ಕೋವಿಡ್ ಆಸ್ಪತ್ರೆಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದ ಯುವಕ ಅರೆಸ್ಟ್
ಆಸ್ಪತ್ರೆಗೆ ನುಗ್ಗಿ ಗಲಾಟೆ ಮಾಡಿ ವೈದ್ಯರು-ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಯುವಕ ಜೈಲುಪಾಲಾಗಿದ್ದಾನೆ. ಬುಧವಾರ ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ತಪ್ಪು ಗ್ರಹಿಕೆ ಮಾಡಿಕೊಂಡ ಕೆಲ ಕೊರೊನಾ ಸೋಂಕಿತರು ಆಕ್ಸಿಜನ್ ಖಾಲಿ ಆಗಿದೆ. ನಮಗೆ ಆಕ್ಸಿಜನ್ ಸಿಗ್ತಿಲ್ಲ ನಾವ್ ಸತ್ತೋಗಬಹುದು ಅಂತ ಕೆಲ ಕೊರೊನಾ ಸೋಂಕಿತರು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದರು.
ಇದರಿಂದ ಆತಂಕದಿಂದ ಕೋವಿಡ್ ಆಸ್ಪತ್ರೆ ಬಳಿ ಬಂದಿದ್ದ ಜಾತವಾರದ ಜಗದೀಶ್ ಹಾಗೂ ಪವನ್ ಸೇರಿ ಇನ್ನಿತರರು ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಹರಿಹಾಯ್ದಿದ್ದರು. ಈ ವೇಳೆ ಇಬ್ಬರು ಯುವಕರಯ ಆಟೋದಲ್ಲಿ ತಾವೇ ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಬಂದು ಆಸ್ಪತ್ರೆಯ ಗೇಟ್ ಒಡೆದು ಒಳನುಗ್ಗಿ ತಗೊಳ್ಳಿ ಆಕ್ಸಿಜನ್ ನಾವ್ ಕೊಡ್ತೀವಿ ಅಂತ ಬಹಳ ಜೋರಾಗಿ ಏರು ಧ್ವನಿಯಲ್ಲಿ ವೈದ್ಯರ ವಿರುದ್ಧ ಅವಾಚ್ಯ ಶಬ್ದಗಳನ್ನ ಬಳಸಿ ಹರಿಹಾಯ್ದಿದ್ದರು.
ಈ ವೇಳೆ ಜಿಲ್ಲಾಸ್ಪತ್ರೆಯ ಡಿ.ಎಸ್ ರಮೇಶ್ ಹಾಗೂ ಡಿ.ಎಚ್.ಓ ಗಲಾಟೆ ಮಾಡ್ತಿದ್ದವರಿಗೆ ಪಿಪಿಇ ಕಿಟ್ ಹಾಕಿ ಆಕ್ಸಿಜನ್ ಇದೆ ಅಂತ ತೋರಿಸಿದ ಮೇಲೆ ಆಕ್ರೋಶಿತರು ಸುಮ್ಮನಾಗಿದ್ದರು. ಈ ಸಂಬಂಧ ಡಿ.ಎಸ್ ರಮೇಶ್ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಪವನ್ ಎಂಬಾತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.