ನಿಗೂಢ ಕಾಡಿನೊಳಗೆ ಕಳೆದುಹೋಗುವ ಅನುಭವ । ಶಿವರಾಮ ಕಾರಂತರ ‘ ಬೆಟ್ಟದ ಜೀವ ‘ ಕಾದಂಬರಿ

ಯುವ ಬರಹಗಾರ್ತಿ ಸುಧಾಶ್ರೀ, ಧರ್ಮಸ್ಥಳ ಅವರು ಹೊಸಕನ್ನಡಕ್ಕೆ ಬರೆಯುತ್ತಿದ್ದಾರೆ. ಅದರಿಂದ ನಮಗೊಂದಿಷ್ಟು ಹೆಚ್ಚು ಬಲ ಬಂದಿದೆ. ಅವರನ್ನು ಹೊಸಕನ್ನಡ ತುಂಬು ಹೃದಯದಿಂದ ಸ್ವಾಗತಿಸುತ್ತದೆ – ಸಂಪಾದಕ.

ಬೆಳಗಿನಲ್ಲಿ ಚಿನ್ನದ ಕಡಗೋಲಿನಂತೆ ಕಾಣುವ ಬೆಟ್ಟದ ನೋಟ, ಅಬ್ಬಿಯ ನೀರು, ಕಾಟುಮೂಲೆಯ ಹಸಿರು, ಕನ್ನಡಿ ಹಾವಿನ ವಾಸನೆ, ಸಾಗುವಳಿಯನ್ನು ಕಾಣದ ಭೂಮಿ, ಕಾಡಿನ ನೀರವ ಮೌನ ಇವೆಲ್ಲಾ ಒಂದು ರಹಸ್ಯ ಅರ್ಥವನ್ನು ಸೃಷ್ಟಿಸಿವೆಯಾದರೂ, ಮನುಷ್ಯ ಜೀವನದ ಸಾಹಸವನ್ನು ಬಿಂಬಿಸುತ್ತದೆ.


Ad Widget

Ad Widget

Ad Widget

Ad Widget
Ad Widget

Ad Widget

ನೈಜ ಕಥೆಯನ್ನಾಧರಿಸಿದ ಅನುಭವ ಪ್ರಧಾನ ಬರಹ ಶಿವರಾಮ ಕಾರಂತರ ಬೆಟ್ಟದ ಜೀವ ಕಾದಂಬರಿಯ ವಸ್ತು. ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಲಿನ ಜನಜೀವನವನ್ನು ನೋಡಿ ಅನುಭವಗಳಿಂದ ಪ್ರೇರಿತವಾದ ಕಥೆಗಳಲ್ಲಿ ಈ ಕಾದಂಬರಿಯೂ ಒಂದು. ಕಾರಂತರು ಪುತ್ತೂರಿನಲ್ಲಿ ನೆಲೆಸಿ, ನಾಲ್ಕೂ ಸುತ್ತಲಿನ ಕೃಷಿಕ ಜೀವನ, ನಿತ್ಯ ಜೀವನ ನೋಡಿ ತಿಳಿದು ಪುತ್ತೂರಿನ ಪೂರ್ವ ದಿಕ್ಕಿನ ದೃಶ್ಯ- ಸುಬ್ರಹ್ಮಣ್ಯದ ಕುಮಾರ ಪರ್ವತ ಶಿಖರದ ಸೌಂದರ್ಯವನ್ನು ಬಣ್ಣಿಸಿದ್ದಾರೆ. ಕಡಬ ಎಂಬ ಊರಿನ ತೆಂಕಣ ದಿಕ್ಕಿನಲ್ಲಿ ಕಳಂಜಿಮಲೆ ಎಂಬ ಬೆಟ್ಟದ ಸಾಲು ಈ ಕಾದಂಬರಿಯ ಕೇಂದ್ರವಾಗಿದೆ. ಆ ಬೆಟ್ಟದ ಹಾದಿಯಲ್ಲಿ ಏರಿ ಇಳಿಯೋದು ಸಾಹಸ. ಕಾಡಿನ ದಾರಿಯ ನಡುವೆ ಒಂದು ವಿಶಾಲವಾದ ಅಡಿಕೆ ತೋಟ, ಕೂಲಿಗಳು ಮತ್ತು ಮುಂದೆ ಅದೇ ಪರಿಸರದಲ್ಲಿ ಅತಿ ಸಾಹಸದ ಕೃಷಿಕರ ದುಡಿಮೆ, ಅವರ ಬದುಕಿನ ಚಿತ್ರಣ ಈ ಕಾದಂಬರಿಯಲ್ಲಿದೆ.


Ad Widget

ಬೆಟ್ಟದ ಜೀವ ಶಿವರಾಮ ಕಾರಂತರು ಬರೆದ ಕಾದಂಬರಿ. ಈ ಜನಪ್ರಿಯ ಕಾದಂಬರಿಯು 2011 ರಲ್ಲಿ ಪಿ. ಶೇಷಾದ್ರಿಯವರ ಕೈಯಲ್ಲಿ, ಇದೇ ಹೆಸರಿನಲ್ಲಿ ಚಲನಚಿತ್ರವಾಯಿತು. ಅದಕ್ಕೆ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ( ಸ್ಪೆಷಲ್ ಜ್ಯೋರಿ ಪ್ರಶಸ್ತಿ) ಮತ್ತು ಪರಿಸರ ಸಂರಕ್ಷಣೆಯ ಬಗೆಗಿನ ರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ಬೆಟ್ಟದ ಜೀವದ ಮುಖ್ಯ ಜೀವಿಕೆಯಲ್ಲಿ ನಮ್ಮ ಹೆಚ್. ಜಿ. ದತ್ತಾತ್ರೇಯ (ದತ್ತಣ್ಣ) ಮನೋಜ್ಞ ಅಭಿನಯ ನೀಡಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್, ಲಕ್ಷ್ಮಿ ಹೆಗ್ಗಡೆ, ರಾಮೇಶ್ವರಿ ವರ್ಮಾ ನಟಿಸಿದ್ದಾರೆ. ನಟ, ನೃತ್ಯ ಪಟು ಪ್ರಭುದೇವ ಕೂಡ ಒಂದು ಮುಖ್ಯಪಾತ್ರದಲ್ಲಿದ್ದಾರೆ.

“ಆಡು ಮುಟ್ಟದ ಸೊಪ್ಪಿಲ್ಲ ಕಾರಂತರು ಬರೆಯದ ವಿಷಯವಿಲ್ಲ. ‘ಕಡಲ ತೀರದ ಭಾರ್ಗವ’ ಎಂದೇ ಪ್ರಖ್ಯಾತಿ ಹೊಂದಿರುವ ಶಿವರಾಮ ಕಾರಂತರ ಹಲವು ವಿಶಿಷ್ಟ ಕಾದಂಬರಿಗಳಲ್ಲಿ ಬೆಟ್ಟದ ಜೀವ ಕಾದಂಬರಿಯೂ ಒಂದು. ಕಾರಂತರ ಚಿಕ್ಕ ಕಾದಂಬರಿಗಳಲ್ಲಿ ಬೆಟ್ಟದ ಜೀವ ಒಂದು ಪರಿಪೂರ್ಣ ಕೃತಿಯಾಗಿದ್ದು, ಒಬ್ಬ ಮನುಷ್ಯನ ಜೀವನದಲ್ಲಿ ಅನಿರೀಕ್ಷಿತವಾಗಿ ಒದಗಿ ಬರುವ ಸಂದರ್ಭಗಳು ದೀರ್ಘಕಾಲ ಮಾಸದ ನೋವಾಗಿ ಪರಿಣಮಿಸುವಾಗ ಅವನು ಅದನ್ನು ನಿಭಾಯಿಸುವ ರೀತಿಯನ್ನು ಕಾರಂತರು ಅಮೋಘವಾಗಿ ಚಿತ್ರಿಸಿದ್ದಾರೆ. ಮಾನವನ ಕಲ್ಪನೆಯ ಆಚೆಗೆ ಮೀರಿ ನಿಲ್ಲುವುದೇ ಜೀವನ. ದೊಡ್ಡ ಸಂತೋಷಗಳನ್ನು ಹುಡುಕುವ ಆತುರದಲ್ಲಿ ತನಗೆ ಸಿಗುವ ಪುಟ್ಟ ಪುಟ್ಟ ಸಂತೋಷಗಳನ್ನು ಬೇರೆಯವರಿಗೂ ನೀಡದೆ, ತಾನೂ ಪಡೆದುಕೊಳ್ಳದೇ ಇರುವಂತಹ ಸಂದರ್ಭಗಳನ್ನು ಕಾದಂಬರಿಯ ಸನ್ನಿವೇಶಗಳಲ್ಲಿ ಕಾಣಬಹುದು.

ಪ್ರಕೃತಿ ಮಾತೆಯು ಕರಾವಳಿ ತೀರದಲ್ಲೂ ನೆಲೆಸಿರುವಳು ಎಂದು ಕಾರಂತರು ಪ್ರಕೃತಿಯನ್ನು ವರ್ಣಿಸಿದ್ದಾರೆ. ಕಾದಂಬರಿಯು ಆರಂಭದಿಂದ ಅಂತ್ಯದವರೆಗೆ ಯಾರೋ ಒಬ್ಬ ಅಪರಿಚಿತನನ್ನು ತಮ್ಮ ಮನೆಯ ಓರ್ವ ಸದಸ್ಯನಂತೆ ನಡೆಸಿಕೊಳ್ಳುವ ವೃದ್ಧ ದಂಪತಿಗಳ ಔದಾರ್ಯ, ತಮ್ಮ ಮನದಲ್ಲಿ ಹುದುಗಿರುವ ಎಲ್ಲಾ ನೋವುಗಳನ್ನು ಸಹಿಸಿಕೊಂಡು ಅವರ ಅಸಹಾಯಕತೆ ಬಹಳ ಭಾವಪೂರ್ಣವಾಗಿದೆ. ಕಾದಂಬರಿಯಲ್ಲಿ ಬರುವ ಪ್ರಮುಖ ಪಾತ್ರ ‘ಗೋಪಾಲಯ್ಯ’. ಕಾದಂಬರಿಯ ಹೆಸರೇ ಸೂಚಿಸುವಂತೆ ಬೆಟ್ಟದ ಒಂದೇ ಕೋಡುಗಲ್ಲು, ಪ್ರಕೃತಿಯ ಪಂದು ದೃಶ್ಯವನ್ನೆಲ್ಲಾ ತುಂಬಿ ಬಿಡುವಂತೆ ಗೋಪಾಲಯ್ಯನ ಪಾತ್ರ. ಕಥಾ ನಾಯಕ ಶಿವರಾಮಯ್ಯ ಮನೆಗೆ ಆಗಂತುಕನಾಗಿ ಬಂದಾಗ ಅವರು ತೋರಿಸುವ ವಿಶೇಷ ಆದರ, ಮನೆಯ ರೀತಿ ನೀತಿ, ಹೆಂಡತಿ ಶಂಕರಿಯೊಡನೆ ಅವರ ವಿನೋದವಾದ ಮಾತು, ಕೃಷಿಯಲ್ಲಿ ಆಸಕ್ತಿ, ಮಿತಿಮೀರಿದ ಶ್ರಮ ಇವೆಲ್ಲವೂ ನಮಗೆ ಸ್ಫೂರ್ತಿಯಾಗಿ ಪರಿಣಮಿಸುತ್ತದೆ. ಶಂಕರಿಯ ಪಾತ್ರವು ಒಬ್ಬಳು ಗೃಹಿಣಿಯಾಗಿ, ಶಾಂತತೆಯಿಂದ ಸಂಸಾರದ ಜವಾಬ್ಧಾರಿಯನ್ನು, ಸಹನಾಮೂರ್ತಿಯಗಿ ಬಾಳುವ ರೀತಿಯನ್ನು ಕಲಿಸುತ್ತದೆ. ಕಾರಂತರು ಹೆಣ್ಣಿನ ಮನಸ್ಸಿನ ಸೂಕ್ಷ್ಮ ಸಂವೇದನೆಗಳನ್ನು ಅರ್ಥ ಮಾಡಿಕೊಂಡು ಶಂಕರಿಯ ಪಾತ್ರವನ್ನು ಬರಹದ ಮೂಲಕ ಹೆಣೆದಿದ್ದಾರೆ.

ಕಾದಂಬರಿಯಲ್ಲಿ ಬರುವ ಇನ್ನೊಂದು ಪಾತ್ರ ನಾರಾಯಣ, ಒಬ್ಬ ಸರಳ ಹಾಗೂ ಪ್ರಾಮಾಣಿಕ ವ್ಯಕ್ತಿಯ ಚಿತ್ರಣ ಮತ್ತು ಇನ್ನೆರಡು ಮುಖ್ಯ ಪಾತ್ರಗಳೆಂದರೆ, ದೇರಣ್ಣ ಮತ್ತು ಬಟ್ಯ. ಇವರು ದುಡಿಯುವ ವರ್ಗದ ಪಾತ್ರಗಳಾಗಿದ್ದು, ಇವರಲ್ಲಿ ವಿಧೇಯತೆಯನ್ನು ಕಾಣಬಹುದು. ತನ್ನ ಯಜಮಾನನ ಏಳಿಗೆಗಾಗಿ ತನ್ನ ಶಕ್ತಿಗೂ ಮೀರಿ ಕೆಲಸ ಮಾಡುವ ಶ್ರಮಜೀವಿಗಳು ಆದರ್ಶರಾಗಿದ್ದಾರೆ. ‘ಬೆಟ್ಟದ ಜೀವ’ ಕಾದಂಬರಿಯನ್ನು ಪೂರ್ತಿಯಾಗಿ ವಿಶ್ಲೇಷಿದಾಗ ನಿರೂಪಕನಾಗಿ ಕಾರಂತರು ವಹಿಸುವ ಪಾತ್ರವು ಬಹಳ ಮುಖ್ಯ ಮತ್ತು ಅನಿವಾರ್ಯ ಎಂದೆನಿಸುತ್ತದೆ. ದೀರ್ಘ ಕಾಲದ ಅಗಲುವಿಕೆಯು ಮನುಷ್ಯನಿಗೆ ಬದುಕುವ ದಾರಿಯನ್ನು ಹೇಗೆ ತೋರಿಸಿಕೊಡುತ್ತದೆ ಎಂಬುದನ್ನು ನಿರೂಪಕನ ಪಾತ್ರದ ರೀತಿಯಲ್ಲಿ ಕೆಲಸ ಮಾಡುವ ಶಿವರಾಮಯ್ಯನ ಮೂಲಕ ಕಾರಂತರು ತಿಳಿಸಿಕೊಡುತ್ತಾರೆ.

ಕಾದಂಬರಿಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬೆಳ್ಳಾರೆ, ಗುತ್ತಿಗಾರು, ಸುಬ್ರಹ್ಮಣ್ಯ ಪ್ರದೇಶಗಳನ್ನು ಪರಿಚಯಿಸಿದ್ದಾರೆ. ಸುಬ್ರಹ್ಮಣ್ಯದಲ್ಲಿರುವ ಕುಮಾರಪರ್ವತದ ವರ್ಣನೆಗಳು ಬಹಳ ಅದ್ಭುತವಾಗಿದೆ. ನಾವು ಓದುತ್ತಾ ಹೋದಾಗ ಪಾತ್ರಗಳ ಜತೆಜತೆಗೆ ಬೆಟ್ಟದ ಸೌಂದರ್ಯ ಸವಿದು ಪ್ರಯಾಣಿಸಿದ ಅನುಭವ ನೀಡುತ್ತದೆ. ಬೆಟ್ಟ ಗುಡ್ಡಗಳಿಂದ ಆವರಿಸಿದ ಕರಾವಳಿಯ ಪ್ರಾಕೃತಿಕ ಸೌಂದರ್ಯವನ್ನು ವಿಶೇಷವಾಗಿ ವರ್ಣಿಸಿದ್ದಾರೆ.
ಉದಾಹರಣೆಗೆ, ಬೆಳಗಿನಲ್ಲಿ ಚಿನ್ನದ ಕಡೆಗೋಲಿನಂತೆ ಕಾಣುವ ಬೆಟ್ಟದ ನೋಟ, ಅಬ್ಬಿಯ ನೀರು, ಕಾಟುಮೂಲೆಯ ಹಸಿರು, ಕನ್ನಡಿ ಹಾವಿನ ವಾಸನೆ, ಸಾಗುವಳಿಯನ್ನು ಕಾಣದ ಭೂಮಿ, ಕಾಡಿನ ನೀರವ ಮೌನ ಇವೆಲ್ಲಾ ಒಂದು ರಹಸ್ಯ ಅರ್ಥವನ್ನು ಸೃಷ್ಟಿಸಿವೆಯಾದರೂ, ಮನುಷ್ಯ ಜೀವನದ ಸಾಹಸವನ್ನು ಬಿಂಬಿಸುತ್ತದೆ.

ನಾವು ಕರಾವಳಿ ಜನತೆ ದೈವ ನಂಬಿಕೆಯ ಆಚರಣೆ ಮತ್ತು ರೋಗ ಆವರಿಸಿದರೆ ಅದಕ್ಕೆ ಭೂತದ ಉಪಟಳವೇ ಕಾರಣ ಎಂದು ಗುಣಮುಖವಾಗಲು ಭೂತಕೋಲ ಆಚರಿಸುವ ರೀತಿಯನ್ನು ಕಾರಂತರು ಕಾದಂಬರಿಯಲ್ಲಿ ಬರೆದಿದ್ದಾರೆ. ಈ ಕಾದಂಬರಿಯು ವೃದ್ಧ ದಂಪತಿಗಳ ಮಾನವೀಯ ಗುಣಗಳಿಂದ ಆತ್ಮೀಯತೆಯನ್ನು ಪರಿಚಯಿಸುತ್ತದೆ. ವೃದ್ಧರಾಗಿರುವಾಗ ಮಕ್ಕಳ ಅಗಲುವಿಕೆಯು ಎಷ್ಟು ಕಾಡುತ್ತದೆ, ಮಕ್ಕಳು ಹಿಂತಿರುಗಿ ಬಂದು ಉಪಚರಿಸಬೇಕೆಂಬ ಆಸೆ ಅಂಕುರಿಸುವ ಇಳಿವಯಸ್ಸಿನ ಸಹಜಗುಣವನ್ನು ಈ ಕಾದಂಬರಿಯಿಂದ ನಾವು ತಿಳಿಯಬಹುದು.

ಒಬ್ಬ ವ್ಯಕ್ತಿಯ ಒಂದು ಕಾಲಾವಧಿಯಲ್ಲಿಯ ಜೀವನ ವಾಸ್ತವ ಚಿತ್ರ ಎಂದರೆ ತಪ್ಪಾಗಬಹುದು ಏಕೆಂದರೆ, ಇಲ್ಲಿ ಪಾತ್ರಗಳು ಕೇವಲ ಪಾತ್ರಗಳಾಗಿಯೇ ಉಳಿಯದೇ ಧೀಮಂತ ವ್ಯಕ್ತಿತ್ವಗಳನ್ನು ಮೆರೆಯುತ್ತದೆ. ಇಂದಿಗೂ ಕಳಂಜಿಮಲೆಯ ಪಳಂಗಾಯಿ ದೇರಣ್ಣ, ಕಟ್ಟದ ಗೋವಿಂದಯ್ಯನವರು ನನ್ನ ಸ್ಮರಣೆಯಲ್ಲಿ ನೆಲೆ ನಿಂತ ಧೀಮಂತರು. ಅವರು ಇಂದು ಉಳಿದಿಲ್ಲ. ಅವರ ನೆನಪು ಮಾತ್ರ ನನಗೆ ಅಳಿದಿಲ್ಲ ಎಂದು ಶಿವರಾಮ ಕಾರಂತರು ಮುನ್ನುಡಿಯನ್ನು ಬರೆದು ಕರುಳ ಬಳ್ಳಿಯ ಸಂಬಂಧದೊಡನೆ ವಾಸ್ತವವನ್ನು ಅನಾವರಣಗೊಳಿಸಿರುವ ಅದ್ಭುತ ಕಾದಂಬರಿ ‘ಬೆಟ್ಟದ ಜೀವ ’ ವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.

ಈ ಕಾದಂಬರಿಯು ತಾಂತ್ರಿಕ ಯುಗದಲ್ಲಿ ಸಾಹಿತ್ಯ ಪ್ರೇಮಿಗಳಿಗಾಗಿ ಡಿಜಿಟಲ್ ಪುಸ್ತಕವಾಗಿ ಲಭ್ಯವಿದ್ದು ಓದುಗರಲ್ಲಿ ಆಸಕ್ತಿ ಮೂಡಿಸುವಂತಿದೆ.

ಸುಧಾಶ್ರೀ, ಧರ್ಮಸ್ಥಳ

0 thoughts on “ನಿಗೂಢ ಕಾಡಿನೊಳಗೆ ಕಳೆದುಹೋಗುವ ಅನುಭವ । ಶಿವರಾಮ ಕಾರಂತರ ‘ ಬೆಟ್ಟದ ಜೀವ ‘ ಕಾದಂಬರಿ”

error: Content is protected !!
Scroll to Top
%d bloggers like this: