ಮಹಾಭಾರತ | ರಾಕ್ಷಸ ಪ್ರವೃತ್ತಿ ಯಾರದ್ದು ಪಾಂಡವರದ್ದಾ ಘಟೋತ್ಕಚನದಾ ?

ಘಟೋತ್ಕಚನೆಂಬ ಹೆಸರು ಕೇಳಿದರೆ ಸಾಕು, ಮೈ ಮನಸ್ಸುಗಳಲ್ಲಿ ಒಂದು ವಿಚಿತ್ರ ರೋಮಾಂಚನ. ಅಬ್ಬಬ್ಬಾ ಆತನದೆಂತಹ ವ್ಯಕ್ತಿತ್ವ. ಅರಗಿನ ಮನೆಯಿಂದ ತಪ್ಪಿಸಿಕೊಂಡು ಪಾಂಡವರು ಬ್ರಾಹ್ಮಣ ವೇಷದಲ್ಲಿ ಸಂಚರಿಸುತ್ತಿದ್ದರು. ಅವರಿಗೆ ಎತ್ತ ಹೋಗಬೆಕೆಂಬ ಸ್ಪಷ್ಟತೆಯಿರಲಿಲ್ಲ. ಹಾಗೆ ಗೊತ್ತು ಗುರಿಯಿಲ್ಲದೆ ಅಂಡಲೆಯುತ್ತಿರುವಾಗ ಕಾಮ್ಯಕ ಗೊಂಡಾರಣ್ಯವನ್ನು ಪ್ರವೇಶಿಸುತ್ತಾರೆ. ದಟ್ಟ ನಿಭಿಡ ಭಯಾನಕ ಕಾಡದು. ಅದನ್ನು ಆಳುತ್ತಿದವನು ದುಷ್ಟ ರಾಕ್ಷಸ ದೊರೆ ಹಿಡಿ೦ಬ.

ಪಾಂಡವರು ತೀರಾ ಬಳಲಿ ಮರದ ಕೆಳಗೆ ವಿಶ್ರಾಂತಿಗೆಂದು ಕುಳಿತುಬಿಡುತ್ತಾರೆ. ಆಗ ನಿಧಾನವಾಗಿ ಕತ್ತಲಾಗುತ್ತದೆ. ಎಲ್ಲರೂ ನಿದ್ರೆಗೆ ಜಾರುತ್ತಾರೆ. ಆದರೆ ಭೀಮನು ಎಚ್ಚರವಿದ್ದು ಮಲಗಿದವರ ರಕ್ಷಣೆಗೆ ನಿಂತುಬಿಡುತ್ತಾನೆ. ಹಿಡಿ೦ಬನಿಗೆ ತನ್ನ ಕಾಡಿಗೆ ಯಾರೋ ಮನುಷ್ಯರು ಬಂದಿರುವ ವಾಸನೆಯನ್ನು ಅಷ್ಟು ದೂರದಿಂದಲೇ ಗ್ರಹಿಸುತ್ತಾನೆ. ಆತನ ಮೂಗ ಹೊಳ್ಳೆಗಳು ಅಂಗೈಯಗಳ ಅರಳಿಕೊಳ್ಳುತ್ತವೆ. ಮನುಷ್ಯ ಮಾಂಸದ ಪರಿಮಳದಿಂದ ಅಸೆಪಟ್ಟು, ಆ ಮನುಷ್ಯರನ್ನು ತಿನ್ನುವ ಬಯಕೆಯಿಂದ ತನ್ನ ತಂಗಿಯಾದ ಹಿಡಿ೦ಬಿಯನ್ನು ಕಳಿಸುತ್ತಾನೆ. ವಾಸನೆಯ ಜಾಡು ಹಿಡಿದು ಹೊರಟ ಹಿಡಿ೦ಬಿಯು, ಕಾಡಿನಲ್ಲಿ ಹುಡುಕುತ್ತಾ ಸಾಗುವಾಗ ಒಂದು ಕಡೆ ಭೀಮನು ಪಹರೆ ಕಾಯುತ್ತ ಕುಳಿತಿರುವುದು ಗೋಚರಿಸುತ್ತದೆ.

ಬಿರುಸಾದ ಹೆಬ್ಬಂಡೆಗೆ ಶಾಲು ಹೊದಿಸಿದಂತೆ ಕಾಣುತ್ತಿತ್ತು ಆತನ ಬೆನ್ನು. ಏಳು ಅಡಿ ಹತ್ತತ್ತಿರ ಎತ್ತರ. ಹಸಿದ ತೋಳದಂತಹ ಸೊಂಟ ( ವೃಕೋದರ ). ಮಿಂಚುವ ಹುರಿಗಟ್ಟಿದ ಮೈ. ಹರವಾದ ಎದೆಯಲ್ಲಿ ಒಂದು ಸ್ವಂತ ಕಾಮ್ಯಕ ಕಾಡೇ ಬೆಳೆದುಬಿಟ್ಟಿದೆ. ಆತಿತ್ತ ನಡೆದುಹೋಗುತ್ತಿದ್ದರೆ ಹಸಿದ ಹುಲಿಯ ಗುರ್ರನೆ ಗುರುಗುಟ್ಟುವಿಕೆಯಂತಹ ಗಡುಸು ವ್ಯಕ್ತಿತ್ವ. ಮೊದಲ ನೋಟಕ್ಕೆ ಆಕೆಗೆ ಭೀಮನ ಮೇಲೆ ಪ್ರೇಮಾಂಕುರವಾಗುತ್ತದೆ. ಆದರೆ ಆತನನ್ನು ಆಕೆ ಭೇಟಿಯಾಗುವುದಿಲ್ಲ. ಆಕೆ ರಾಕ್ಷಸಿ. ಹಾಗಾಗಿ ತನ್ನ ಮಾಯಾವಿದ್ಯೆಯನ್ನು ಬಳಸಿಕೊಂಡು ಒಂದು ಸುಂದರಿಯ ರೂಪ ಧರಿಸಿಕೊಂಡು ಭೀಮನ ಮುಂದೆ ಬಂದು ಭೀಮನಲ್ಲಿ ಎಲ್ಲ ಸಂಗತಿಗಳನ್ನು ನಿಜಾಯಿತಿಯಿಂದ ಹೇಳಿಕೊಳ್ಳುತ್ತಾಳೆ. ತನ್ನ ಅಣ್ಣ ಹಿಡಿ೦ಬನಿಗೆ ನಿನ್ನನ್ನು ತಿನ್ನಲು ತರಲು ನಾನು ಬಂದಿದ್ದೆನ್ನುವುದನ್ನು ಕೇಳಿದ ಪಾಂಡವರು ಬೆಚ್ಚಿಬೀಳುತ್ತಾರೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಆದರೆ, ಮೃದುವಾದ ರುಚಿಕರವಾಗ ಮನುಷ್ಯ ಮಾಂಸದ ರುಚಿಗೆ ಇನ್ನು ಕಾಯಲಾರದೆ ತಾನೇ ಹಿಡಿ೦ಬಿ ಸಾಗಿದ ದಾರಿಯಲ್ಲಿ ಪರಿಮಳವನ್ನು ಆಘ್ರಾಣಿಸುತ್ತಾ ಹಿಡಿ೦ಬಿ ಇರುವ ಜಾಗಕ್ಕೆ ಬರುತ್ತಾನೆ. ಆನಂತರ ಭೀಮನಿಗೂ ಹಿಡಿ೦ಬನಿಗೂ ಘೋರ ಕದನವಾಗುತ್ತದೆ. ಎರಡು ಹೆಬ್ಬಂಡೆಗಳು ಘರ್ಷಿಸುವ, ಉರುಳುವ ಸದ್ದು ಮೊರೆಯುತ್ತದೆ. ಬರಿಗೈಯಿಂದ ಪ್ರಾರಂಭವಾದ ಕದನವು ನಂತರ ತಮ್ಮ ಸುತ್ತ ಬೆಳೆದಿದ್ದ ಮರಗಳನ್ನು ಬೇರುಸಹಿತ ಕೀಳಿ ಅದರಿಂದ ಹೊಡೆದುಕೊಂಡರು. ಆನಂತರ ಕೈಗೆ ಸಿಕ್ಕ ಕಲ್ಲು ಬಂಡೆಗಳಿಂದ ಮೈಜಜ್ಜಿಕೊಂಡರು. ಒಂದು ಹಂತದಲ್ಲಿ ಬಲಾಢ್ಯ ರಾಕ್ಷಸ ಹಿಡಿ೦ಬನ ಕೈ ಮೇಲಾಗುವ ಲಕ್ಷಣ ಗೋಚರಿಸುವ ಸಂದರ್ಭದಲ್ಲಿ ಹಿಡಿ೦ಬಿಯು ತನ್ನ ಮಾಯಾ ಜಾಲದ ಸಹಾಯವನ್ನು ಭೀಮನಿಗೆ ಮಾಡುತ್ತಾಳೆ. ಭೀಮ ಹಿಡಿ೦ಬನನ್ನು ಕೊಂದುಹಾಕುತ್ತಾನೆ.

ತನ್ನ ಅಣ್ಣ ಸತ್ತ ಮೇಲೆ, ಹಿಡಿoಬಿ ಸಹಜವಾಗಿ ರೋದಿಸುತ್ತಾಳೆ. ಒಂಟಿಯಾಗಿರುವ ಭೀಮನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಾಗ ಭೀಮನು ಅದನ್ನು ಒಪ್ಪುವುದಿಲ್ಲ. ಆಗ ಕುಂತಿಯು ಮಧ್ಯಪ್ರವೇಶಿಸಿ, ಆಕೆಯನ್ನು ಮದುವೆಯಾಗಲು ನಿರ್ದೇಶಿಸುತ್ತಾಳೆ ಮತ್ತು ಆಕೆಗೆ ಒಂದು ಮಗುವನ್ನು ಕರುಣಿಸಲು ಹೇಳುತ್ತಾಳೆ. ಒಲ್ಲದ ಮನಸ್ಸಿನಿಂದ ಅಮ್ಮನ ಮಾತನ್ನು ನೆರವೇರಿಸಲು ಹೋರಟ ಭೀಮನು, ಆ ಸಂದರ್ಭದಲ್ಲಿ ಒಂದು ಕರಾರನ್ನು ಹಿಡಿ೦ಬಿಗೆ ವಿಧಿಸುತ್ತಾನೆ. ತಾನು ಮಾಡಬೇಕಾದ ಕೆಲಸ ಬೇಕಾದಷ್ಟಿದ್ದರಿಂದ, ನಾನಿಲ್ಲಿರುವುದು ಸ್ವಲ್ಪ ದಿನಗಳು ಮಾತ್ರವೆಂದು ಹೇಳಿ, ಆಕೆಗೆ ಮಗುವಾದ ಕೂಡಲೇ ಅವರು ಆ ವನವನ್ನು ಬಿಟ್ಟುಹೋಗುತ್ತಾರೆ.

ಹಾಗೆ ಹುಟ್ಟಿದವನು ಘಟೋತ್ಕಚ. ಭೀಮನ ಭುಜ ಬಲವನ್ನೂ, ತನ್ನ ಅಮ್ಮನ ಮಾಯಾ ವಿದ್ಯೆಯನ್ನೂ, ತನ್ನ ಮಾವನ ( ಹಿಡಿ೦ಬ) ಭಂಡತನವನ್ನೂ ಹುಟ್ತಾನೇ ಪಡೆದುಕೊಂಡು ಬಂದ ಘಟೋತ್ಕಚನು ನೋಡ ನೋಡುತ್ತಲೇ ಬೆಳೆದು ನಿಲ್ಲುತ್ತಾನೆ. ಆತನ ಒಟ್ಟು ಆರೈಕೆಯನ್ನು ಅಮ್ಮ ಹಿಡಿ೦ಬಿಯೇ ಮಾಡುತ್ತಾಳೆ. ಒಂದು ದಿನಕ್ಕೂ ತನ್ನ ಅಪ್ಪ ಯಾರು ಎಂದು ಆತ ನೋಡಲಿಲ್ಲ. ಆದರೆ ಹಿಡಿ೦ಬಿಯು ಭೀಮನ ಬಗ್ಗೆ ಎಲ್ಲ ವಿಚಾರಗಳನ್ನು ತಿಳಿಸಿರುತ್ತಾಳೆ. ಹಾಗೆ ಘಟೋತ್ಕಚನಿಗೆ ಭೀಮನೊಬ್ಬ ಅವ್ಯಕ್ತ ರೂಪವಷ್ಟೇ ಆಗಿ ಹೋಗಿದ್ದ.

ಕಾಲಚಕ್ರ ಯಾರಿಗೂ ಕಾಯದೆ ಜರ ಜರ ಉರುಳಿ ಹೋಗುತ್ತಿತ್ತು. ಘಟೋತ್ಕಚ ಬೆಳೆದು ದೊಡ್ಡವನಾದ. ಒಂದು ದಿನ ಹಿಡಿ೦ಬಿಗೆ ಬಹುದಿನಗಳ ನಂತರ ಮನುಷ್ಯ ಮಾಂಸವನ್ನು ತಿನ್ನಲು ಆಸೆಯಾಯಿತು. ಮನುಷ್ಯರನ್ನು ಹುಡುಕಿ ಹೊರಟ ಆತನಿಗೆ ಬ್ರಾಹ್ಮಣ ಕುಟುಂಬವೊಂದು ಕಣ್ಣಿಗೆ ಬೀಳುತ್ತಾನೆ. ಅದರಲ್ಲಿ ಒಬ್ಬ ಬ್ರಾಹ್ಮಣ ಹುಡುಗ ತಾನು ಆಹಾರವಾಗಿ ಬರಲು ಒಪ್ಪಿಕೊಳ್ಳುತ್ತಾನೆ. ಆದರೆ ನಾನು ಸ್ನಾನ ಮಾಡಿ ಬರುತ್ತೇನೆಂದು ನದಿಗೆ ಜಿಗಿದವನು ವಾಪಸ್ಸು ಬರದೇ ತಪ್ಪಿಸಿಕೊಳ್ಳುತ್ತಾನೆ. ಅಷ್ಟರಲ್ಲಿ ಭೀಮನು ಆ ಸ್ಥಳಕ್ಕೆ ಬಂದಾಗ ಘಟೋತ್ಕಚನು ಭ್ರಾಹ್ಮಣ ಹುಡುಗನಿಗಾಗಿ ಹುಡುಕಾಟ ನಡೆಸುತ್ತಿರುತ್ತಾನೆ. ಆಗ, ಭೀಮನಿಗೆ ತಾನು ಆತನಿಗೆ ಆಹಾರವಾಗಿ ಬರಲೊಪ್ಪಿಕೊಳ್ಳುತ್ತಾನೆ, ಆದರೆ ತನ್ನನ್ನು ಮಲ್ಲಯುದ್ಧದಲ್ಲಿ ಸೋಲಿಸಬೇಕೆಂಬ ಒಪ್ಪಂದದೊಂದಿಗೆ.

ಘಟೋತ್ಕಚ ಮತ್ತು ಭೀಮ ಇಬ್ಬರೂ ಯುದ್ಧಕ್ಕೆ ತೊಡಗುತ್ತಾರೆ. ಸಮಯ ಮೀರಿ ಸಾಯಂಕಾಲವಾಗುತ್ತಿದ್ದರೂ ಯಾರೂ ಸೋಲುವುದಿಲ್ಲ. ಯಾರೂ ಗೆಲ್ಲುವುದಿಲ್ಲ. ಹೀಗೆ ಇಬ್ಬರೂ ಆಯಾಸಗೊಂಡಷ್ಟರಲ್ಲಿ ಹಿದಿಂಬಿಯು ಮಗ ಘಟೋತ್ಕಚನನ್ನು ಹುಡುಕಿಕೊಂಡು ಅಲ್ಲಿಗೆ ಬರುತ್ತಾಳೆ. ನೋಡಿದರೆ ಅಲ್ಲೇನಿದೆ. ಮಗ ತನ್ನ ಅಪ್ಪ ಭೀಮನೊಂದಿಗೆ ಸರಿಸಮನಾಗಿ ಹೋರಾಡುತ್ತಿದ್ದಾನೆ…… ಹೀಗೆ ಸಾಗುತ್ತದೆ ಘಟೋತ್ಕಚನ ಪ್ರಸಂಗ.

ತಂದೆ ಭೀಮನು ಮಗನನ್ನು ಒಂದು ದಿನಕ್ಕೂ ಎತ್ತಿ ಆಡಿಸಲಿಲ್ಲ. ಹೆಗಲ ಮೇಲೆ ಹೊತ್ತುಕೊಂಡು ಮರದಿಂದ ಕಾಯಿ ಕೀಳಿಸಲಿಲ್ಲ, ಕೈ ಹಿಡಿದು ಈಜು ಕಲಿಸಲಿಲ್ಲ. ಹಿಡಿ೦ಬಿಗಾದರೂ ಅಷ್ಟೇ, ಒಂದೇ ಒಂದು ದಿನ ‘ಹೇಗಿದ್ದೀಯಾ ಹಿದಿಂಬಿ, ಮಗ ಹೇಗಿದ್ದಾನೆ?’ ಎಂದು ವಿಚಾರಿಸಲಿಲ್ಲ. ಅದು ಬೇಡ, ಆಕೆಯನ್ನಂತೂ ವಿಚಾರಿಸಲಿಲ್ಲ. ಇಷ್ಟು ವರ್ಷ ಆಯಿತು, ಮಗ ಎಷ್ಟು ದೊಡ್ಡವನಾಗಿರಬಹುದು, ಹೇಗಿರಬಹುದು ಈಗ – ಉಹೂಂ ಒಂದು ಸಲ ವರ್ತಮಾನ ತಿಳಿದುಕೊಳ್ಳುವ ಗೋಜಿಗೇ ಹೋಗಲಿಲ್ಲ.

ಆದರೆ ಘಟೋತ್ಕಚನು ಅಪ್ಪನ ಅನುಪಸ್ಥಿತಿಯಲ್ಲೂ ಬಲಾಢ್ಯನಾಗಿ ಬೆಳೆದು ನಿಂತಿದ್ದ. ಅಮ್ಮತನಗೆ ಗೊತ್ತಿರುವ ಎಲ್ಲ ವಿದ್ಯೆಗಳನ್ನು ಆತನಿಗೆ ಹೇಳಿಕೊಟ್ಟಿದ್ದಳು. ಬದುಕಿನಲ್ಲಿನ ಬೇಟೆ ಮತ್ತಿತರ ದಿನನಿತ್ಯದ ಕೆಲಸಗಳಲ್ಲೇ ಆತ ಮೈಯನ್ನು ಪಳಗಿಸಿಕೊಂಡಿದ್ದ. ಆತನ ಬೇಟೆಯ ತಾಕತ್ತೇ ಅವನಲ್ಲಿ ಯುದ್ಧ ತಂತ್ರಕ್ಕೆ ಪ್ರೇರಣೆ ನೀಡಿತ್ತು. ಅದು ಆತನನ್ನೊಬ್ಬ ಸಮರ್ಥ ಸಮರವೀರನನ್ನಾಗಿ ರೂಪಿಸಿತ್ತು.

ಆ ದಿನ, ಹಿಡಿ೦ಬಿಯು ಅಪ್ಪ ಮಗನ ಕದನವನ್ನು ತಡೆದು “ಈತ ನಿನ್ನ ಅಪ್ಪ ಭೀಮಣ್ಣ ಕಣೋ” ಎಂದು ಘಟೋತ್ಕಚನಿಗೆ ಅಮ್ಮ ಹೇಳುವಾಗ ಆತನ ಮುಖದಲ್ಲಿನ ಆನಂದವನ್ನು ನೋಡಬೇಕಿತ್ತು. ಯುದ್ಧ ನಿಲ್ಲಿಸಿ ಖುಷಿಯಿಂದ ಭೀಮನಂತಹಾ ಭೀಮನನ್ನೇ ಅನಾಮತ್ತಾಗಿ ಎತ್ತಿಕೊಂಡು ತನ್ನ ಹೆಗಲಮೇಲೆ ಒಗೆದು, ಆಡಲು ಗೊಂಬೆ ಸಿಕ್ಕಾಗ ಅದನ್ನು ಹಿಡಿದುಕೊಂಡು ಓಡುವ ಮಗುವಿನ ಥರ ಮನೆಗೆ ಓಡುತ್ತಾನೆ. ದಾರಿಯಲ್ಲಿ ಎದುರಾಗುವ ಬಂಡೆಯಿಂದ ಬಂಡೆಗೆ ಹಾರುತ್ತಾನೆ. ಕಾಡುದಾರಿಯಲ್ಲಿ ಸಾಗುವಾಗ, ಅಪ್ಪನ ತಲೆಗೆ ಮರ ಗಿಡಗಳ ಬಳ್ಳಿಗಳು ಕೊಂಬೆಗಳು ತಾಗದಿರಲೆಂದು ತನ್ನ ಬಲಗೈಯನ್ನು ತಂದೆಗೆ ಅಡ್ಡವಾಗಿ ಹಿಡಿದುಕೊಂಡು ಸಾಗುತ್ತಾನೆ. ಓಡುತ್ತಿರುವಾಗಲೇ ಖುಷಿಯಿಂದ ತನ್ನ ಅಪ್ಪನನ್ನು ಆಕಾಶಕ್ಕೆ ಚಿಮ್ಮಿಸಿ ಮತ್ತೆ ಹೆಗಲ ಮೇಲೆ ಕೂರಿಸಿಕೊಳ್ಳುತ್ತಾನೆ.

ಒಂದು ಕ್ಷಣ ಭೀಮನಂತಹ ನಿರ್ಭಾವುಕ ಮನಸ್ಸಿನಲ್ಲಿಯೂ ಆತ ತಲ್ಲಣವನ್ನುಂಟುಮಾಡುತ್ತಾನೆ. ಮೊದಲ ಬಾರಿಗೆ, ಛೆ, ನಾನು ಮಗನಿಗೆ ಏನೂ ಮಾಡಲಾಗಲಿಲ್ಲವಲ್ಲವೆಂಬ ಕೊರಗು ಭೀಮನಲ್ಲಿ ಮೂಡುತ್ತದೆ.
ಅವತ್ತು ಮಹಾಭಾರತ ಯುದ್ಧದ 13 ನೆಯ ದಿನ ಚಕ್ರವ್ಯೂಹದಲ್ಲಿ ಬಂಧಿಯಾದ ಅಭಿಮನ್ಯು ಕೌರವರ ಕೈಗೆ ಸಿಕ್ಕು ಹತನಾಗಿದ್ದ. ಇದು ಅರ್ಜುನನನ್ನು ಕೆರಳಿಸಿತ್ತು. ಆತ, ತನ್ನ ಮಗ ಅಭಿಮನ್ಯುವಿನ ಸಾವಿಗೆ ಕಾರಣವಾದ ಜಯದ್ರಥನ ತಲೆಯ ಬಲಿಗಾಗಿ ಹಾತೊರೆಯುತ್ತಿದ್ದ. ಅರ್ಜುನ ಕೃಷ್ಣನ ಸಹಾಯದಿಂದ ಜಯದ್ರಥನ ನೆತ್ತರು ಹರಿಸಿ ಸಾಯಿಸಿದ್ದ. ಕೌರವರು ಹಠಕ್ಕೆ ಬಿದ್ದಿದ್ದರು. ಯುದ್ಧದ ಕರಾರಿನಂತೆ ಅವತ್ತು ಹದಿನಾಲ್ಕನೆಯ ದಿನ ಕೌರವರು, ಹಗಲು ಮುರಿದುಬಿದ್ದು ಕತ್ತಲಾದರೂ ಯುದ್ಧ ನಿಲ್ಲಿಸಲಿಲ್ಲ.

ಕರ್ಣ ಯುದ್ಧರಂಗಕ್ಕೆ ಅಡಿಯಿಟ್ಟಿದ್ದ. ಆತ ಮಹಾರಥಿ. ಆ ಹೊತ್ತಿಗಾಗಲೇ, ಯುದ್ಧದ 10 ನೆಯ ದಿನ ಶರಪಂಜರದಲ್ಲಿ ಭೀಷ್ಮಮಲಗಿಬಿಟ್ಟಿದ್ದ. ಜಯದ್ರಥನ ಸಾವಿಗೆ ದೊಡ್ಡ ಬಲಿ ಬೇಡಿದ್ದ ಧುರ್ಯೋಧನ. ಯುದ್ಧ ರಾತ್ರಿಯೂ ಮುಂದುವರಿಯುವುದು ಮತ್ತು ಕರ್ಣನನ್ನು ತಡೆದು ನಿಲ್ಲಿಸುವವರಿಲ್ಲದೆ ಯುದ್ಧ ಸಾಗುವ ಗತಿಯನ್ನು ಕಂಡ ಕೃಷ್ಣನು, ಅರ್ಜುನನ ಜೀವಕ್ಕೆ ಕೌರವರು ಕಾಯುತ್ತಿರುವ ಸನ್ನಿವೇಶ ಸೃಷ್ಟಿಯಾಗಿತ್ತು.

ಶ್ರೀಕೃಷ್ಣನಿಗೆ ಅರ್ಜುನನ ಜೀವದ ಭಯ ಕಾಡುತ್ತಿರುತ್ತದೆ. ಯಾಕೆಂದರೆ ಕರ್ಣನಲ್ಲಿ ಇರುವ ವಾಸುಕಿ ಅಸ್ತ್ರವು ಬಹಳ ಪ್ರಖರವಾದದ್ದು, ಅದು ಪ್ರಯೋಗಿಸಿದವನ ಮೇಲೆ ಎರಗಿ ಕೊಲ್ಲದೆ ಹಿಂತಿರುಗದು. ಆ ಕಾರಣಕ್ಕೇ ಕೃಷ್ಣ ಚಿಂತಿತನಾಗಿದ್ದ. ಇವತ್ತು ದುರ್ಯೋಧನನ ಹಠಕ್ಕೆ ಬಿದ್ದಿದ್ದ. ಅರ್ಜುನನ ತಲೆ ಉರುಳುವುದು ಖಾತ್ರಿಯಾಗಿತ್ತು. ಕರ್ಣನು ಬೇರೆ ಯಾವ ಪಾಂಡವರಿಗೂ ಏನನ್ನೂ ಮಾಡುವುದಿಲ್ಲವೆಂದು ತನ್ನ ಹುಟ್ಟಿಗೆ ಕಾರಣವಾಗಿದ್ದ ತಾಯಿ ಕುಂತಿಗೆ ಮಾತು ಕೊಟ್ಟಿದ್ದ. ಆದುದರಿಂದ ಉಳಿದ ಪಾಂಡವರ ರಕ್ಷಣೆಯ ಭಯ ಕೃಷ್ಣನಿಗಿರಲಿಲ್ಲ.

ಕರಾರು ಮುರಿದು ರಾತ್ರಿ ಯುದ್ಧಮಾಡುವ ಮೂಲಕ ಯುದ್ಧದ ಸ್ಟ್ರಾಟೆಜಿ ಬದಲಿಸಿ ಪಾಂಡವರ ಪಾಲಿಗೆ ಮೃತ್ಯುರೂಪವಾಗಿ ಮುಂದುವರಿಯುತ್ತಿದ್ದ ಕರ್ಣನನ್ನು ತಡೆಯಲು ಯಾರೊಬ್ಬರೂ ಶಕ್ತರಾಗಿರಲಿಲ್ಲ. ಆ ರಾತ್ರಿಯಲ್ಲಿ ಕೂಡ ಇಮ್ಮಡಿ ತಾಕತ್ತಿನಲ್ಲಿ ಬಡಿದಾಡಬಲ್ಲ ವ್ಯಕ್ತಿಯಾಗಿ ಕೃಷ್ಣನಿಗೆ ಕಂಡವನು ಘಟೋತ್ಕಚ. ಆತ ಅರ್ಧ ಮಾನವ – ಅರೆದಾನವ. ಮಂತ್ರವಿದ್ಯೆಯನ್ನು ಬಲ್ಲವ. ರಾತ್ರಿಗಳಲ್ಲಿ ಅಸುರರ ಶಕ್ತಿ ಮುಮ್ಮಡಿಗೊಳ್ಳುತ್ತಿತ್ತು. ಹಾಗೆ ಭೀಮನು ಘಟೋತ್ಕಚನನ್ನು ಯುದ್ಧಕ್ಕೆ ಬರಲು ಕೇಳಿಕೊಳ್ಳುತ್ತಾನೆ. ” ಹೋಗು ಮಗಾ , ನಿನ್ನಪ್ಪನಿಗೆ ಸಹಾಯ ಮಾಡು” ಎಂದು ಹಿಡಿ೦ಬಿ ಆ ಕೂಡಲೇ ಮಗನಿಗೆ ಆಜ್ಞಾಪಿಸುತ್ತಾಳೆ.

ಅವಳೆಂತಹ ತಾಯಿ ! ಹೆಸರಿಗೆ ಅವಳು ರಾಕ್ಷಸಿ. ಮನುಷ್ಯರನ್ನೇ ತಿನ್ನುವವಳು. ಆದರೆ ಭೀಮನ ಮೇಲಿನ ಪ್ರೀತಿಯ ವಿಷಯಕ್ಕೆ ಬಂದಾಗ ಆಕೆಯೇನೂ ನಮ್ಮ ಹೆಣ್ಣು ಮಕ್ಕಳಿಗಿಂತ ಕಮ್ಮಿಯಿಲ್ಲ.
ಏನೊಂದೂ ಹಿಂದೆ ಮುಂದೆ ಯೋಚಿಸದೆ ಯುದ್ಧಕ್ಕೆ ಹೊರಟು ನಿಂತ. ಅದು ನಮ್ಮ ಘಟೋತ್ಕಚ. ಆತನೊಬ್ಬ ಹುಂಬನಾಗಿದ್ದ ಮತ್ತು ಅಮ್ಮನ ಮಗನಾಗಿದ್ದ. ಅಮ್ಮಆತನ ಸರ್ವಸ್ವವಾಗಿದ್ದಳು ; ತಂದೆಯಿಲ್ಲದೆ ಬೆಳೆದ ಉಳಿದೆಲ್ಲಾ ಮಕ್ಕಳಂತೆ.

ಈಗ ಘಟೋತ್ಕಚನು ತನ್ನ ಮಲ್ಟಿ ಸ್ಕಿಲ್ ನ ಮೂಲಕ ಕೌರವ ಸೇನೆಯಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದ. ದೈತ್ಯದೇಹದ ಆತ ಒಂದು ಬೃಹತ್ ಪುಂಡು ಆನೆಯಂತೆ ಕ್ಷಣ ಕ್ಷಣಕ್ಕೂ ತನ್ನ ಯುದ್ಧ ವಿಧಾನಗಳನ್ನು ಬದಲಿಸುತ್ತಾ ಮುಂದುವರೆಯುತ್ತಿದ್ದ. ಕೈಗೆ ಸಿಕ್ಕ ಮರಗಳನ್ನು ಕಿತ್ತು ಪಾಂಡವರ ಸೈನ್ಯದತ್ತ ಒಗೆಯುತ್ತಿದ್ದ. ಅಷ್ಟರಲ್ಲಿ ತಕ್ಷಣ ಮಾಯವಾಗಿ ಬೇರೊಂದು ಕಡೆ ಪ್ರತ್ಯಕ್ಷನಾಗಿ ಅಲ್ಲಿ ಅಸಂಖ್ಯ ಕೌರವ ಸೇನೆಯ ನಾಶಕ್ಕೆ ಕಾರಣವಾದ. ಅವಾಗಾವಾಗ ದೇಹವನ್ನು ಹಿಗ್ಗಿಸಿಕೊಳ್ಳಬಲ್ಲ ಶಕ್ತಿ ಆತನಲ್ಲಿತ್ತು. ಕೌರವರು ಏನೊಂದೂ ಮಾಡಲಾಗದೆ ಬೆಪ್ಪಾಗಿ ನಿಲ್ಲಬೇಕಾಯಿತು. ಅಂತಹ ಸಂದರ್ಭದಲ್ಲಿ ಘಟೋತ್ಕಚನ ಮನದಲ್ಲಿದ್ದುದು ಅಮ್ಮಆತನಿಗೆ ಹೇಳಿ ಕಳಿಸಿದ್ದ ಮಾತುಗಳಷ್ಟೇ. “ಅಪ್ಪನಿಗೆ ಸಹಾಯ ಮಾಡು ಮಗೂ” ಎಂಬ ಮಾತೇ ಆತನ ಮನದಲ್ಲಿ ಅನುರುಣಿಸುತ್ತಿತು.

ಅತ್ತ ಯುದ್ಧದಲ್ಲಿ ಘಟೋತ್ಕಚನು ತನ್ನ ಮಂತ್ರಮಾಯ ಶಕ್ತಿಯಿಂದ ಕೌರವರ ಸೈನ್ಯದ ಸುತ್ತಲೂ ಸಾವಿರಾರು ರಾಕ್ಷಸರ ಸೃಷ್ಟಿಸಿದ. ತಮ್ಮಸುತ್ತ ಅಮರಿಕೊಂಡ ರಾಕ್ಷಸ ಗಣವನ್ನು ಕಂಡು ಕೌರವರ ಸೈನ್ಯವು ದಿಕ್ಕಾಪಾಲಾಗಿ ಓಡಲಾರಂಭಿಸಿತು. ಪ್ರಾಣ ಉಳಿಸಿಕೊಂಡರೆ ಸಾಕೆಂಬುವಷ್ಟು ಕಾಟವನ್ನು ಘಟೋತ್ಕಚನು ಅವರಿಗೆ ನೀಡಿದ್ದನು. ಕೌರವ ಸೈನ್ಯದ ಮೇಲೆ ಒಂದೇ ಸಮನೆ ಬಾಣಗಳ ಮಳೆಗರೆದನು. ಇದರಿಂದ ಈತನ ಉಪಟಳವನ್ನು ಹೇಗಾದರೂ ಮಾಡಿ ತಡೆಯಬೇಕೆಂದು ದುರ್ಯೋಧನನು ಕರ್ಣನಲ್ಲಿ ಕೇಳಿಕೊಳ್ಳುತ್ತಾನೆ. ಆದರೆ ಕರ್ಣನೇ ಅಸಹಾಯಕನಾಗಿದ್ದ. ಯಾಕೆಂದರೆ ಕರ್ಣನ ಸಾಧಾರಣ ಅಸ್ತ್ರಗಳ ಕೈಗೆ ಸಿಗದೆ ಘಟೋತ್ಕಚ ತಪ್ಪಿಸಿಕೊಳ್ಳುತ್ತಿದ್ದ. ಮಾಡಲು ತೋಚದ ದುರ್ಯೋಧನ, ಆ ಹೊತ್ತಿನಲ್ಲಿ ಇಂದ್ರಾಸ್ತ್ರ ಪ್ರಯೋಗಿಸಿ ಘಟೋತ್ಕಚನನ್ನು ನಿವಾರಿಸಲು ಕೇಳಿಕೊಳ್ಳುತ್ತಾನೆ.

ಆದರೆ ಕರ್ಣ ಅರ್ಜುನನಿಗಾಗಿ ಅಸ್ತ್ರವೆಂದು ಆತ ವಾದಿಸುತ್ತಾನೆ. ದುರ್ಯೋದನ ಹಠ ದುರ್ಯೋಧನ ಕರ್ಣನನ್ನು ಅನುಮಾನಿಸುವಷ್ಟರ ಮಟ್ಟಿಗೆ ಪರಿಸ್ಥಿತಿ ಹೋಗುತ್ತದೆ. ಆಗ ವಿಧಿಯಿಲ್ಲದೆ ಕರ್ಣನು ಇಂದ್ರನ ದಯಪಾಲಿಸಿದ್ದ ವಾಸುಕಿ ಅಸ್ತ್ರ ವನ್ನು ಘಟೋತ್ಕಚನೆ ಎದೆಗೆ ಹೂಡುತ್ತಾನೆ. ವಾಸುಕಿ ಅಸ್ತ್ರವು ಘಟೋತ್ಕಚನ ಪ್ರಾಣವನ್ನು ಕಿತ್ತುಕೊಂಡು ಸಾಗುತ್ತದೆ. ಸಾಯುವ ಮೊದಲು ಘಟೋತ್ಕಚನು ತನ್ನ ದೇಹವನ್ನು ಹಿಗ್ಗಿಸಿಕೊಂಡು ಕೌರವರ ಸೈನ್ಯದ ಮೇಲೆ ಬಿದ್ದು ಬಿಡುತ್ತಾನೆ. ಆ ಮೂಲಕ ಕೌರವರ ಒಂದು ಅಕ್ಷೋಹಿಣಿ ಸೈನ್ಯವನ್ನು ನಾಶಪಡಿಸುತ್ತಾನೆ ಘಟೋತ್ಕಚ.

ಅವತ್ತು ಅರ್ಜುನ ತನ್ನ ಕೌಮಾರ್ಯದ ಮಗನನ್ನು ಕಳೆದುಕೊಂಡಿದ್ದ. ಇವತ್ತು ಭೀಮ ತಾನೆಂದೂ ಆರೈಕೆ ಮಾಡದ ತನ್ನ ಮಗನನ್ನ ತನ್ನ ಸ್ವಾರ್ಥಕ್ಕೆ ಬಲಿ ಹಾಕಿದ್ದ. ಕೌರವ ಪಾಂಡವರ ಯುದ್ಧಕ್ಕೆ ಎರಡೂ ಕಡೆಯ ಎಳೆಯ ಜೀವಗಳು ಸಮಿಧೆಯಾಗಿ ಹೋಗುತ್ತವೆ. ಕಥೆಯು, ನಡೆದ ಎಲ್ಲ ಘಟನೆಗಳಿಗೂ ಎಲ್ಲದಕ್ಕೂ ಕಾರಣ ಕೊಡಬಹುದು. ಇತ್ತ ಹಿಡಿ೦ಬಿಗೆ, ಅತ್ತ ಮೊನ್ನೆ ಸತ್ತ ಅಭಿಮನ್ಯುವಿನ ತಾಯಿ ಸುಭದ್ರೆಯ ಹೊಕ್ಕುಳ ಬಳ್ಳಿಯ ಕಿವಿಚು ಯಾರಿಗೆ ಅರ್ಥವಾಗುತ್ತದೆ? ಅವರ ಹೆಂಡತಿಯರು ತಮ್ಮ ಬೇನೆಯನ್ನು ಯಾರಲ್ಲಿ ಹೇಳಿಕೊಳ್ಳಲಿ? ಅವರ ಮಕ್ಕಳಿಗೆ ಅಪ್ಪ ಮತ್ತೆ ಸಿಗುತ್ತಾನಾ? ಎಲ್ಲ ತಿಳಿದಿದೆಯೆನ್ನುವ ಶ್ರೀಕೃಷ್ಣನ ಲಾಜಿಕ್ಕೇ ಅರ್ಥವಾಗುವುದಿಲ್ಲ.

ಸುದರ್ಶನ್ ಬಿ.ಪ್ರವೀಣ್, ಬೆಳಾಲು

Leave a Reply

error: Content is protected !!
Scroll to Top
%d bloggers like this: