BJP: ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ ಕಲಿಸಿದ ಪಾಠ!

ನೀವು ನನ್ನ ಹಿಂದಿನ ಸಾಧನೆ ಟು ಅಹಂಕಾರ ಟು ಸರ್ವನಾಶ ಲೇಖನ ಓದಿದ್ದೀರಿ ಅಂದುಕೊಳ್ತೇನೆ. ಯಥಾವತ್ ಹಾಗೆಯೇ ಆಗುತ್ತಿದೆ. ಅಹಂಕಾರದಿಂದ ಉಂಟಾಗಬಹುದಾದ ಸರ್ವನಾಶದಿಂದ ಮೇಲೆತ್ತುವ ಕೆಲಸವನ್ನು ಮೋದಿಯವರ ಛರಿಸ್ಮಾ ಮಾಡಿದೆಯಾದರೂ, ಅದು ಪೂರ್ತಿ ಸಕ್ಸಸ್ ಆಗಿಲ್ಲ.
ಈ ಸಲ ಕೂಡ ಬಿ ಜೆ ಪಿ ತನಗೆ ಯಾರೂ ಎದುರಿಲ್ಲ ಎಂದು ಬೀಗಿತ್ತು. ಮಹಾರಾಷ್ಟ್ತ್ರ ಮತ್ತು ಹರ್ಯಾಣ ಎರಡರಲ್ಲೂ, ಬಿಜೆಪಿ ಕ್ಲೀನ್ ಸ್ವೀಪ್ ಮಾಡುತ್ತದೆಂದು ಬಿಜೆಪಿಯಂತೆಯೇ ನಡೆದ ಎಲ್ಲ ಎಕ್ಸಿಟ್ ಪೋಲ್ ಗಳು ಕೂಡ ಹೇಳಿದ್ದವು. ಆದರೆ ಗುಪ್ತಗಾಮಿನಿ ಮತದಾರನ ಮನದಿಂಗಿತವನ್ನು ಬಲ್ಲವರಾರು.
ಮಹಾರಾಷ್ಟ್ರ ಚುನಾವಣೆ :
ಕಳೆದ 21014 ರ ಚುನಾವಣೆಯಲ್ಲಿ ಬಿಜೆಪಿ ಶಿವಸೇನೆಯ ಮೈತ್ರಿಕೂಟವು 185 ಸೀಟುಗಳನ್ನು ಪಡೆದಿತ್ತು. ಕಾಂಗ್ರೆಸ್ 87 ಸೀಟಿಗಷ್ಟೇ ತೃಪ್ತವಾಗಿತ್ತು. ಇತರರು ಗರಿಷ್ಟ 16 ಸೀಟುಗಳನ್ನು ಪಡೆದಿದ್ದರು. ಆದರೆ ಈ ಸಲ, 288 ಸಂಖ್ಯಾಬಲದ ವಿಧಾನಸಭೆಯಲ್ಲಿ, ಬಿಜೆಪಿ-ಶಿವಸೇನೆ ಮೈತ್ರಿಕೂಟವು 22 ಸೀಟುಗಳನ್ನು ಕಳೆದುಕೊಂಡಿದೆ.ಕಾಂಗ್ರೆಸ್ ಹೆಚ್ಚುವರಿಯಾಗಿ 16 ಸೀಟುಗಳನ್ನು ಪಡೆಯಿದೆ. ಈ ಸಲ ಇತರರ ಸಂಖ್ಯೆ 16ರಿಂದ 25 ಕ್ಕೆ ಜಿಗಿದಿದೆ. ಅಂದರೆ ಬಿಜೆಪಿ ಮೈತ್ರಿಕೂಟ ಸರಿಸುಮಾರು 13.5 % ಕಡಿಮೆ ಸೀಟನ್ನೂ, ಅದೇ ಕಾಂಗ್ರೆಸ್ 15% ಹೆಚ್ಚುವರಿ ಸೀಟನ್ನೂ ಪಡೆದಿದೆ. ಅಂದರೆ ಬಿಜೆಪಿ ಮೈತ್ರಿಕೂಟದ ಎಲ್ಲ ಕಳೆದುಕೊಂಡ ಸೀಟುಗಳು ನೇರ ಕಾಂಗ್ರೆಸ್ ನ ಅಕೌಂಟ್ ಗೆ ಹೋಗಿ ಜಮೆಯಾಗಿವೆ ಎನ್ನಬಹುದು. ಅಲ್ಲದೆ 6 ಸೀಟುಗಳು (ಮೈತ್ರಿಕೂಟದ ಪ್ರತಿಶತ 3) ಇತರರ ದವಡೆಗೆ ಹೋಗಿ ಬಿದ್ದಿದೆ. ಇದು ಸ್ಪಷ್ಟವಾಗಿಯೂ ಡೇಂಜರ್ ಜೋನ್ ನ ಬಾಗಿಲಿನಲ್ಲಿ ಹೋಗಿ ನಿಂತ ಸಂಕೇತ !

2004 ರಲ್ಲಿ ಬಿಜೆಪಿಯು 122 ಸೀಟುಗಳನ್ನು ಪಡೆದಿದ್ದರೆ ಈ ಸಲ ಬಿಜೆಪಿಗೆ ಒಟ್ಟು 17 ಸ್ಥಾನಗಳು ಖೋಟಾ ಆಗಿವೆ. ಶಿವಸೇನೆ ಕಳೆದ ಸಲ 56 ಸ್ಥಾನಗಲ್ಲಿ ನಿಂತಿದ್ದಾರೆ, ಈ ಸಲ ಅದು 63 ಸ್ಥಾನಗಳಿಗೆ ಬಂದು ನಿಂತು ( extra 7 ಸ್ಥಾನಗಳು ) ಬಲ ಹೆಚ್ಚಿಸಿಕೊಂಡಿದೆ. ಒಂದು ಚುನಾವಣೆಯಲ್ಲಿ, ಅದೂ ಮೈತ್ರಿ ಮಾಡಿಕೊಂಡ ಸಂದರ್ಭಗಳಲ್ಲಿ, ಇಂತಿಷ್ಟೇ ಸೀಟುಗಳನ್ನು ಪಡೆಯಬಹುದೆಂದು ಪಕ್ಕಾ ಆಗಿ ಹೇಳಲಾಗುವುದಿಲ್ಲ. ಆಂತರಿಕವಾಗಿ ಹಲವು ಅನುಸಂಧಾನಗಳು,ಒಪ್ಪಂದಗಳು,ಹೊಂದಾಣಿಕೆಗಳು ನಡೆಯುತ್ತಿರುತ್ತವೆ. ಈ ಸಲ ಕೂಡ ಅಂತದ್ದು ಅಲ್ಲಿ ನಡೆದಿರಬಹುದು. ಆದ್ದರಿಂದ ಕಾಂಗ್ರೆಸ್ ಹೇಳುವಂತೆ, ಇದು ನರೇಂದ್ರ ಮೋದಿಯ ಆಡಳಿತ ದ ಮೇಲಿನ ಜನರ ತಿರಸ್ಕಾರವೆಂದು ಹೇಳುವುದಕ್ಕೆ ಆಗುವುದಿಲ್ಲ. ಆದರೆ, ಕಾಂಗ್ರೆಸ್ ನ ಬಹಳಷ್ಟು ನಾಯಕರುಗಳು ಬಿಜೆಪಿ ಸೇರಿದ್ದರು. ಕಾಂಗ್ರೆಸ್ ನ ಪ್ರತಿಪಕ್ಷದ ನಾಯಕರೇ ಬಿಜೆಪಿ ಸೇರಿದ್ದರು. ಅತ್ತ ನರೇಂದ್ರ ಮೋದಿ ಆರ್ಟಿಕಲ್ 370 ರದ್ದು ಮಾಡಿ, ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶೇಕಡಾ 13 % ಸೀಟುಗಳು ಮೈತ್ರಿಕೂಟಕ್ಕೆ ಕಡಿಮೆಯಾಗಿವೆ. (ಬಿಜೆಪಿಗೆ ಕೂಡ 14 % ಸೀಟು ಕಡಿಮೆಯಾಗಿದೆ.) ಇದರ ಅರ್ಥವೇನು? ಒಂದಂತೂ ನಿಜ, ಜನರು, ರಾಷ್ಟ್ರೀಯತೆಯ ಅಜೆಂಡಾ ಒಂದನ್ನೇ ನೆಚ್ಚಿಕೊಂಡು ತಮಗಿಷ್ಟವಾದ ಸರ್ಕಾರವನ್ನು ಆಯ್ಕೆ ಮಾಡುವುದಿಲ್ಲ. ಅವರು ಬೇರೇನನ್ನು ನೋಡುತ್ತಿದ್ದಾರೆ. ಅದು ತಮ್ಮ ಸುತ್ತ ಲೋಕಲ್ ಸಮಸ್ಯೆಗಳಿರಬಹುದು, ನೀರಿನ ತೊಂದರೆಗಳಿರಬಹುದು ಅಥವಾ ತನ್ನ ಕ್ಷೇತ್ರದ ಜನಪ್ರತಿನಿಧಿಯ ನಡವಳಿಕೆಯನ್ನು ಇರಬಹುದು. ಮಹಾರಾಷ್ಟ್ರದಲ್ಲಿ ಕಾಂಗೆಸ್ಸ್ ನಿಂದ ಬೇರೆ ಪಕ್ಷಗಳಿಗೆ ಸಾಂಕ್ರಾಮಿಕವಾಗಿ ವಲಸೆ ಹೋದುದನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ, ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಪಕ್ಷಾಂತರಿಗಳಿಗೆ ಸೋಲಾಗಿದೆ. ಜನರು ತಾವು ಪ್ರಜ್ಞಾವಂತರು ಎಂದು ಮತ್ತೆ ಪ್ರೂವ್ ಮಾಡಿದ್ದಾರೆ.
ಈಗ ನಡೆದದ್ದು ವಿಧಾನ ಸಭೆಯ ಚುನಾವಣೆ. ಇಲ್ಲಿ ರಾಷ್ಟ್ರೀತೆಯ ಅಜೆಂಡಾ ಕೆಲಸ ಮಾಡಲ್ಲ ಅಂತಲ್ಲ, ಅದರ ಪ್ರಭಾವ ಕಮ್ಮಿ. ಇದನ್ನು,ಮಹಾರಾಷ್ಟ್ರದ ಚುನಾವಣಾ ಫಲಿತಾಂಶವನ್ನು ಮುಂದಿಟ್ಟುಕೊಂಡು, ಬಿಜೆಪಿಯನ್ನು ಜನರು ತಿರಸ್ಕರಿಸಿದರೆಂತಲ್ಲ. ಆದರೆ ಇದು ಬಿಜೆಪಿಗೆ ಕಟ್ಟೆಚ್ಚರದ ಗಂಟೆ. ಬಿಜೆಪಿಯವರು ಹೆಚ್ಚಿನ ಸಂದರ್ಭದಲ್ಲಿ ರಿಯಾಕ್ಟಿವ್ ಆಗಿರುತ್ತಾರೆ. ಎಚ್ಚರಿಕೆಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದು ಅವರಿಗೆ ಗೊತ್ತು. ಹಾಗೊಂದು ವೇಳೆ ಬಿಜೆಪಿ ನೆಗ್ಲೆಕ್ಟ್ ಮಾಡಿದ ಸಂಧರ್ಭಗಳಲ್ಲಿ ಅವರನ್ನು ಎಚ್ಚರಿಸುವ ಕೆಲಸವನ್ನು ಸಂಘ ಪರಿವಾರ ಮಾಡುತ್ತಾ ಬಂದಿದೆ. ಆದರೆ ಕಾಂಗ್ರೆಸ್ ಏನು ಮಾಡುತ್ತದೆ ಎಂಬುದನ್ನು ನಾನು ಈಗಲೇ ಹೇಳುತ್ತೇನೆ,ಬೇಕಾದರೆ ಬರೆದಿಟ್ಟುಕೊಳ್ಳಿ.
ಇವತ್ತಿನ ಸ್ವಲ್ಪ ಚೇತರಿಕೆಯನ್ನು, ”ನೋಡಿ, ನರೇಂದ್ರ ಮೋದಿಯನ್ನು ಜನ ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ನ್ನು ಕೈ ಹಿಡಿದಿದ್ದಾರೆ” ಇದನ್ನೇ ಒಂದಲ್ಲ ನೂರು ಸಲ, ಬೇರೆ ಬೇರೆ ರೀತಿಯಲ್ಲಿ ಹೇಳಿಕೊಂಡು ತಿರುಗಾಡುತ್ತಾರೆ. ಇವತ್ತು ಆದದ್ದು ಇವತ್ತಿಗೆ. ನಾಳೆಯ ಬಗ್ಗೆ ಯೋಚಿಸಿ ಪಕ್ಷವನ್ನು ಗಟ್ಟಿಗೊಳಿಸಲು ಅವರೆಂದೂ ಕಾರ್ಯೋನ್ಮುಖರಾಗುವುದಿಲ್ಲ. ಮತ್ತಷ್ಟು ಜನರನ್ನು ತಲುಪಲು ಇನ್ನಷ್ಟು ಪ್ರಯತ್ನಿಸುವುದಿಲ್ಲ.”

ಹರಿಯಾಣ ಚುನಾವಣೆ :
ಬಿಜೆಪಿಯು ಹರಿಯಾಣದ ಚುನಾವಣೆಯಲ್ಲಿ ಗೆಲುವು ಹರಿವಾಣದಿಂದ ತಮ್ಮ ಜೋಳಿಗೆಗೆ ಬೀಳುವಷ್ಟು ಸುಲಭ ಅಂದುಕೊಂಡಿದ್ದರು. ಆದರೆ ಬಿಜೆಪಿಯು ಕಳೆದ ಸಲ 47 ಸೀಟು ಪಡೆದಿದ್ದರೆ, ಈ ಸಲ 7 ಸೀಟು ಕಳೆದುಕೊಂಡು 15% ಕಡಿಮೆ ಸ್ಥಾನಗಳನ್ನು ಪಡೆದುಕೊಂಡಿದೆ. ಸರಳ ಬಹುಮತಕ್ಕೆ 90 ಸಂಖ್ಯಾಬಲದ ಶಾಸನ ಸಭೆಗೆ ಬೇಕಾದದ್ದು 46 ಸೀಟು. ಅದನ್ನು ಕಳೆದ ಸಲ ಪಡೆದಿತ್ತು. ಈ ಸಲ ಅದಕ್ಕೆ 6 ಸೀಟುಗಳ ಅಗತ್ಯ ಇದೆ. ಇವತ್ತಿನ ಪರಿಸ್ಥಿತಿಯಲ್ಲಿ ಅದನ್ನು ಪಡೆಯಲು ಬಿಜೆಪಿಗೆ ಕಷ್ಟವಾಗುವುದಿಲ್ಲ. ಅತ್ತ 19 ಜನ ಇತರ/ಪಕ್ಷೇತರಿದ್ದಾರೆ. ಅವರಲ್ಲಿ ಕೆಲವರು ಈಗಾಗಲೇ ಬಿಜೆಪಿಯ ನಾಯಕರ ಜತೆ ಸಂಪರ್ಕದಲ್ಲಿದ್ದಾರೆ. ಅಲ್ಲದೆ 31 ರ ಹರೆಯದ ದೇವಿಲಾಲ್, ಓಂ ಪ್ರಕಾಶ ಚೌಟಾಲಾರ ವ೦ಶೋದ್ಧಾರಕ ದುಷ್ಯಂತ್ ಚೌಟಾಲಾ ( ಜೆಜೆಪಿ ಪಕ್ಷ ) ಕೈಲಿ 10 ಸೀಟುಗಳಿವೆ. ಆತ ಕಾಂಗ್ರೆಸ್ ಕಡೆಗೆ ಹೋದರೆ ಆತನಿಗೆ ಅದರಿಂದ ಅಷ್ಟೇನೂ ಗಿಟ್ಟುವುದು ಡೌಟ್. ಯಾಕೆಂದರೆ, 31 ಸೀಟಿನ ಕಾಂಗ್ರೆಸ್ ಸೇರಿದರೆ 41 ಸೀಟಾಗುತ್ತದೆ. ಮತ್ತೆ ಪಕ್ಷೇತರರ ಸಹಾಯ ಬೇಕಾಗುತ್ತದೆ. ಆದುದರಿಂದ ನೇರವಾಗಿ ಹೋಗಿ ಬಿಜೆಪಿಯ ಸಹವಾಸ ಮಾಡಿದರೆ ಜೆಜೆಪಿಗೆ ಅನುಕೂಲವೇ ಜಾಸ್ತಿ.
ಹರಿಯಾಣದಲ್ಲಿ ಕೂಡ ಸ್ಥಳೀಯ ಸಮಸ್ಯೆಗಳೇ ಮುನ್ನೆಲೆಗೆ ಬಂದಿದೆ, ಮತ್ತು ಇದ್ದು ಒಟ್ಟಾರೆ ನರೇಂದ್ರ ಮೋದಿಯ ಆಡಳಿತದ ಮೇಲಿನ ರಿಪೋರ್ಟ್ ಕಾರ್ಡ್ ಅಂತ ಹೇಳಲಿಕ್ಕಾಗುವುದಿಲ್ಲ.
ಆದರೆ ಗಂಟೆ ಬಾರಿಸಿದೆ. ಸೈರನ್ ಮೊಳಗಿದೆ. ಎಚ್ಚೆತ್ತುಕೊಳ್ಳುತ್ತ ಬಿಜೆಪಿ ಅಥವಾ ಮತ್ತೆ ನರೇಂದ್ರ ಮೋದಿಯ ಜುಬ್ಬಾದ ಚುಂಗು ಹಿಡಿದುಕೊಳ್ಳುತ್ತ ರಕ್ಷಣೆ ಪಡೆಯಲು ಹವಣಿಸಿ ಭವಿಷ್ಯದಲ್ಲಿ ಏಟು ತಿನ್ನುತ್ತಾ? ಅದು ಬಿಜೆಪಿಗೆ ಬಿಟ್ಟ ವಿಚಾರ. ಆದರೆ ಒಂದಂತೂ ಸ್ಪಷ್ಟವಾಗಿದೆ: ಕಾನ್ಸೆಪ್ಟ್ ರಾಜಕೀಯ, ಅಭಿವೃದ್ಧಿ ರಾಜಕೀಯ, ಸ್ಥಳೀಯ ಸಮಸ್ಯೆಗೆ ಸ್ಪಂದನೆ,ಒಡನಾಟ ರಾಜಕೀಯ ಮತ್ತು ಸ್ಥಳೀಯ ನಾಯಕರ ವ್ಯಕ್ತಿತ್ವ-ಎಲ್ಲವೂ ಭಾರತದ ಚುನಾವಣಾ ರಾಜಕ್ಕೀಯಕ್ಕೆ ಬೇಕು. ಬ್ಯಾಲೆನ್ಸ್ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ! ಈ ಎರಡು ವಿಧಾನ ಸಭೆಯ ಚುನಾವಣೆಯಿಂದ ಕರ್ನಾಟಕಕ್ಕೇ ರಾಜಕೀಯವಾಗಿ ದೊಡ್ಡ ಲಾಭವಾಗಲಿದೆ.

 

 

Leave A Reply

Your email address will not be published.