ಫೇಸ್ಬುಕ್ನಿಂದ 3 ಕೋಟಿ ಪೋಸ್ಟ್ ಡಿಲೀಟ್ | ಹೊಸ ಐಟಿ ನೀತಿಯನ್ನು ಕೊನೆಗೂ ನಡುಬಗ್ಗಿಸಿ ಪಾಲಿಸಿದ ಎಫ್ ಬಿ, ಇನ್ಸ್ಟಾಗ್ರಾಮ್, ಗೂಗಲ್
ಹೊಸದಿಲ್ಲಿ: ದೇಶದಲ್ಲಿ ಹೊಸ ಐಟಿ ನಿಯಮಗಳು ಜಾರಿಗೆ ಬಂದ ಬಳಿಕ ತನ್ನ ಮೊದಲ ಮಾಸಿಕ ಅನುಸರಣೆ ವರದಿ ಸಲ್ಲಿಸಿರುವ ಫೇಸ್ ಬುಕ್ ಸಂಸ್ಥೆಯು, ಮೇ 15 ರಿಂದ ಜೂನ್ 15ರವರೆಗೆ 10 ವಿವಿಧ ವಿಭಾಗಗಳಲ್ಲಿ 3 ಕೋಟಿ ಕಂಟೆಂಟ್ ಡಿಲೀಟ್ ಮಾಡುವ ಮೂಲಕ
ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.
ಫೇಸ್ಬುಕ್ ಒಡೆತನದ ಇನ್ಸ್ಟಾಗ್ರಾಮ್ ಹೊಸ ನಿಯಮದಂತೆ ಇದೇ ಅವಧಿಯಲ್ಲಿ 9 ವಿಭಾಗಗಳಲ್ಲಿ 20 ಲಕ್ಷ ಕಂಟೆಂಟ್ಗಳ ಮೇಲೆ ಕ್ರಮ ಕೈಗೊಂಡಿದೆ.
ಹೊಸ ಐಟಿ ನಿಯಮಗಳ ಪ್ರಕಾರ, 5 ಲಕ್ಷಕ್ಕೂ ಅಧಿಕ ಬಳಕೆದಾರರನ್ನು ಹೊಂದಿರುವ ದೊಡ್ಡ ಡಿಜಿಟಲ್ ಪ್ಲಾಟ್ಫಾರ್ಮ್ಗಳು ಪ್ರತಿ ತಿಂಗಳೂ ಆವರ್ತಕ ಅನುಸರಣೆ ವರದಿ ಪ್ರಕಟಿಸಬೇಕು. ಜತೆಗೆ ಸ್ವೀಕರಿಸಿದ ದೂರುಗಳು ಮತ್ತು ಕೈಗೊಂಡ ಕ್ರಮಗಳನ್ನು ಉಲ್ಲೇಖಿಸಬೇಕು. ಸ್ವಯಂಚಾಲಿತ ವ್ಯವಸ್ಥೆ ಬಳಸುವ ಮೂಲಕ ಸುರಕ್ಷೆ ಕಾಯ್ದುಕೊಳ್ಳಲು ಮಧ್ಯವರ್ತಿ ಪ್ರವೇಶ ತೆಗೆದುಹಾಕಿರುವ ಅಥವಾ ನಿಷ್ಕ್ರಿಯಗೊಳಿಸಿದ ಸಂವಹನ ಲಿಂಕ್ಗಳ ಸಂಖ್ಯೆ ಅಥವಾ ಮಾಹಿತಿ ಭಾಗಗಳನ್ನು ಸಹ ವರದಿಯಲ್ಲಿ ನೀಡಬೇಕಿದೆ. ಒಂದು ತಿಂಗಳ ಅವಧಿಯಲ್ಲಿ ಗೂಗಲ್ ಹಾಗೂ ಯೂಟ್ಯೂಬ್ ಸಂಸ್ಥೆಗಳು 27,762 ದೂರ ಗಳನ್ನು ಪಡೆದಿದ್ದು, 59,350 ಕಂಟೆಂಟ್ಗಳನ್ನು ತೆಗೆದು ಹಾಕಲಾಗಿದೆ ಎಂದು ಮಾಹಿತಿ ನೀಡಿವೆ.
ಗೂಗಲ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಸಂಸ್ಥೆಗಳು ತಮ್ಮ ಅನುಸರಣೆ ವರದಿ ಸಲ್ಲಿಸಿರುವುದು ಪಾರದರ್ಶಕತೆಯತ್ತ ಇಟ್ಟ ದೊಡ್ಡ ಹೆಜ್ಜೆಯಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಟ್ವಿಟ್ಟರ್ ನಲ್ಲಿ ಶ್ಲಾಘಿಸಿದ್ದಾರೆ. ಸರ್ಕಾರದ ಹೊಸ ಐಟಿ ನಿಯಮಗಳನ್ನು ಗೂಗಲ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಮಾಧ್ಯಮ ಫ್ಲಾಟ್ ಫಾರ್ಮ್ಗಳು ಅನುಸರಿಸುತ್ತಿರುವುದನ್ನು ನೋಡಿ ಸಂತೋಷವಾಗಿದೆ. ಐಟಿ ನಿಯಮಗಳ ಅನ್ವಯ ಆಕ್ರಮಣಕಾರಿ, ಅಪಮಾನಕಾರಿ ಪೋಸ್ಟ್ಗಳನ್ನು ಸ್ವಯಂಪ್ರೇರಣೆಯಿಂದ ತೆಗೆದು ಹಾಕುವ ಕುರಿತ ಮೊದಲ ಅನುಸರಣೆ ವರದಿ ಪಾರದರ್ಶಕತೆಗೆ ದೊಡ್ಡ ಹೆಜ್ಜೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.