ಗೋವಾ ಪರ್ತಗಾಳಿ ಮಠಾಧೀಶ ವಿದ್ಯಾಧಿರಾಜ ತೀರ್ಥರು ಇನ್ನಿಲ್ಲ
ಗೋವಾದ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮಿಜಿ ಅವರು ಪರ್ತಗಾಳಿ ಮೂಲಮಠದಲ್ಲಿ ನಿಧನರಾದರು.
1945ರಲ್ಲಿ ಗಂಗೊಳ್ಳಿಯಲ್ಲಿ ಜನಿಸಿದ ಶ್ರೀಗಳು 1967ರಲ್ಲಿ ಸನ್ಯಾಸತ್ವ ಸ್ವೀಕರಿಸಿದರು.
1973ರಲ್ಲಿ ಪೀಠಾರೋಹಣ ಮಾಡಿದ್ದು,2017ರಲ್ಲಿ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಜಿ ಅವರನ್ನು ಶಿಷ್ಯರಾಗಿ ಸ್ವೀಕರಿಸಿದರು.
ಸನ್ಯಾಸ ಸ್ವೀಕರಿಸಿ 54 ವರ್ಷ ಸುಧೀರ್ಘವಾಗಿ ಮಠವನ್ನು, ಮಠದ ಆಡಳಿತದಲ್ಲಿರುವ ದೇವಾಲಯಗಳನ್ನು, ಮಠದ ಲಕ್ಷಾಂತರ ಶಿಷ್ಯರನ್ನು ಧಾರ್ಮಿಕವಾಗಿ ಮುನ್ನಡೆಸಿ ಅಪಾರ ಪ್ರಗತಿಗೆ ಕಾರಣರಾಗಿದ್ದ ಶ್ರೀಗಳು ಹೃದಯಾಘಾತದಿಂದ ತಮ್ಮ 76ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಗಂಗೊಳ್ಳಿಯಲ್ಲಿ 3-8-1945ರಲ್ಲಿ ಜನಿಸಿದ ರಾಘವೇಂದ್ರ ಆಚಾರ್ಯ ಫೇ.26, 1967 ರಲ್ಲಿ ಸನ್ಯಾಸ ಸ್ವಿಕರಿಸಿದ್ದರು. ಅಸೇತು ಹಿಮಾಚಲ ತೀರ್ಥ ಯಾತ್ರೆ ಮಾಡಿದ ಶ್ರೀಗಳು ತಮ್ಮ ಶಿಷ್ಯರ ಸರ್ವತೋಮುಖ ಅಭಿವೃದ್ಧಿಯ ಹೊರತಾಗಿ ಇನ್ನಾವುದನ್ನು ಆಲೋಚಿಸಲೇ ಇಲ್ಲ. ಶಿಸ್ತು, ಸಮಯ ಪಾಲನೆಗೆ ಹೆಸರಾಗಿದ್ದ ಶ್ರೀಗಳು ಶಿಷ್ಯರನ್ನು ಸ್ವಿಕರಿಸಿ ಅವರಿಗೆ ಮಾರ್ಗದರ್ಶನ ಮಾಡಿದ ಶ್ರೀಗಳು ಕರ್ತವ್ಯ ಮುಗಿಯಿತು ಎಂಬಂತೆ ಹೊರಟು ಹೋಗಿದ್ದು ಶಿಷ್ಯರಿಗೆ ಮತ್ತು ಅವರ ಬಂಧುಗಳಿಗೆ ಅಪಾರ ದುಃಖ ಉಂಟುಮಾಡಿದೆ.
ಅವರು ಮಠದಲ್ಲಿ ನಿರ್ಮಾಲ್ಯ ಪೂಜೆಯ ಬಳಿಕ ತನ್ನ ಕೈಯಲ್ಲಿ ಪುಸ್ತಕದೊಂದಿಗೆ ತನ್ನ ಆಸನದಲ್ಲಿ ಮೇಲೆ ಕುಳಿತಿದ್ದರು.ಮಠದ ಮೇಲಿನ ಮಹಡಿಯಲ್ಲಿದ್ದ ಕಿರಿಯ ಮಠಾಧೀಶರು ಗುರುವನ್ನು ಭೇಟಿಯಾಗಲು ಬಂದಾಗ, ಅವರು ಕುಳಿತುಕೊಳ್ಳುವ ಸ್ಥಾನದಲ್ಲಿ ತಣ್ಣನೆಯ ದೇಹವನ್ನು ಕಂಡರು.ಈ ಮೂಲಕ ನಿಜವಾದ ಸಮಾಧಿ ರೀತಿಯಲ್ಲೇ ಹರಿಪಾದ ಸೇರಿದರು.