

Tamilunadu : ತಮಿಳುನಾಡಿನ ಕರೂರಿನಲ್ಲಿ ನಟ ಹಾಗೂ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಮುಖ್ಯಸ್ಥ ವಿಜಯ್ ದಳಪತಿ ಆಯೋಜಿಸಿದ್ದ ಪ್ರಚಾರದ ರ್ಯಾಲಿಯ ವೇಳೆ ಕಾಲ್ತುಳಿತ ಉಂಟಾಗಿ 31 ಅಮಾಯಕ ಜನರು ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ಮಂದಿ ಸ್ಥಿತಿ ಚಿಂತಾಜನಕವಾಗಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೌದು, ಇಂದು ನಿಗದಿತ ಸಮಯಕ್ಕಿಂತ 6 ಗಂಟೆ ತಡವಾಗಿ ವಿಜಯ್ ಸ್ಥಳಕ್ಕೆ ಬಂದಿದ್ದರು. ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ವಿಜಯ್ ಅವರಿಗಾಗಿ ಕಾಯುತ್ತಿದ್ದ ಅಭಿಮಾನಿಗಳು ಸುಸ್ತಿನಿಂದ ಬಳಲುತ್ತಿದ್ದರು. ವಿಜಯ್ ಬರುತ್ತಿದ್ದಂತೆ ವೇದಿಕೆಯತ್ತ ಸಾವಿರಾರೂ ಸಂಖ್ಯೆಯಲ್ಲಿ ಜನ ನುಗ್ಗಲು ಪ್ರಾರಂಭಿಸಿದರು. ಅದೇವೇಳೆ ನೂಕುನುಗ್ಗಲಾಗಿದ್ದರಿಂದ ಮೂರ್ಛೆ ತಪ್ಪಿ ಬಿದ್ದರು. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಇನ್ನು ಕಾಲ್ತುಳಿತದ ವೇಳೆ ಹಲವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಹಲವು ಮಕ್ಕಳು ಕಾಣೆಯಾಗಿವೆ ಎಂದು ವರದಿಯಾಗಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ವಿಜಯ್ ತಕ್ಷಣ ತಮ್ಮ ಭಾಷಣವನ್ನು ನಿಲ್ಲಿಸಿ ಕಾರ್ಯಕರ್ತರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡುವಂತೆ ಕೇಳಿಕೊಂಡರು.
ತಮಿಳುನಾಡು ಕಾಲ್ತುಳಿತ ಘಟನೆಯ ಬಗ್ಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾಹಿತಿ ಪಡೆದಿದ್ದು, ಪರಿಸ್ಥಿತಿಯನ್ನು ಅವಲೋಕಿಸಲು ನಾಳೆ (ಭಾನುವಾರ) ಕರೂರ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ. ಗಾಯಾಳುಗಳಿಗೆ ತಕ್ಷಣದ ನೆರವು ನೀಡುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇನ್ನು ಕಾಲ್ತುಳಿತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ. ‘ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ರ್ಯಾಲಿಯ ಸಂದರ್ಭದಲ್ಲಿ ನಡೆದ ದುರದೃಷ್ಟಕರ ಘಟನೆ ತೀವ್ರ ದುಃಖಕರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ನಾವಿದ್ದೇವೆ. ಈ ಕಷ್ಟದ ಸಮಯದಲ್ಲಿ ಅವರಿಗೆ ದೇವರು ಶಕ್ತಿ ತುಂಬಲಿ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.











