

ಚಹಾ ಎಂದರೆ ಅದರಲ್ಲಿ ವಿಧವಿಧವಾದ ಬಗೆಗಳಿವೆ. ಬ್ಲ್ಯಾಕ್ ಟೀ,ಲೆಮನ್ ಟೀ, ಮಸಾಲ ಟೀ, ಮಿಲ್ಕ್ ಟೀ, ಮನೆ ಟೀ ಹೀಗೆ ಒಂದಾ ಎರಡಾ! ಒಬ್ಬೊಬ್ಬರಿಗೆ ಒಂದೊಂದು ರೀತಿಯ ಚಹಾ ಇಷ್ಟ. ಆದರೆ ನಿಮಗೆ ಗೊತ್ತೇ? ಚಹಾದಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ಔಷಧೀಯಾ ಗುಣವಿದೆಯೆಂದು. ನಾವಿಂದು ನಿಮಗೆ ಕಪ್ಪು ಚಹಾ ಏನೆಲ್ಲಾ ಆರೋಗ್ಯ ಭಾಗ್ಯವನ್ನು ನೀಡುತ್ತದೆ ಎಂಬ ಕುತೂಹಲ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.
‘ಕಪ್ಪು ಚಹಾ’ ಎಂದರೆ ಟೀಪುಡಿಯನ್ನೇ ಕುದಿನೀರಿನಲ್ಲಿ ಹಾಕಿ ಬಣ್ಣ ಕೊಂಚವೇ ಬಿಟ್ಟಾಕ್ಷಣ ನೀರಿನಿಂದ ಟೀಪುಡಿಯನ್ನು ಸೋಸಿ ಇದಕ್ಕೆ ಸ್ವಲ್ಪ ಲಿಂಬೆರಸ, ಪುದಿನಾ ಎಲೆ ಮತ್ತು ಒಂದು ಚಿಕ್ಕ ಚಮಚದಷ್ಟು ಜೇನನ್ನು ಬೆರೆಸಿದ ಚಹಾ. ಸಂಶೋಧನೆಯ ಪ್ರಕಾರ, ಹಾಲಿನೊಂದಿಗೆ ಚಹಾವನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಆದರೆ ಕಪ್ಪು ಚಹಾವನ್ನು ಹಾಲು ಮತ್ತು ಸಕ್ಕರೆಯಿಲ್ಲದೆ ತಯಾರಿಸುತ್ತೇವೆ. ಇದು ಆರೋಗ್ಯಕ್ಕೂ ಒಳ್ಳೆಯದು. ಊಟದ ಅಥವಾ ತಿಂಡಿ ಸೇವನೆಯ ಸ್ವಲ್ಪ ಸಮಯದ ನಂತರ ಬೆಚ್ಚಗಿನ ಕಪ್ಪು ಚಹಾವನ್ನು ಕುಡಿಯಲು ತಜ್ಞರು ಶಿಫಾರಸ್ಸು ಮಾಡುತ್ತಾರೆ.
ಕಪ್ಪು ಚಹಾವನ್ನು ಕುದಿಸಿದಾಗ ನೀರಿನಲ್ಲಿ ಬೆರೆಯುವ ಫ್ಲೇವನಾಯ್ಡುಗಳು ಹೃದಯದ ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಆ್ಯಂಟಿ ಆಕ್ಸಿಡೆಂಟ್ ಗುಣಗಳು ಹೃದಯವನ್ನು ಸುರಕ್ಷಿತವಾಗಿರಿಸುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಯಮಿತವಾಗಿ ಕಪ್ಪು ಚಹಾವನ್ನು ಸೇವಿಸುವ ಮೂಲಕ ಹೃದಯ ಮತ್ತು ಮೆದುಳಿನ ಆರೋಗ್ಯ ಉತ್ತಮಗೊಳ್ಳುತ್ತದೆ. ಬ್ಲ್ಯಾಕ್ ಟೀ ಕುಡಿಯುವುದರಿಂದ ಹೃದಯದ ಸುತ್ತಲಿನ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಬಹುದು. ಅಷ್ಟೇ ಅಲ್ಲ, ನಮ್ಮ ರೋಗ ನಿರೋಧಕ ಶಕ್ತಿಯೂ ಉತ್ತಮ ಮತ್ತು ಇನ್ನಷ್ಟು ಪ್ರಬಲಗೊಳ್ಳುತ್ತದೆ.
ಇದಲ್ಲದೆ, ಕಪ್ಪು ಚಹಾ ಸೇವನೆಯು ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ನಿಯಮಿತವಾಗಿ ಬ್ಲ್ಯಾಕ್ ಟೀ ಕುಡಿಯುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಅನೇಕ ಮಹಿಳೆಯರು ಋತುಬಂಧದ ಸಮಯದಲ್ಲಿ ಸಮಸ್ಯೆಗೊಳಾಗಾಗುತ್ತಾರೆ ಇದರಿಂದ ಪರಿಹಾರ ನೀಡುತ್ತದೆ. ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳನ್ನು ಸರಿಪಡಿಸಲು ಈ ಚಹಾ ಸಹಾಯಕವಾಗಿದೆ.
ನಿಮ್ಮನ್ನು ಹೆಚ್ಚು ಶಕ್ತಿಯುತವಾಗಿಡುವಂತೆ ಮಾಡುವ ಈ ಕಪ್ಪು ಚಹಾ, ಚರ್ಮ ಹಾಗೂ ಕೂದಲನ್ನು ಉತ್ತಮವಾಗಿಸುತ್ತದೆ. ಅಲ್ಲದೆ ಮಾನಸಿಕ ಗಮನವನ್ನು ಕಾಪಾಡಿಕೊಳ್ಳಲು ಹಾಗೂ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಜೊತೆಗೆ ಕಪ್ಪು ಚಹಾದ ಸೇವನೆಯಿಂದ ಆಹ್ಲಾದಕರ ಭಾವನೆಯೂ ದೊರಕುತ್ತದೆ.













