ತಪ್ಪು ಮಾಹಿತಿ ಮತ್ತು ಪೋಕ್ಸೋ ಕಾಯ್ದೆ ಉಲ್ಲಂಘನೆ ಮಾಡಿದ ಟ್ವಿಟರ್ ವಿರುದ್ಧ ಎಫ್ಐಆರ್
ಪೊಕ್ಸೋ ಕಾಯಿದೆ ಉಲ್ಲಂಘನೆ ಹಾಗೂ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಸಾಮಾಜಿಕ ಜಾಲತಾಣ ಟ್ವಿಟರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಟ್ವಿಟರ್ ವಿರುದ್ಧ ದೂರು ನೀಡಿದೆ.
ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಟ್ವಿಟರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಮಕ್ಕಳಿಗೆ ಟ್ವಿಟರ್ ಸುರಕ್ಷಿತವಲ್ಲ. ಹೀಗಾಗಿ ಮಕ್ಕಳಿಗೆ ಟ್ವಿಟರ್ ಬಳಕೆಗೆ ನೀಡಬಾರದು. ಆದರೆ ನಮ್ಮ ಆಯೋಗ ವಿಚಾರಣೆ ನಡೆಸಿದ ವೇಳೆ ಈ ವಿಚಾರದಲ್ಲಿ ಟ್ವಿಟರ್ ಸುಳ್ಳು ಹೇಳಿದೆ ಹಾಗೂ ತಪ್ಪು ಮಾಹಿತಿ ನೀಡಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕನುಂಗೂ ಹೇಳಿದ್ದಾರೆ.
ಈಗಾಗಲೇ ಕೋವಿಡ್ ಟೂಲ್‌ಕಿಟ್ ವಿಚಾರದಲ್ಲಿ ಮ್ಯಾನಿಪ್ಯುಲೇಟೆಡ್ ಮೀಡಿಯಾ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದು, ಈಗ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಈ ಹೊಸ ಪ್ರಕರಣವು ಟ್ವಿಟರ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಪುನಃ ಸಂಕಷ್ಟಕ್ಕೆ ಸಿಲುಕಿದ ಟ್ವಿಟರ್ ಈ ಪ್ರಕರಣದಿಂದ ಹೇಗೆ ಪಾರಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.