ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿ ಸಂಘದ ಉದ್ಘಾಟನೆ

ಸವಣೂರು : ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಡಿ.5ರಂದು ನಡೆಯಿತು. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಅವರು,ಉದ್ಘಾಟಿಸಿ ಮಾತನಾಡಿ,ಹಳೇ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ರಾಯಭಾರಿಗಳು ಅದೇ ರೀತಿ ಸಂಸ್ಥೆಯ ಆಧಾರ ಸ್ತಂಭಗಳು.  ನಮ್ಮ ಸಂಸ್ಥೆಯ ಬೆಳವಣಿಗೆಗೆ ಬೇಕಾದ ಮಾಹಿತಿಯನ್ನು ಕೊಡುವ ಕಾರ್ಯವು ಹಳೇ ವಿದ್ಯಾರ್ಥಿಗಳಿಂದಾಗಬೇಕು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕ ಇಂಜಿನಿಯರ್ ಅಶ್ವಿನ್ ಎಲ್ ಶೆಟ್ಟಿ ಮಾತನಾಡಿ, ಒಂದು ವಿದ್ಯಾಸಂಸ್ಥೆಯನ್ನು ಬೆಳೆಸುವ ಜವಾಬ್ದಾರಿ ಹಳೆ ವಿದ್ಯಾರ್ಥಿಗಳಿಗಿದೆ. ತಾವು ಕಲಿಯುವಾಗ ಸಿಗದೆ ಇದ್ದ ಸೌಲಭ್ಯಗಳು ಮುಂದಿನ ವಿದ್ಯಾರ್ಥಿಗಳಿಗೆ ಸಿಗುವಂತೆ ಮಾಡುವ ಎಲ್ಲಾ ಮಾಹಿತಿಯನ್ನು ತಿಳಿಸುವ ಕಾರ್ಯವನ್ನು ಹಳೆ ವಿದ್ಯಾರ್ಥಿಗಳು ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸುಳ್ಯ ಸ.ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪುಷ್ಪರಾಜ್ ಕೆ ಮಾತನಾಡಿ, ನಾವು ಕಲಿತಂತಹ ಶಾಲೆಯನ್ನು, ಕಲಿಸಿದಂತಹ ಗುರುಗಳನ್ನು ಸ್ಮರಿಸುವಂತದ್ದು ಒಂದು ಅವಿಸ್ಮರಣೀಯ ಕ್ಷಣ.  ಇವುಗಳನ್ನು ಹಣಕೊಟ್ಟು ಪಡಕೊಳ್ಳಲು ಸಾಧ್ಯವಿಲ್ಲ.  ಹಳೆಯದಕ್ಕೆ ಇರುವ ಮಹತ್ವವು ಬೇರಾವುದರಿಂದಲೂ ಸಿಗದು, ಹಣ್ಣು ಮಾಗಿದಾಗಲೇ ಅದಕ್ಕೆ ರುಚಿ ಜಾಸ್ತಿ, ಹಾಗಾಗಿ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸುವಂತಹ ಜವಾಬ್ದಾರಿ ಆ ಸಂಸ್ಥೆಯ ಹಳೆ ವಿದ್ಯಾರ್ಥಿಗಳಿಗಿದೆ ಎಂದರು.

ಉಪನ್ಯಾಸಕಿ ಗೀತಾ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲೆ  ರಾಜಲಕ್ಷ್ಮೀ ಎಸ್ ರೈ ಸ್ವಾಗತಿಸಿ, ಹಳೆ ವಿದ್ಯಾರ್ಥಿ ಸಂಘದ ಸಂಘಟಕ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಕುಮಾರ್ ವಂದಿಸಿದರು. ವೇದಿಕೆಯಲ್ಲಿ ಉಪಪ್ರಾಂಶುಪಾಲ ಶೇಷಗಿರಿ ಎಂ, ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಹ ಸಂಘಟಕಿ, ಉಪನ್ಯಾಸಕಿ ಪ್ರತಿಭಾ ಎಸ್ ಉಪಸ್ಥಿತರಿದ್ದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಗುರುರಾಜ್ ಇವರ ಪ್ರಾರ್ಥಿಸಿದರು.

ಉಪನ್ಯಾಸಕಿ ಅಕ್ಷತಾ ಎಂ ನಿರ್ವಹಿಸಿದರು. ಈ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ನೇಮಕವನ್ನು ಮಾಡಲಾಯಿತು.  ಅಧ್ಯಕ್ಷರಾಗಿ ಅಶ್ವಿನ್ ರೈ. ಉಪಾಧ್ಯಕ್ಷರಾಗಿ ಧನ್ಯತ್ ಕೆ,  ಕಾರ್ಯದರ್ಶಿಯಾಗಿ  ಮಹಮ್ಮದ್ ಶಾಫಿಕ್, ಜೊತೆ ಕಾರ್ಯದರ್ಶಿಯಾಗಿ ಕು. ವ್ಯಾಪ್ತಿ, ಸಂಘಟನಾ ಕಾರ್ಯದರ್ಶಿಯಾಗಿ  ಜೈಕಿರಣ್, ಕೋಶಾಧಿಕಾರಿಯಾಗಿ  ಶರತ್, ಕ್ರೀಡಾ ಕಾರ್ಯದರ್ಶಿಯಾಗಿ  ಅಂಕಿತ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಕು.ಸಂಧ್ಯಾ ಕೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕು. ಶಿಶ್ಮಿತಾ ರೈ, ಜೊತೆ  ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀ ನಯನ್‍ಕುಮಾರ್ ಆಯ್ಕೆಗೊಂಡರು.

Leave A Reply

Your email address will not be published.