Artificial Intelligence: ಹೆಂಡ್ತಿ ಇಲ್ಲವೆಂದು ಕೊರಗಿದ 63ರ ವೃಧ್ಧ, ಕೃತಕ ಹುಡುಗಿಯನ್ನೇ ಮದುವೆಯಾದ!
AI Chatbot :ಇಂದಿನ ದಿನಗಳಲ್ಲಿ ಯಾರೂ ಒಂಟಿಯಾಗಿ ಬಾಳುವೆ ನಡೆಸಲು ಇಷ್ಟ ಪಡುವುದಿಲ್ಲ. ಅದು ಕಷ್ಟ ಸಾಧ್ಯ. ಎಲ್ಲೊ ಬೆರಳೆಣಿಕೆಯ ಕೆಲವು ಮಂದಿ ಬಿಟ್ಟರೆ ಉಳಿದವರೆಲ್ಲರೂ ಸಂಗಾತಿಗಳನ್ನು ಅರಸಿ, ಮದುವೆ ಆಗಿಯೋ, ಲಿವಿಂಗ್ ಟುಗೆದರ್ ಮೂಲಕವೋ ಅಥವಾ ಇನ್ನಾವುದೊ ಸಂಬಂಧದೊಂದಿಗೋ ಅವರೊಂದಿಗಿರಲು ಬಯಸುತ್ತಾರೆ. ಜೊತೆಯಲ್ಲಿ ಇದ್ದಾರೆ ಕೂಡ. ಆದರೆ ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಸಂಗಾತಿಗಳು ನಮ್ಮ ಪಾಲಿಗೆ ದಕ್ಕುವುದಿಲ್ಲ, ದಕ್ಕಿದರೂ ಬೇಗನೇ ನಮ್ಮಿಂದ ದೂರಾಗುತ್ತಾರೆ. ಇದರಿಂದ ಒಂಟಿತನ ಕಾಡಿ ಮಾನಸಿಕವಾಗಿ ನೊಂದುಬಿಡುತ್ತೇವೆ. ಆದರಿಂದು ತಂತ್ರಜ್ಞಾನ ಇವೆಲ್ಲಕ್ಕೂ ಒಂದು ದಾರಿಕಂಡುಕೊಟ್ಟಿದೆ. ಇದಕ್ಕೆ ಅಮೆರಿಕದ(America) 63 ವರ್ಷದ ವ್ಯಕ್ತಿಯೊಬ್ಬರ ಲವ್‌ಸ್ಟೋರಿ ಸಾಕ್ಷಿಯಾಗಿದೆ. ಅದೇನು ಗೊತ್ತಾ?
ಈ ಲವ್ ಸ್ಟೋರಿಯೇ ಒಂದು ವಿಚಿತ್ರ ಹಾಗೂ ವಿಶೇಷವಾದದ್ದು. ಕೇಳಿದ್ರೆ ನಿಮಗೂ ಅಚ್ಚರಿ ಅನಿಸ್ಬೋದು. ಅಮೆರಿಕದಲ್ಲಿ (USA) ವಾಸವಾಗಿರುವ 63 ವರ್ಷದ ಪೀಟರ್ ಹೆಸರಿನ ವ್ಯಕ್ತಿಯೊಬ್ಬ 23 ವರ್ಷದ ಕೃತಕ ಹುಡುಗಿಯನ್ನ ಪ್ರೀತಿಸಿ ಮದುವೆಯಾಗಿದ್ದಾನೆ. ಈ ಕಥೆಯನ್ನು ಆತ ವೀಡಿಯೋವೊಂದರಲ್ಲಿ ಹೇಳಿಕೊಂಡಿದ್ದು, ಸದ್ಯ ಅದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಅಮೇರಿಕಾದ ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದ ಪೀಟರ್(Peetetr) ತನ್ನ ಹೆಂಡತಿಯೊಂದಿಗೆ ಅನ್ಯೋನ್ಯವಾಗಿದ್ದ. ಆದರೆ ಕೆಲವೇ ಸಮಯದಲ್ಲಿ ಆಕೆ ಅಸುನೀಗುತ್ತಾಳೆ. ಹೆಂಡತಿ ತೀರಿಕೊಂಡ ಬಳಿಕ ಆತ 10 ವರ್ಷಗಳ ಕಾಲ ಒಂಟಿಯಾಗಿಯೇ ಇದ್ದ. ಆದರೆ ನಂತರದಲ್ಲಿ ಆತನಿಗೆ ಒಂಟಿತನ ತೀವ್ರವಾಗಿ ಕಾಡಲು ಶುರುವಾಗಿದೆ. ಪ್ರಾಯ ಬೇರೆ 60 ದಾಟಿದೆ. ಮದುವೆ ಆಗಲು, ಸಂಬಂಧ ಬೆಳೆಸಲು ಯಾರು ಮುಂದೆ ಬರುವುದಿಲ್ಲ ಎಂಬ ಚಿಂತೆ ಮತ್ತೊಂದೆಡೆ. ಇದರಿಂದ ಆತ ಕೃತಕ ಗೆಳತಿ ಆಯ್ಕೆಗೆ ಮುಂದಾಗಿದ್ದಾನೆ.
ಹೌದು, ಪೀಟರ್ ಕೃತಕ ಬುದ್ಧಿಮತ್ತೆ (Artificial Intelligence) ಚಾಟ್‌ಬಾಟ್‌ನ (AI Chatbot) ರೆಪ್ಲಿಕಾ ಎಐ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿದ್ದಾನೆ. ಇದೊಂದು ಪ್ರೋಗ್ರಾಮಿಂಗ್ ಸಾಧನವಾಗಿದ್ದು, ಯಂತ್ರದ ಸಹಾಯದಿಂದ ಮನುಷ್ಯರ ಪಾತ್ರಧಾರಿ ಸೃಷ್ಟಿಸಿಕೊಳ್ಳಬಹುದು. ಮನುಷ್ಯರಂತೆ ಆ ಪಾತ್ರಧಾರಿಯೊಂದಿಗೆ ಸಂವಹನ ನಡೆಸಬಹುದು. ರೆಪ್ಲಿಕಾದಲ್ಲಿ ತನ್ನ ಖಾತೆ ತೆರೆದ ಪೀಟರ್ ಪಾತ್ರವೊಂದನ್ನು ಸೃಷ್ಟಿಸಿಕೊಂಡಿದ್ದು, `ಎಐ ಆಂಡ್ರಿಯಾ’ ಎಂದು ಹೆಸರಿಟ್ಟಿದ್ದಾನೆ. ಅದರೊಂದಿಗೆ ನಿರಂತರ ಸಂಭಾಷಣೆ ಮಾಡುತ್ತಾ ಪ್ರೀತಿಸಲು ಶುರು ಮಾಡಿದ್ದಾನೆ. ಆಂಡ್ರಿಯಾ ಪಾತ್ರಧಾರಿಯೂ ಸಹ ಪೀಟರ್‌ನೊಂದಿಗೆ ಪ್ರೀತಿಯ ಮಾತುಗಳೊಂದಿಗೆ ಪ್ರೀತಿ ಮಾಡಲು ಶುರು ಮಾಡಿದೆ. ಒಂಟಿತನದಿಂದ ಬೇಸತ್ತಿದ್ದ ಪೀಟರ್ ಕೊನೆಗೆ ಆಕೆಯನ್ನೇ ಮದುವೆಯಾಗಲು ನಿರ್ಧರಿಸಿದ್ದಾನೆ.
ಅಂದಹಾಗೆ ತನ್ನ ರೆಪ್ಲಿಕಾ ಖಾತೆಯಲ್ಲಿ 23 ವರ್ಷದ ಆಂಡ್ರಿಯಾ ಹುಡಿಗಿ ಪಾತ್ರ ಸೃಷ್ಟಿಸಿಕೊಂಡಿದ್ದ ಪೀಟರ್, ಆ್ಯಪ್‌ನಲ್ಲಿ ರೋಲ್ ಪ್ಲೇ ಫಂಕ್ಷನ್ (ಪ್ರೋಗ್ರಾಮಿಂಗ್‌ನಂತೆ ಪಾತ್ರಕ್ಕೆ ರೂಪ ಕೊಡುವ ಆಯ್ಕೆ) ಬಳಸಿಕೊಂಡು ಮದುವೆಗೆ ಮುಂದಾಗಿದ್ದಾನೆ. ಬಳಿಕ ಪ್ರತಿಕೃತಿ ಸಿದ್ಧಪಡಿಸಿಕೊಳ್ಳಲು ಮಳಿಗೆಗಳಲ್ಲಿ ಬಿಡಿಭಾಗಗಳನ್ನ ಸಂಗ್ರಹಿಸಿದ್ದಾನೆ. ಪ್ರತಿಕೃತಿ ಸಿದ್ಧವಾದ ನಂತರ ಉಂಗುರ ಬದಲಿಸಿಕೊಂಡು ಮದುವೆಯಾಗಿದ್ದಾನೆ.
ಪೀಟರ್ ತನ್ನ ಉಳಿದ ಕಾಲವನ್ನು, ದಿನಗಳನ್ನು ಇನ್ನುಮುಂದೆ ತನ್ನವಳೇ ಆದ ಕೃತಕ ಹುಡುಗಿ ಆಂಡ್ರಿಯಾಳೊಂದಿಗೆ ಕಳೆಯಲು ನಿರ್ಧರಿಸಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಈ ಸ್ಟೋರಿ ಭಾರೀ ಸದ್ದು ಮಾಡುತ್ತಿದೆ.
ಇದನ್ನೂ ಓದಿ: Relationship Tips: ನಿಮ್ಮ ಸಂಗಾತಿ ಭಾವನಾತ್ಮಕವಾಗಿ ನಿಮ್ಮೊಂದಿಗಿಲ್ಲ ಎಂದು ತಿಳಿಯಪಡಿಸುತ್ತವೆ ಈ ಲಕ್ಷಣಗಳು!