

ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿ ಜೀವಾವಧಿ ಶಿಕ್ಷೆಗೆ ಗುರಿಯಾದ ಉಮೇಶ್ ರೆಡ್ಡಿಗೆ ಪೆರೋಲ್ ನೀಡಲು ಹೈಕೋರ್ಟ್ ನಿರಾಕರಿಸಿರುವ ಕುರಿತು ವರದಿಯಾಗಿದೆ. ಉಮೇಶ್ ರೆಡ್ಡಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದು ಅನಾರೋಗ್ಯಕ್ಕೆ ತುತ್ತಾಗಿರುವ ತಾಯಿಯೊಂದಿಗೆ ಇರಲು 30 ದಿನಗಳ ಕಾಲ ಪೆರೋಲ್ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದು, ಇದೀಗ ಪೆರೋಲ್ ನೀಡಲು ನ್ಯಾಯಪೀಠ ನಿರಾಕರಿಸಿದೆ.
ಅಸ್ಪಾಕ್ ವಿರುದ್ಧದ ರಾಜಸ್ತಾನ ಸರಕಾರದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಇಲ್ಲಿ ನ್ಯಾಯಪೀಠ ಉಲ್ಲೇಖಿಸಿದೆ. ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಅರ್ಜಿದಾರರಿಗೆ ಪೆರೋಲ್ ನೀಡಿದ್ದಲ್ಲಿ ಮತ್ತೆ ಅಪರಾಧ ಪ್ರವೃತ್ತಿಯನ್ನು ಹೊಂದಿರಬಹುದು ಅಥವಾ ಕಾನೂನು ಸುವ್ಯವಸ್ಥೆಗೆ ಅಪಾಯವನ್ನುಂಟು ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದ್ದು, ಸುಪ್ರೀಂಕೋರ್ಟ್ ಅರ್ಜಿದಾರರು ಜೈಲಿನಿಂದ ಹೊರ ಬಂದಲ್ಲಿ ಅವರ ಜೀವಕ್ಕೆ ಅಪಾಯವಿದೆ ಎಂದು ತಿಳಿಸಿದೆ ಎಂದು ತೀರ್ಮಾನಿಸಿ ನ್ಯಾಯಪೀಠ ಅರ್ಜಿಯನ್ನು ವಜಾ ಗೊಳಿಸಿದೆ.
ಮನೆ ದುರಸ್ತಿಯಲ್ಲಿರುವುದಾಗಿ ಅದನ್ನು ಸರಿಪಡಿಸಲು ಪೆರೋಲ್ ನೀಡಬೇಕೆಂಬ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠ ಅರ್ಜಿದಾರರಿಗೆ ಇಬ್ಬರು ಸಹೋದರರಿದ್ದು, ಅವರೇ ತಾಯಿಯನ್ನು ನೋಡಿಕೊಳ್ಳುತ್ತಾರೆ, ಮನೆ ದುರಸ್ತಿಯನ್ನೂ ಮಾಡುತ್ತಾರೆ. ಎಂದು ಹೇಳಿದ್ದು, ಅರ್ಜಿದಾರ ನೀಡಿರುವ ಎರಡೂ ಕಾರಣ ಸಮರ್ಥವಾಗಿಲ್ಲ ಎಂದು ಹೇಳಿ, ಅರ್ಜಿಯನ್ನು ವಜಾಗೊಳಿಸಿದೆ.













