ಮರಣದಂಡನೆಗೆ ಗುರಿಯಾಗಿ, ಇನ್ನೇನು ಸಾಯಬೇಕೆನ್ನುವಷ್ಟರಲ್ಲಿ ನಿರಪರಾಧಿಯಾಗಿ ಹೊರ ಬಂದವನ ಕಥೆ

ಬೇರೆ ಬೇರೆ ದೇಶದಲ್ಲಿ, ಬೇರೆ ಬೇರೆಯದೇ ರೀತಿಯ ಮರಣದಂಡನೆಯ ಶಿಕ್ಷೆಗಳಿವೆ. ನಮ್ಮ ಭಾರತದಲ್ಲಿ ಸಾಮಾನ್ಯವಾಗಿ ಮರಣದಂಡನೆ ಅಂದರೆ ಗಲ್ಲು ಶಿಕ್ಷೆ. ಆದರೆ, ಕೋರ್ಟ್ ಮಾರ್ಷಲ್ ನ ಮೂಲಕ ಶಿಕ್ಷಿಸಲ್ಪಡುವ ಅಪರಾಧಿಗೆ ಭಾರತದಲ್ಲಿ ಗಲ್ಲು ಶಿಕ್ಷೆಯನ್ನೂ ನೀಡಬಹುದು, ಅಥವಾ ಗುಂಡು ಹೊಡೆದು ಕೂಡ ಸಾಯಿಸಬಹುದು. ಕಾನೂನಿನಲ್ಲಿ ಎರಡಕ್ಕೂ ಅವಕಾಶವಿದೆ.

ಮರಣ ಶಿಕ್ಷೆಯನ್ನೇ ರದ್ದು ಮಾಡಬೇಕೆಂಬ ಕೂಗು ತುಂಬಾ ಹಿಂದಿನಿಂದಲೂ, ಹಲವು ದೇಶಗಳಲ್ಲಿ ಕೇಳಿಕೊಂಡು ಬಂದಿದೆ. ಅಮೆರಿಕಾದಂತಹ ದೇಶದಲ್ಲಿ ಮರಣದಂಡನೆಯನ್ನು ಒಂದು ಸಲ 1972 ರಲ್ಲಿ ರದ್ದು ಮಾಡಿ ಆ ನಂತರ 1976 ರಲ್ಲಿ ಮರು ಜಾರಿ ಮಾಡಿದ ಉದಾಹರಣೆಯೇ ಕಣ್ಣ ಮುಂದಿದೆ.

ಇವತ್ತು ಆಂಧ್ರಪ್ರದೇಶ ಸರಕಾರ, ರೇಪ್ ಅಪರಾಧಿಗೆ ಮರಣದಂಡನೆ ಶಿಕ್ಷೆ ನೀಡಬೇಕು ಮತ್ತು, ಕೋರ್ಟ್ ಪ್ರೊಸೀಡಿಂಗ್ ಗಳನ್ನು ಕೇವಲ 21 ದಿನದೊಳಗೆ ನಡೆಸಿ ನ್ಯಾಯ ನೀಡಬೇಕು ಎಂದು ತರಾತುರಿಯಲ್ಲಿದೆ. ಆದರೆ, ತಾನು ಮಾಡುತ್ತಿರುವ ತಪ್ಪು ಎಷ್ಟು ದೊಡ್ಡದು ಮತ್ತು ಅದು ಮುಂದೆ ಅದೆಷ್ಟು ದೊಡ್ಡ ಅನಾಹುತವನ್ನು ಸೃಷ್ಟಿಸಬಲ್ಲುದು ಎಂಬ ಬೇಸಿಕ್ ಅರಿವು ಕೂಡ ಅದಕ್ಕಿಲ್ಲ.

ಒಟ್ಟಾರೆ ಆಂಧ್ರ ಸರಕಾರದ ನಿರ್ಧಾರವು ಐತಿಹಾಸಿಕ ಎಂದು ಸ್ತ್ರೀ ಕುಲ ಮತ್ತು ಉಳಿದ ಸಮಾಜ ಇವತ್ತು ಬೊಬ್ಬಿರಿಯುತ್ತಿದೆ. ಆದರೆ ಈ ನಿರ್ಧಾರ ಐತಿಹಾಸಿಕವಲ್ಲ. ಗಲ್ಲಿನಂತಹಾ ಮರುಸ್ಥಾಪಿಸಲಾಗದ ಶಿಕ್ಷೆಗೆ ಅವಸರಿಸುವುದು ಇತಿಹಾಸ ಗೊತ್ತಿಲ್ಲದವರ ಕೆಲಸ.

ವಿಲಿಯಂ ಹೆನ್ರಿ ಫರ್ಮನ್

ಫರ್ಮನ್ ಎಂಬಾತ ಒಂದು ಕೊಲೆ ಆಪಾದನೆಯ ಮೇಲೆ ಜೈಲು ಸೇರಿದ್ದ. ಅದು ನಡೆದದ್ದು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ. ಕೊಲೆ ನಡೆದುದಕ್ಕೆ ಬೇರೆ ಏನು ಸಾಕ್ಷ್ಯಗಳಿರಲಿಲ್ಲ. ಆಪಾದಿತನ ಹೇಳಿಕೆಯ ಮೇಲೆಯೇ ಪೂರ್ತಿ ನ್ಯಾಯದಾನ ಮಾಡಬೇಕಿತ್ತು.

ಆರೋಪಿಯಾದ ವಿಲಿಯಂ ಹೆನ್ರಿ ಫರ್ಮನ್ ದರೋಡೆ ಮಾಡಲು ವ್ಯಕ್ತಿಯೊಬ್ಬರ ಮನೆಗೆ ಒಂದು ರಾತ್ರಿ ನುಗ್ಗಿದ್ದ. ಆಗ ಮನೆಯೊಡೆಯ ಎಚ್ಚರಗೊಂಡು ದರೋಡೆಯನ್ನು ತಡೆಯಲು ಬಂದ. ಆ ಸಂದರ್ಭದಲ್ಲಿ ಆ ಮನೆಯೊಡೆಯನ ಕೊಲೆ ನಡೆದಿತ್ತು.

ಆರೋಪಿಯಾದ ವಿಲಿಯಂ ಹೆನ್ರಿ ಫರ್ಮನ್ ಒಂದು ಸಲ, ಓಡುತ್ತಿರುವಾಗ ಕೈತಪ್ಪಿ ಗುಂಡು ಹಾರಿದೆ ಅಂದಿದ್ದ. ಮತ್ತೊಂದು ಸಲ ಅಡ್ಡಾದಿಡ್ಡಿ ಗುಂಡು ಹಾರಿಸಿದ್ದೆ ಅಂದಿದ್ದ. ಒಟ್ಟಿನಲ್ಲಿ ಕೊಲೆ ನಡೆದು ಹೋಗಿತ್ತು. ಅಮೆರಿಕಾದ ಜಾರ್ಜಿಯಾ ಪ್ರಾಂತ್ಯದಲ್ಲಿ ಕೋರ್ಟಿನಲ್ಲಿ ಕೇಸು ನಡೆದು ಒಟ್ಟು 9 ಜನರಿದ್ದ ನ್ಯಾಯಪೀಠದಲ್ಲಿ 5 – 4 ರಲ್ಲಿ ಆತ ಮರಣದಂಡನೆಯಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದ. 5 ಜನ ಜಡ್ಜುಗಳು ಗಲ್ಲು ಶಿಕ್ಷೆ ವಿಧಿಸಬಾರದೆಂದೂ, ಉಳಿದ ನಾಲ್ಕು ಜನ ಗಲ್ಲು ಶಿಕ್ಷೆ ನೀಡಬೇಕೆಂದೂ ತೀರ್ಪು ಬರೆದಿದ್ದರು. ಅಷ್ಟೇ ಅಲ್ಲದೆ ಪ್ರತಿಯೊಬ್ಬರು ಬರೆದ ತೀರ್ಪೂ ಕೂಡ ವಿಭಿನ್ನ ಮಾದರಿಯದಾಗಿತ್ತು. ಪ್ರತಿಯೊಬ್ಬರೂ ಪ್ರತ್ಯೇಕ ಅಭಿಪ್ರಾಯಗಳನ್ನು ದಾಖಲಿಸಿದ್ದರು.

ಹೆಚ್ಚುಕಮ್ಮಿಇದೇ ಸಮಯದಲ್ಲಿ, ಅಮೆರಿಕಾದಲ್ಲಿ ಮತ್ತೊಂದು ಘಟನೆ ನಡೆದು ಅದರಲ್ಲಿ ಜಾಕ್ಸನ್ ಎಂಬ ವ್ಯಕ್ತಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ. ಜಾಕ್ಸನ್ ನ ಕೇಸಿನಲ್ಲಿ ಕೊಲೆಯೇ ನಡೆದಿರಲಿಲ್ಲ. ಜಾಕ್ಸನ್ ನ ದರೋಡೆ ಮಾಡುವ ಸಂದರ್ಭದಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದ. ಆದರೂ ಆತನಿಗೆ ಮರಣ ಶಿಕ್ಷೆ ನೀಡಿತ್ತು ಕೋರ್ಟು ! ಈ ತೀರ್ಪು ಕೂಡಾ ವಿವಾದಕ್ಕೀಡಾಗಿತ್ತು.

ಆದ್ದರಿಂದ ತಕ್ಷಣಕ್ಕೆ ಯಾವುದೇ ಗಲ್ಲುಶಿಕ್ಷೆಯನ್ನು ವಿಧಿಸಬಾರದು ಎಂದು ನಿರ್ಧರಿಸಿ ಕಾನೂನಿನ ಪರಾಮರ್ಶೆಗೆ ಕೈಹಾಕಿದರು ಮುಖ್ಯ ನ್ಯಾಯಮೂರ್ತಿಗಳು ಮತ್ತು ಅಲ್ಲಿನ ಸರಕಾರ.

ಆದುದರಿಂದ ಅಮೆರಿಕಾದಲ್ಲಿ 1972 ರಿಂದ 1976 ರವರೆಗೆ ಯಾವುದೇ ಮರಣಶಿಕ್ಷೆಯನ್ನು ಜಾರಿಗೊಳಿಸಲಿಲ್ಲ.
ಆ ಮೂಲಕ, ಆಗಿನ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿಗಳಾದ ಪಾಟರ್ ಸ್ಟೀವರ್ಟ್, ಬೈರನ್ ವೈಟ್ ಮತ್ತು ವಿಲಿಯಂ ಡಗ್ಲಾಸ್ ಅವರು ಕಾನೂನಿನಲ್ಲಿರುವ ಅನಿಯಂತ್ರತೆಯನ್ನು ಗುರುತಿಸಿದರು. ಅಷ್ಟೇ ಅಲ್ಲದೆ, ಅಮೆರಿಕಾದಂತಹಾ ಮುಂದುವರಿದ ರಾಷ್ಟ್ರದಲ್ಲಿ ಕೂಡ, ಕರಿಯರಿಗೆ ಮತ್ತು ಬಿಳಿಯರಿಗೆ ಸಮಾನವಾದ ಕಾನೂನಿದ್ದರೂ, ಶಿಕ್ಷೆಯ ವಿಷಯಕ್ಕೆ ಬಂದಾಗ ಕರಿಯ ಜನಾಂಗಕ್ಕೆ ಸುಲಭವಾಗಿ ಮರಣದಂಡನೆ ಶಿಕ್ಷೆ ಜಾರಿಯಾಗುವುದನ್ನು ಆ ನ್ಯಾಯಮೂರ್ತಿಗಳು ಗುರುತಿಸಿದ್ದರು.

‘ ಫರ್ಮನ್ ‘ ನ ಈ ವಿಶಿಷ್ಟ ಕೇಸಿನ ಕಾರಣದಿಂದ ಜೇಮ್ಸ್ ಜೋಸೆಫ್ ರಿಚರ್ಡ್ಸನ್ ಎಂಬ ಒಬ್ಬ ಅಮಾಯಕ ಜೀವ ವಿನಾ ಕಾರಣಕ್ಕೆ ಮರಣದಂಡನೆಗೆ ಬಲಿಯಾಗುವುದು ತಪ್ಪಿತು.

ಯಾರು ಜೇಮ್ಸ್ ಜೋಸೆಫ್ ರಿಚರ್ಡ್ಸನ್ ?

ಅದು 1967 ಸಮಯ. ಒಬ್ಬ ವ್ಯಕ್ತಿಯನ್ನು ತನ್ನ ಏಳು ಮಕ್ಕಳ ಹತ್ಯೆಯ ಸಂಬಂಧ ಬಂಧಿಸಲಾಗಿತ್ತು. ಆತ ತನ್ನ 7 ಮಕ್ಕಳಿಗೆ ವಿಷವುಣಿಸಿ ಕೊಂದ ಆಪಾದನೆ ಆತನ ಮೇಲಿತ್ತು. ಆ ವ್ಯಕ್ತಿಯೇ ಜೇಮ್ಸ್ ಜೋಸೆಫ್ ರಿಚರ್ಡ್ಸನ್ ಎಂಬ ಅಮೆರಿಕಾದ ‘ ಕರಿಯ’ ನಾಗರಿಕ.

ಕೋರ್ಟಿನ ಇನ್ವೆಸ್ಟಿಗೇಷನ್ ಮತ್ತು ಟ್ರೈಯಲ್ ಮುಗಿದು ಕೋರ್ಟು ಆತನನ್ನು ಅಪರಾಧಿ ಎಂದು ಘೋಷಿಸಿ ಆತನಿಗೆ ಮರಣದಂಡನೆಯ ಶಿಕ್ಷೆಯನ್ನು ವಿಧಿಸಲಾಗಿತ್ತು. ಆದರೆ ಯಾವಾಗ 1972 ರಲ್ಲಿ ‘ ಫರ್ಮನ್ ‘ ನ ಕೇಸಿನ ಫಲಶ್ರುತಿಯಾಗಿ ಮರಣದಂಡನೆಯ ಶಿಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಹಾಲ್ಟ್ ಮಾಡಿದರೋ, ಜೇಮ್ಸ್ ಜೋಸೆಫ್ ರಿಚರ್ಡ್ಸನ್ ನ ಮರಣ ಶಿಕ್ಷೆ ಕೂಡಾ ಜಾರಿ ಆಗಲಿಲ್ಲ. ಆತನನ್ನು ಡೆತ್ ರೋ, ಅಂದರೆ ಗಲ್ಲು ಶಿಕ್ಷೆಗೆ ಕಾಯುತ್ತ ಕೂರುವವರ ಲಿಸ್ಟಿನಲ್ಲಿಡಲಾಯಿತು.

ಆ ಸಮಯದಲ್ಲಿ 1970 ರಲ್ಲಿ ಅಮೇರಿಕಾದ ನ್ಯಾಯವಾದಿ ಮತ್ತು ಖ್ಯಾತ ಲೇಖಕ ಮಾರ್ಕ್ ಲೇನ್ ಎಂಬವನು ತನ್ನ ಪುಸ್ತಕ ‘ ಆರ್ಕೇಡಿಯ ‘ ದ ಮೂಲಕ, ಜೇಮ್ಸ್ ಜೋಸೆಫ್ ರಿಚರ್ಡ್ಸನ್ ನಿರಪರಾಧಿ ಎಂದು ಪ್ರೋವ್ ಮಾಡಲು ಪ್ರಯತ್ನಿಸಿದ. ಆದರೂ ಕೋರ್ಟಿನಲ್ಲಿ ಅದನ್ನು ಪ್ರೂವ್ ಮಾಡಬೇಕಾಗಿತ್ತು. ತಕ್ಷಣಕ್ಕೇನೋ ರಿಚರ್ಡ್ಸನ್ ಮರಣ ಶಿಕ್ಷೆಯಿಂದ ಬಚಾವಾಗಿದ್ದನಷ್ಟೆ.

ಮುಂದೆ, ಮಾರ್ಕ್ ಲೇನ್ ನ ಪುಸ್ತಕ ಬಿಡುಗಡೆಯಾಗಿದ್ದ 19 ವರ್ಷಗಳ ನಂತರ, ಮತ್ತೆ ಕೋರ್ಟಿನಲ್ಲಿ ಕಲಾಪಗಳು ನಡೆದು ಆತ ನಿರಪರಾಧಿಯಾಗಿ ಬಿಡುಗಡೆಗೊಂಡಿದ್ದ. ಹಾಗೆ ತನ್ನ ಜೀವನದ 21 ಅಮೂಲ್ಯ ವರ್ಷಗಳನ್ನು ಆತ ಜೈಲಿನಲ್ಲಿ ಅನಿಶ್ಚಿತತೆಯಿಂದ, ಭಯದಿಂದ ಕಳೆದಿದ್ದ. ಫರ್ಮಾನ್ ನ ಕೇಸೊಂದು ಅಲ್ಲದೆ ಹೋಗಿದ್ದಿದ್ದರೆ, ಮತ್ತು ಲೇಖಕ ಮಾರ್ಕ್ ಲೇನ್ ಮತ್ತು ಆಗಿನ ಮಿಯಾಮಿ ಪ್ರಾಂತ್ಯದ ಜೈಲು ಅಧಿಕಾರಿಯ ಮುತುವರ್ಜಿ ಇಲ್ಲದೆ ಹೋಗಿದ್ದಿದ್ದರೆ ಆತ ಆವಾಗಲೇ, 1970 ರ ಸುಮಾರಿಗೆ ಆತ ಮರಣದಂಡನೆಗೆ ಗುರಿಯಾಗಿ ಸತ್ತು ಹೋಗಿರುತ್ತಿದ್ದ. ರಿಚರ್ಡ್ಸನ್ ನಂತಹ ಅಮಾಯಕನನ್ನು ಶಿಕ್ಷೆಗೆ ದೂಡಲು ಅಧಿಕಾರಿವರ್ಗದವರ ಭ್ರಷ್ಟಾಚಾರ ಕೂಡ ಕಾರಣವಾಗಿತ್ತು.

ಮುಂದೆ ರಿಚರ್ಡ್ಸನ್ ನ ಬಿಡುಗಡೆಯ ನಂತರ, ತನ್ನೆರಡು ಗಂಡಂದಿರನ್ನು ಕೊಂದ ಅಪಾದನೆಯಲ್ಲಿದ್ದ ಮತ್ತು, ಹಿಂದೆ ಇದೇ ರಿಚರ್ಡ್ಸನ್ ನ ಮನೆಯಲ್ಲಿ 7 ಮಕ್ಕಳನ್ನು ನೋಡಿಕೊಳ್ಳಲು ಸಹಾಯಕಿಯಾಗಿದ್ದ ಮಹಿಳೆಯೊಬ್ಬಳು ತಾನೇ ಆ 7 ಜನ ಮಕ್ಕಳನ್ನು ಕೊಂದದ್ದೆಂದು ತಾನು ಸಾಯುವ ಕಾಲಕ್ಕೆ ತಪ್ಪೊಪ್ಪಿಕೊಂಡಳು.
ಹೀಗೆ ಮುಗ್ಧರನ್ನು ಮತ್ತು ಮರಣದಂಡನೆಗೆ ಅರ್ಹರಲ್ಲದವರನ್ನು ಕಾನೂನಿನ ನೆಪದಲ್ಲಿ ಶಿಕ್ಷಿಸಬಹುದೆಂದು ತೋರಿಸಿಕೊಟ್ಟ ಮೇಲಿನ ಸನ್ನಿವೇಶಗಳು ಅಮೆರಿಕಾದಂತಹ ದೇಶಕ್ಕೆ ಪಾಠವಾಯಿತು.

ಆದರೆ, 1967-1938 ರ ಮಧ್ಯದಲ್ಲಿ ಫರ್ಮನ್ – ಜಾಕ್ಸನ್ ನ ತರಹದ ಗಲ್ಲು ಶಿಕ್ಷೆಗೆ ಅರ್ಹರಲ್ಲದ ಖೈದಿಗಳಿಗೆ ಕೋರ್ಟು ಗಲ್ಲು ಶಿಕ್ಷೆ ವಿಧಿಸಿ ವಿನಾಕಾರಣ ಸಾಯಿಸಿತ್ತು. ಆ ಬಗ್ಗೆ, ಫರ್ಮನ್ ಕೇಸಿನ ಸಂದರ್ಭ ಇದ್ದ ನ್ಯಾಯಮೂರ್ತಿಗಳು ಮರುಕಪಟ್ಟಿದ್ದರು, ಮತ್ತು ಮರಣದಂಡನೆಯು ಅಮಾನವೀಯ ಎಂದು ಅಭಿಪ್ರಾಯಪಟ್ಟಿದ್ದರು. ಮುಂದೆ ಅಮೇರಿಕ ನ್ಯಾಯಾಂಗ ವ್ಯವಸ್ಥೆ ಹಲವು ರಿಫಾರ್ಮ್ ಗಳಿಗೆ ಒಳಪಟ್ಟು, ತನ್ನ ನ್ಯಾಯ ಪ್ರದಾನ ವ್ಯವಸ್ಥೆಯನ್ನು ಬಲಪಡಿಸಿಕೊಂಡಿತು.

ಇಂತಹ ಅಮಾಯಕರ ಅಥವಾ ಮರಣದಂಡನೆಗೆ ಯೋಗ್ಯರಲ್ಲದ ವ್ಯಕ್ತಿಗಳಿಗೆ ಕೂಡಾ ಆಗಿಂದೀಗ್ಗೆ ಅಮೆರಿಕಾದಲ್ಲಿ ಮಾತ್ರವಲ್ಲ, ಎಲ್ಲ ದೇಶಗಳಲ್ಲೂ ಶಿಕ್ಷೆಯಾಗಿದೆ. ಇವತ್ತಿನ ಮುಸ್ಲಿಂ ದೇಶಗಳಲ್ಲಿ, ನ್ಯಾಯ ಪರಾಮರ್ಶನೆಯ ತಾಳ್ಮೆ ಕೂಡ ಇಲ್ಲ. ಅಪರಾಧಿಯೆಂದ ಕೂಡಲೇ, ಹಿಡಿದು ತಂದು ನಾಲ್ಕು ಜನ ಅಧಿಕಾರಿಗಳ ಕೆಳಗೆ ತನಿಖೆ ನಡೆಸಿ, ಕತ್ತು ಸೀಳುವುದು ( ಬಿ ಹೆಡಿಂಗ್ ) ನಡೆಯುತ್ತಿದೆ.

21 ದಿನದ ಅಪಾಯ !!

ಇವತ್ತು ಭಾರತ ಕೂಡ ಅಂತಹ, ಅವಸರದ ಮುನ್ನುಗ್ಗುತ್ತಿದೆಯಾ ಎಂಭ ಭಯ ನನ್ನದು. ಕೋರ್ಟುಗಳು, ಸರಕಾರಗಳು ಜನರ ಭಾವನಾತ್ಮಕತೆಯನ್ನು ಪೂರ್ತಿ ನಿರ್ಲಕ್ಷಿಸಿ ಕಾರ್ಯನಿರ್ವಹಿಸಬೇಕೆಂದು ನಾನು ಹೇಳುತ್ತಿಲ್ಲ. ಇವತ್ತು ಜನರು, ಮಹಿಳೆಯರು, ಸೋಷಿಯಲ್ ಮೀಡಿಯಾ ದಲ್ಲಿ ಜನರು ಕೂಗಾಡಿದ ಪಕ್ಷದಲ್ಲಿ ಕೇವಲ 21 ದಿನದಲ್ಲಿ ರೇಪ್ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವ ನಡೆಯೇ ಒಟ್ಟು ನ್ಯಾಯಾಂಗ ವ್ಯವಸ್ಥೆಯ ಮೇಲಣ ಅನಾವಶ್ಯಕ ಒತ್ತಡ. ಮತ್ತು, ನಿರಪರಾಧಿಗೆ ವಿನಾಕಾರಣದ ಶಿಕ್ಷೆಯಾಗುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದೇವೆ.

ಮರಣದಂಡನೆಯೆನ್ನುವುದು ಅಪರಾಧಿ ಎಸಗಿದ ಶಿಕ್ಷೆಗೆ ಪ್ರತಿಯಾದ ಸಮಾಜದ ರಿಯಾಕ್ಷನ್. ಆದರೆ ಕಾನೂನು ಪ್ರಕಾರ ಅಪರಾಧಿಯ ಜೀವ ತೆಗೆಯುವ ಮರಣದಂಡನೆಯು ಅಥವಾ ಕ್ಯಾಪಿಟಲ್ ಪನಿಶ್ಮೆಂಟ್ ಶಿಕ್ಷೆಯು ಅಪರಾಧವನ್ನು ತಡೆಯುವಲ್ಲಿ ಶಕ್ತವಾ ಅಲ್ಲವಾ ಎಂಬ ಬಗ್ಗೆ ಅಂಕಿ ಅಂಶಗಳ ಸಾಕ್ಷ್ಯಾಧಾರಗಳಿಲ್ಲ.
ಅಪರಾಧಿ ಶಿಕ್ಷೆಯಿಂದ ತಪ್ಪಿಸಿಕೊಂಡರೂ ಪರವಾಗಿಲ್ಲ, ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬುದು ನಮ್ಮಭಾರತದ ಸಂವಿಧಾನದ ನಿಲುವು. ತನಿಖೆ, ಕಾನೂನು ಪರಾಮರ್ಶೆ ಮತ್ತು ತೀರ್ಪು ನೀಡಿಕೆ, ಮರುಪರಿಶೀಲನೆ, ಮರು ತನಿಖೆ- ಇವೆಲ್ಲ ಅತ್ಯಗತ್ಯವಾದ ಪ್ರಕ್ರಿಯೆಗಳು.

21 ದಿನದಲ್ಲಿ ತೀರ್ಪು ನೀಡಿ ತರಾತುರಿಯಲ್ಲಿ ಶಿಕ್ಷಿಸುವ ಬಗ್ಗೆ ಭಾರತದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾದ ಶರತ್ ಅರವಿಂದ್ ಬೊಬ್ದೆಯವರು ಅಸಮಾದಾನವನ್ನು ಹೊರಗೆಡವಿದ್ದಾರೆ.

ನ್ಯಾಯವೆನ್ನುವುದು ಆರ್ಡರ್ ಮಾಡಿದ ತಕ್ಷಣ ಬರುವ ಝೋಮ್ಯಾಟೋ -ಸ್ವಿಗ್ಗಿ ಆಹಾರ ಪದಾರ್ಥಗಳಲ್ಲ !

ನಮ್ಮದೇ ಕುಟುಂಬದ ವ್ಯಕ್ತಿ ವಿನಾಕಾರಣ ಅಪಾದಿತನಾಗಿ ಸಿಕ್ಕುಬಿದ್ದರೆ, ಆಗ ನಮಗೆ ಆ ಆಂಧ್ರ ಸರಕಾರ ತಂದ 21 ದಿನದ ಅಪಾಯ ಅರ್ಥವಾಗುತ್ತದೆ. ಭಾರತದ ನಾಗರಿಕರಿಗೆ ಅಷ್ಟು ಅರಿವಾದರೆ ಸಾಕು.

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.