ಪತ್ನಿಯ‌ ಕೊಂದು ಶವದ ಜತೆ ಸೆಲ್ಫಿ ತೆಗೆದು ಸ್ಟೇಟಸ್ ಹಾಕಿದ ಭೂಪ

ಇಲ್ಲೊಬ್ಬ ತನ್ನ ಪತ್ನಿಯ‌ ಕೊಂದು ಶವದ ಜತೆ ಸೆಲ್ಫಿ ತೆಗೆದು ಸ್ಟೇಟಸ್ ಹಾಕಿದ್ದು ಜತೆಗೆ ಸ್ನೇಹಿತರಿಗೆ,ಬಂಧುಗಳಿಗೆ ಕಳುಹಿಸಿ ವಿಕೃತಿ ಮೆರೆದ ಬಗ್ಗೆ ಆಂದ್ರಪ್ರದೇಶದ ವಿಶಾಖಪಟ್ಟಣದಿಂದ ವರದಿಯಾಗಿದೆ.

ಈ ಘಟನೆ ವಿಶಾಖಪಟ್ಟಣ ಜಿಲ್ಲೆಯ ಬಡವೇಲು ಪಟ್ಟಣದ ಸುಂದರಯ್ಯ ಕಾಲನಿಯಲ್ಲಿ ನಡೆದಿದೆ.

ಮಂಜುಳಾ (23) ಎಂಬಾಕೆ ಪತಿಯಿಂದಲೇ ಹತ್ಯೆಯಾದ ದುರ್ದೈವಿ.

ಮಂಜುಳ ವಿಶಾಖಪಟ್ಟಣಂ ಜಿಲ್ಲೆಯ ಜಮ್ಮಲಮಡುಗು ಪಟ್ಟಣದ ನಿವಾಸಿ ನಾಗರಾಜ ಎಂಬಾತನೊಂದಿಗೆ ವಿವಾಹವಾಗಿದ್ದು, ಕೆಲವೊಂದು ಸಮಸ್ಯೆಗಳಿಂದಾಗಿ ಮದುವೆ ಆದ ಒಂದೇ ತಿಂಗಳಲ್ಲಿ ಇಬ್ಬರ ಸಂಬಂದ ಮುರಿದು ಬಿದ್ದಿತ್ತು.

ಇದರ ನಡುವೆ ಮಂಜುಳಾ ಕೆಲಸದ ಮೇಲೆ ಕುವೈತ್​ಗೆ ತೆರಳಿದಳು.

ಕಳೆದ 8 ತಿಂಗಳ ಹಿಂದೆ ಮುಂಜುಳಾ ಜಮ್ಮಲಮಡುಗು ಪಟ್ಟಣಕ್ಕೆ ಮರಳಿದ್ದಳು.

ಇದೇ ವೇಳೆ ತನ್ನ ದೂರದ ಸಂಬಂಧಿ ಹರಿ ಎಂಬ ಯುವಕನನ್ನು ಪ್ರೀತಿಸಿ ಕಳೆದ ನವೆಂಬರ್​ನಲ್ಲಿ ಇಬ್ಬರ ಮದುವೆಯಾಗಿದ್ದಳು.

ಮುಂಜುಳ ಪತಿ ಹರಿಯು ಕಡಪ ಜಿಲ್ಲೆಯಲ್ಲಿ ಕಪುರಾಮಂಟುವಿನಲ್ಲಿ ಪೇಂಟರ್​ ಆಗಿ ಕೆಲಸ ಮಾಡುತ್ತಿದ್ದ.

ಮೊದಲೇ ಮದ್ಯ ವ್ಯಸನಿಯಾಗಿದ್ದ ಹರಿ, ಮಂಜುಳಾಳ ಮೇಲೆ ಅನುಮಾನ ವ್ಯಕ್ತಪಡಿಸಿ ಕಿರುಕುಳ ನೀಡಲು ಶುರು ಮಾಡಿದ. ಹರಿಯ ತಾಯಿಯು ಸಹ ಹರಿಯ ಜತೆಗೆ ಸೇರಿ ಕಿರುಕುಳ ನೀಡುತ್ತಿದ್ದಳು.

ಇಬ್ಬರ ನಡುವಿನ ನಿತ್ಯ ಗಲಾಟೆ ನಡೆಯುತ್ತಿತ್ತು, ಇಬ್ಬರೂ ಒಂದೇ ಕಡೆ ಇದ್ದರೆ ಕಿತ್ತಾಟ ಕಡಿಮೆ ಆಗಬಹುದು ಎಂದು ಮನೆಯವರು ಇಬ್ಬರನ್ನು ಬಡವೇಲು ಪಟ್ಟಣದ ಸುಂದರಯ್ಯ ಕಾಲನಿಗೆ ಸ್ಥಳಾಂತರ ಮಾಡಲಾಗಿತ್ತು.

ಹೀಗಿದ್ದರೂ ಕಳೆದ ಶುಕ್ರವಾರ ರಾತ್ರಿ ಹರಿ ಮತ್ತು ಮಂಜುಳಾ ನಡುವೆ ಮತ್ತೆ ಜಗಳ ನಡೆದಿದೆ. ಕಿತ್ತಾಟ ಮುಂದುವರಿದು ತಾರಕಕ್ಕೇರಿ ನಿಯಂತ್ರಣ ಕಳೆದುಕೊಂಡ ಹರಿ ಅದೇ ದಿನ ಮಧ್ಯರಾತ್ರಿ ಮಂಜುಳಾಳನ್ನು ಬರ್ಬರವಾಗಿ ಕೊಂದೇ ಬಿಟ್ಟಿದ್ದಾನೆ.

ಈ ಕುರಿತು ಈತನನ್ನು ವಿಚಾರಿಸಲಾಗಿ ಪಾರ್ಟಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಬಳಿಕ ತಾನೂ ಸಹ ಎಡಭಾಗದ ಎದೆಗೆ ಚುಚ್ಚಿಕೊಳ್ಳುವ ಮೂಲಕ ಆತ್ಮಹತ್ಯೆಯ ನಾಟಕವಾಡಿದ್ದಾನೆ. ಮರುದಿನ ಬೆಳಗ್ಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯ ಶವದ ಜತೆ ಸೆಲ್ಫಿ ತೆಗೆದುಕೊಂಡು ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ವಾಟ್ಸ್​ಆ್ಯಪ್​ ಮಾಡಿದ್ದಾನೆ. ಈ ಮೂಲಕ ವಿಚಾರ ಪೊಲೀಸರ ಗಮನಕ್ಕೆ ಬಂತು.

ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ, ಮಂಜುಳಾ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಘಟನೆ ಕುರಿತು ಮಂಜುಳಾಳ ತಾಯಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಆರಂಭಿಸಿದ್ದಾರೆ.

Leave A Reply

Your email address will not be published.