ಬಳಸುವ ಕೈಯನ್ನು ಕೊಯ್ಯದಿರಲಿ ತರ್ಕವೆಂಬ ಎರಡಲಗಿನ ಹರಿತ ಕತ್ತಿ !

0 11

ತರ್ಕದಿಂದ ತುಂಬಿದ ಮನಸ್ಸು ಎರಡಲಗಿನ ಕತ್ತಿಯಂತೆ, ಬಳಸುವ ಕೈಯನ್ನು ಅದು ಕೊಯ್ಯುತ್ತದೆ – ರವೀಂದ್ರನಾಥ ಟ್ಯಾಗೋರ್

ತರ್ಕವಿರುವ ಮನಸ್ಸಿನಲ್ಲಿ ಗರ್ವವು ತುಂಬಿದ್ದು, ಗರ್ವವು ತನಗೆ ತಾನೇ ಕಂಟಕವಾಗುವುದು. ಗರ್ವವುಳ್ಳವರು ತನಗೇ ಎಲ್ಲರೂ ಮನ್ನಣೆಯನ್ನು ಕೊಡಬೇಕೆಂದು ಹಟಕ್ಕಿಳಿವರು. ಇದರಿಂದಾಗಿ ಅವರ ಅವಹೇಳನವೇ ಹೆಚ್ಚಾಗುವುದು ಎಂದು ಅನುಭವಿಕರು ಹೇಳುವರು. ಹೆಮ್ಮೆಯ ಮನೋಭಾವ ಒಳಗೊಂಡ ತರ್ಕ ಮನಸ್ಸು, ಒಂದು ದೃಷ್ಟಿಯಿಂದ ಹೆಮ್ಮೆಯು ಕಾರ್ಯೋತ್ಸಾಹವನ್ನು ತುಂಬುವ ಉತ್ತಮ ಗುಣವಾಗಿದ್ದರೂ, ಇನ್ನೊಂದು ದೃಷ್ಟಿಯಿಂದ ಕಾರ್ಯ ಕೆಡಿಸುವ ದುರ್ಗುಣವೂ ಆಗಿದೆ. ತೀವ್ರ ಹೆಮ್ಮೆಯಿಂದ ತರ್ಕ ಮನಸ್ಸು ವಿವೇಚಿಸದೇ ಭಯವನ್ನು ತರುತ್ತದೆ.

ಜೀವನ ಎಂಬ ಕಹಿಯಾದ ಮರದಲ್ಲಿ ಎರಡು ಅಮೃತದಂತಹ ಹಣ್ಣುಗಳಿವೆ. ಒಂದು ಒಳ್ಳೆಯ ಮಾತು ಸವಿಯುವುದು ಮತ್ತು ಎರಡನೆಯದು ಸಜ್ಜನರ ಸಹವಾಸ ಮಾಡುವುದು. ಈ ಎರಡೂ ಹಣ್ಣು ಫಲಿಸಬೇಕಾದರೆ ಉತ್ತಮ ಮನೋಭಾವದ ಮನಸ್ಸು ಇರಬೇಕು. ಜೀವನದ ಸುಖ ದುಃಖ ನಮ್ಮ ಮನಸ್ಸಿನ ಮೂಲಕವೇ ಸೃಷ್ಟಿಯಾಗುವುದು. ಇಂದು ನೆಮ್ಮದಿಯ ಜೀವನ ಬೇಕು ಎಂಬ ದಾಹವೇನೋ ಇದೆ. ಆದರೆ ನೆಮ್ಮದಿ ಅರಸುತ್ತಾ ಮಾನವರಾಗುವುದನ್ನು ಮರೆತು ದಾನವರಾಗುತ್ತಿದ್ದೇವೆ. ಎಷ್ಟೇ ವಿದ್ಯಾವಂತರಾದರೂ ಉತ್ತಮ ಮನೋಭಾವ ಬೆಳೆಸಿಕೊಂಡರೂ ಕೆಲವು ಸಂದರ್ಭಗಳಲ್ಲಿ ನಿರಾಶೆ, ಹಣದಾಸೆ, ಕ್ರೌರ್ಯ, ದ್ರೋಹ ಚಿಂತನೆ, ತನ್ನ ಕುಟುಂಬದ ಜೊತೆಗೇ ಬದುಕಲಾಗದಂತಹ ಚಿಂತನೆಯ ಸುಳಿ…

ಹೀಗೆ ಇನ್ನಿತರ ದುರ್ಭರ ಸುಳಿಗಳಲ್ಲಿ ಸಿಕ್ಕಿಯುವಪೀಳಿಗೆಯು ‘ಎಣ್ಣೆಯಲ್ಲಿ ಹಾಕಿದ ಹಪ್ಪಳದಂತೆ ‘ ಕೆಲವೇ ದಿನಗಳಲ್ಲಿ ಜೀವನರಸವನ್ನೆಲ್ಲಾ ಕಳೆದುಕೊಂಡು ತಟಪಟನೆ ಎಲ್ಲಿ ಮುಟ್ಟಿದರೂ ಒಡೆದು ಹೋಗುವಂತಹ ಅನಿಶ್ಚಿತ ಬದುಕಿನತ್ತ ಸಾಗುತ್ತದೆ. ತಿಂದರೆ ಹೊಟ್ಟೆ ತುಂಬದು ಆದರೂ ತಿಂದೆ ಎಂಬ ಭಾವನೆ ಇದೆ. ಇಂತಹ ಎಡಬಿಡಂಗಿ ಜೀವನದಲ್ಲಿ ಆಧುನಿಕರು ತಮ್ಮ ಬೆಳವಣಿಗೆಯನ್ನು ಅನುಭವಿಸುತ್ತಿದ್ದಾರೆ.

ಶತೇಷು ಜಾಯತೇ ಶೂರಃ ಸಹಸ್ರೇಷು ಚ ಪಂಡಿತಃ ಎಂಬ ಸೂಕ್ತಿಯಂತೆ ನೂರು ಜನರಲ್ಲಿ ಒಬ್ಬ ಶೂರನಿದ್ದರೆ, ಸಾವಿರ ಜನರಲ್ಲಿ ಒಬ್ಬ ಪಂಡಿತನಿರುತ್ತಾನೆ. ರವೀಂದ್ರನಾಥ ಟ್ಯಾಗೋರರು ಅತಂಹ ಸಾವಿರಕ್ಕೊಬ್ಬ ಪಂಡಿತರು. ತತ್ವಜ್ಞಾನಿಗಳೂ ಕೂಡ. ಅವರ ಒಂದೊಂದು ತತ್ವಗಳು ಅನುಭವದ ಗಟ್ಟಿ ಮತ್ತವು ಮಾನವ ಜೀವನದ ಸಾರ್ವಕಾಲಿಕ ಮೌಲ್ಯಗಳನ್ನು ಒಳಗೊಂಡಿದೆ.

ತರ್ಕದಿಂದ ತುಂಬಿದ ಮನಸ್ಸು ಎರಡಲಗಿನ ಕತ್ತಿಯಂತೆ, ಬಳಸುವ ಕೈಯನ್ನು ಅದು ಕೊಯ್ಯುತ್ತದೆ ಎಂಬ ಅರ್ಥಗರ್ಭಿತ ವಾಕ್ಯದಲ್ಲಿನ ವಿಶಾಲವಾದ ಚಿಂತನೆಯು ಮನಸ್ಸು ಮನಸ್ಸುಗಳನ್ನು ಓದಿ ಮನಸ್ಸೇಕೆ ಹೀಗೆಲ್ಲಾ ಎಂಬ ಪ್ರಶ್ನೆಯನ್ನು ನಮ್ಮಲ್ಲೇ ಸೃಷ್ಟಿ ಮಾಡಿ ತಾರ್ಕಿಕ ಯೋಚನೆಯತ್ತ ಕೊಂಡೊಯ್ಯುತ್ತದೆ. ತರ್ಕ ಮನಸ್ಸು ಹುಟ್ಟು ಪಡೆದುಕೊಂಡಲ್ಲಿ ಅವಸಾನವು ಬಳಸುವವರದ್ದು. “ಕೆರೆ, ಹಳ್ಳ, ಬಾವಿಗಳನ್ನು ಮೈದೆಗೆದರೆ ಗುಳ್ಳೆ ಗೊರಟೆ ಚಿಪ್ಪುಗಳನ್ನು ಕಾಣಬಹುದು, ವಾರಿಧಿ ಮೈದೆಗೆದರೆ ರತ್ನಂಗಳು ಕಾಣಬಹುದು” ಎಂಬ ಮಾತಿದೆ. ಕೆರೆ ಬಾವಿಗಳನ್ನು ಸಾಮಾನ್ಯರಿಗೆ ಹೋಲಿಸಿದರೆ, ಗುಳ್ಳೆ ಗೊರಟೆ ಸಾಮಾನ್ಯ ವಿಚಾರ ವಿನಿಮಯವನ್ನು ಮಾಡಲು ಸಾಧ್ಯ. ವಿಶಾಲ ಸಮುದ್ರದಲ್ಲಿ, ಮಹಾತ್ಮರಲ್ಲಿ ರತ್ನಂಗಳಂತಹ ಶ್ರೇಷ್ಟವಾದ ವಿಚಾರ ವಿನಿಮಯ ಮಾಡಬಹುದು ಎಂಬ ಭಾವಾರ್ಥವನ್ನು ತುಂಬಿದ್ದರೂ, ಕೆರೆ, ಹಳ್ಳ, ಬಾವಿಗಳಲ್ಲಿ ಸಿಹಿನೀರು ಇರುವುದು, ಸಮುದ್ರದ ಉಪ್ಪು ನೀರು ಕೊಡುವುದಲ್ಲವೇ? ಅದಲ್ಲದೇ ಮೊಸಳೆಯೂ ಸಮುದ್ರದಲ್ಲಿಯೇ ಅಲ್ಲವೇ? ಎಂಬ ಈ ರೀತಿಯ ಆಲೋಚನೆಗಳು ಗಾಢವಾದಂತೆ ಸತ್ಯವೂ ಹೌದು. ಆದರೂ ವ್ಯಂಗ್ಯೋಕ್ತಿ ಆದಂತೆ, ಆ ವ್ಯ0ಗ್ಯ ಮಾತು ವಿಚಿತ್ರವಾದ ಕನ್ನಡಿಯಿದ್ದಂತೆ. ಇವು ಯಾವ ವಿಷಯಕರವಾಗಿರುವವೋ ಅವರಿಗೆ ತಮ್ಮ ಮುಖವನ್ನು ಬಿಟ್ಟು ಬೇರೆಲ್ಲರ ಮುಖಗಳು ಈ ಕನ್ನಡಿಯಲ್ಲಿ ಕಾಣುವವು. ಇಲ್ಲಿಯ ತರ್ಕ ಮನಸ್ಸು ಮಣಿಯಿಂದ ಅಲಂಕೃತವಾದ ಸರ್ಪದಷ್ಟೇ ಭಯಂಕರವಾಗಿರುವುದು.

“ಜ್ವರೇಣ ದೂನೇ ರಸನೇ ಸಿತಾಪಿ ತಿಕ್ತಾಯತೇ ನಾತ್ರಮನಾಗ್ ವಿಕಲ್ಪಃ” ಎಂಬ ಸೂಕ್ತಿಯಲ್ಲಿ ತರ್ಕ ಮನಸ್ಸು ಎರಡಲಗಿನ ಕತ್ತಿಯಂತೆ ಎಂಬ ಮಾತಿಗೆ ಅರ್ಥ ವಿವರಿಸುತ್ತದೆ ಅಂದರೆ, ಜ್ವರದಿಂದ ಪೀಡಿತನಾದವನ ನಾಲಿಗೆಗೆ ಸಿಹಿಯಾದ ಸಕ್ಕರೆಯು ಕಹಿಯೆಂದೆನಿಸುತ್ತದೆ. ಇದು ನಾಲಿಗೆಯ ವಿಷಯವಾದರೆ ಮನಸ್ಸಿನ ವಿಚಾರಕ್ಕೆ ಹೋಲಿಸಿದರೆ ಇನ್ನೂ ಭಯಂಕರವಾಗಿದೆ. ಪೂರ್ವಾಗ್ರಹಗಳಿಂದ ದೂಷಿತರಾದವರ ಮನಸ್ಸಿಗೆ ಎಲ್ಲವೂ ವಿಪರೀತವಾಗಿಯೇ ತೋರುತ್ತದೆ. ಅಂದರೆ ಆತ್ಮಸ್ತುತಿಯಿಂದ ಸಂತೋಷ ಪಡುವುದು ಒಂದು ಮುಖವಾದರೆ, ಆತ್ಮನಿಂದನೆ ವಿಕೃತ ಸಂತೋಷ ಪಡುವುದು ಇನ್ನೊಂದು ಮುಖ. ಇದು ತರ್ಕ ಮನಸ್ಸಿನಲ್ಲಿ ಹೆಚ್ಚಾಗಿ ತುಂಬಿರುವ ಕಾರಣ ಎರಡಲಗಿನ ಕತ್ತಿಯಂತೆಯೇ ಎಂದು ಹೇಳಬಹುದು. ತರ್ಕ ಮನಸ್ಸಿನಿಂದ ಕಾರ್ಯಗಳು, ಮಾತುಗಳೂ ಕೂಡ ಉಗಮವಾಗಿ, ಸಾಮಥ್ರ್ಯವನ್ನು ಕ್ಷೀಣಿಸುತ್ತಾ ಹೋಗುತ್ತದೆ. ತರ್ಕ ತುಂಬಿದ ಮನಸ್ಸು ಪ್ರಮುಖವಾಗಿ ಮಾತಿನಿಂದ ವ್ಯಕ್ತವಾಗುತ್ತದೆ. ಆ ಮಾತು ಕೇಳುವವರಿಗೂ ಹೇಳುವವರಿಗೂ ಒಳಿತು ಕೆಡುಕು ಒಂದೇ ನಾಣ್ಯದ ಮುಖವೆಂದು ಪರೋಕ್ಷವಾಗಿ ತಿಳಿಸುತ್ತದೆ.

ಇಂತಹ ಮಾತಿನಿಂದ ಅನೇಕ ಸುಂದರ ಕ್ಷಣಗಳು ಮಾಯವಾಗಬಹುದು ಅಥವಾ ಇನ್ನೊಂದೆಡೆ ಕೆಟ್ಟ ಕ್ಷಣವೂ ಮಾಸಬಹುದು. ಹೀಗೆ ಒಂದು ಸೂಕ್ತಿಯಲ್ಲಿ –
ವಾಗ್ವೇದಃ ಮಾನಸೋ ವೇಗಃ
ನಿಂದಾವೇಗಃ ತಥೈವ ಚ
ಈಷ್ರ್ಯ ವೇಗಶ್ಚ ಬಲವಾನ್
ಮೃತ್ಯು ವೇಗಶ್ಚ ದಾರುಣಃ

ಅಂದರೆ ಮಾತುಗಳಿಂದ ಮನಸ್ಸಿನ ಮೇಲಾಗುವ ಒತ್ತಡ, ನೇರ ಮನಸ್ಸಿನ ಮೇಲಾಗುವ ಒತ್ತಡ, ನಿಂದೆಯನ್ನು ಕೇಳುವುದರಿಂದಾಗಿ, ಅಸೂಯೆ ಪಡುವುದರಿಂದಾಗಿ ಒತ್ತಡ ಮತ್ತು ಮರಣದ ಭಯದ ಒತ್ತಡ ಭಯಂಕರವಾಗಿರುವುದು ಎಂದು ಒತ್ತಡದ ಬಗ್ಗೆ ಸುಭಾಷಿತಕಾರರು ಹೇಳಿರುತ್ತಾರೆ. ಈ ಒತ್ತಡ ಮಾತುಗಳಿಂದಲೂ, ನಿಂದೆಯನ್ನು ಕೇಳುವುದರಿಂದ ಉಲ್ಬಣವಾಗಬಹುದು. ಆದ್ದರಿಂದ ತರ್ಕ ಮನಸ್ಸು ಕೂಡ ಒತ್ತಡವನ್ನು ತಂದೊಡ್ಡಿ, ಮರಣದತ್ತ ಧಾವಿಸುವ ಸಂದರ್ಭವನ್ನು ತಂದಿರಿಸುತ್ತದೆ. ತರ್ಕ ಮನಸ್ಸಿನಲ್ಲಿ ಗರ್ವವು ತುಂಬಿದ್ದು, ಗರ್ವವು ತನಗೆ ತಾನೇ ಕಂಟಕವಾಗುವುದು. ಗರ್ವವುಳ್ಳವರು ತನಗೇ ಎಲ್ಲರೂ ಮನ್ನಣೆಯನ್ನು ಕೊಡಬೇಕೆಂದು ಹಟಕ್ಕಿಳಿವರು. ಇದರಿಂದಾಗಿ ಅವರ ಅವಹೇಳನವೇ ಹೆಚ್ಚಾಗುವುದು ಎಂದು ಅನುಭವಿಕರು ಹೇಳುವರು. ಹೆಮ್ಮೆಯ ಮನೋಭಾವ ಒಳಗೊಂಡ ತರ್ಕಮನಸ್ಸು, ಒಂದು ದೃಷ್ಟಿಯಿಂದ ಹೆಮ್ಮೆಯು ಕಾರ್ಯೋತ್ಸಾಹವನ್ನು ತುಂಬುವ ಉತ್ತಮ ಗುಣವಾಗಿದ್ದರೂ, ಇನ್ನೊಂದು ದೃಷ್ಟಿಯಿಂದ ಕಾರ್ಯ ಕೆಡಿಸುವ ದುರ್ಗುಣವೂ ಆಗಿದೆ. ತೀವ್ರ ಹೆಮ್ಮೆಯಿಂದ ತರ್ಕ ಮನಸ್ಸು ವಿವೇಚಿಸದೇ ಭಯವನ್ನು ತರುತ್ತದೆ.
“ಕತ್ತಿಲಾದರೂ ಗಾಯ ಮತ್ತಿರದೆ ಮಾಯುವುದು.

ಸುತ್ತಲಾಡುತಿಹ ಜಿಹ್ವೆಯ ಗಾಯವು ಸತ್ತು ಮಾಯುವುದೇ ಸರ್ವಜ್ಞ” ಎಂದು ವಚನ ಕಾರರು, ನಿಷ್ಠುರ ಮಾತುಗಳ ಕುರಿತು ಹೇಳಿರುತ್ತಾರೆ. ತರ್ಕ ಮನಸ್ಸಿನಿಂದ ನಿಷ್ಠುರ ಮಾತುಗಳು ವ್ಯಕ್ತವಾಗುವವು, ಮಾನಸಿಕವಾಗಿ ಘಾಸಿಗೊಳಿಸಿ, ಮಾಸಲು ಸಾಧ್ಯವಿಲ್ಲ. ತರ್ಕ ಮಾತಿಗಿಂತಲೂ ತರ್ಕ ಮನಸ್ಸು ಹೆಚ್ಚು ಅಪಾಯಕಾರಿ. ಈ ಮನಸ್ಸಿನ ಸ್ಥಿತಿಯೇ ಮಾತು-ಕಲಹಕ್ಕೆಕಾರಣವಾಗಬಲ್ಲುದು. ಕೆಲವೊಂದು ಸಂದರ್ಭಗಳಲ್ಲಿ ಸತ್ಯ, ನ್ಯಾಯ, ಧರ್ಮಗಳಿಂದ ವರ್ತಿಸುವ ಮತ್ತು ಯಶಸ್ಸಿನ ಜೀವನ ಮುಳ್ಳಿನ ಹಾಸಿಗೆಯಂತೆ.
ತರ್ಕ ಮನಸ್ಸು ತನಗರಿವಿಲ್ಲದೇ ಆವರಿಸಿ, ಇತರರಿಗೂ ಪ್ರಕಟವಾಗದೇ ಹೋಗಬಹುದು. ಆದರೆ, ನಮ್ಮ ಮಾನಸಿಕ ಸಾಮಥ್ರ್ಯ ನಮ್ಮ ವ್ಯಕ್ತಿತ್ವವನ್ನೇ ರೂಪಿಸಬಲ್ಲುದು.

“ಶಾರೀರೈಃ ಕರ್ಮದೋಷೈಶ್ಚ
ಯಾತಿ ಸ್ಥಾವರತಾಂ ನರಃ
ವಾಚಿಕೈಃ ಪಕ್ಷಿ ಮೃಗತಾಂ

ಮಾನಸೈಃ ಅನ್ಯ ಜಾತಿತಾಮ್” ಎಂಬ ಸೂಕ್ತಿಯಲ್ಲಿ ಮನುಷ್ಯನು ಶಾರೀರಿಕವಾದ ತಪ್ಪುಗಳನ್ನು ಮಾಡಿದರೆ ಸ್ಥಾವರ ಪದಾರ್ಥದಂತೆ ಜಡವೆನಿಸಿಕೊಳ್ಳುತ್ತದೆ. ಮಾನಸಿಕ ತಪ್ಪು ಎಂದರೆ ಎದುರಿಗೆ ಸಿಹಿ ಮಾತನ್ನಾಡಿ, ದಂಡಿಸದೇ ಮನಸ್ಸಿನಲ್ಲಿ ಕೆಡುಕಿನ ಯೋಜನೆಯನ್ನು ತುಂಬಿರುವ ಮನಸ್ಸು ತರ್ಕ ತುಂಬಿದ ಮನಸ್ಸಿನಲ್ಲಿಯೂ ಕಾಣಬಹುದು.

“ಚಂದನವ ಕಡಿದು ಕೊರೆದು ತೇದಡೆ ನೊಂದೆನೆಂದು ಕಂಪ ಬಿಟ್ಟಿತ್ತೆ” ಎಂಬ ಮಾತಿನಂತೆ ಗುಣವಂತರು ಎಷ್ಟೇ ಕಷ್ಟಗಳನ್ನು ಎದುರಿಸಿದರೂ ಸಕಾರ್ಯವನ್ನೇ ಮಾಡುವರು. ಆದ್ದರಿಂದ ನಾವೆಲ್ಲಾ ಮನಸ್ಸನ್ನು ಶುದ್ಧೀಕರಿಸೋಣ. ಮನಸ್ಸು ಶುದ್ಧವಾದಲ್ಲಿ ಎಲ್ಲವೂ ಶಾಂತ ರೀತಿಯಲ್ಲಿ ಮುಂದುವರೆಯಲು ಸಾಧ್ಯ ಎಂಬ ಸಂದೇಶವನ್ನು ರವೀಂದ್ರನಾಥ ಟ್ಯಾಗೋರ್ ಒಂದು ಮಾತಿನಲ್ಲಿ ಆಳವಾದ ವಿಚಾರವನ್ನು ಪರಿಚಯಿಸಿದ್ದಾರೆ.

ನಮಗೆ ನಾವೇ ಶತ್ರುಗಳಾಗದಿರೋಣ. ಮಿತ್ರರಾಗೋಣ. “ಎನಗೆ ನಾನೇ ಹಗೆ ನೋಡಯ್ಯ, ಎನಗೆ ನಾನೇ ಕೇಳೇ ನೋಡಯ್ಯ, ಬಾಗಿದ ತಲೆಯ ಮುಗಿ ಕೈಯಾಗಿರಿಸು ಕೂಡಲ ಸಂಗಮದೇವ..” ಎಂಬ ವಚನವು ಮನುಷ್ಯನು ಸತ್ಯ, ನ್ಯಾಯಗಳಿಂದ ನಡೆದುಕೊಂಡರೆ ತನಗೆ ತಾನೇ ಮಿತ್ರ. ಆದರೆ ಅಸತ್ಯ, ಅನ್ಯಾಯ, ಸ್ವಾರ್ಥಗಳಲ್ಲಿ ತೊಳಲಾಡಿದರೆ ತನಗೆ ತಾನೇ ಶತ್ರು. ಇದನ್ನು ಕಾರ್ಯ ರೂಪದಲ್ಲಿ ತರುವಾಗ ಪರಿಪಕ್ವ ವಿಚಾರವಂತರು, ಇತರರ ಗುಣಗಳನ್ನು ಗೌರವಿಸುತ್ತಾ ದೋಷಗಳನ್ನು ತಿದ್ದಿಕೊಳ್ಳುತ್ತಾ ತಲೆಬಾಗುವ ಮನೋಭಾವವಿರುತ್ತದೆ. ಅಂತೆಯೇ ದುರಹಂಕಾರಿಗಳು ತಲೆಕತ್ತರಿಸಲು ಮಾತ್ರ ತಲೆಬಾಗಿಸುವರು ಎಂಬುದರ ಮೂಲಕ ಲಘು ವ್ಯಕ್ತಿತ್ವದವರಾಗದಿರೋಣ. ಗೌರವಾನ್ವಿತರಾಗಿ ಬಾಳ್ವೆ ನಡೆಸೋಣ. ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪದಿರೋಣ. ಅನೀತಿ ಅಪ್ರಾಮಾಣಿಕತೆಗಳು ನಾಗರಿಕತೆಯಲ್ಲಿ ತಳಹದಿಯಾಗದಿರಲಿ.

ತರ್ಕ ಮನಸ್ಸು ಅಪಾಯಕ್ಕೀಡು ಮಾಡಬಲ್ಲುದು. ಜ್ಞಾನದ ಹಸಿವು ಜಾಣ್ಮೆಯ ಬದುಕನ್ನು ರೂಪಿಸುತ್ತದೆ. ಜ್ಞಾನವನ್ನು ಸತ್ವಭರಿತ ಸಂಕಲ್ಪಕ್ಕೆ ಅರ್ಪಿಸಿ, ಅಭಿವೃದ್ಧಿಯೆಡೆಗೆ ಸಾಗಬೇಕಾಗಿದೆ.

ಸುಧಾಶ್ರೀ, ಧರ್ಮಸ್ಥಳ

Leave A Reply