ಕೊನೆಯ ಹಂತದಲ್ಲಿ ಮುಗ್ಗರಿಸಿ ಬಿಟ್ಟಿತೇ ಅವತಾರ್-2 ? | ಇಲ್ಲಿವರೇಗೂ ಈ ಸಿನಿಮಾ ಮಾಡಿದ ಕಲೆಕ್ಷನ್ ಇಷ್ಟೇ ನೋಡಿ !!
ವಿಶ್ವದ ಚಿತ್ರರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾದ ನಿರ್ದೇಶಕರ ಎಂದು ಇತಿಹಾಸ ಬರೆದಿರುವ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ‘ಅವತಾರ್ -2’ ಸಿನಿಮಾ ಕಳೆದ ಡಿಸೆಂಬರ್ ನಲ್ಲಿ ವಿಶ್ವಾದ್ಯಂತ ಸುಮಾರು 160 ಭಾಷೆಗಳಲ್ಲಿ ತೆರೆ ಕಂಡು ಅಬ್ಬರದ ಪ್ರದರ್ಶನ ಕಂಡಿತ್ತು. ಇದೀಗ, ಇಲ್ಲಿವರೆಗೂ ಈ ಸಿನಿಮಾ ಕಲೆಕ್ಷನ್ ಮಾಡಿದ ಲೆಕ್ಕಾಚಾರ ಸಿಕ್ಕಿದೆ.
ಟೈಟಾನಿಕ್, ಟರ್ಮಿನೇಟರ್ ಮುಂತಾದ ಸಿನಿಮಾಗಳಂತಹ ಸೂಪರ್ ಹಿಟ್ ಸಿನಿಮಾಗಳನ್ನು ವಿಶ್ವಕ್ಕೆ ನೀಡಿದ ಜೇಮ್ಸ್ ಕ್ಯಾಮರೂನ್ 2009 ರಲ್ಲಿ ಊಹೆಗೂ ನಿಲುಕದಂತಹ, ಕಾಲ್ಪನಿಕ ‘ಅವತಾರ್’ ಸಿನೆಮಾವನ್ನು ನೀಡಿ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿದ ಸಿನಿ ಮಾಂತ್ರಿಕ. ಈ ಮಾಂತ್ರಿಕ ಅವತಾರ್-2 ಮೂಲಕ ಪ್ರಪಂಚವನ್ನೇ ನೀರಿನ ಲೋಕದಲ್ಲಿ ರಂಜಿಸುವಂತೆ ಮಾಡಿದ್ದರು. ಈ ಎರಡನೇ ಅವತಾರ್, ಬರೋಬ್ಬರಿ 2 ಬಿಲಿಯನ್ ಡಾಲರ್ ನಷ್ಟು ಕಲೆಕ್ಷನ್ ಮಾಡಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 16 ಸಾವಿರ ಕೋಟಿ! ಕಳೆದ ಡಿಸೆಂಬರ್ ನಲ್ಲಿ ತೆರೆ ಕಂಡ ಈ ಸಿನಿಮಾ ಇದೀಗ ಬಾಕ್ಸ್ ಆಫೀಸ್ನಲ್ಲಿ ಗೆದ್ದು ಬೀಗುತ್ತಿದೆ.
2009 ರಲ್ಲಿಯೇ ತೆರೆಕಂಡಂತಹ ಅವತಾರ್ ನ ಮೊದಲ ಪಾರ್ಟ್ ವಿಶ್ವದಾದ್ಯಂತ ಬಾಕ್ಸ್ ಆಫೀಸನ್ನೇ ಬಾಚಿಬಿಟ್ಟಿತ್ತು. ಈ ಸಿನೆಮಾ ನಿರ್ಮಾಣಕ್ಕಾಗಿಯೇ ಸುಮಾರು 230 ಮಿಲಿಯನ್ ಡಾಲರನ್ನು ಅಂದರೆ 2 ಸಾವಿರ ಕೋಟಿ ರೂಪಾಯಿಯನ್ನು ಬಳಸಲಾಗಿತ್ತು. ಆದರೆ ಸಿನೆಮಾ ಖರ್ಚಿನ ಇಪ್ಪತ್ತು ಪಟ್ಟು ಹಣವನ್ನು ಬಾಚಿ ಪ್ರಪಂಚದ ಎಲ್ಲಾ ದಾಖಲೆಗಳನ್ನು ಚಿತ್ರವು ಧೂಳೀಪಟ ಮಾಡಿಬಿಟ್ಟಿತ್ತು. ಹೌದು, ದಶಕಗಳ ಹಿಂದೆಯೇ ಚಿತ್ರವು ಸುಮಾರು 24000 ಕೋಟಿಯಷ್ಟು ಗಳಿಸಿತ್ತು.
ಇದೀಗ ಅವತಾರ್-2 ರಿಲೀಸ್ ಆದಂತಹ ಸಮಯದಲ್ಲಿ ಪ್ರಪಂಚದಾದ್ಯಂತ ಸುಮಾರು 55000 ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ಸಿನೆಮಾ ರಿಲೀಸ್ ಗೂ ಮುಂಚಿತವಾಗಿ 5.4 ಲಕ್ಷ ಟಿಕೆಟ್ ಗಳು ಸೇಲ್ ಆಗಿದ್ದವು. ಅವತಾರ್- 2 ನಿರ್ಮಾಣಕ್ಕೆ ತಗುಲಿದ ವೆಚ್ಚ ಅಂದಾಜಾಗಿ ಹೇಳುವುದಾದರೆ 350 ಮಿಲಿಯನ್ ಡಾಲರ್ ಗಳು. ಅಂದರೆ ಸರಿಸುಮಾರು 2,800 ಕೋಟಿ. ಆದರೆ ಕೇವಲ ಹತ್ತು ದಿನಗಳಲ್ಲಿ ಇದರ ಗಳಿಕೆ 7000 ಕೋಟಿಗೂ ಅಧಿಕವಾಗಿದೆ. ಭಾರತದಲ್ಲಿಯೇ ಸುಮಾರು 500 ಕೋಟಿಯನ್ನು ಬಾಚಿದೆ. ಸದ್ಯದ ಮಾಹಿತಿ ಪ್ರಕಾರ 16 ಸಾವಿರ ಕೋಟಿ ಗಳಿಕೆ ಮಾಡಿದ. ಇದು ಸಂತೋಷದ ವಿಚಾರ.
ಆದರೆ ಇಲ್ಲಿ ಕಾಡುವ ಪ್ರಶ್ನೆ ಎಂದರೆ, ಎರಡನೆಯ ಅವತಾರ್ , ಮೊದಲ ಪಾರ್ಟ್ನಂತೆ ಇಪ್ಪತ್ತು ಪಟ್ಟು ಜಾಸ್ತಿ ಗಳಿಕೆ ಮಾಡುತ್ತದೆಯಾ? ಎಂಬುದು. ಯಾಕೆಂದರೆ ಅವತಾರ್-1 ಸುಮಾರು 24 ಸಾವಿರ ಕೋಟಿ ಗಳಿಸಿತ್ತು, ಆದ್ರೆ ಅವತಾರ್-2 ಗಳಿಕೆ ಇನ್ನೂ 16 ಸಾವಿರ ಕೋಟಿಯಷ್ಟೇ ಇದೆ. ಅಂಕಿ ಶಾಸ್ತ್ರದ ಪ್ರಕಾರ ನೋಡಿದರೆ, ಅವತಾರ್ 2 ನ ಕಲೆಕ್ಷನ್ ಈ ಹೊತ್ತಿಗಾಗಲೇ ಮೊದಲ ಪಾರ್ಟ್ ಗಿಂತ ದ್ವಿಗುಣವಾಗಬೇಕಿತ್ತು. ಪಾರ್ಟ್-2 ರೀಲೀಸ್ ಆಗಿ ಇನ್ನೂ ಕೇವಲ ಎರಡು ತಿಂಗಳಾಗುತ್ತಿವೆ ಅಷ್ಟೇ, ಮುಂದೆ ಸಾಕಷ್ಟು ಸಮಯವಿದೆ, ಇನ್ನೂ ಹೆಚ್ಚಿನ ಗಳಿಕೆ ಸಾದ್ಯವಿದೆ ಎಂದು ಕೆಲವರು ಹೇಳಬಹುದು.
ಆದರಿಲ್ಲಿ ಗಮನಿಸುವುದಾದರೆ, ಅವತಾರ್-2 ರೀಲೀಸ್ ಆಗಿ ಕೆಲವೇ ದಿನಗಳಲ್ಲಿ 7 ಸಾವಿರ ಕೋಟಿ ಕಲೆಕ್ಷನ್ ಆಗಿತ್ತು. ಈ ಗಳಿಕೆಯ ವೇಗವನ್ನು ನೋಡಿದರೆ ಈಗಾಗಲೇ ಸಿನಿಮಾವು ಮೊದಲ ಪಾರ್ಟ್ ನ ಕಲೆಕ್ಷನ್ ಅನ್ನು ಹಿಂದಿಕ್ಕಬೇಕಿತ್ತು. ಅಲ್ಲದೆ ತೆರೆ ಕಂಡ ಸಮಯದಲ್ಲಿ ಅದರ ಅಬ್ಬರ, ಅದಕ್ಕೆ ಸಿಕ್ಕ ಪ್ರಚಾರ, ಅದು ಗಳಿಸಿದ ಖ್ಯಾತಿ ಎಲ್ಲವೂ ಚಿತ್ರದ ಕಲೆಕ್ಷನ್ ಅನ್ನು ಸರಿಸುಮಾರು 30,000 ಕೋಟಿ ದಾಟಿಸಬೇಕಿತ್ತು ಎನ್ನುವುದು ಅವತ್ತಿನ ಸ್ಪೀಡ್ ಗಮನಿಸಿದ ತಜ್ಞರೊಬ್ಬರ ಹೇಳಿಕೆ. ಆದರೆ ಬರಬರುತ್ತಾ ಅವತಾರ್ 2 ನ ಅಬ್ಬರ ಕುಗ್ಗಿದೆ. ಕೊನೆಯ ಹಂತದಲ್ಲಿ ಮುಗ್ಗರಿಸಿ ಬಿಟ್ಟಿತೇ ಅವತಾರ್-2 ಎಂಬ ಬಲವಾದ ಅನುಮಾನ ಕಾಡುತ್ತಿದೆ. ಆದರೂ ಕೂಡ ಕಾದು ನೋಡುವ . ಇನ್ನೂ ಸಮಯ ಇದೆ : ಮುಂದಿನ ದಿನಗಳಲ್ಲಾದರೂ ಇದರ ಗಳಿಗೆ ಎಷ್ಟಾಗಬಹುದೆಂದು ತಿಳಿದುಕೊಳ್ಳುವ ಕುತೂಹಲ ನಿಮ್ಮಷ್ಟೇ ನಮ್ಮಲ್ಲೂ ಇದೆ.