ಅಂತರ್ಜಲ ಮರುಪೂರಣದ ವಿನೂತನ ವಿಧಾನ । ಕೊಯ್ಯೂರಿನ ಪ್ರಚಂಡ ಭಾನು ಭಟ್ ರ ಪ್ರಯೋಗ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಪಾ೦ಬೇಲು ಎಂಬಲ್ಲಿ ಪ್ರಚಂಡ ಭಾನು ಭಟ್ ರ ಪಿತ್ರಾರ್ಜಿತವಾಗಿ ಬಂದ ಆಸ್ತಿಯಿದೆ. ಆ ಜಾಗದಲ್ಲಿಯೇ ಭಟ್ಟರು ತಮ್ಮ ವಿಶಿಷ್ಟ ಅಂತರ್ಜಲ ಮರುಪೂರಣ ಪ್ರಾಜೆಕ್ಟ್ ಕೈಗೆತ್ತಿಕೊಂಡದ್ದು.

ಇವತ್ತಿಗೆ ಅವರು ಹಲವು ಕೋಟಿಗಳ ಕೋಟ್ಯಾಧಿಪತಿ. 7000 ಫಲ ಬಿಡುವ ಅಡಿಕೆ ಗಿಡಗಳು, 300 ತೆಂಗಿನ ಮರಗಳು, 900 ರಬ್ಬರು ಹಾಲು ನೀಡುವ ಗಿಡಗಳು, ಒಂದಷ್ಟು ಕೊಕ್ಕೋ ಗಿಡಗಳು ಮತ್ತುಅಗರ್ ವುಡ್ ನ ಗಿಡಗಳು ಇವರ ತೋಟದಲ್ಲಿವೆ.
ಇವುಗಳ ಜತೆಗೆ ಹಲವು ಫಲವಸ್ತುಗಳಿರುವ ತೋಟ ಇವರದು. ಪ್ರಚಂಡ ಭಾನು ಭಟ್ ರಿಗೆ ಒಟ್ಟು 30 ಎಕರೆ ಫಲವತ್ತಾದ ಕೃಷಿ ಭೂಮಿಯಿದೆ.

ಭಟ್ಟರ ಕೃಷಿ ಭೂಮಿಯ ಭುಜ ಸವರಿಕೊಂಡೇ ಹರಿಯುತ್ತಿದೆ ಬೆಳ್ತಂಗಡಿಯ ನದಿ. ಆ ನದಿಗೆ ಬೆಳ್ತಂಗಡಿ ನದಿ ಅಂತಲೇ ಜನ ಕರೆಯೋದು. ಆದರೆ ಅದರ ಹೆಸರು ಸೋಮಾವತಿ ನದಿ. ಒಂದು ಕಾಲಕ್ಕೆ ಬರಿದಾಗಿದ್ದ ಭೂಮಿಯನ್ನು ಈಗ ಭಟ್ಟರು ಹಸಿರಾಗಿಸಿದ್ದಾರೆ. ಈಗ ಭೂಮಿ ಭರ್ಜರಿ ಉತ್ಪತ್ತಿ ಕೊಡುತ್ತಿದೆ.

ಅವರ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ದೊಡ್ಡ ಮಗ ಜರ್ಮನಿಯಲ್ಲಿ ಇಂಜಿನೀರಿಂಗ್ ನಲ್ಲಿ ಪೋಸ್ಟ್ ಗ್ರಾಜುಯೇಷನ್ ಮಾಡಿ ಅಲ್ಲಿಯೇ ಕೆಲಸದಲ್ಲಿದ್ದಾನೆ. ಮತ್ತೊಬ್ಬ ಮಗ ಆರ್ಚಿಟೆಕ್ಟು. ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾನೆ. ಇನ್ನೊಬ್ಬಾತ, ಈಗ ಅಗ್ರಿಕಲ್ಚರ್ ಬಿಎಸ್ಸಿ ಓದುತ್ತಿದ್ದಾನೆ.

ಲೈಫ್ ಎಲ್ಲ ರೀತಿಯಿಂದಲೂ ಸೆಟ್ಟಲ್ ಆಗಿದೆ. ಲಕ್ಷಾಂತರ ಆದಾಯ ಕೃಷಿಯೊಂದರಿಂದಲೇ ಬರುತ್ತಿದೆ. ಮಕ್ಕಳು ದೊಡ್ಡ ದುಡ್ಡು ದುಡಿಯುತ್ತಿದ್ದಾರೆ. ಹಾಗಂತ ಪ್ರಚಂಡ ಭಾನು ಭಟ್ಟರು ಸುಮ್ಮನೆ ಕುಳಿತಿಲ್ಲ. ತಮ್ಮ ದಿನವಿಡೀ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮಧ್ಯೆಯೇ ವಿನೂತನ ಪ್ರಯೋಗಕ್ಕಿಳಿದಿದ್ದಾರೆ. ಭೂಮಿಯ ಒಡಲು ಬರಿದಾಗುತ್ತಿರುವ ಇವತ್ತಿನ ದಿನಗಳಲ್ಲಿ ಭೂಮಿಯ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೈ ಹಾಕಿದ್ದಾರೆ.

ಏನಿದು ಪ್ರಯೋಗ ?

ತಮ್ಮ ಕೃಷಿ ಭೂಮಿಯ ಪಕ್ಕದಲ್ಲೇ ಹರಿಯುವ ಸೋಮಾವತಿ ನದಿಯಿಂದ ತಮ್ಮ ಮೂರೂವರೆ ಇಂಚು ನೀರು ಬರುತ್ತಿರುವ ಆಕ್ಟಿವ್ ಬೋರ್ ವೆಲ್ ನ ಒಳಗೆ ಹೋಗುವಂತೆ ಎರಡಿಂಚಿನ ಪೈಪನ್ನು ಹಾಕಿದ್ದಾರೆ. ಬೋರ್ ವೆಲ್ಲಿನ ಒಳಗೆ ಅದು ಸುಮಾರು ಐವತ್ತು ಫೀಟುಗಳಷ್ಟುಒಳಕ್ಕೆ ಇಳಿದಿದೆ. ಬೋರ್ ವೆಲ್ ಕೊರೆದ ನೆಲದ ಮಟ್ಟಕ್ಕಿಂತ ನದಿಯ ನೀರಿನ ಮಟ್ಟ ಸರಿ ಸುಮಾರು 20 ಫೀಟುಗಳಷ್ಟು ಆಳದಲ್ಲಿದೆ.

ನದಿಯಿಂದ ಹೀಗೆ ಬೋರ್ ವೆಲ್ ನೊಳಕ್ಕೆ ಹಾಕಿದ ಎರಡಿಂಚಿನ ಪೈಪಿನ ಮೂಲಕ ನೀರು ನೇರವಾಗಿ ಬೋರ್ ವೆಲ್ ನೊಳಕ್ಕೆ ‘ ಸೈಫನ್ ‘ ಆಗುತ್ತದೆ. ಅದೇ, ನಾವು ಸೀಮೆ ಎಣ್ಣೆಯನ್ನು ದೊಡ್ಡ ಕ್ಯಾನ್ ನಿಂದ ಇನ್ನೊಂದು ಚಿಕ್ಕ ಡಬ್ಬಕ್ಕೆ ಎಳೆಯುತ್ತೇವಲ್ಲವೇ, ಅದೇ ಸಿದ್ದಾಂತ ಇಲ್ಲಿ ಕೂಡ ಕೆಲಸಮಾಡುತ್ತದೆ. ಒಂದು ಸಲ ನೀರು ಸೈಫನ್ ಆದರೆ, ಆ ನಂತರ ನಿರಂತರವಾಗಿ ನೀರು ಬೋರ್ ವೆಲ್ ನೊಳಕ್ಕೆ ತನ್ನಿಂದ ತಾನೇ ಗ್ರಾವಿಟಿ ವ್ಯತ್ಯಯದಿಂದಾಗಿ ಹರಿಯುತ್ತದೆ.

ಪ್ರಚಂಡ ಭಟ್ಟರ ಎಡಭಾಗಕ್ಕಿರುವುದು ನದಿಯೊಳಕ್ಕೆ ಹೋದ ಪೈಪು. ಬಲಭಾಗದ ಪೈಪು ಕೊಳವೆ ಬಾವಿಯೊಳಕ್ಕೆ ಹೋಗಿದೆ.

ಮೊದಲ ಸಲ ಪೈಪಿನೊಳಕ್ಕೆ ನೀರು ತುಂಬಿಸಬೇಕು. ಅದಕ್ಕೆಂದೇ ಮಧ್ಯೆ ಒಂದು 500 ಲೀಟರಿನ ಸಿಂಟೆಕ್ಸ್ ಟ್ಯಾಂಕನ್ನು ಅಳವಡಿಸಿದ್ದಾರೆ. ಪೈಪಿನಲ್ಲಿ ಭರ್ತಿ ನೀರು ತುಂಬಿದ ನಂತರ ವಾಲ್ವು ಓಪನ್ ಮಾಡಿ ಬಿಟ್ಟರೆ ಸಾಕು, ನೀರು ಭರ್ ಎಂದು ನದಿಯಿಂದ ಸೀದಾ ಬೋರ್ ವೆಲ್ ನೊಳಕ್ಕೆ ಹರಿಯುತ್ತದೆ. ನದಿಯ ಸೈಡ್ ನಲ್ಲಿ ಪೈಪಿಗೆ ನಾನ್ ರಿಟರ್ನ್ ವಾಲ್ವ್ (NRV) ಹಾಕಿದ್ದಾರೆ. ಆದ್ದರಿಂದ ಪೈಪು ಪದೇ ಪದೇ ಖಾಲಿಯಾಗಿ ಅದಕ್ಕೆ ಆಗಾಗ್ಗೆ ನೀರು ತುಂಬಿಸುವ ತೊಂದರೆಯಿಲ್ಲ. ಮತ್ತು ನದಿಯ ನೀರಿನಿಂದ ಸಣ್ಣ ಮೀನುಗಳು ಮತ್ತು ಕಸ ಇತ್ಯಾದಿಗಳು ಬೋರ್ ನೊಳಕ್ಕೆ ಹೋಗದಂತಿರಲು ಇನ್ ಲೆಟ್ ಪೈಪಿಗೆ ಮೆಶ್ ನ್ನು ಅಳವಡಿಸಿದ್ದಾರೆ.

ಬೋರ್ ನೊಳಗಿನ ಪೈಪಿನ ತುದಿಗೂ, ನದಿಯಲ್ಲಿನ ನೀರಿನ ಮಟ್ಟಕ್ಕೂ ಸುಮಾರು 25 ಅಡಿಗಳ ವ್ಯತ್ಯಾಸವಿರುವುದರಿಂದ ನೀರು ವೇಗವಾಗಿ ಹರಿಯುತ್ತದೆ. ನದಿಯಲ್ಲಿ ಹೀಗೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಅಂತರ್ಜಲವಾಗಿಸುವ ಕೆಲಸ ನದಿಯಲ್ಲಿನೀರು ಕಡಿಮೆ ಆಗುವ ತನಕ ಮುಂದುವರೆಯಲಿದೆ.

ನೀರಿನ ಹರಿವನ್ನುವಿಸ್ವಲೈಸ್ ಮಾಡಲು, ನೀರು ಹರಿಯುವ ಪೈಪಿನ ಮಧ್ಯೆ ತಮ್ಮಲ್ಲಿದ್ದ ಹಳೆಯ ಪಂಪ್ ಒಂದರ ಇಂಫೆಲರ್ ಅನ್ನು ಜೋಡಿಸಿದ್ದಾರೆ. ನೀರು ನದಿಯಿಂದ ಬೋರ್ ವೆಲ್ ನೊಳಕ್ಕೆ ಹರಿಯುವಾಗ ಆ ಇಂಫೆಲ್ಲರ್ ತಿರುಗುತ್ತದೆ. ಆಗ ಇಂಫೆಲರ್ ಗೆ ಜೋಡಿಸಿರುವ ಶಾಫ್ಟ್ ತಿರುಗುತ್ತದೆ. ಕೆಳೆಗಿನ ಚಿತ್ರ ನೋಡಿ.

ಇಂಫೆಲರ್ ನ ಚಿತ್ರ । ಇಂಫೆಲರ್ ನ ಮೇಲ್ಬಾಗದಲ್ಲಿರುವ ರೌಂಡ್ ಶೇಪಿನ ಭಾಗ ನೀರು ಹರಿಯುವಾಗ ತಿರುಗುತ್ತದೆ.
ಪ್ರಚಂಡ ಭಾನು ಭಟ್ – ಏನಿದು ವಿಶಿಷ್ಟ ಹೆಸರು ?

”ಎಲ್ಲ ಸರಿ, ನೀವು ಅಂತರ್ಜಲ ಮರುಪೂರಣ ವಿಧಾನ ತಯಾರಿಸಿದ್ದರಲ್ಲಿ ಪ್ರಚಂಡರು, ಅದರಲ್ಲಿ ಎರಡು ಮಾತಿಲ್ಲ. ಆದರೆ, ನಿಮಗೆ ಈ ‘ ಪ್ರಚಂಡ ‘ ಹೆಸರು ಹೇಗೆ ಬಂತು ?” ಕುತೂಹಲದಿಂದ ಕೇಳಿದೆ.
” ಹೆಸರು ನಮ್ಮ ಚಾಯ್ಸ್ ಅಲ್ಲವಲ್ಲ. ಇದು ನನ್ನ ಅಪ್ಪಇಟ್ಟ ಹೆಸರು. ನಾನು ಹುಟ್ಟಿದ್ದು ಮಟ ಮಟ ನಡು ಮಧ್ಯಾಹ್ನ. ಆಗ ಸೂರ್ಯ ಪ್ರಚಂಡವಾಗಿ ಮೆರೆಯುತ್ತಿದ್ದ ! ಹಾಗೆ ನನಗೆ ಪ್ರಚಂಡ ಭಾನು ಅಂತ ಹೆಸರಿಟ್ಟರು. ”

ಪ್ರತಿನಿಮಿಷಕ್ಕೆ 500 ಲೀಟರಿನಷ್ಟು ನೀರು ಕೊಳವೆಬಾವಿಯೊಳಕ್ಕೆ ಸೇರಿಕೊಳ್ಳುತ್ತದೆ. ಅಂದರೆ ಗಂಟೆಗೆ 30000 ಲೀಟರ್ ನೀರು ಅಂತರ್ಜಲವಾಗಿ ಮಾರ್ಪಾಡಾಗುತ್ತದೆ. ದಿನಕ್ಕೆ ಬರೋಬ್ಬರಿ 7,20,000 ಲೀಟರು !

ಅಂದರೆ ಸರಿ ಸುಮಾರು 500 ಅಡಿಕೆ ಗಿಡಗಳಿರುವ 72 ಕುಟುಂಬಗಳ ಅಡಿಕೆ ಕೃಷಿಗೆ ದಿನಕ್ಕೆ ಬೇಕಾಗುವಷ್ಟುನೀರನ್ನು ಪ್ರಚಂಡ ಭಟ್ಟರ ವಿಶಿಷ್ಟ ಪ್ರಯತ್ನ ಪೂರೈಸುತ್ತದೆ !

ಇಂತಹುದೇ ಇನ್ನೊಂದು ಪ್ರಯತ್ನವನ್ನು ಪ್ರಚಂಡ ಭಾನು ಭಟ್ಟರ ಕುಟುಂಬ ಕೈಗೊಂಡಿದೆ. ತಮ್ಮ ತೋಟದ ಮಧ್ಯೆ ಇವತ್ತಿಗೆ ಯಥೇಚ್ಛವಾಗಿರುವ ನೀರನ್ನು ಇದೆ ರೀತಿ ಇನ್ನೊಂದು ಕೊಳವೆ ಬಾವಿಯೊಳಕ್ಕೆ ಸೈಫನ್ ಮಾಡುತ್ತಿದ್ದಾರೆ.

ಇವೆರಡೇ ಅಲ್ಲದೆ, ಮಳೆಗಾಲದಲ್ಲಿ ತಮ್ಮ ಜಮೀನಿನ ಆಯ್ದ ಭಾಗಗಳಲ್ಲಿ ಹರಿಯುವ ನೀರನ್ನು ತಮ್ಮ ಮಗದೊಂದು ಬೋರ್ ವೆಲ್ ನೊಳಕ್ಕೆ ಇಂಗಿಸುವ ಕಾರ್ಯವೂ ನಡೆದಿದೆ.

ವಸುಂಧರೆಗೆ ತನ್ನ ಒಡಲು ತುಂಬಿಕೊಂಡ ಖುಷಿ. ಮಡಿಲು ತುಂಬಿಸಿದ ತೃಪ್ತಿ ಸೋಮಾವತಿಯದು.

ಭಟ್ಟರ ಪ್ರಚಂಡ ಕಾರ್ಯಕ್ಕೆ ಒಂದು ಶುಭಾಷಯ ಹೇಳಿ. ಸಮಯ ಮಾಡಿಕೊಂಡು ಒಂದು ಭೇಟಿ ನೀಡಿ. ಒಂದು ಗ್ಲಾಸು ಪುನರ್ಪುಳಿ ಜೂಸು ಸಿಗುವ ಸಂಭವನೀಯತೆ ತುಂಬಾ ಜಾಸ್ತಿ ! ಫೋನ್ : 9483907216

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.