ಇಂದಿನಿಂದ ದಕ್ಷಿಣಕನ್ನಡ ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಚಂಡಮಾರುತದ ಮಳೆಯ ಅಬ್ಬರ | ಯಲ್ಲೋ ಅಲರ್ಟ್ ಘೋಷಣೆ
ಈ ವರ್ಷದ ಮೊದಲ ಚಂಡಮಾರುತ ದೇಶದ ಕರಾವಳಿ ಜಿಲ್ಲೆಗಳಿಗೆ ಅಪ್ಪಳಿಸಲು ಕ್ಷಣಗಣನೆ ಆರಂಭವಾಗಿದೆ. ಈ ಚಂಡಮಾರುತಕ್ಕೆ “ಟೌಕ್ಷೇ” (Tauktae) ಎಂದು ನಾಮಕರಣ ಮಾಡಲಾಗಿದ್ದು, ಅರಬ್ಬಿಸಮುದ್ರದಲ್ಲಿ ದೊಡ್ಡ ಅಬ್ಬರ ಎಬ್ಬಿಸಲಿದೆ. ಕರಾವಳಿ ಭಾಗದಲ್ಲಿ ಇಂದಿನಿಂದಲೇ ಯಲ್ಲೋ ಅಲರ್ಟ್ ಘೋಷಣೆ ಆಗಿದೆ.
ಹೀಗಾಗಿ ಕರಾವಳಿ ಭಾಗದಲ್ಲಿ ಮುಂದಿನ ವಾರಗಳ ಕಾಲ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮೇ 12 ರಿಂದಲೇ ಕರಾವಳಿಯಲ್ಲಿ ಚಂಡಮಾರುತದ ಮಳೆ ಸುರಿಯಲಿದೆ.
ದಕ್ಷಿಣ ಒಳನಾಡಿನ ಚಿಕ್ಕಮಗಳೂರು,ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಬೆಂಗಳೂರು, ಬೆಂ.ಗ್ರಾಮಾಂತರ,
ಚಿಕ್ಕಬಳ್ಳಾಪುರ,ದಕ್ಷಿಣ ಚಾಮರಾಜನಗರ ಮತ್ತು ಯಾದಗಿರಿಯಲ್ಲಿ ಮುಂದಿನ 4 ದಿನ ಸಾಧಾರಣ ಮಳೆಯಾಗಲಿದೆ.
ಮೇ. 15 ರಂದು ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಲಿದ್ದು ಗಂಟೆಗೆ 40 ರಿಂದ 60 ಕಿ.ಮೀ ವೇಗದಿಂದ ಲಕ್ಷದ್ವೀಪ, ಮಾಲೀವ್ ಪ್ರದೇಶಗಳಿಗೆ ಅಪ್ಪಳಿಸಲಿದೆ. ಕೇರಳ, ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ಕರಾವಳಿ ತೀರಗಳಲ್ಲಿ ಭಾನುವಾರದವರೆಗೆ ಇದೇ ರೀತಿಯಲ್ಲಿ ಗಾಳಿ ಬೀಸುತ್ತವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಮೇ 16ರಂದು ಚಂಡಮಾರುತ ತನ್ನ ಶಕ್ತಿ ಹೆಚ್ಚಿಸಿಕೊಂಡು ಅತ್ಯಂತ ಪ್ರಬಲ ಮಟ್ಟ ತಲುಪಲಿದ್ದು, ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಕರ್ನಾಟಕ, ಕೇರಳ, ಗೋವಾದ ಕಡಲಕಿನಾರೆಯಲ್ಲಿ ಜೋರು ಗಾಳಿಯ ನಿರೀಕ್ಷೆ ಇದ್ದು ಎಚ್ಚರ ವಹಿಸಲು ಸೂಚನೆ ನೀಡಲಾಗಿದೆ.
ಈಗಾಗಲೇ ಬಾಂಗ್ಲಾ ತನ್ನ ದೇಶದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ಗುಜರಾತ್, ಮಹಾರಾಷ್ಟ್ರ, ಮತ್ತು ಕೇರಳದ ಕಡೆಗೆ ಈ ಚಂಡಮಾರುತ ಸಾಗಲಿದೆ . ಲಕ್ಷದ್ವೀಪ, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕೂಡ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.