ಬ್ಯಾಚುಲರ್ಸ್ ರ ಬ್ರಹ್ಮಾಂಡ ರುಚಿಯ ಈ ಅಡುಗೆಯ ದಿನ ಪಕ್ಕದ ಮನೆ ಆಂಟೀರು ಅಡುಗೇನೇ ಮಾಡಲ್ಲ !!

ತುಂಡು ತಿಂಡಿಗೆ, ಸಾರು ಅನ್ನಕ್ಕೆ ಎಂಬ ಮಾತೇ ಇದೆ. ಏನೇ ಗಮ್ಮತ್ತು ಮಾಡಲಿ, ಕೊನೆಗೆ ಅನ್ನಕ್ಕೆ ಕಲಸಿಕೊಂಡು ಊಟ ಮಾಡಬೇಕಿದ್ದರೆ ಅದಕ್ಕೆ ಒಂದೋ ತಿಳಿಸಾರು- ರಸಂ ಆಗಬೇಕು, ಇಲ್ಲದೆ ಹೋದರೆ, ಸಾಂಬಾರ್ ಆಗಬೇಕು. ಬೇರಿನ್ನಾವ ಹೈ ಫೈ ತಿಂಡಿಗಳೂ ಇದರ ಪ್ರಾಮುಖ್ಯತೆಯನ್ನು ಸರಿಗಟ್ಟಲಾರದು. ಅಂತಹ ಒಂದು ಅಡುಗೆಯ ನಮ್ಮಇವತ್ತಿನ ಅತಿಥಿಯೇ ಮಿಕ್ಸೆಡ್ ವೆಜಿಟಬಲ್ ಸಾಂಬಾರ್ !

ಇದಕ್ಕೆ ನಾವು ಇಂಗ್ಲೀಷಿನಲ್ಲಿ ಅಂಡರ್ ರೇಟೆಡ್ ರಿಸೀಪಿ ಅಂತ ಕರೆಯಬಹುದು. ಬಹುಶ: ಇದರಷ್ಟು ಸಾರ್ವತ್ರಿಕವಾಗಿ ಮತ್ತು ಬಹೂಪಯೋಗದ ಅಡುಗೆ ಬೇರೊಂದಿರಲಿಕ್ಕೆ ಸಾಧ್ಯವಿಲ್ಲ. ಏನೇ ಮಾಡಿದರೂ – ಅನ್ನ, ಮುದ್ದೆ, ದೋಸೆ, ರೊಟ್ಟಿ ಎಲ್ಲದರ ಜತೆಗೂ ಮಿಂಗಲ್ ಆಗಿ ಆಯಾ ಸಂದರ್ಭಕ್ಕೆ ತಕ್ಕಂತೆ ರುಚಿಯನ್ನು ಕೊಡುವ ಆಹಾರ ಪದಾರ್ಥ ಈ ಮಿಕ್ಸೆಡ್ ವೆಜಿಟಬಲ್ ಸಾಂಬಾರ್. ರುಚಿಯಲ್ಲಿ, ಮಸಾಲೆ ಪದಾರ್ಥದ ಘಮದಲ್ಲಿ, ಅತ್ಯಂತ ಸುಲಭದ ತಯಾರಿಕಾ ವಿಧಾನದಲ್ಲಿ ಇದನ್ನು ಬೀಟ್ ಮಾಡುವವರಿಲ್ಲ.

ರುಬ್ಬದೆ ಮಾಡುವ ಇಂತಹಾ ಸಾಂಬಾರ್ ಅನ್ನು ಹೆಚ್ಚಾಗಿ ಬ್ಯಾಚುಲರ್ ಗಳು ಮಾಡುತ್ತಾರೆ. ಹೇಗೂ ಸಾಂಬಾರ್ ಮಾಡುತ್ತೀರಿ ; ಸ್ವಲ್ಪ ಜಾಸ್ತಿನೇ ಮಾಡಿ. ಪಕ್ಕದ ಮನೆಯ ಆಂಟಿಯರಿಗೂ ನಿಮ್ಮಅಡುಗೆಯ ಕೈರುಚಿ ತಿಳಿಯಲಿ.

ಬೇಕಾಗುವ ಸಾಮಾನುಗಳು :

1) ತರಕಾರಿ : 400 ಗ್ರಾಂ
2) ತೊಗರಿ ಬೇಳೆ : 75 ಗ್ರಾಂ
3) ಈರುಳ್ಳಿ : 2 ದೊಡ್ಡ ಗಾತ್ರದ್ದು
4) ಟೊಮೇಟೊ : 2 ದೊಡ್ಡ ಗಾತ್ರದ್ದು
5) ಸಾಂಬಾರ್ ಪೌಡರ್ : 2 ಚಮಚ
6) ಧನಿಯಾ ಪೌಡರ್ : 2 ಚಮಚ
7) ಅರಿಶಿನ ಪೌಡರ್ : 1/2 ಚಮಚ
8) ಮೆಣಸಿನ ಪುಡಿ : 1 1/2 ಚಮಚ
9) ಬೆಳ್ಳುಳ್ಳಿ : 8 ಎಸಳು
10) ಸಾಸಿವೆ : 1 ಚಮಚ
11) ಶುಂಠಿ ಬೆಳ್ಳುಳ್ಳಿ ಪೇಸ್ಟ್: 1/2 ಚಮಚ
12) ಉಪ್ಪು : ರುಚಿಗೆ ತಕ್ಕಷ್ಟು
13) ಕೊತ್ತಂಬರಿ ಸೊಪ್ಪು : ಅರ್ಧ ಕಟ್ಟು

ಮಾಡುವ ವಿಧಾನ :

ಬೀನ್ಸ್, ಬೀಟ್ ರೂಟ್, ಕ್ಯಾರೆಟ್, ಆಲೂಗಡ್ಡೆ -ಇವು ಒಂದು ಕಾಂಬಿನೇಷನ್ ( ಬೀನ್ಸ್ 50 % ಇರಲಿ, ಕ್ಯಾರೆಟ್ ಮತ್ತು ಆಲೂಗಡ್ಡೆ ಕೇವಲ 25 % ನ ಒಳಗೆ ಇರಬೇಕು. ಕ್ಯಾರೆಟ್ ಜಾಸ್ತಿ ಆದರೆ ಸಾಂಬಾರ್ ಸ್ವೀಟ್ ಆಗಿ ಚೆನ್ನಾಗಿ ಬರುವುದಿಲ್ಲ. )
ನುಗ್ಗೆಕಾಯಿ, ಬದನೆ – ಇನ್ನೊಂದು ಕಾಂಬಿನೇಷನ್
1) ತರಕಾರಿಯನ್ನು ತೊಳೆದು ತುಂಡರಿಸಿಟ್ಟುಕೊಳ್ಳಿ. ತುಂಡು ಮಧ್ಯಮ-ಸಣ್ಣ ಗಾತ್ರದಲ್ಲಿರಲಿ
2) ತೊಗರಿ ಬೇಳೆ ಯನ್ನು ಚೆನ್ನಾಗಿ ತೊಳೆದು ಮುಕ್ಕಾಲುಗಂಟೆ ನೆನೆಸಿಟ್ಟುಕೊಳ್ಳಿ
3) ಹಸಿಮೆಣಸನ್ನು ಉದ್ದುದ್ದಕ್ಕೆ ತುಂಡರಿಸಿಡಿ. (ಎರಡೇ ತುಂಡು)
4) ಒಂದು ಮಧ್ಯಮ ಗಾತ್ರದ ಈರುಳ್ಳಿಯನ್ನು ಮೂರು ತುಂಡು ಮಾಡಿ
5) ನಾಲ್ಕು ದೊಡ್ಡ ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಇಡಿ
6) ಎರಡು ದೊಡ್ಡ ಗಾತ್ರದ ಟೊಮ್ಯಾಟೊವನ್ನು ದೊಡ್ಡದಾಗಿ ತುಂಡರಿಸಿ ಇಟ್ಟುಕೊಳ್ಳಿ. ಒಂದು ಟೊಮೇಟೊ ವನ್ನು ನಾಲ್ಕು ತುಂಡು ಮಾಡಿದರೆ ಸಾಕು.
7) ತೊಗರಿಬೇಳೆ, ಹಸಿಮೆಣಸು, ಈರುಳ್ಳಿ, ಬೆಳ್ಳುಳ್ಳಿ, ತುಂಡರಿಸಿದ ತರಕಾರಿ ಮತ್ತು ರುಚಿಗೆ ತಕ್ಕ ಉಪ್ಪನ್ನು ಕುಕ್ಕರಿನ ಕಂಟೈನರ್ ನಲ್ಲಿ ಹಾಕಿ. ಅಗತ್ಯಕ್ಕೆ ತಕ್ಕಷ್ಟು ಸ್ವಲ್ಪ ನೀರು ಹಾಕಿ (ಸುಮಾರು 1 ಗ್ಲಾಸು) ಎರಡು ವಿಶಲ್ ಹಾಕಿಸಿ.
8) ಈಗ ಒಂದು ದೊಡ್ಡ ಈರುಳ್ಳಿ ಸಣ್ಣಗೆ ಹೆಚ್ಚಿಟ್ಟುಕೊಳ್ಳಿ.
9) ಒಲೆಯಲ್ಲಿ ದಪ್ಪ ತಳದ ಪಾತ್ರೆಯನ್ನಿಟ್ಟು ಅದಕ್ಕೆ ಎಣ್ಣೆ ಹಾಕಿ ನಿಧಾನವಾದ ಉರಿಯಲ್ಲಿ ಬಿಸಿಮಾಡಿ. ಆಗ, ಸಾಸಿವೆ, ಬೆಳ್ಳುಳ್ಳಿ ಜಜ್ಜಿದ್ದು ಮೂರು ಎಸಳು ಹಾಕಿ. ಸಾಸಿವೆ ಸಿಡಿಯುತ್ತಿರುವಾಗ ಈರುಳ್ಳಿ ಸೇರಿಸಿ. ಅವಾಗಾವಾಗ ಕಲಸುತ್ತಿರಿ.
10) ಈರುಳ್ಳಿ ಇನ್ನೇನು ಕೆಂಪಾಗುತ್ತಿದೆ ಅನ್ನಿಸುವಾಗ ಅರ್ಧ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಅರ್ಧ ನಿಮಿಷ ಕುದಿಸಿಕೊಳ್ಳಿ.
11) ಕುಕ್ಕರಿನಲ್ಲಿ ಬೇಯಿಸಿದ್ದ ತರಕಾರಿಯ ನೀರನ್ನು ಬಸಿದು ತರಕಾರಿಯನ್ನು ಮಾತ್ರ ಬಾಣಲೆಗೆ ಹಾಕಿ. ಟೊಮ್ಯಾಟೊವನ್ನು ಬೇಕಿದ್ದರೆ ಸ್ವಲ್ಪ ಹಿಚುಕಿಕೊಳ್ಳಿ. ತರಕಾರಿ ಬೇಯಿಸಿದ ನೀರು ಹಾಕಬಾರದು. ಅದನ್ನು ಮುಂದಕ್ಕೆ ಬಳಸಿಕೊಳ್ಳೋಣ.
12) ಬಾಣಲೆಯಲ್ಲಿ ಒಂದು ಮಿಕ್ಸ್ ಕೊಡಿ ಮತ್ತು ಕುದಿ ಏಳಲಿ.
13) ಈಗ ಇದಕ್ಕೆ ಅರ್ಧ ಚಮಚ ಅರಿಶಿನಪುಡಿ, ಎರಡು ಚಮಚ ಸಾಂಬಾರ್ ಪುಡಿ ಹಾಕಿ. ಒಂದರಿಂದ ಎರಡು ಚಮಚ ಕೆಂಪು ಮೆಣಸಿನ ಪುಡಿ ( ನಿಮ್ಮಖಾರದ ಅಂದಾಜಿಗೆ ), ಅಗತ್ಯಕ್ಕೆ ತಕ್ಕಷ್ಟು ನೀರು ಮತ್ತು ಉಪ್ಪು ಹಾಕಿ ಚೆನ್ನಾಗಿ 6 ರಿಂದ 8 ನಿಮಿಷ ಚೆನ್ನಾಗಿ ಕುದಿಸಿ. ಬಾಣಲೆಯ ಮುಚ್ಚಳ ಮುಚ್ಚಿರಿ.
14) ಈಗ ಎರಡು ಚಮಚ ಧನಿಯಾ ಪುಡಿ ಬೆರೆಸಿ ಚೆನ್ನಾಗಿ ಕುಡಿಯಲು ಬಿಡಿ. ಈಗ ಸಾಂಬಾರ್ ಘಮ ಬಿಡಲು ಪ್ರಾರಂಭವಾಗುತ್ತದೆ.
15) ಉಪ್ಪು ಖಾರ ರುಚಿ ನೋಡಿ. ಎಲ್ಲ ಸರಿಯಾಗಿದೆಯೆಂದು ಖಾತ್ರಿಪಡಿಸಿಕೊಂಡ ನಂತರ ಹೆಚ್ಚಿದ ಎಳೆಯ ಕೊತ್ತಂಬರಿ ಸೊಪ್ಪು ಬೆರಿಸಿ ಸೌಟು ಆಡಿಸಿ ಮತ್ತೊಂದು ನಿಮಿಷದೊಳಗೆ ಕೆಳಗಿಳಿಸಿ. ಮುಚ್ಚಳ ಮುಚ್ಚಿಯೇ ಇರಲಿ. ಸಾಂಬಾರಿನ ಘಮ ಲಾಕ್ ಆಗಿರಲಿ.

ಆಗ ತಾನೇ ಮಾಡಿದ ಬಿಸಿ ಬಿಸಿ ವೈಟ್ ರೈಸಿನ ಜತೆ ಗಡದ್ದಾಗಿ ಊಟ ಮಾಡಿ. ಮರೆಯದೆ ಪಕ್ಕದ ಮನೆಯವರಿಗೂ ಈ ಅದ್ಬುತ ಕೈಯಡುಗೆ ಉಣಬಡಿಸಿ.

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.