Home Interesting ಅಡಿಕೆಗೆ ಎಲೆಚುಕ್ಕಿ ರೋಗ : ಈ ರೀತಿಯಿಂದ ನಿಯಂತ್ರಣ ಸಾಧ್ಯ

ಅಡಿಕೆಗೆ ಎಲೆಚುಕ್ಕಿ ರೋಗ : ಈ ರೀತಿಯಿಂದ ನಿಯಂತ್ರಣ ಸಾಧ್ಯ

Hindu neighbor gifts plot of land

Hindu neighbour gifts land to Muslim journalist

ಅಡಿಕೆ ಬೆಳೆಗೆ ಬಾಧಿಸಿದ ಎಲೆ ಚುಕ್ಕೆ ರೋಗವು ಕರಾವಳಿ ಹಾಗೂ ಮಲೆನಾಡು ಭಾಗದ ರೈತರನ್ನು ಬಾಧಿಸುತ್ತಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ 1964ರಲ್ಲಿಯೇ ಈ ರೋಗ ಕಂಡು ಬಂದಿದ್ದು, ಅಡಿಕೆ ಬೆಳೆಗೆ ಹಾನಿಯನ್ನುಂಟು ಮಾಡುತ್ತಿದೆ.

ಮಲೆನಾಡಿನ ಸಸಿ ತೋಟಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಈ ರೋಗವು ಇತ್ತೀಚಿನ ಕೆಲ ವರ್ಷಗಳಲ್ಲಿ ಫಸಲು ಕೊಡುತ್ತಿರುವ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಅಡಿಕೆ ಗಿಡಗಳ ಎಲೆಗಳಲ್ಲಿ ದ್ಯುತಿ ಸಂಶ್ಲೇಷಣ ಪ್ರಕ್ರಿಯೆಗೆ ಹಾನಿ ಉಂಟು ಮಾಡುತ್ತಿರುವ ಹಿನ್ನೆಲೆ ಇಳುವರಿ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.

ಕುಂದಾಪುರ ಗ್ರಾಮಾಂತರ ಭಾಗದ ಹಳ್ಳಿಹೊಳೆ, ಯಡಮೊಗೆ ಭಾಗದಲ್ಲಿ ವಿಜ್ಞಾನಿಗಳ ಸಲಹೆಯ ಅನುಸಾರ ರೈತರು ಔಷಧ ಸಿಂಪಡಣೆ ಸಹಿತ ಕೆಲವೊಂದು ಕ್ರಮಗಳನ್ನು ಕೈಗೊಳ್ಳುವ ಮೂಲಕ ಎಲೆಚುಕ್ಕಿ ರೋಗವನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ಸು ಕಂಡಿದ್ದಾರೆ.

ಅಡಿಕೆ ಸೋಗೆಯಲ್ಲಿ ಹಳದಿ ಬಣ್ಣದ ಅಂಚುಗಳಿರುವ ಬೂದು ಬಣ್ಣದ ಚುಕ್ಕೆಗಳು ಕಂಡು ಬರುತ್ತದೆ. ಸೋಗೆಗಳಲ್ಲಿ ಚುಕ್ಕೆಗಳು ಹೆಚ್ಚಾದಂತೆ ಒಂದಕ್ಕೊಂದು ಕೂಡಿಕೊಂಡು ಒಣಗಿದ ಸೋಗೆಗಳು ಸುಟ್ಟಂತೆ ಕಂಡು ಬರುತ್ತದೆ. ಈ ಚುಕ್ಕೆ ರೋಗವು ತೋಟದಿಂದ ತೋಟಕ್ಕೆ ಹರಡಬಹುದು.ರೋಗ ಬಂದಿರುವ ಗಿಡಗಳಲ್ಲಿ ಫಸಲು ಕಡಿಮೆಯಾಗಿ ಇಳುವರಿ ಕುಂಠಿತವಾಗುತ್ತದೆ.

ಕಡಿಮೆ ಉಷ್ಣಾಂಶ ಹಾಗೂ ಹೆಚ್ಚಿನ ಆದ್ರತೆಯಿಂದ ಕೂಡಿರುವ ವಾತಾವರಣದಲ್ಲಿ ಈ ರೋಗ ವೇಗವಾಗಿ ಹರಡುತ್ತದೆ. ಎಲೆ ಚುಕ್ಕಿ ರೋಗವು ಯಡಮೊಗೆ, ಹಳ್ಳಿಹೊಳೆ, ಕಮಲಶಿಲೆ, ಆಜ್ರಿ ಹಾಗೂ ಇನ್ನಿತರ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದು, ಸೆಪ್ಟಂಬರ್‌ನಲ್ಲಿ ರೋಗ ಬಾಧೆಯು ದೊಡ್ದ ಮಟ್ಟದಲ್ಲಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಅಲ್ಲಿನ ಸ್ಥಳೀಯ ರೊಬ್ಬರೂ ರೋಗವನ್ನು ತಡೆಯುವ ನಿಟ್ಟಿನಲ್ಲಿ ಬ್ರಹ್ಮಾವರ ಕೃಷಿ ವಿಜ್ಞಾನಿಗಳಿಂದ ಮಾಹಿತಿ ಪಡೆದು ಔಷಧ ಸಿಂಪಡಣೆ ಮಾಡಿದ ಪರಿಣಾಮ ರೋಗವು ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದೆ.

ಮಳೆಗಾಲ ಶುರುವಾಗುವ ಮೊದಲು, ಶೇ. 1ರ ಬೋಡೋ ದ್ರಾವಣವನ್ನು ಅಡಿಕೆ ಗೊನೆಗಳ ಜತೆಗೆ ಎಲೆಗಳು ಹಾಗೂ ಶಿರ ಭಾಗಗಳು ಸಂಪೂರ್ಣವಾಗಿ ನೆನೆಯುವ ಹಾಗೆ ಸಿಂಪಡಿಸಬೇಕು. ಮಣ್ಣು ಪರೀಕ್ಷೆ ಆಧಾರದ ಮೇಲೆ ಸಮರ್ಪಕವಾಗಿ ಪೋಷಕಾಂಶಗಳನ್ನು ನೀಡಬೇಕು. ಕನಿಷ್ಠ 3 ಬಾರಿ ಹಂತ ಹಂತವಾಗಿ ಸಿಂಪಡಿಸಬೇಕಾಗುತ್ತದೆ. ಯಾವುದೇ ಶಿಲೀಂಧ್ರ (propico nozol) ನಾಶಕ ಸಿಂಪಡಿಸುವ ವೇಳೆ ತೋಟದ ಶುಚಿತ್ವ ಹಾಗೂ ಮಳೆ ಬಾರದಿರುವ ಸಮಯ ನಿಗದಿ ಮಾಡಬೇಕು.

ಈ ರೋಗದ ನಿಯಂತ್ರಣವನ್ನು ರೈತರು ಒಗ್ಗೂಡಿ ಕ್ರಮ ಕೈಗೊಳ್ಳಬೇಕು.ಈ ನಿಟ್ಟಿನಲ್ಲಿ ಕುಂದಾಪುರ ಭಾಗದ ಕೃಷಿಕರು ಈಗಾಗಲೇ ಪ್ರಯತ್ನಕ್ಕೆ ಮುಂದಾಗಿದ್ದು ರೋಗದ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಕುಂದಾಪುರದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ನಿಧೀಶ್‌ ಕೆ.ಜಿ. ಅವರು ಮಾಹಿತಿ ನೀಡಿದ್ದಾರೆ.