ಆಕಾಶದಲ್ಲಿ ಚಮತ್ಕಾರ ಮಾಡಿದ 80ರ ಅಜ್ಜಿ | ವೈರಲ್ ಆಯ್ತು ಸೀರೆಯುಟ್ಟ ಅಜ್ಜಮ್ಮನ ಪ್ಯಾರಾಗ್ಲೈಡಿಂಗ್ ವೀಡಿಯೋ !

Share the Article

ವಯಸ್ಸೆಂಬುದು ಕೇವಲ ಲೆಕ್ಕ ಹಿಡಿಯೋಕೆ ಮಾತ್ರ, ನಮ್ಮ ಬದುಕಿನ ದಿನಗಳನ್ನ ಗುರ್ತಿಸೋಕೆ ಮಾತ್ರ ಅನ್ನೋ ಮಾತುಗಳನ್ನ ಯಾವಾಗ್ಲೂ ಕೇಳ್ತಿರ್ತೀವಿ. ಇದು ಹೌದು ಎಂಬಂತೆ ಅನೇಕರು ತಮ್ಮ ಇಳಿ ವಯಸ್ಸಿನಲ್ಲೂ ಏನೆಲ್ಲಾ ಸಾಧನೆ ಮಾಡಿ ತೋರಿಸಿದ್ದಾರೆ ಅಲ್ವಾ? ಅದರಲ್ಲೂ ಕೂಡ ಎಲ್ಲೆಲ್ಲೂ ಅಜ್ಜಿಯಂದಿರ ಸಾಧನೆಯದ್ದೇ ಮೇಲುಗೈ ಅನ್ಬೋದು. ರನ್ನಿಂಗ್ ರೇಸ್, ವೇಯ್ಟ್ ಲಿಫ್ಟಿಂಗ್, ಯೋಗ, ಡ್ಯಾನ್ಸ್, ಭರತ ನಾಟ್ಯ, ಪರ್ವತ ಏರೋದಂತೆ, ಕುಸ್ತಿ ಮಾಡೋದಂತೆ. ಅಬ್ಬಬ್ಬಾ! ಒಂದಾ ಎರಡಾ ಈ ಮುದುಕಿಯರ ಸಾಧನೆಗಳ ಸುದೀರ್ಘ ಪಟ್ಟಿ. ಇಂತಹ ಹರ ಸಾಹಸದ ಸಾಧನೆಗಳ ಪಟ್ಟಿಗೆ ಇಲ್ಲೊಂದು ಅಜ್ಜಿಯ ಸಾಧನೆಯೂ ಸೇರುತ್ತಿದೆ. ನನ್ನನ್ನೂ ಪಟ್ಟಿಗೆ ಸೇರಿಸ್ಕೊಳ್ಳಿ ಎಂದು 80 ವರ್ಷದ ಈ ಅಜ್ಜಿ ಹಠಕ್ಕೆ ಬಿದ್ದು ಮಾಡಿದ ಅಂತಹ ಸಾಹಸವಾದರೂ ಏನು ಗೊತ್ತಾ? ನೀವು ಓದ್ಲೇ ಬೇಕು, ಒಂದಷ್ಟು ಸ್ಫೂರ್ತಿ ಪಡ್ಕೊಂಡೇ ಹೋಗ್ಬೇಕು.

ಯಾರಾದರೂ ತಮ್ಮ 70,80 ವರ್ಷ ದಾಟಿದವರು ಬಂದು, ನಾನು ಪ್ಯಾರಾಚೂಟ್ ಅಲ್ಲಿ ಹಾರಾಡಿ ಬಂದೆ ಅಂದ್ರೆ ನಂಬೋಕಾಗುತ್ತಾ! ಒಂದು ವೇಳೆ ಯಾರಾದ್ರೂ ಹಾಗೆ ಹೇಳಿದ್ರು ‘ನಿನಗೆಲ್ಲಿದೆ ಆ ಧೈರ್ಯ, ಮೇಲೆ ಹೋದ ಕೂಡ್ಲೇ ಕೆಳಗೆ ನೋಡಿ, ಮೊದಲೇ ವೀಕ್ ಆಗಿರೋ ಹೃದಯ ಹಾರ್ಟ್ ಅಟ್ಯಾಕ್ ಆಗಿ ಗೊಟುಕ್ ಅಂತೀಯ ಅಷ್ಟೇ’ ಎಂದು ಹಂಗಿಸ್ತೇವೆ. ಆದ್ರೂ ಇಂತಹ ಇಳಿ ವಯಸ್ಸಿನಲ್ಲಿ ಈ ರೀತಿ ಪ್ಯಾರಗ್ಲೈಡಿಂಗ್ ಮಾಡುವುದೂ ಒಂದು ದೊಡ್ಡ ವಿಷಯವೇ ಹೌದೆನ್ನಬಹುದು. ಆ ವಯಸ್ಸಿನಲ್ಲಿ ಅಷ್ಟೊಂದು ಧೈರ್ಯ ಅವರಿಗೆ ಎಲ್ಲಿಂದ ಬಂತೆಂದು ಆಶ್ಚರ್ಯ ಕೂಡ ಆಗಬಹುದು. ಹೇ, ಇದೆಲ್ಲಾ ನಿಜಕ್ಕೂ ಸಾಧ್ಯವಿಲ್ಲ, ಬರಿ ಬೊಗ್ಳೆ ಬಿಡುತ್ತಾರೆ ಎಂದು ನಮಗನಿಸಬಹುದು. ಆದ್ರೆ ಇಲ್ಲೊಬ್ರು ಅಜ್ಜಿ ತಮ್ಮ 80ನೇ ವಯಸ್ಸಿನಲ್ಲಿ ಪ್ಯಾರಗ್ಲೈಡಿಂಗ್ (80 Year old woman paragliding) ಮಾಡಿ ಎಲ್ಲರನ್ನೂ ಬೆರಗಾಗಿಸಿರೋ ಘಟನೆಯೊಂದು ನಡೆದಿದೆ. ಸ್ವಲ್ಪ ದಿನಗಳ ಹಿಂದೆ ಇದು ನಡೆದಿದ್ದು ಆ ವಿಡಿಯೋ ಈಗ ಸಕ್ಕತ್ ವೈರಲ್ ಆಗಿದೆ.

ಸಾಹಸ ಮಾಡಲು ವಯಸ್ಸಿನ ಹಂಗಿಲ್ಲ, ಇದು ನಮ್ಮ ನಮ್ಮ ಮನದ ಭಾವನೆಗಳ ಮೇಲೆ ಅವಲಂಬಿಸಿದೆ. ಇದಕ್ಕೆ ವೈರಲ್ ಆಗಿರುವ ಈ ವಿಡಿಯೋನೇ ಸಾಕ್ಷಿ. 80 ವರ್ಷದ ಅಜ್ಜಿಯು ಪ್ಯಾರಾಗ್ಲೈಡಿಂಗ್ ಮಾಡಿದ ವಿಡಿಯೋ ಅನ್ನು ಆಕೆಯ ಮೊಮ್ಮಗಳು ಇದೀಗ ಇನ್​ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಅದೂ ಕೂಡ ಅಜ್ಜಿ ಸೀರೆ ಉಟ್ಟುಕೊಂಡು ಸ್ವಲ್ಪವೂ ಭಯವಿಲ್ಲದಂತೆ, ಒಂಚೂರು ಕೂಗು ಹಾಕದೆ ಹಾರಾಟ ಮಾಡುತ್ತಿರುವುದು ಎಲ್ಲರನ್ನೂ ಬೆರಗಾಗಿಸಿದೆ. ಈ ವಿಡಿಯೋ ಅನ್ನು ಈಗಾಗಲೇ ಒಂದು ಮಿಲಿಯನ್​ಗಿಂತಲೂ ಹೆಚ್ಚು ಜನ ನೋಡಿದ್ದಾರೆ.

ಆದರೆ ಬೇಸರದ ವಿಷಯವೆಂದರೆ, ಈ ಅಜ್ಜಿ ಏಳು ವರ್ಷಗಳ ಹಿಂದೆ ತೀರಿಹೋಗಿದ್ದಾರೆ. ವಿಡಿಯೋ ಹಂಚಿಕೊಂಡ ಬಳಿಕ ಇದರ ಬಗ್ಗೆ ಮಾತನಾಡಿದ ಪ್ಯಾರಾಗ್ಲೈಡಿಂಗ್ ಅಜ್ಜಿಯ ಮೊಮ್ಮಗಳು ‘ನನ್ನ ಅಜ್ಜಿ ತೀರಿ ಏಳು ವರ್ಷಗಳಾಯಿತು, ಇಂದಿಗೂ ಅವರು ನಮ್ಮ ನೆನಪಲ್ಲಿದ್ದಾರೆ. ಅವಳನ್ನು ನಾನು ತುಂಬಾ ಪ್ರೀತಿಸುತ್ತೇನೆ. ಅವಳು ಎಂದಿಗೂ ನನಗೆ ಸ್ಪೂರ್ತಿಯಾಗಿದ್ದಾಳೆ. ಅಂದು ಅವಳು ಪ್ಯಾರಾಗ್ಲೈಡಿಂಗ್ ಮಾಡಿದ ವಿಡಿಯೋ ಮಾಡಿದ್ದೆ. ಅದು ನನ್ನ ಗ್ಯಾಲರಿಯಲ್ಲಿ ಹಾಗೆಯೇ ಇತ್ತು. ಆಕೆಯ ಸಾಧನೆಯನ್ನು, ಧೈರ್ಯವನ್ನು ಎಲ್ಲರೂ ನೋಡುವಂತಾಗಲಿ ಎಂದು ವಿಡಿಯೋ ಶೇರ್ ಮಾಡಿದ್ದೇನೆ’ ಎಂದಿದ್ದಾರೆ. ಒಟ್ಟಿನಲ್ಲಿ ಸೀರೆ ಉಟ್ಟುಕೊಂಡೇ, ಸ್ವಲ್ಪವೂ ಹೆದರದೆ ಆ ಪ್ರಾಯದಲ್ಲೂ ಆಕಾಶದಲ್ಲಿ ಹಾರಾಡಿದ ಈ ಅಜ್ಜಿಯನ್ನು ಎಲ್ಲರೂ ಮೆಚ್ಚಲೇ ಬೇಕು!

Leave A Reply