‘ಯಡಿಯೂರಪ್ಪಜಿ ಕೋ ತಾಲಿಯಾ ಬಜಾವೋ ‘ | ಇದು ಯಡಿಯೂರಪ್ಪನವರ ದುನಿಯಾ ಕಣೋ !
ಎಲ್ಲವೂ ನಮ್ಮಿಂದಲೇ, ನಮಗೆ ಯಾರೂ ಎದುರಿಲ್ಲ. ನಮ್ಮ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕುವ ಮಗ ಯಾರಿದ್ದಾರೆ ಎಂದು ಅಹಂಕಾರದ ಪರಮಾವಧಿಯಲ್ಲಿ ಬೀಗುತ್ತಿದ್ದ ಬಿಜೆಪಿ ಹೈಕಮಾಂಡಿಗೆ ಕಾಲವೇ ಸರಿಯಾದ ಉತ್ತರ ಕೊಟ್ಟಿದೆ.
ಇದರ ಬಗ್ಗೆ ಹೊಸಕನ್ನಡ ಹಿಂದೆಯೇ ಬರೆದು ವಾರ್ನ್ ಮಾಡಿತ್ತು. ಈ ಬಗ್ಗೆಯೂ ಓದಿ : https://hosakannada.com/2019/10/10/bjp-haikamand/
ಮೊನ್ನೆ ಮೊನ್ನೆ ಅಮಿತ್ ಷಾ ಮೋದಿಯಂತಹ ಚಾಣಕ್ಯದ್ವಯರೇ ಮಹಾರಾಷ್ಟ್ರದಲ್ಲಿ, ತಮ್ಮಎಂದಿನ ಓವರ್ ಕಾಂಫಿಡೆನ್ಸ್ ಮತ್ತು ಅರೋಗನ್ಸ್ ನ ಫಲವಾಗಿ, ಸರಿಯಾಗಿ ಏಟು ತಿಂದು ಇವತ್ತು ಗಾಯ ನೆಕ್ಕುತ್ತಾ ಕೂತಿದ್ದಾರೆ. ಎಲ್ಲಾ ತಾವೇ, ತಾವಿಲ್ಲದೆ ಏನು ಕೂಡ ನಡೆಯುವುದಿಲ್ಲ ಎಂಬುದು ಅವರ ಅನಿಸಿಕೆಯಾಗಿತ್ತು. ಭ್ರಮೆಯಾಗಿತ್ತು. ಆ ಭ್ರಮೆ ಲೋಕಸಭಾ ಚುನಾವಣೆಗೆ ಮಾತ್ರವೇ, ರಾಜ್ಯದಲ್ಲಿ ನಿಮ್ಮ ಆಟ ನಡೆಯಲ್ಲ ಎಂದು ಮುಟ್ಟಿ ನೋಡಿಕೊಳ್ಳುವ ಏಟು ನೀಡಿದ್ದಾನೆ ಮತದಾರ.
ಇಲ್ಲದೆ ಹೋದರೆ, ನಮ್ಮ ಹಿರಿಯ ರಾಜಕಾರಣಿ, ಕರ್ನಾಟಕದಲ್ಲಿ ಸೊನ್ನೆಯಿಂದ ಎರಡು ಸೀಟು ಗಳಿಸಿ, ಎರಡು ಸೀಟಿನಿಂದ ಪೂರ್ತಿ ಅಧಿಕಾರಗಳಿಸುವಷ್ಟು ಸೀಟು ಪಡೆದ ಯಡಿಯೂರರನ್ನು ದೆಹಲಿ ಬಿಜೆಪಿ ಹೈಕಮಾಂಡ್ ಆ ರೀತಿ ನಡೆಸಿಕೊಳ್ಳಬೇಕಿತ್ತ ?
ಮೊದಲು ಹೈಕಮಾಂಡ್ ನ್ನು ಭೇಟಿಯಾಗಲು ಹೋದರೆ ಭೇಟಿಗೆ ಅವಕಾಶ ಕೊಡದೆ ಅವಮಾನಿಸಿ ಕಳಿಸಿತ್ತು. ಮಂತ್ರಿಮಂಡಲ ವಿಸ್ತರಣೆಗೆ ಅವಕಾಶ ಕೊಡದೆ ಕಾಟ ಕೊಟ್ಟಿತ್ತು. ನೆರೆಯ ಸಂದರ್ಭ, ಬೇರೆ ಮಂತ್ರಿಗಳಿಲ್ಲದೆ, ತಾವೊಬ್ಬರೇ ಕಾಲಿಗೆ ಜೆಟ್ ವಿಮಾನ ಕಟ್ಟಿಕೊಂಡು, ನವ ಯುವಕನಂತೆ ಸುತ್ತಿದ್ದರು. ನೆರೆ ಪರಿಹಾರಕ್ಕೆ ಕಳ್ಳೆಪುರಿ ಥರ 1000 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿ ಯಡ್ಡಿಯವರನ್ನು ಇಕ್ಕಟ್ಟಿಗೆ ಸಿಕ್ಕಿಸಿತ್ತು. ಇದಾದ ಮೇಲೆ, ಯಡಿಯೂರಪ್ಪನವರು ಸಿಎಂ ಆದ ನಂತರ, ಸಂಪುಟ ರಚನೆಯಲ್ಲಿ ಮತ್ತು ಮೂವರು ಉಪಮುಖ್ಯಮಂತ್ರಿಗಳನ್ನು ನೇಮಿಸುವ ವಿಚಾರದಲ್ಲೂ ಯಡಿಯೂರಪ್ಪನವರನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಯಿತು. ಯಡ್ಡಿಯ ವಿಶ್ವಾಸ ತೆಗೆದುಕೊಳ್ಳದೆ ರಾಜ್ಯಅಧ್ಯಕ್ಷರನ್ನಾಗಿ ನಳಿನ್ ಕುಮಾರ್ ಕಟೀಲರನ್ನು ಹೈಕಮಾಂಡ್ ನೇಮಿಸಿತ್ತು.
ಅದೇನೇ ಆದರೂ, ಯಡಿಯೂರಪ್ಪ ತಾಳ್ಮೆಕಳೆದುಕೊಳ್ಳುವ ಮಗ ಅಲ್ಲ. ಅವರ ತಾಳ್ಮೆ ಮತ್ತು ಅಹರ್ನಿಶಿ ದುಡಿತ ಫಲ ನೀಡಿದೆ. ಅವರು ಉಪಚುನಾವಣೆಯ ಅಗ್ನಿದಿವ್ಯದಲ್ಲಿ ದಿಗಲ್ಲನೆ ಎದ್ದು ನಿಂತಿದ್ದಾರೆ.
ಗೆಲುವು ಎಂತ ವಿರೋಧಿಗಳನ್ನೂ ಮೆತ್ತಗೆ ಮಾಡುತ್ತದೆ. ಅದೇ ರೀತಿ ಇವತ್ತು ಯಡ್ಡಿಯವರು ಎಲೆಕ್ಷನ್ ರಣವ್ಯೂಹದಲ್ಲಿ ಕಾಂಗ್ರೆಸ್ ಅನ್ನು ಪುಡಿಗಟ್ಟಿದ ರೀತಿಗೆ ಮೋದಿ – ಅಮಿತ್ ಶಾ ಜೋಡಿ ಅನಿವಾರ್ಯವಾಗಿ ‘ ಯಡಿಯೂರಪ್ಪಜಿ ಕೋ ತಾಲಿಯಾ ಬಜಾವೋ ‘ ಎಂದು ಮೋದಿಯವರ ಕೈಯಲ್ಲಿ ಹೇಳಿಸಿದೆ. ಸಂಸದೀಯ ಸಭೆಯಲ್ಲಿ ಮೋದಿಯವರೂ ಸೇರಿ ಎದ್ದು ಗೌರವ ಸೂಚಿಸಿದ್ದಾರೆ.
ಕೆ ಆರ್ ಪೇಟೆಯಲ್ಲಿ ಜೆಡಿಎಸ್ ವಿಚ್ಚಿದ್ರ ಮಾಡಿದ ಯಡಿಯೂರಪ್ಪ ಪುತ್ರ ವಿಜಯೇಂದ್ರನಿಗೆ ಅಮಿತ್ ಶಾ ದೆಹಲಿಗೆ ಬರುವಂತೆ ಬುಲಾವ್ ಕಳಿಸಿದ್ದಾರೆ.
” ಏನ್ ಮಚ್ಚಾ, ಇದೆಲ್ಲ ಹೆಂಗ್ ಮಾಡಿದ್ಯೋ ? ನಂಗೂ ಸ್ವಲ್ಪ ಟೆಕ್ನಿಕ್ ಹೇಳ್ಕೊಡಾ , ಪ್ಲೀಸೋ ” ಅಂತ ಅಮಿತ್ ಶಾ ವಿಜಯೇಂದ್ರರಲ್ಲಿ ಅಂಗಲಾಚುತ್ತಿದ್ದರೆಂದು ಲೋಕಲ್ ಹೌದ್ ದುನಿಯಾರು ಸಿಕ್ಕಸಿಕ್ಕಲ್ಲಿ ಹೇಳ್ಕೊಂಡು ತಿರುಗುತ್ತಿದ್ದಾರೆ.
ಸುದರ್ಶನ್ ಬಿ. ಪ್ರವೀಣ್, ಬೆಳಾಲು