ಉದ್ಯಮಿಯ ಅಪಹರಣ 7 ಆರೋಪಿಗಳ ಬಂಧನ| ಮಂಗಳೂರು ಪೊಲೀಸರ ಕಾರ್ಯಾಚರಣೆ
ಮಂಗಳೂರಿನ ಆನ್ಲೈನ್ ತರಬೇತಿ ಕೇಂದ್ರದ ಮುಖ್ಯಸ್ಥ ಅಹ್ಮದ್ ಅಶ್ರಫ್ ಮತ್ತವರ ಸ್ನೇಹಿತ ಜಾವಿದ್ ಎಂಬುವರನ್ನು ಅಪಹರಣಗೈದು ಹಣ, ಚಿನ್ನಾಭರಣ, ಜಮೀನು ದಾಖಲೆಪತ್ರಕ್ಕಾಗಿ ಒತ್ತಾಯಿಸಿದ ತಂಡವೊಂದರ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಮಂಗಳವಾರ ಪತ್ರಿಕಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಂಧಿತರನ್ನು ಅಹ್ಮದ್ ಇಕ್ಬಾಲ್, ಯಾಕೂಬ್, ಉಮರ್ ನವಾಫ್, ಸಂಶೀರ್, ಮಹಮ್ಮದ್ ಕೌಸರ್, ನೌಶಾದ್, ಶೇಖ್ ಮುಹಮ್ಮದ್ ರಿಯಾಝ್ ಎಂದು ತಿಳಿಸಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ ಮೂರು ಕಾರು, ತಲವಾರು, ಚಿನ್ನದ ನೆಕ್ಲೆಸ್, ಜಮೀನಿನ ದಾಖಲೆಪತ್ರ ವಶಪಡಿಸಲಾಗಿದೆ. ಅಹ್ಮದ್ ಅಶ್ರಫ್ ನಡೆಸುವ ಉದ್ಯಮಕ್ಕೆ ಅಹ್ಮದ್ ಇಕ್ಬಾಲ್ ಬಂಡವಾಳ ಹೂಡಿದ್ದು ಬಳಿಕ ಅವರ ಮಧ್ಯೆ ಭಿನ್ನಾಭಿಪ್ರಾಯ ಬಂದಿತ್ತು ಎನ್ನಲಾಗಿದೆ. ಆ ಹಿನ್ನಲೆಯಲ್ಲಿ ಅಹ್ಮದ್ ಅಶ್ರಫ್ನನ್ನು ಅಹ್ಮದ್ ಇಕ್ವಾಲ್ ಎ.22ರಂದು ಅಪಹರಿಸಿ ಎರಡು ದಿನ ಕೂಡಿ ಹಾಕಿ ದೈಹಿಕ ಹಲ್ಲೆ ನಡೆಸಿ ಹಣಕ್ಕಾಗಿ ಒತ್ತಾಯಿಸಿದ್ದ ಎಂದು ದೂರಲಾಗಿತ್ತು.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಲಪಾಡಿ ಬಳಿ ಅಪಹರಣಕ್ಕೊಳಗಾದ ಇಬ್ಬರನ್ನು ರಕ್ಷಿಸಿ 7 ಮಂದಿಯನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಉಮರ್ ನವಾಫ್ಗೆ ಕೋವಿಡ್ ಪಾಸಿಟಿವ್ ಆಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.