ನೆಟ್ ವರ್ಕ್ ಇಲ್ಲದ ಕಾರಣ ಮೊಬೈಲ್ ಹಿಡಿದು ಮರವೇರಿದ ಬಾಲಕರು | ಸಿಡಿಲು ಬಡಿದು ಓರ್ವ ಸಾವು, ಇನ್ನುಳಿದವರ ಸ್ಥಿತಿ ಗಂಭೀರ
ಮೊಬೈಲ್ ನೆಟ್ವರ್ಕ್ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮಳೆ ಬರುತ್ತಿರುವಾಗಲೇ ಮರವೇರಿದ್ದ ಬಾಲಕನೊಬ್ಬ ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪಾಲ್ಸರ್ ಜಿಲ್ಲೆಯಲ್ಲಿ ನಡೆದಿದೆ.
ಈತನ ಜೊತೆಗೆ ಮರವೇರಿದ್ದ ಮೂವರು ಬಾಲಕರು ಕೆಳಕ್ಕೆ ಬಿದ್ದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮೃತ ಬಾಲಕನನ್ನು 15 ವರ್ಷದ ರವೀಂದ್ರ ಕೋರ್ದಾ ಎಂದು ಗುರುತಿಸಲಾಗಿದೆ. ಗಾಯಗೊಂಡ ಇನ್ನುಳಿದ ಬಾಲಕರು ಸಹ 14 ರಿಂದ 16 ವರ್ಷ ಪ್ರಾಯದವರಾಗಿದ್ದಾರೆ ಎಂದು ಹೇಳಲಾಗಿದೆ.
ಜಾನುವಾರು ಮೇಯಿಸಲು ಹೋಗಿದ್ದ 12-15 ವಯಸ್ಸಿನ ಬಾಲಕರು ಮೊಬೈಲ್ ಫೋನ್ ಬಳಸಲು ಮುಂದಾಗಿದ್ದಾರೆ. ಆದರೆ ಅವರಿಗೆ ಆ ಪ್ರದೇಶದಲ್ಲಿ ನೆಟ್ವರ್ಕ್ ಸಿಗಲಿಲ್ಲ. ಆಗಲೇ ಜೋರು ಮಳೆ ಶುರುವಾಗಿತ್ತು. ಮಳೆ ಜೊತೆಗೆ ಗುಡುಗು ಮಿಂಚು ಕೂಡ ಬರುತ್ತಿತ್ತು. ಇದ್ಯಾವುದನ್ನೂ ಲೆಕ್ಕಿಸದ ಬಾಲಕರು ಮರವೇರಿದ್ದಾರೆ.
ಈ ಸಮಯದಲ್ಲಿ ಸಿಡಿಲು ಬಡಿದಿದ್ದು, ಅದು 15 ವರ್ಷದ ಬಾಲಕನಿಗೆ ನೇರವಾಗಿ ಬಡಿದಿದೆ. ಅವನು ಅಲ್ಲಿಯೇ ಮೃತಪಟ್ಟರೆ, ಉಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ.
ದಹನು ತಾಲೂಕಿನ ಮಂಕರ್ಪಾಡ ಎಂಬಲ್ಲಿ ಈ ಘಟನೆ ನಡೆದಿದ್ದು, ಬಾಲಕರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಹಶೀಲ್ದಾರ್ ರಾಹುಲ್ ಸಾರಂಗ್ ಮಾಹಿತಿ ನೀಡಿದ್ದಾರೆ.