Putturu : ಪಿಕಪ್ ನಲ್ಲಿ ಮೃತ ದೇಹ ತಂದು ಮನೆ ಮುಂದೆ ಹಾಕಿ ಹೋದ ಪ್ರಕರಣ – ಮಿಲ್‌ಗೆ ಬೀಗ, ಪಿಕಪ್‌ ವಶಕ್ಕೆ

Putturu : ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿ ಮೇಸ್ತ್ರಿಗೆ ಸಹಾಯಕನಾಗಿ ಕೆಲಸ ನಿರ್ವಹಿಸಲೆಂದು ವೃದ್ಧರೋರ್ವರನ್ನು ಮನೆಯಿಂದ ಕರೆದುಕೊಂಡು ಹೋಗಿದ್ದು ಸಂಜೆ ವೇಳೆ ಮೇಸ್ತ್ರಿಯು ಅವರ ಮೃತದೇಹವನ್ನು ಪಿಕಪ್‌ನಲ್ಲಿ ತಂದು ಮನೆ ಮುಂಭಾಗದ ರಸ್ತೆಯಲ್ಲಿ ಮಲಗಿಸಿ ಹೋಗಿದ್ದಾರೆ ಎಂಬ ಆರೋಪ ಪುತ್ತೂರಿನಲ್ಲಿ(Putturu) ಬಾರಿ ಸದ್ದು ಮಾಡುತ್ತಿದೆ. ಇದೀಗ ಮೃತದೇಹವನ್ನು ತಂದು ಮನೆ ಮುಂಭಾಗದ ರಸ್ತೆಯಲ್ಲಿ ಮಲಗಿಸಿ ತೆರಳಿದ್ದ ಮಾಲಕನ ವರ್ತನೆಯ ವಿರುದ್ಧ ರವಿವಾರ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ದಲಿತ ಸಂಘಟನೆ ಕಾರ್ಯಕರ್ತರು ಪ್ರಕರಣದ ವಿರುದ್ಧ ಸಮಗ್ರ ತನಿಖೆಗೆ ಆಗ್ರಹಿಸಿ ಮತ್ತು ಮಾಲಕನ ವಿರುದ್ದ ಪ್ರಕರಣ ದಾಖಲಿಸಿ ಆತನನ್ನು ಬಂಧಿಸುವಂತೆ ದಲಿತ ಸಂಘಟನೆಗಳು, ಕುಟುಂಬಸ್ಥರು ಶನಿವಾರ ತಡರಾತ್ರಿ ತನಕವೂ ಆಗ್ರಹಿಸಿದರು. ರವಿವಾರ ಬೆಳಗ್ಗೆ ಮಿಲ್‌ ಮಾಲಕ ಹೆನ್ರಿ ಅವರ ಸಂಸ್ಥೆಯ ಬಳಿ ತೆರಳಿ ಅಲ್ಲಿ ಧಿಕ್ಕಾರ ಕೂಗಿದರು. ಮಾಲಕ ಬರುವಂತೆ ಆಗ್ರಹಿಸಿದ್ದಾರೆ.

ಅಲ್ಲದೆ ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ನಿಧಾನಗೊಳಿಸಿದ್ದು, ಮಾಲಕನ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ರವಿವಾರ ದಲಿತ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು, ಮುಖಂಡರು ಠಾಣೆ ಮುಂಭಾಗ ನೆರೆದು ಆಕ್ರೋಶ ವ್ಯಕ್ತಪಡಿಸಿರು. ಇನ್ನೊಂದೆಡೆ ಶಾಸಕ ಅಶೋಕ್‌ ಕುಮಾರ್‌ ರೈ(Ashok Kumar Rai)ಅವರು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಅನಂತರ ಶಿವಪ್ಪರನ್ನು ಕೆಲಸಕ್ಕೆ ಕರೆದುಕೊಂಡು ಹೋದ ಮಾಲಕ ಹೆನ್ರಿಯ ತಾವ್ರೋ ಇಂಡಸ್ಟ್ರೀಸ್‌ ಭೇಟಿ ನೀಡಿ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಪ್ರಕರಣ ದಾಖಲಿಸಿ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಶಾಸಕರು ಸೂಚನೆ ನೀಡಿದ್ದು, ಮಿಲ್‌ಗ‌ೂ ಬೀಗ ಜಡಿಯುವಂತೆ ಪೊಲೀಸರಿಗೆ ಸೂಚನೆ ನೀಡಿದರು. ಸಧ್ಯ ಪೊಲೀಸರು ಮುಚ್ಚಿದ್ದ ಮಿಲ್‌ನ ಗೇಟ್‌ ತೆರೆದು ಮೃತದೇಹ ಸಾಗಿಸಿದ ಪಿಕಪ್‌ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಬಿಜೆಪಿ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ(Arun Kumar Puttila)ಅವರು ದಲಿತ ಸಂಘಟನೆಯ ಕಾರ್ಯಕರ್ತರ ಜತೆಗೂಡಿ ಠಾಣಾಧಿಕಾರಿಗಳೊಂದಿಗೆ ಚರ್ಚಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದರು. ಪೊಲೀಸ್‌ ತನಿಖೆ ನಿಧಾನಗತಿಯಲ್ಲಿ ಸಾಗಿದೆ ಎಂದು ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಸಂಘಟನೆಯ ಕಾರ್ಯಕರ್ತರನ್ನು ಸಮಾಧಾನಿಸಿ ಪ್ರಕರಣದಲ್ಲಿ ತಪ್ಪು ಕಂಡು ಬಂದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸಾವಿನ ಬಗ್ಗೆ ಅನುಮಾನ :
ಮನೆ ಮಂದಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಮೃತದೇಹವನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತರ ಅಳಿಯ ಶಶಿ ಕೆರೆಮೂಲೆ ಹೇಳುವ ಪ್ರಕಾರ, ಶಿವಪ್ಪ ಅವರನ್ನು ಹೆನ್ರಿ ಅವರು ಕೆಲವೊಮ್ಮೆ ಕೆಲಸಕ್ಕೆಂದು ಕರೆದುಕೊಂಡು ಹೋಗುತ್ತಿದ್ದುದು ಶನಿವಾರವೂ ಹೋಗಿದ್ದರು. ಆದರೆ ಸಂಜೆ ವೇಳೆ ಹೆನ್ರಿ ಅವರ ಪಿಕಪ್‌ನ ಹಿಂಭಾಗದಲ್ಲಿ ಮಲಗಿಸಿಕೊಂಡು ಬಂದಿದ್ದು ಮನೆ ಸಂಪರ್ಕದ ರಸ್ತೆ ಬಳಿಯಲ್ಲೇ ಮೃತದೇಹವನ್ನು ಮಲಗಿಸಿ ಹೋಗಿದ್ದಾರೆ. ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಮಾತ್ರ ಇದ್ದರು. ಈ ಬಗ್ಗೆ ವಿಚಾರಿಸಿದಾಗ ಅಸೌಖ್ಯಕ್ಕೆ ಒಳಗಾಗಿದ್ದ ಕಾರಣ ಮನೆಗೆ ತಂದು ಬಿಟ್ಟಿದ್ದೇನೆ. ಆಗ ಅವರು ಮೃತಪಟ್ಟಿರಲಿಲ್ಲ ಎಂದು ಹೆನ್ರಿ ಹೇಳುತ್ತಿದ್ದು ಇದು ಸುಳ್ಳಾಗಿದೆ. ಈ ಸಾವಿನ ಬಗ್ಗೆ ನಮಗೆ ಅನುಮಾನ ಇದ್ದು ನಗರ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದಿದ್ದಾರೆ.

Leave A Reply

Your email address will not be published.