಂತರದ ಚುನಾವಣೆಯ ಹೊತ್ತಿಗೆ ವಸಂತ ಬಂಗೇರ ಅವರು ಜನತಾ ದಳ ಸೇರಿಕೊಂಡಿದ್ದರು : ಅದು ಯಾವ ಅನಿವಾರ್ಯತೆ ಅವರಿಗೆ ಬಂತೋ ಗೊತ್ತಿಲ್ಲ. ಯಾಕೆಂದರೆ 1975 ಯ ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ್ದವರು ವಸಂತ ಬಂಗೇರರು !!
ಆ ನಂತರ ಎರಡು ಚುನಾವಣೆಯಲ್ಲಿ ಸತತ ಸೋಲಾದ ನಂತರ ಅನಿವಾರ್ಯವಾಗಿ ಕಾಂಗ್ರೆಸ್ ಸೇರಬೇಕಾಯ್ತು. ಅವತ್ತಿನಿಂದ ಇವತ್ತಿನವರೆಗೆ ಅವರು ಕಾಂಗ್ರೆಸ್ಸಿನಲ್ಲಿದ್ದಾರೆ. ಮತ್ತು ತಮ್ಮ ಬೆಳ್ತಂಗಡಿಯ ಶಾಸಕ ಸ್ಥಾನದಲ್ಲೇ ತೃಪ್ತರಾಗಿ ಉಳಿದಿದ್ದರು. ಮಧ್ಯೆ ಒಮ್ಮೆ ಸಣ್ಣ ಕೈಗಾರಿಕೆಗಳ ನಿಗಮದ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದಾರೆ.
ಅವರು ಬೆಳ್ತಂಗಡಿಯ ರಾಜಕೀಯದಲ್ಲಿ ಎಷ್ಟು ಹಾಸು ಹೊಕ್ಕು ಎಂದರೆ, 1983 ರ ನಂತರ ಮೊನ್ನೆ ಮೊನ್ನೆ 2018 ರ ವರೆಗೆ ‘ ಬಂಗೇರ ‘ ಬ್ರಾಂಡ್ ನೇ ಬೆಳ್ತಂಗಡಿಯಲ್ಲಿ ಅಧಿಕ್ಕಾರ ನಡೆಸಿದ್ದು; ಒಂದು ಬಾರಿ, 5 ವರ್ಷ ಗಂಗಾಧರಗೌಡರು ಶಾಸಕರಾದುದನ್ನು ಬಿಟ್ಟರೆ ! 1994 ಮತ್ತು 1999 ರಲ್ಲಿ ಸ್ವತಃ ತಾವೇ ಕಾಂಗ್ರೆಸ್ ನಿಂದ ಗೆದ್ದು ಬೀಗಿದ್ದರು ವಸಂತ ಬಂಗೇರರು.
ಆ ನಂತರ ಎರಡು ವರ್ಷ ಅವರ ತಮ್ಮ ಪ್ರಭಾಕರ ಬಂಗೇರ ಅವರೇ ಅಣ್ಣನನ್ನು ಬಿಜೆಪಿ ಪಕ್ಷದಿಂದ ನಿಂತು ಸೋಲಿಸಿದ್ದರು. ಬಿಜೆಪಿ ಆ ಎರಡು ಬಾರಿ ಗೆದ್ದಿರಬಹುದು, ಆದರೆ ‘ ಬಂಗೇರ ‘ ಬ್ರಾಂಡ್ ನ ಮತಗಳು ಒಡೆದು ಹೋಗಿ ಅಣ್ಣ ತಮ್ಮಂದಿರ ಮಧ್ಯೆ ಹಂಚಿ ಹೋಗುವ ತಂತ್ರಗಾರಿಕೆಯನ್ನು ಬಿಜೆಪಿಯವರು ಹೆಣೆದಿದ್ದರು. ಅದರಿಂದ ವಸಂತ ಬಂಗೇರ ಅವರಿಗೆ ಸತತ ಎರಡು ಬಾರಿ ಸೋಲಾಗಿತ್ತು.
ಆದರೆ ಸುಧೀರ್ಘ ಹತ್ತು ವರ್ಷದ ನಂತರ ಮತ್ತೆ 2008 ಮತ್ತು 2013 ರಲ್ಲಿ ಹಳೆಯ ಸೋಲನ್ನು ನೆಲಕ್ಕೆ ಒದ್ದು, ಮೇಲಕ್ಕೆ ಚಿಮ್ಮಿ ಸತತ ಎರಡು ಎರಡು ಬಾರಿ ಬೆಳ್ತಂಗಡಿಯಲ್ಲಿ ಗೆದ್ದು ಬಂದರು.
ಇವತ್ತು, 2018 ರ ಚುನಾವಣೆಯಲ್ಲಿ ವಸಂತ ಬಂಗೇರ ಸೋತಿರಬಹುದು. ಹುಟ್ಟು ಹೋರಾಟಗಾರನಿಗೆ ಹೋರಾಟ ಮಾತ್ರ ಮುಖ್ಯ; ಜಯವಲ್ಲ ಎಂಬ ಸತ್ಯ ಬಂಗೇರ ಅವರಿಗೂ ಗೊತ್ತಿದೆ.
ವಸಂತ ಬಂಗೇರರು ಇವತ್ತಿಗೆ ಬಿಜೆಪಿ ಪಕ್ಷದಲ್ಲಿದ್ದಿದ್ದರೆ ಮುಖ್ಯಮಂತ್ರಿಯಾಗಿರುತ್ತಿದ್ದರು ಎಂದು ಎಷ್ಟೋ ಜನ ಹೇಳುವುದಿದೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಯಾಕೆಂದರೆ ವಸಂತ ಬಂಗೇರರು ಯಡಿಯೂರಪ್ಪನವರ ಓರಗೆಯವರು. ಇಬ್ಬರೂ ಒಟ್ಟೊಟ್ಟಿಗೆ ವಿಧಾನಸಭೆಯ ಮೆಟ್ಟಿಲು ಹತ್ತಿದವರು.
ಆದರೆ ಎಲ್ಲರೂ ಮುಖ್ಯಮಂತ್ರಿ ಆಗಲಿಕ್ಕಾಗುತ್ತ ? ಪದವಿಗಳೆಂಬುದು ಇರುವ ಬೆರಳೆನಿಸಿಕೆಯಷ್ಟು ಕಡಿಮೆ ಸಂಖ್ಯೆಯ ಅವಕಾಶ ; ಅದನ್ನು ಹೊಂಚು ಹಾಕುತ್ತ ಕೂರುವ ನೂರಾರು ಬೇಟೆಗಾರರು ; ಅದರ ಮಧ್ಯೆ ಕೂಡಿ ಬರುವ ಅದೃಷ್ಟದಾಟ- ಎಲ್ಲವೂ ಕೂಡಿ ಬರಬೇಕಲ್ಲವಾ?
ಅಧಿಕಾರದಲ್ಲಿ ಇರಲಿ, ಇಲ್ಲದೆ ಇರಲಿ,ಅವರದು ಇಂದಿಗೂ ಅದೇ ದೊಡ್ಡ ದನಿ. ಅಧಿಕಾರಿಗಳೆಡೆ ಅದೇ ದರ್ಪ. ಜನರ ಸಮಸ್ಯೆಗಳಿಗೆ ತಕ್ಷಣದ ರೆಸ್ಪಾನ್ಸ್ !
ಅವರನ್ನು ಹತ್ತಿರದಿಂದ ಬಲ್ಲವರು ಹೇಳುವಂತೆ ವಸಂತ ಬಂಗೇರರಿಗೆ ಆಪ್ತ ಸಲಹೆ ಕೊಡುವ ಮೂರ್ನಾಲ್ಕು ಗೆಳೆಯರಿದ್ದಾರೆ. ಬಂಗೇರರು ಅವರನ್ನೆಷ್ಟು ನಂಬುತ್ತಾರೆಂದರೆ, ಅವರ ಸಲಹೆ ವಿರೋಧಿಸಿ ಅವರು ಎಂದೂ ನಡೆಯುವುದಿಲ್ಲ. ಇದರಿಂದ ಅವರಿಗೆ ಒಳ್ಳೆಯದೂ ಆಗಿದೆ; ಕೆಡುಕೂ ಬಂದಿದೆ.
ಬೆಳ್ತಂಗಡಿಯ ಮನೆ ಮನೆಗೆ ವಿದ್ಯುತ್ತನ್ನು ಹರಿಸಿದವರು ಅವರು. ಅವರು ತಮ್ಮದೇ ವಿದ್ಯಾಸಂಸ್ಥೆ ಗುರುದೇವ ಎಜುಕೇಷನಲ್ ಟ್ರಸ್ಟ್ ಸ್ಥಾಪಿಸಿದ್ದಾರೆ. ಆಸ್ತಿಯ ಹಕ್ಕು ಪತ್ರ ವಿತರಿಸಿದ ವೀರ ವಸಂತ !
ಬೆಳ್ತಂಗಡಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳಾದಾಗ, ಸಂಯಮದಿಂದ ಜನಮಾನಸದ ಪರವಾಗಿ ನಿಂತ ಧೀರ ಇವರು. ‘ ಪ್ರಭುತ್ವ’ ಕ್ಕಿಂತಲೂ ಜನರೇ ಅವರ ನ್ಯಾಚುರಲ್ ಆಯ್ಕೆ. ಅದನ್ನು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಯಾರೂ ಒಪ್ಪಿಕೊಳ್ಳದೆ ವಿಧಿಯಿಲ್ಲ.
ಈಗ ತುಂಬಿಕೊಂಡ ಆರೋಗ್ಯದಿಂದ, ತುಳುಕುವ ಅನುಭವದಿಂದ ವಸಂತ ಬಂಗೇರರು ತಮ್ಮ ಸಫಲ 75 ವರ್ಷಗಳ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಶಾಸಕರಲ್ಲದಿದ್ದರೂ ಶಾಸಕರಂತೆ ಕೆಲಸ ತೆಗೆಸಬಲ್ಲ ಚಾತುರ್ಯತೆ ಅವರಿಗಿದೆ. ಅದಕ್ಕೆ ಇವತ್ತಿಗೂ ಅವರ ಆ ಮನೆಯಲ್ಲಿ ಕಷ್ಟ ಹೇಳಿಕೊಂಡು ಜನ ಸೇರಿಯೇ ಇರುತ್ತಾರೆ. ಒಂದು ಭರವಸೆ, ಒಂದು ಪ್ರಯತ್ನ ಮತ್ತು ಒಂದು ಗ್ಲಾಸ್ ಚಾ ಕೊಟ್ಟು ಬಂಗೇರರು ಜನರನ್ನು ಸಂತೈಸುತ್ತಲೇ ಇದ್ದಾರೆ.
ಬಂಗೇರ ಬ್ರಾಂಡ್ ನ ಅಧಿಪತ್ಯ !!
1952 – ವೆಂಕಟರಮಣ ಗೌಡ
1956 – ರತ್ನವರ್ಮ ಹೆಗ್ಗಡೆ
1962 – ವೈಕುಂಠ ಬಾಳಿಗ
1967 – ಬಿ.ವಿ. ಬಾಳಿಗ
1972 – ಸುಬ್ರಮಣ್ಯ ಗೌಡ
1978 – ಗಂಗಾಧರ ಗೌಡ
1983 – ವಸಂತ ಬಂಗೇರ
1985 – ವಸಂತ ಬಂಗೇರ
1989 – ಗಂಗಾಧರ ಗೌಡ
1994 – ವಸಂತ ಬಂಗೇರ
1999 – ಪ್ರಭಾಕರ ಬಂಗೇರ
2004 – ಪ್ರಭಾಕರ ಬಂಗೇರ
2008 – ವಸಂತ ಬಂಗೇರ
2013 – ವಸಂತ ಬಂಗೇರ
2018 – ಹರೀಶ್ ಪೂಂಜಾ
ಸುದರ್ಶನ್ ಬಿ. ಪ್ರವೀಣ್, ಬೆಳಾಲು
81478 20538