ಜೂನ್ 30 ರೊಳಗೆ ಲಸಿಕೆ ಹಾಕಿಕೊಳ್ಳುವವರಿಗೆ ಉಚಿತ ಮೊಬೈಲ್ ರೀಚಾರ್ಜ್
ಭೋಪಾಲ್ : ಈ ವರ್ಷದೊಳಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಲಸಿಕೆ ಹಿಂಜರಿಕೆ, ಲಸಿಕೆ ಬಗೆಗಿನ ವದಂತಿಗಳು ಜನರನ್ನು ಭಯದ ನೆರಳಿಗೆ ನೂಕಿದೆ. ಹೀಗಿರುವಾಗ, ಲಸಿಕೆ ಪಡೆಯಲು ಜನರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರು ವಿಶಿಷ್ಟ ಮಾರ್ಗ ಅನುಸರಿಸುತ್ತಿದ್ದಾರೆ.
ಭೋಪಾಲ್ನ ಬೇರಸಿಯ ವಿಧಾನಸಭಾ ಕ್ಷೇತ್ರದ ಶಾಸಕ ವಿಷ್ಣು ಖತ್ರಿ ಅವರು ಜೂನ್ 30 ರೊಳಗೆ ಕೊರೋನಾ ಲಸಿಕೆ ಹಾಕಿಸಿಕೊಂಡ ಜನರ ಮೊಬೈಲ್ಗೆ ಉಚಿತ ರೀಚಾರ್ಜ್ ಮಾಡಿಸುವುದಾಗಿ ಪೋಷಿಸಿದ್ದಾರೆ. ಅದಲ್ಲದೆ ತಮ್ಮ ಕ್ಷೇತ್ರದ ಯಾವ ಪಂಚಾಯತ್ ಮೊದಲು ಶೇ.100 ರಷ್ಟು ಲಸಿಕಾಕರಣದ ಗುರಿ ಸಾಧಿಸುತ್ತದೆಯೋ, ಅದಕ್ಕೆ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿಯೂ ಖತ್ರಿ ಅವರು ಘೋಷಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಲಸಿಕಾಕರಣದ ನಿಧಾನಗತಿಯೇ ಅವರ ಈ ಹೆಜ್ಜೆಗೆ ಕಾರಣವಾಗಿದೆ. “ನನ್ನ ಕ್ಷೇತ್ರದಲ್ಲಿ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳೇ ಇವೆ. ಇಲ್ಲಿ ಜನಕ್ಕೆ ಲಸಿಕೆ ಪಡೆಯುವ ಬಗ್ಗೆ ತುಂಬಾ ಗೊಂದಲವಿದೆ, ಅದಕ್ಕಾಗೇ ಇನ್ನೂ ಹೆಚ್ಚು ಜನರು ಲಸಿಕೆ ಹಾಕಿಸಿಕೊಳ್ಳಲಿ ಎಂದು ನಾನು ಅವರಿಗೆ ಮೊಬೈಲ್ ರೀಚಾರ್ಜ್ ಮಾಡಿಸುವುದಾಗಿ ಘೋಷಿಸಿದ್ದೇನೆ” ಎಂದು ವಿಷ್ಣ ಖತ್ರಿ ತಿಳಿಸಿದ್ದಾರೆ.
ಖತ್ರಿ ಅವರಿಗೂ ಮುಂಚೆ ಹೋಸಂಗಾಬಾದ್ ಕ್ಷೇತ್ರದ ಶಾಸಕ ಸೀತಾಶರಣ್ ಶರ್ಮ ಅವರು ಶೇ. 100 ರಷ್ಟು ಲಸಿಕಾಕರಣ ಸಾಧಿಸಿದ ಗ್ರಾಮಕ್ಕೆ ವಿಶೇಷ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಆ ಕ್ಷೇತ್ರದಲ್ಲಿ 23 ಗ್ರಾಮ ಪಂಚಾಯತ್ಗಳಡಿಯಲ್ಲಿ 40 ಹಳ್ಳಿಗಳಿವೆ. ಕಳೆದ ತಿಂಗಳು ಇಲ್ಲಿ ಕೇವಲ ಶೇ.17 ರಷ್ಟು ಜನರಿಗೆ ಲಸಿಕೆಗಳನ್ನು ನೀಡಲಾಗಿತ್ತು. ಶರ್ಮ ಅವರು ಬಹುಮಾನವನ್ನು ಘೋಷಿಸಿದ ನಂತರ ಲಸಿಕಾ ದರವು ಶೇ. 52ಕ್ಕೆ ಏರಿದೆ ಎನ್ನಲಾಗಿದೆ.
ಹೀಗೆ ಲಸಿಕೆ ಪಡೆಯುವವರ ಸಂಖ್ಯೆಯಲ್ಲಿ ಏರಿಕೆಯ ಫಲಿತಾಂಶ ನೋಡಿ, ಶಾಸಕ ವಿಷ್ಣು ಖತ್ರಿ ರಿಚಾರ್ಜ್ ಮಾಡುವ ಘೋಷಣೆ ಮಾಡಿರಬಹುದು. ಏನೇ ಆಗಲಿ ಈ ರೀತಿ ಜನರಿಗೆ ಬಹುಮಾನ ಘೋಷಿಸಿ, ಲಸಿಕೆ ಪಡೆದುಕೊಳ್ಳುವವರ ಸಂಖ್ಯೆಯನ್ನು ಹೆಚ್ಚಿಸುವುದು ಒಂದು ಉತ್ತಮ ಉಪಾಯವೇ ಸರಿ.