ಆ ಇಪ್ಪತ್ತೊಂದು ದಿನಗಳ ಯಜ್ಞ ಪೂರೈಸದೆ ಹೋದರೆ 35 ಕೋಟಿ ಮರಣ !!
ಮೊನ್ನೆ ಪ್ರಧಾನಿ 21 ದಿನಗಳ ಕಾಲ ದೇಶಕ್ಕೆ ದೇಶವನ್ನೇ ಹಾಲ್ಟ್ ಮಾಡಿ ಆದೇಶ ಹೊರಡಿಸಿದ್ದಾರೆ. ದೇಶದ 138.7 ಕೋಟಿ ಜನ ಸಂಖ್ಯೆ ಇನ್ನು ಕಡ್ಡಾಯವಾಗಿ ಮೂರು ವಾರಗಳ ಕಾಲ ಮನೆಯಲ್ಲೇ ಕೂರಬೇಕಾಗಿದೆ. ಅಂದರೆ ಇನ್ನು 21 ದಿನ ನಮಗೆ ಒಂದು ಅರ್ಥದಲ್ಲಿ ಶಿಕ್ಷೆ. ಗೃಹಬಂಧನ. ಇದು ಅನಿವಾರ್ಯವಾಗಿರುವ ಶಿಕ್ಷೆ. ಇಲ್ಲದೆ ಹೋದರೆ ದೇಶ 21 ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆಯೆಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ. 21 ವರ್ಷ ಹಿಂದೆ ಅಂದರೆ ಏನದರ ಅರ್ಥ? ಅದರಲ್ಲೊಂದು ಗೂಡಾರ್ಥವಿದೆಯಾ ? ನೀವು ಅದನ್ನು ಗಮನಿಸಿದ್ದಿರೋ ಇಲ್ಲವೋ ಗೊತ್ತಿಲ್ಲ. ಗಮನಿಸದೆ ಇದ್ದವರಿಗೆ ನಾವೊಂದು ಲೆಕ್ಕಾಚಾರ ಹೇಳುತ್ತೇವೆ. ಮುಂದಕ್ಕೆ ಓದಿಕೊಳ್ಳಿ.
ಇವತ್ತಿನಿಂದ 21 ವರ್ಷಗಳ ಹಿಂದೆ ಅಂದರೆ ಅದು 1999 ರ ಇಸವಿ. ಆಗ ಇದ್ದ ಭಾರತದ ಜನಸಂಖ್ಯೆ 103.5 ಕೋಟಿಗಳು. ಇವತ್ತು ನಾವು ಎಚ್ಚೆತ್ತುಕೊಳ್ಳದೆ ಹೋದರೆ, ಈ ಕೋರೋನಾ ಎಂಬ ಮಹಾಮಾರಿ ನಮ್ಮನ್ನು ಆಕ್ರಮಿಸಿ, ತಿಂದು ಹಾಕುತ್ತದೆ. ನಮ್ಮಲ್ಲಿ ಈಗ ಇರುವ ಜನಸಂಖ್ಯೆ 138.7 ಕೋಟಿಗಳು. ಅಂದರೆ, ನಾವು ಸರಿಸುಮಾರು 25 % ನಷ್ಟು ನಮ್ಮ ನಾಗರಿಕರನ್ನು ನಾವು ಕಳೆದುಕೊಳ್ಳಲಿದ್ದೇವೆ !
ಅಂದರೆ ಭಾರತದಲ್ಲಿ ಒಟ್ಟು 35 ಕೋಟಿಗಳಷ್ಟು ಜನ ಸಾಯಲಿದ್ದಾರೆ. ಊಹಿಸಿಕೊಳ್ಳುವುದಕ್ಕೂ ಅಸಾಧ್ಯವಾದ ಸಂಖ್ಯೆ ಇದು. ಅಂದ್ರೆ, ನೂರರಲ್ಲಿ 35 ಜನ. ಹತ್ತರಲ್ಲಿ 3.5 ಜನ. ಹತ್ತು ಜನರ ಒಂದು ಕುಟುಂಬದಲ್ಲಿ 3.5 ಜನರು ಕೊರೋನಾ ರೋಗಕ್ಕೆ ಬಲಿಯಾಗಿ ಹೋಗುತ್ತಾರೆ. ಅಂದರೆ ಭಾರತದ, ಗಂಡ-ಹೆಂಡತಿ-ಇಬ್ಬರು ಮಕ್ಕಳಿರುವ ನ್ಯೂಕ್ಲಿಯಾರ್ ಕುಟುಂಬದ ಪ್ರತಿ ಕುಟುಂಬದಲ್ಲಿ, ಪ್ರತಿ ಮನೆಯಲ್ಲೂ ಕನಿಷ್ಠ ಒಂದು ಸಾವಾಗುತ್ತದೆ. ಅದು ನಮ್ಮ ಮನೆ ಇರಬಹುದು, ಪಕ್ಕದ ಮನೆಯೇ ಇರಬಹುದು : ಸರಾಸರಿ ಲೆಕ್ಕದಲ್ಲಿ ಪ್ರತಿ ಮನೆಗೂ ಒಂದು ಸಾವು ! ನಾವು ಅದಕ್ಕೆ ರೆಡಿ ಇದ್ದೇವಾ ? ರೆಡಿ ಅಂತ ಆದರೆ, ನಾವೆಲ್ಲಾ ಬೀದಿ ಸುತ್ತೋಣ. ಊರೂರು ತಿರುಗೋಣ. ರೋಡಿನಲ್ಲಿ ಬಲಿ ಬರೋಣ. ಪಾರ್ಕು ಕಟ್ಟೆಗಳಲ್ಲಿ ಕಟ್ಟೆಪೂಜೆ ಮಾಡೋಣ !!
ಈಗ ಕೊರೋನಾ ಹಬ್ಬುತ್ತಿರುವ ಸ್ಪೀಡು ನೋಡಿದರೆ ಭಯವಾಗುತ್ತದೆ. ಇಟಲಿಯಲ್ಲಿ ಫೆಬ್ರವರಿ 6 ಇದ್ದ ಒಟ್ಟು ಸೋಂಕಿತರು ಕೇವಲ ಮೂರು. ನಂತರ 20 ದಿನಗಳಲ್ಲಿ (ಫೆಬ್ರವರಿ 25 ರಂದು) ಒಟ್ಟು ಸೋಂಕಿತರು 322 ಮತ್ತು ಆವಾಗಲೇ ಹತ್ತು ಸಾವಾಗಿದೆ. ಮುಂದಕ್ಕೆ 20 ದಿನಗಳ ನಂತರ, ಅದೇ 322 ಇದ್ದ ಸೋಂಕ್ತರು ಏಕಾಏಕಿ 10149 ಆಗಿದ್ದರು ಮತ್ತು 631 ಜನರು ಗತ ಪ್ರಾಣರಾಗಿದ್ದರು. ಈ ಸಂಖ್ಯೆ, ನಿನ್ನೆಯ ದಿನದ ಕೊನೆಗೆ ( ಮಾರ್ಚ್ 24 ಕ್ಕೆ ) ಒಟ್ಟು ಸೋಂಕಿತರು 69176 ಮತ್ತು 6820 ಜನರ ಮರಣ ಮೃದಂಗವಾಗಿತ್ತು. ಇದು ಕೋರೋನಾ ಹಬ್ಬುವ ವೇಗ. ಒಬ್ಬನಿಂದ ಹತ್ತು – ಇಪ್ಪತ್ತು ಜನರಿಗೆ, ಇಪ್ಪತ್ತರಿಂದ ಇನ್ನೂರು ಜನರಿಗೆ, 2000, 20000, 2 ಲಕ್ಷ , 2 ಕೋಟಿ ….35 ಕೋಟಿ !! ಇದು ಕಾಂಪೌಂಡಿಂಗ್ ಆಗುತ್ತ ಆಗುತ್ತಾ ಚೈನ್ ಲಿಂಕ್ ಮೂಲಕ ಅತ್ಯಂತ ವೇಗವಾಗಿ ಬೆಳೆಯುತ್ತದೆ.
ಕರ್ನಾಟಕವೊಂದರಲ್ಲೇ 80,000 ಸೋಂಕಿತರು ಈಗಾಗ್ಲೇ ಇದ್ದಾರೆ ಎಂದು ವೈದ್ಯರ ತಂಡವೊಂದು ಲೆಕ್ಕಾಚಾರ ಹಾಕಿದೆಯಂತೆ. ಅಂದರೆ, ಭಾರತದ ಮಟ್ಟಿಗೆ ಲೆಕ್ಕ ಹಾಕಿದರೆ, ಈಗಾಗಲೇ ಇರುವ ಒಟ್ಟು ಸೋಂಕಿತರ ಸಂಖ್ಯೆ 1.5 ಕೋಟಿ. ಯಾರಿಗೆ ಗೊತ್ತು, ಆ ಪಟ್ಟಿಯಲ್ಲಿ ನನ್ನ ಹೆಸರೂ ಇರಬಹುದು. ಹಾಗಂತ ಭಯಪಡಬೇಕಿಲ್ಲ. ಕೊರೋನಾಗೆ ತುತ್ತಾದವರೆಲ್ಲ ಸಾಯುವುದಿಲ್ಲ. ಆದರೆ, ಒಮ್ಮೆಲೇ ಸಿಕ್ಕಾಪಟ್ಟೆ ಸೋಂಕಿತರು ಬಂದರೆ ಅವರನ್ನು ಶುಶ್ರೂಷೆ ಮಾಡಲು ಯಾವ ಆಸ್ಪತ್ರೆಯೂ ಇರುವುದಿಲ್ಲ ! ಅದಕ್ಕೆ, ತಕ್ಶಣ ಜಾಗ್ರತೆ ಬೇಕಿರುವುದು.
ಹುಟ್ಟಿದ ಯಾವ ಮನುಷ್ಯನೂ ಸಾಯಲು ಇಷ್ಟಪಡುವುದಿಲ್ಲ. ಸಾವು ಯಾರಿಗೂ ಬೇಡ. ಏನಾದರೂ ಮಾಡಿ, ಹೇಗಾದರೂ ಮಾಡಿ ಬದುಕಲು ಮನುಷ್ಯ ಇಷ್ಟಪಡುತ್ತಾನೆ. ಬದುಕಿನ ಮಹತ್ವ ಅರಿಯಬೇಕಿದ್ದರೆ, ಆಗ ಗಲ್ಲು ಶಿಕ್ಷೆಗೆ ಗುರಿಯಾದವನನ್ನು ಕೇಳಬೇಕು. ಮೊನ್ನೆ ಗಲ್ಲಿಗೆ ನೇತು ಬಿದ್ದ ನಿರ್ಭಯಾ ಹಂತಕರು, ಕಡೆಯ ಕ್ಷಣದವರೆಗೆ ಬದುಕಲೊಂದು ಬಳ್ಳಿಯ ನೆರವಿಗಾಗಿ ಪ್ರಯತ್ನ ಪಟ್ಟಿದ್ದರು. ಗಲ್ಲು ಶಿಕ್ಷೆಗೊಳಗಾಗುವ ಮುಂಜಾನೆ 3.30 ರ ವರೆಗೂ ಬದುಕಿಗಾಗಿ ಸುಪ್ರೀಂ ಕೋರ್ಟಿನಲ್ಲಿ ಬಡಿದಾಡಿದ್ದರು. ಅಂತಹ ಜನರೇ ಆ ಪರಿ ಜೀವಕ್ಕಾಗಿ ಹಂಬಲಿಸುವಾಗ, ನಮಗೆ ಜೀವದ ಆಸೆ ಇಲ್ಲವಾ? ಯಾಕೆ ನಾವೆಲ್ಲಾ ಅಸಡ್ಡೆಯಿಂದ ಸರಕಾರದ ಆಜ್ಞೆ ಧಿಕ್ಕರಿಸಿ ನಮ್ಮನ್ನು ನಾವು ಕೊರೋನಾಕ್ಕೆ ಒಡ್ಡಿಕೊಳ್ಳಬೇಕು. ನಮ್ಮ ಕುಟುಂಬವನ್ನು ರಿಸ್ಕ್ ಗೆ ದೂಡಬೇಕು ?
ಇಷ್ಟಕ್ಕೂ ನಾವು ಹೇಳಹೊರಟದ್ದು ಬೇರೆಯದೇ ವಿಷಯ. 21 ಅನ್ನುವ ಸಂಖ್ಯೆಗೆ ತುಂಬಾ ಪ್ರಾಮುಖ್ಯತೆಯಿದೆ. ಭಾರತೀಯ ಸಂಸ್ಕೃತಿಯಲ್ಲಿ, ನಮ್ಮ ಆಯುರ್ವೇದದಲ್ಲಿ 21 ದಿನಕ್ಕೆ ಬಹಳ ಪ್ರಾಮುಖ್ಯತೆಯಿದೆ. ನಮ್ಮ ನಂಬಿಕೆಯ ಪ್ರಕಾರ, 21 ದಿನದಲ್ಲಿ ನಾವು ಯಾವುದನ್ನು ಪ್ರಾಕ್ಟೀಸ್ ಮಾಡುತ್ತೇವೋ ಅದು ಹ್ಯಾಬಿಟ್ (ಅಭ್ಯಾಸ) ಆಗಿ ಹೋಗುತ್ತದೆ ಎನ್ನುವುದು. ಒಂದು ವಾರ ಜಾಗಿಂಗ್ ಹೋದರೆ ಮತ್ತೊಂದು ವಾರ ಹೋಗಬೇಕೆನಿಸುತ್ತದೆ. ಆದರೂ, ಇನ್ನೂ ಅದು ಅಭ್ಯಾಸವಾಗಿ ಮೂಡಿಬಂದಿರೋದಿಲ್ಲ. ದೈಹಿಕವಾಗಿ ಮತ್ತು ಮಾನಸಿಕವಾಗಿ ಮನಸ್ಸು ಮತ್ತು ದೇಹ ಏಕ ಕಾಲದಲ್ಲಿ ಅನುಸಂಧಾನ ಮಾಡಿಕೊಂಡು ಒಟ್ಟಿಗೆ ಕೆಲಸ ಮಾಡುವ- ಒಂದು ಹ್ಯಾಬಿಟ್ ಸೈಕಲ್ ಕಂಪ್ಲೀಟ್ ಆಗಲು 21 ದಿನಗಳು ಬೇಕು !
ಎಷ್ಟೋ ದಿನಗಳಿಂದ ನಮ್ಮದು ಒಂದೇ ಕಂಪ್ಲೈನ್ಟ್ : ನಮ್ಮ ಬಾಸ್ ರಜ ಕೊಡಲ್ಲ, ಆಫೀಸಿನಲ್ಲಿ ಮುಗಿಯದ ಕೆಲಸ, ಫ್ಯಾಕ್ಟರಿಯಲ್ಲಿ ಫೈನಾನ್ಸಿಯಲ್ ಇಯರ್ ಎಂಡ್ ಟಾರ್ಗೆಟ್- ಈ ವರ್ಷ ಯಾವುದೂ ಇಲ್ಲ. ಬಿಂದಾಸ್. ಎಲ್ಲರೂ ಮನೇಲೆ ಇದ್ದಾರೆ. ಯುಗಾದಿ ಸಮಯದಲ್ಲಿ ಮನೆ ಕ್ಲೀನ್ ಮಾಡಲು, ರಜೆಯಲ್ಲಿ ಗದ್ದಲೆಬ್ಬಿಸಿ ಆಡುತ್ತಿರುವ ಮಕ್ಕಳ ಜತೆ ಕಾಲ ಕಳೆಯಲು ಮತ್ತೆ ಯಾವತ್ತೂ ನಿಮಗೆ ಇಂತಹ ಅವಕಾಶ ಸಿಗುತ್ತದೆ?
ಅಂತಹ ಅಮೂಲ್ಯ 21 ಅಮೂಲ್ಯ ದಿನಗಳು ನಮಗೆ ಸಿಕ್ಕಿವೆ.
ಈ ಅವಕಾಶವನ್ನು ಕುಟುಂಬದೊಂದಿಗೆ ಕಳೆಯೋಣ, ಮನೆ ಕ್ಲೀನ್ ಮಾಡೋಣ, ಮೊಬೈಲ್ ಫೋನಿನ ಜಂಕ್ ಡಿಲೀಟ್ ಮಾಡೋಣ, ಹಳೆ ಪುಸ್ತಕ ಮತ್ತೆ ಸರಿಯಾಗಿ ಒಟ್ಟಿ ಇಡೋಣ, ಮನೆಯ ಅಟ್ಟ ಕ್ಲೀನ್ ಮಾಡೋಣ. ಟಿವಿ ಸ್ಟ್ಯಾಂಡಿನ ಮೇಲೆ ಎಷ್ಟು ವರ್ಷದ ಧೂಳಿದೆ ಗೊತ್ತಾ ? ಮನೆಯಲ್ಲಿರೋ ಸ್ಯುಯಿಂಗ್ ಮಷೀನ್ ಕೆಲಸ ಮಾಡದೆ ಎಷ್ಟು ಕಾಲವಾಯಿತೋ? ಪುಟ್ಟನ ಚಡ್ಡಿಯ ಒಟ್ಟೆ ರಿಪೇರಿ ಮಾಡಲು ಇದು ಸಕಾಲ !
ಹೀಗೆ ಮನೆಯಲ್ಲಿ ಮಾಡಲು ಒಂದು ಶತಮಾನದ ಕೆಲಸಗಳಿರುತ್ತವೆ. ಇಪ್ಪತ್ತನೆಯ ದಿನದ ಒಳಗೆ ಒಂದಷ್ಟು ಏನಾದರೂ ಓದಿ, ಟಿವಿ ಯಲ್ಲಿ ಮನೆಮಂದಿಯೊಂದಿಗೆ ಕೂತು ದಿನಕ್ಕೊಂದಾದರೂ ಸಿನೆಮಾ ನೋಡಿ ಮತ್ತು ಮಕ್ಕಳ ಭವಿಸ್ಯಕ್ಕೆ ಫೈನಾನ್ಸಿಯಲ್ ಪ್ಲಾನ್ನಿಂಗ್ ಮಾಡಿ. ಮನೆಯಂಗಳದಲ್ಲಿ ವ್ಯಾಯಾಮ ಶುರುಮಾಡಲು ಇದಕ್ಕಿಂತ ಪ್ರಶಸ್ತ ಸಮಯ ಇನ್ನೆಲ್ಲಿದೆ ! ಹ್ಯಾಪಿ ಹಾಲಿಡೇ ಅಟ್ ಹೋಂ !
ಕೊನೆಯದಾಗಿ ಪ್ರಧಾನಿಯ ಕೋರಿಕೆ : ಘರ್ ಸೆ ಬಾಹರ್ ಮತ್ ನಿಕ್ಲೆ !
- ಸುದರ್ಶನ್ ಬಿ. ಪ್ರವೀಣ್, ಬೆಳಾಲು : 81478 20538