ಹಲ್ಲುಗಳಲ್ಲಿ ಕ್ಯಾವಿಟಿ ಸಮಸ್ಯೆಯೇ ? ಇಲ್ಲಿದೆ ಸುಲಭ ಮನೆ ಮದ್ದು!

ಮುಖದ ಸೌಂದರ್ಯ ಹೆಚ್ಚಿಸಲು ನಗು ಅತ್ಯಗತ್ಯ. ಇದರ ಜತೆ ಸೌಂದರ್ಯದ ಹೊಳಪಿಗೆ ಬಿಳಿ ಹಲ್ಲುಗಳು ಮುಖ್ಯ ಪಾತ್ರ ವಹಿಸುತ್ತವೆ. ಪ್ರತಿ ದಿನ ಹಲ್ಲುಗಳ ಸಂರಕ್ಷಣೆಗಾಗಿ ಶುಚಿಗೊಳಿಸುತ್ತೇವೆ. ಆದರೆ, ಅನಾರೋಗ್ಯಕರ ಜೀವನ ಶೈಲಿಯಿಂದ ಅನೇಕರು ಹಲ್ಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ಕ್ಯಾವಿಟೀಸ್ ಕೂಡಾ ಒಂದು. ಇದು ದಂತ ಸಮಸ್ಯೆಯಲ್ಲಿ ಸಾಮಾನ್ಯ ಸಮಸ್ಯೆ ಅಂತ ಹೆಳ್ಬೋದು. ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರಿಗೂ ಈ ಸಮಸ್ಯೆಯು ಬಾಧಿಸುತ್ತಿದೆ. ಆದರೆ ಕೆಲವೇ ಕೆಲವು ಜನರು ಮಾತ್ರ ದಂತವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುತ್ತಾರೆ. ಹಲ್ಲುಗಳಲ್ಲಿ ಸಣ್ಣದೊಂದು ಸಮಸ್ಯೆ ಇದ್ದರೂ ನಿರ್ಲಕ್ಷಿಸಬಾರದು ಮತ್ತು ಸಾಧ್ಯವಾದಷ್ಟು ಬೇಗ ದಂತವೈದ್ಯರನ್ನು ಭೇಟಿ ಮಾಡಬೇಕು. ಹಲ್ಲಿನ ಸಮಸ್ಯೆಯಿಂದ ಬಚಾವಾಗಲು ಈ ಕೆಲವು ಟಿಪ್ಸ್ ಅನ್ನು ಫಾಲೋ ಮಾಡಿ.

ಹಲ್ಲುನೋವು, ಒಸಡುಗಳಲ್ಲಿ ರಕ್ತಸ್ರಾವ ಮತ್ತು ಹಲ್ಲಿನ ಸೆನ್ಸಿಟಿವಿಟಿ ಬಹಳ ತೊಂದರೆ ಉಂಟುಮಾಡುತ್ತವೆ. ಸಣ್ಣ ಮಕ್ಕಳಲ್ಲು ಈ ಹಲ್ಲು ನೋವು ಕಾಣಿಸುತ್ತದೆ. ಬಾಟಲ್ ಫೀಡ್‌ನಿಂದಲೂ ಹಲ್ಲುಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ಮಕ್ಕಳು ಮುಂಭಾಗದ ನಾಲ್ಕು ಹಾಲಿನ ಹಲ್ಲುಗಳನ್ನು ಕಳೆದುಕೊಳ್ಳುತ್ತಾರೆ. ಹಾಲಿನ ಬಾಟಲಿಯು ಮಕ್ಕಳ ಹಲ್ಲುಗಳನ್ನು ಹದಗೆಡಿಸುತ್ತದೆ. ಇದಕ್ಕಾಗಿ, ತಾಯಂದಿರು ಪ್ರತಿ ಆಹಾರದ ನಂತರ ಮಗುವಿನ ಒಸಡುಗಳು ಮತ್ತು ಹಲ್ಲುಗಳನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಬೇಕು. ನಿರ್ಲಕ್ಷಿಸಿದರೆ ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆ. ಉತ್ತಮ ಪರಿಹಾರವೆಂದರೆ ಬಾಟಲ್ ಫೀಡಿಂಗ್ ಮಾಡದೇ ಇರುವುದು.

ದಿನಕ್ಕೆ ಎರಡು ಬಾರಿ ಬ್ರಷ್ ಮಾಡಬೇಕು:- ಇಂದಿನ ಬ್ಯುಸಿ ಜೀವನಕ್ಕೆ ಮಕ್ಕಳೂ ಕೂಡ ಹೊರತಲ್ಲ. ಸ್ಕೂಲ್‌, ಟ್ಯೂಶನ್‌ ಎಂದು ಹತ್ತಾರು ಕೆಲಸಗಳು ಅವರ ಬೆನ್ನಿಗೂ ಅಂಟಿಕೊಂಡಿರುತ್ತದೆ. ಹೀಗಾಗಿ ಗಡಿಬಿಡಿಯಲ್ಲಿ ಎಲ್ಲರೂ ಹಲ್ಲುಜ್ಜಿದ ಶಾಸ್ತ್ರ ಮಾಡಿ ಹೋಗುವವರೇ ಹೆಚ್ಚು. ದಂತ ಹಾಗೂ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನದಲ್ಲಿ 2 ಬಾರಿ ಹಲ್ಲುಜ್ಜಬೇಕು. ಹೆಚ್ಚಿನವರು ಹಲ್ಲುಗಳಿಗೆ ಮಾತ್ರ ಬ್ರಶ್‌ ಮಾಡಿ, ಬಾಯಿಯ ಉಳಿದ ಭಾಗಗಳನ್ನು ಕಡೆಗಣಿಸುತ್ತಾರೆ. ನಾಲಗೆಯಲ್ಲಿ ಮೆತ್ತಿಕೊಂಡಿರುವ ಬಿಳಿ ಪದರ ತೆಗೆಯಲು ಬ್ರಶ್‌ ಅಥವಾ ಟಂಗ್‌ ಕ್ಲೀನರ್‌ ಬಳಸಿ. ಒಸಡುಗಳನ್ನು ಶುಚಿಗೊಳಿಸುವುದು ಅತ್ಯಗತ್ಯ. ಟೂತ್‌ ಬ್ರಶ್‌ ಅನ್ನು ಆಗಾಗ ಬದಲಾಯಿಸುತ್ತಾ ಇರಬೇಕು. ಫ್ಲೋಸಿಂಗ್ ಮೂಲಕ ಬ್ರಷ್ ತಲುಪಲು ಸಾಧ್ಯವಾಗದ ಬಿರುಕುಗಳನ್ನು ಸ್ವಚ್ಛಗೊಳಿಸಿ.

ದಂತ ವೈದ್ಯರನ್ನು ಭೇಟಿಮಾಡಿ :- ದಿನಕ್ಕೊಂದು ಸೇಬಿನ ಹಣ್ಣು ವೈದ್ಯರನ್ನು ದೂರವಿಡುವಂತೆ, ದಂತವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡುವುದರಿಂದ ಹಲ್ಲುಗಳ ಆರೋಗ್ಯವನ್ನು ಕಾಪಾಡಬಹುದು. ವರ್ಷದಲ್ಲಿ ಒಂದೆರಡು ಸಲವಾದರೂ ದಂತ ವೈದ್ಯರನ್ನು ಭೇಟಿಯಾಗಿ ಹಲ್ಲಿನ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಿ. ಇದರಿಂದ ಹಲ್ಲುಗಳ ಸ್ಥಿತಿ, ಬೆಳವಣಿಗೆಯ ಹಂತ, ಎಂತಹ ಆಹಾರಗಳನ್ನು ನೀಡಬೇಕು ಎನ್ನುವ ಬಗ್ಗೆ ದಂತ ವೈದ್ಯರ ಬಗ್ಗೆ ಸಲಹೆ ಪಡೆದುಕೊಳ್ಳಬಹುದು.

ಹೆಚ್ಚು ಸಕ್ಕರೆ ತಿನ್ನುವುದನ್ನು ತಪ್ಪಿಸಿ :- ಕ್ಯಾಂಡಿ, ಬಿಸ್ಕತ್‌, ಕೇಕ್‌, ಪೇಸ್ಟ್ರಿಯಂತಹ ಸಿಹಿ ಖಾದ್ಯಗಳು ಆರೋಗ್ಯಕಾರಿ ಹಲ್ಲುಗಳ ಶತ್ರುಗಳು. ಇವುಗಳ ಸೇವನೆಯಿಂದ ಹಲ್ಲುಗಳಲ್ಲಿ ಕ್ಯಾವಿಟಿ, ರೂಟ್‌ ಕ್ಯಾನಲ್‌ ಸಮಸ್ಯೆಗಳು ಕಾಡುವ ಸಂಭವವಿದೆ. ಇಂತಹ ತಿಂಡಿಗಳ ಸೇವನೆಯನ್ನು ಮಿತಗೊಳಿಸುವುದು ಉತ್ತಮ.

ನಾಲಿಗೆಯನ್ನು ಸಹ ನಿಯಮಿತವಾಗಿ ಸ್ವಚ್ಛಗೊಳಿಸಿ. ಯಾವುದೇ ಅಸಾಮಾನ್ಯ ಚಿಹ್ನೆಗಳನ್ನು ನಿರ್ಲಕ್ಷಿಸಬೇಡಿ. ಒಸಡುಗಳಲ್ಲಿ ಊತ ಅಥವಾ ರಕ್ತಸ್ರಾವ ಇದ್ದರೆ ದಂತವೈದ್ಯರನ್ನು ಸಂಪರ್ಕಿಸಿ. ಪ್ರತಿ 6 ತಿಂಗಳಿಗೊಮ್ಮೆ ನಿಮ್ಮ ಹಲ್ಲುಗಳನ್ನು ಪರೀಕ್ಷಿಸಿ.

Leave A Reply

Your email address will not be published.