ಒಂದು ಮಾವಿನ ಮರದಲ್ಲಿ 121 ಬಗೆಯ ಹಣ್ಣುಗಳು

ನವದೆಹಲಿ: ಒಂದು ಮಾವಿನ ಮರದಲ್ಲಿ ಒಂದೇ ತಳಿಯ
ಮಾವಿನ ಹಣ್ಣುಗಳು ಕಾಣಿಸಿಕೊಳ್ಳುವುದು ಸಹಜ ಹಾಗೂ ಸರ್ವೇಸಾಮಾನ್ಯ ಸಂಗತಿ. ಆದರೆ ಇಲ್ಲೊಂದು ಮಾವಿನ ಮರದಲ್ಲಿ 121 ಬಗೆಯ ಹಣ್ಣುಗಳು ಕಾಣಸಿಗುತ್ತವೆ. ಆದ್ದರಿಂದ ಈ ಮಾವಿನ ಮರ ಅಚ್ಚರಿಯ ಹಾಗೂ ಆಕರ್ಷಣೆಯ ಕೇಂದ್ರವಾಗಿದೆ.

ಉತ್ತರಪ್ರದೇಶದ ಸಹರನ್‌ಪುರ್ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಯೋಗ ನಡೆದಿದೆ. ಹದಿನೈದು ವರ್ಷ ಪ್ರಾಯದ ಈ ಮಾವಿನ ಮರದಲ್ಲಿ ತೋಟಗಾರಿಕಾ ಪರಿಣತರು ಕಳೆದ ಐದು ವರ್ಷಗಳಿಂದ ಇಂಥದ್ದೊಂದು ಪ್ರಯೋಗ ನಡೆಸಿದ್ದು, ಇದೀಗ 121 ಬಗೆಯ ಹಣ್ಣುಗಳನ್ನು ಒಂದೇ ಮರದಲ್ಲಿ ಕಾಣಲು ಸಾಧ್ಯವಾಗುವಂತಾಗಿದೆ.

ತೋಟಗಾರಿಕಾ ಪ್ರಯೋಗ ಹಾಗೂ ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ರಾಜೇಶ್ ಪ್ರಸಾದ್ ಅವರು 121 ಬಗೆಯ ಮಾವಿನ ಗಿಡದ ರೆಂಬೆಗಳನ್ನು ಒಂದೇ ಮರಕ್ಕೆ ಕಸಿ ಮಾಡುವ ಮೂಲಕ ಹೀಗೊಂದು ಅಚ್ಚರಿಗೆ ಕಾರಣವಾಗಿದ್ದಾರೆ. ಈ ರೀತಿಯ ಕಸಿ ಮಾಡಿ ಆ ಮರದ ಆರೈಕೆಗೆ ವಿಶೇಷ ಗಮನ ನೀಡಲಾಗಿದೆ. ಪರಿಣಾಮವಾಗಿ ನೂರಕ್ಕೂ ಅಧಿಕ ಬಗೆಯ ಮಾವಿನಹಣ್ಣುಗಳು ಒಂದೇ ತಳಿಯ ಮಾವಿನ ಮರದಲ್ಲಿ ಸಿಗುವಂತಾಗಿದೆ.

ಮನುಷ್ಯ ತನ್ನನ್ನು ತಾನು ಕೃಷಿಯಲ್ಲಿ ತೊಡಗಿಸಿಕೊಂಡರೆ ಎಂತಹ ಪವಾಡ ಮಾಡಲು ಕೂಡ ಸಿದ್ಧನಿರುತ್ತಾನೆ. ಅದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ನಿಜಕ್ಕೂ ಇಂತಹ ಪ್ರಯೋಗಗಳು ನಡೆಯುತ್ತಿರುವುದು ಎಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ.

Leave A Reply

Your email address will not be published.