ಟೈಮ್ ಬಾಂಬರ್ ಉಗ್ರನ ಕೈಲಿ ಆಟೋ ಚಾರ್ಜಿಗೆ ಹಣವಿರಲಿಲ್ಲವಂತೆ !!
ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬಿಟ್ಟು ವಾಪಸ್ಸು ಅಲ್ಲಿಂದ ಮರಳುವಾಗ ಆತ ಕದ್ರಿ ದೇವಸ್ಥಾನಕ್ಕೆ ಬಿಡುವಂತೆ ರಿಕ್ಷಾ ಚಾಲಕನಿಗೆ ಕೇಳಿಕೊಂಡಿದ್ದನೆಂದು ಈಗ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಮೊದಲು ಈ ಟೈಮ್ ಬಾಂಬರ್ ನು ವಿಮಾನ ನಿಲ್ದಾಣದ ಹತ್ತಿರವಿರುವ ಕೆಂಜಾರುಗೆ ಸಾರಿಗೆ ಬಸ್ಸಿನಲ್ಲಿ ಬಂದಿದ್ದ. ಆನಂತರ ವಿಮಾನ ನಿಲ್ದಾಣಕ್ಕೆ ನಡೆದುಕೊಂಡೇ ಹೋಗಿ ಅಲ್ಲಿ ಬಾಂಬಿಟ್ಟು ಬಂದಿದ್ದ. ವಾಪಸ್ಸು ಬರುವಾಗ ನಡಕೊಂಡು ಬರುತ್ತಿದ್ದ. ಮಾರ್ಗಮಧ್ಯೆ ಒಂದು ರಿಕ್ಷಾ ಬಂದಾಗ ಅದಕ್ಕೆ ಕೈ ಅಡ್ಡ ಹಾಕಿ ” ಎಂಕ್ ಕದ್ರಿ ದೇವಸ್ಥಾನೊಗ್ ಪೋವೊಡು ; ಏಥಾಪುಂಡು ? ” ಎಂದು ತುಳುವಿನಲ್ಲೇ ಕೇಳಿದ್ದ.
ಅದಕ್ಕೆಆಟೋ ರಿಕ್ಷಾದ ಹುಡುಗ ” ಇರ್ನೂತ್ತೈವ ” ಎಂದಿದ್ದಾನೆ. ಆಗ ವ್ಯಕ್ತಿ ಚರ್ಚೆಗೆ ಇಳಿದಿದ್ದಾನೆ. ಆದರೆ, ರಿಕ್ಷಾದವನು ತನಗೆ ಬೇರೆ ಕಡೆ ಹೋಗಬೇಕೆಂದು ಬಾಂಬರ್ ಅನ್ನು ಕಾವೂರು ಬಳಿ ಹರಿಯುವ ಫಲ್ಗುಣಿ ನದಿಯ ಬ್ರಿಡ್ಜ್ ಬಳಿ ಇಳಿಸಿ ಹೋಗಿದ್ದಾನೆ. ಆನಂತರ ಅಲ್ಲಿಂದ ಅದೃಶ್ಯವಾಗಿದ್ದಾನೆ ಎನ್ನುವುದು ಒಂದು ವಾದ.
ಆದರೆ, ಪೊಲೀಸರು ಹೇಳುತ್ತಿರುವ ಈ ಸಾಧ್ಯತೆಯನ್ನು ನಂಬಲಾಗುವುದಿಲ್ಲ. ಟೆರರಿಸ್ಟ್ ಒಬ್ಬ, ರಿಕ್ಷಾ ಚಾರ್ಜ್ ಗಾಗಿ ಚೌಕಾಶಿ ಮಾಡುತ್ತಾನೆಯೇ? ಹೆಚ್ಚು ಬಾಡಿಗೆ ಕೊಡಬೇಕೆಂದು ನಡೆದುಕೊಂಡು ಹೋಗುತ್ತಾನೆಯೇ ? ಉಗ್ರ ಕೃತ್ಯ ಮತ್ತು ಕ್ರಿಮಿನಲ್ಲುಗಳು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಎಸ್ಕೇಪ್ ಆಗುವ ಅವಸರ ದಲ್ಲಿರುತ್ತಾರೆ. ಅದೂ ನೂರಿನ್ನೂರು ರೂಪಾಯಿಗೋಸ್ಕರ ಚರ್ಚೆಗಿಳಿದು, ನಂತರ ಒಪ್ಪದೇ ಕಾವೂರಿನಲ್ಲೇ ಇಳಿಯುತ್ತಾನೆಂಬುದನ್ನು ಒಪ್ಪಲಾಗುವುದಿಲ್ಲ. ಉಗ್ರನಿಗೆ ಆಟೋ ಚಾರ್ಜಿಗೆ ಹಣವಿರಲಿಲ್ಲ ಅಂತ ಯಾರಿಗಾದರೂ ಹೇಳಿದರೆ ಜನ ಎದ್ದು ಬಿದ್ದು ನಗುತ್ತಾರೆ.
ಸಾಧಾರಣವಾಗಿ ಇಂತಹ ಕೃತ್ಯ ಎಸಗುವ ವ್ಯಕ್ತಿಗಳು, ತಮ್ಮದೇ ಯಾವುದಾದರೂ ವಾಹನವನ್ನು ಇಟ್ಟುಕೊಂಡಿರುತ್ತಾರೆ. ಅಂತದ್ದರಲ್ಲಿ ಈ ಬಾಂಬರ್ ಆಟೋ ಚಾರ್ಜ್ ಜಾಸ್ತಿ ಕೇಳಿದ ಅಂತ ಕದ್ರಿಗೆ ಹೋಗಬೇಕಂದುಕೊಂಡವನು ಕಾವೂರಿನಲ್ಲೇ ಇಳಿದ ಅನ್ನುವುದು ಯಾವುದೇ ದೃಷ್ಟಿಯಿಂದಲೂ ತಾಳೆ ಕೂಡಿ ಬರುವುದಿಲ್ಲ.
ಈಗ ಕದ್ರಿಯಲ್ಲಿ ಬ್ರಹ್ಮೋತ್ಸವ ನಡೆಯುತ್ತಿದ್ದು ದಿನವಹಿ 50000 ಕ್ಕೂ ಮಿಕ್ಕಿದ ಜನರು ಅಲ್ಲಿ ಸೇರುತ್ತಿದ್ದು ಕದ್ರಿ ಕೂಡ ಉಗ್ರರ ವಕ್ರದೃಷ್ಟಿಗೆ ಬಿದ್ದಿದೆ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಅಷ್ಟೇ ಅಲ್ಲ ಇತರ, ಜನನಿಭಿಡ ದೇವಸ್ಥಾನಗಳಿರುವ ಪ್ರದೇಶಗಳಾದ ಕಟೀಲು, ಸುಬ್ರಮಣ್ಯ, ಧರ್ಮಸ್ಥಳ ಮುಂತಾದ ದೇಗುಲಗಳೂ ಆತಂಕದ ಸ್ಥಿತಿಯಲ್ಲಿವೆ.
ಈ ಎಲ್ಲಾ ದೇಗುಲಗಳಲ್ಲೂ ಭದ್ರತೆಯನ್ನು ಹೆಚ್ಚಿಸಲಾಗಿದೆಯಾದರೂ, ಅದರ ಸೂಕ್ತತೆಯ ಬಗ್ಗೆ ಚರ್ಚೆಗಳಾಗುತ್ತಿದೆ. ಬಿಗಿ ಭದ್ರತೆಯ ಏರ್ ಪೋರ್ಟ್ ಗೇ ಬಾಂಬಿಟ್ಟು ಬರುತ್ತಾರೆ. ನಮ್ಮ ದೇಗುಲಗಳ ಮುಂದೆ ನಿಲ್ಲುವ ಲಾಠಿ ಟಕಾಯಿಸುತ್ತ ನಿಲ್ಲುವ ಒಬ್ಬಿಬ್ಬ ಪೊಲೀಸು ಮತ್ತು ಪೊಲೀಸು ಡ್ರೆಸ್ಸಿನಲ್ಲಿರುವ ಗೃಹರಕ್ಷಕ ದಳದ ಸಿಬ್ಬಂದಿಯಿಂದ ದೇವಸ್ಥಾನಕ್ಕೆ ಹರಿದು ಬರುವ ಸಾಗರೋಪಾದಿಯ ಜನಸಂಖ್ಯೆಯ ನಿಯಂತ್ರಣ ಮತ್ತು ಮಾನಿಟರಿಂಗ್ ಸಾಧ್ಯವೇ ?
ನಮ್ಮ ಎಲ್ಲ ಜನದಟ್ಟಣೆಯಿರುವ ದೇಗುಲಗಳಿಗೂ ಚೆಕ್ ಪೋಸ್ಟ್ ಮಾದರಿಯ ‘ ಸಿಂಗಲ್ ಎಂಟ್ರಿ ; ಸಿಂಗಲ್ ಎಕ್ಸಿಟ್ ‘ ದ್ವಾರದ ಮೂಲಕ ಒಳ ಹೋಗುವ ಮತ್ತು ಹೊರಬರುವ, ಅತ್ಯಾಧುನಿಕ ಸೆಲ್ಫ್ ಡಿಟೆಕ್ಷನ್ ಸಿಸ್ಟಮ್ ಅನ್ನು ಅಳವಡಿಸಿಕೊಳ್ಳಬೇಕು. ದೇವಸ್ಥಾನಗಳೆಲ್ಲ ಇವತ್ತು ಕೇವಲ ಛತ್ರಗಳು, ರಸ್ತೆಗಳು ಇತ್ಯಾದಿ ಇನ್ಫ್ರಾ ಸ್ಟ್ರಚರ್ ನ ಮುಂದುವರಿಕೆಯಲ್ಲಿಯೇ ಇವೆ. ಭದ್ರತೆಯ ಬಗ್ಗೆ ಕೂಡ ದೇವಸ್ಥಾನಗಳು, ಚರ್ಚುಗಳು ಮತ್ತು ಮಸೀದಿಯ ಆಡಳಿತ ಮಂಡಳಿಗಳು ಯೋಜನೆ ಹಾಕಿ ಫೂಲ್-ಪ್ರೂಫ್ ಸಿಸ್ಟಮ್ ಅನ್ನು ಜಾರಿಗೆ ತರಬೇಕು.