ಬಂಗಾಳಕ್ಕೆ ಹೋದ ಪ್ರಧಾನಿಗೆ ಅವಮಾನ |ಮೋದಿ ಮತ್ತು ಗವರ್ನರ್ ಅವರನ್ನೇ ಕಾಯಿಸಿದ ದೀದಿ

ಯಾಸ್ ಚಂಡಮಾರುತದಿಂದ ಉಂಟಾದ ಸಮಸ್ಯೆಯ ಅಧ್ಯಯನಕ್ಕೆ ದೆಹಲಿಯಿಂದ ಬಂದು ಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅರ್ಧ ತಾಸು ಕಾಯಿಸಿದ ಘಟನೆ ಶುಕ್ರವಾರ ನಡೆದಿದೆ.

ಚಂಡಮಾರುತ ಪರಿಸ್ಥಿತಿಯ ಪರಿಶೀಲನೆಗಾಗಿ ಕೋಲ್ಕತಾಕ್ಕೆ ಆಗಮಿಸಿದ್ದ ಮೋದಿ ಸಭೆ ಆಯೋಜಿಸಿದ್ದರು. ಇದರಲ್ಲಿ ಕೇಂದ್ರದ ಅಧಿಕಾರಿಗಳು, ಬಂಗಾಳದ ರಾಜ್ಯಪಾಲ ಜಗದೀಪ್ ಧನಖಡ್ ಭಾಗಿಯಾಗಿದ್ದರು. ಸಿಎಂ ಮಮತಾ ಬ್ಯಾನರ್ಜಿ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಕೂಡಾ ಸಭೆಯಲ್ಲಿ ಭಾಗಿಯಾಗಿರಬೇಕಿತ್ತು.

ಆದರೆ ಇತ್ತೀಚಿನ ಚುನಾವಣಾ ಸಮಯದ ದ್ವೇಷವನ್ನು ಮುಂದುವರೆಸುವಂತೆ ಕಂಡ ಮಮತಾ, ಮೋದಿಯನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೂ ತೆರಳಲಿಲ್ಲ. ಬಳಿಕ ಸಭೆಗೂ 30 ನಿಮಿಷ ವಿಳಂಬವಾಗಿ ಆಗಮಿಸಿದರು. ಹೀಗಾಗಿ ಮೋದಿ ಮತ್ತು ಧನಖಡ್ ಕಾಯುವಂತೆ ಆಯಿತು. ಅರ್ಧಗಂಟೆಯ ಬಳಿಕ ದೀದಿ ಆಗಮಿಸಿದರಾದರೂ, ಕೇವಲ 15 ನಿಮಿಷವಷ್ಟೇ ಸಭೆಯಲ್ಲಿ ಕುಳಿತು, ಚಂಡಮಾರುತದಿಂದ ರಾಜ್ಯದಲ್ಲಿ ಆಗಿರುವ ಹಾನಿಯ ವರದಿ ಮತ್ತು 20000 ಕೋಟಿ ರೂ. ನೆರವು ನೀಡುವಂತೆ ಬೇಡಿಕೆ ಸಲ್ಲಿಸಿ, ಅಧಿಕಾರಿಗಳ ಜೊತೆ ಸಭೆಯಿಂದ ನಿರ್ಗಮಿಸಿದರು. ಆದರೆ ಸ್ವತಃ ಪ್ರಧಾನಿ, ರಾಜ್ಯಪಾಲರು ಭಾಗಿಯಾಗಿರುವ ಸಭೆಯಿಂದ ಹೀಗೆ ಮುಖ್ಯಮಂತ್ರಿ ಹೊರನಡೆದಿದ್ದು ತೀವ್ರ ಟೀಕೆಗೆ ಗುರಿಯಾಗಿದೆ.

ಅಷ್ಟುಮಾತ್ರವಲ್ಲದೆ ಸಭೆಯಲ್ಲಿ ಪೂರ್ತಿಯಾಗಿ ಭಾಗಿಯಾಗದೆ ಅರ್ಧಕ್ಕೆ ಎದ್ದು ಹೋಗುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಮಮತಾ ಅವರ ಈ ನಡೆಯನ್ನು ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಇದು ಸಾಂವಿಧಾನಿಕ ಮೌಲ್ಯಗಳ ಹತ್ಯೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಣ್ಣಿಸಿದ್ದರೆ, ಸಾರ್ವಜನಿಕರ ಹಿತಾಸಕ್ತಿಗಿಂತ ದುರಂಹಕಾರವನ್ನೇ ತೋರಿಸಿರುವುದು ಸಾಕ್ಷಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿಕಾರಿದ್ದಾರೆ.

ರಾಜ್ಯದ ಸಮಸ್ಯೆ ಆಲಿಸಲು ಬಂದಿದ್ದ ಪ್ರಧಾನಿ ಜೊತೆಗಿನ ಮಮತಾ ವರ್ತನೆ ಅತ್ಯಂತ ನೋವಿನ ಸಂಗತಿ. ಸಾಂವಿಧಾನಿಕ ಕರ್ತವ್ಯ ಸಾರ್ವಜನಿಕ ಸೇವೆಗಿಂತ, ರಾಜಕೀಯ ಭಿನ್ನಾಭಿಪ್ರಾಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದಕ್ಕೆ ಒಂದು ಉದಾಹರಣೆ. ಇದು ಭಾರತದ ಒಕ್ಕೂಟ ವ್ಯವಸ್ಥೆಯ ಮೂಲ ಸ್ಫೂರ್ತಿಗೆ ಧಕ್ಕೆ ತರುವಂಥದ್ದು ಎಂದು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಟೀಕಿಸಿದ್ದಾರೆ. ಇನ್ನು ಇದು ಭಾರತದ ಸಂಪದ್ಭರಿತ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಒಂದು ಕರಾಳ ದಿನ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗುಡುಗಿದ್ದಾರೆ.

ಅದಾಗಿಯೂ ಪ್ರಧಾನಿ ಮೋದಿ ಯಾಸ್ ಚಂಡಮಾರುತ 1,000 ಕೋಟಿ ರೂ. ತುರ್ತು ಪರಿಹಾರ ಘೋಷಿಸಿದ್ದಾರೆ. ದೇಶದ ಉನ್ನತ ಸ್ಥಾನದಲ್ಲಿರುವ ಪ್ರಧಾನಿಗೆ ಈ ರೀತಿ ಅವಮಾನ ಮಾಡಿರುವುದು ಸರಿಯಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Leave A Reply

Your email address will not be published.