ಸುಬ್ರಹ್ಮಣ್ಯ:ಬಾಲಕಿಯ ಮಾನಭಂಗ-ಹಲ್ಲೆ-ಕೊಲೆಯತ್ನ ಪ್ರಕರಣ!!ಪೊಲೀಸರ ಲಿಸ್ಟ್ ನಲ್ಲಿರುವ ಆರೋಪಿಗಳು ಯಾರು-ಬೃಹತ್ ಪ್ರತಿಭಟನೆ ಕೈಬಿಟ್ಟದ್ದೇಕೆ?

ಸುಬ್ರಹ್ಮಣ್ಯ: ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಹಿಂದೂ ಬಾಲಕಿಯೊಂದಿಗೆ ಸುತ್ತಾಟ ನಡೆಸಿದ ಹಾಗೂ ಬಲವಂತವಾಗಿ ಪೀಡಿಸಿದ ಎನ್ನುವ ಕಾರಣಕ್ಕೆ ಮುಸ್ಲಿಂ ಯುವಕನ ಮೇಲೆ ದುಷ್ಕರ್ಮಿಗಳ ತಂಡವೊಂದು ಗಂಭೀರ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ಗಾಯಗೊಂಡ ಗಾಯಳು ಆಸ್ಪತ್ರೆಗೆ ದಾಖಲಾದ ಬಳಿಕ ಸುದ್ದಿ ಎಲ್ಲೆಡೆ ಹಬ್ಬಿದ್ದು, ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ ಬೆನ್ನಲ್ಲೇ ಹಿಂದೂ ಯುವಕರ ಮೇಲೆ ಪೊಲೀಸರು ಅನ್ಯಾಯ ನಡೆಸುತ್ತಿದ್ದಾರೆ ಎನ್ನುವ ಆರೋಪವೊಂದು ಕೇಳಿ ಬಂದಿತ್ತು.

ಗಾಯಾಳು ನೀಡಿದ ದೂರಿನಂತೆ ಪೊಲೀಸರು ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಮಟ್ಟ ಹಾಕಲು ಕಾರ್ಯಚರಣೆ ನಡೆಸಿದ್ದು, ಈ ವೇಳೆ ಕೆರಳಿದ ಹಿಂದೂ ಸಂಘಟನೆಗಳು ವಿನಃ ಕಾರಣ ಕಾರ್ಯಕರ್ತರನ್ನು ಪೊಲೀಸರು ಕೇಸಿನಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಹಾಗೂ ಕೃತ್ಯದಲ್ಲಿ ಭಾಗಿಯಾಗದ ಅಮಾಯಕರನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಆರೋಪಿಸಿ ಠಾಣಾ ಮುಂಭಾಗ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು.

ಸಂತ್ರಸ್ತ ಬಾಲಕಿಯ ಪೋಷಕರಿಂದ ದೂರು!

ಸಂತ್ರಸ್ತ ಬಾಲಕಿಯು ಸ್ಥಳೀಯ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ನಡೆಸುತ್ತಿದ್ದು,ಎಂದಿನಂತೆ ಕಾಲೇಜು ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಯುವಕ ಹಫೀದ್ ಎಂಬಾತ ರಸ್ತೆ ಬದಿಯಿಂದಲೇ ಹಿಂಬಾಲಿಸಿ, ಬಳಿಕ ಬಸ್ಸು ನಿಲ್ದಾಣದಲ್ಲಿ ಪ್ರೀತಿಸುವಂತೆ ಪೀಡಿಸಿ, ಮೊಬೈಲ್ ನಂಬರ್ ಕೇಳಿದ್ದಾನೆ ಎನ್ನಲಾಗಿದೆ. ಇದಕ್ಕೆ ಬಾಲಕಿ ಒಪ್ಪದೇ ಆತನನ್ನು ತಿರಸ್ಕರಿಸಿದಾಗ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಬಳಿಕ ಬಾಲಕಿ ಮನೆಗೆ ಹಿಂದಿರುಗಿ ಪೋಷಕರಲ್ಲಿ ವಿಷಯ ತಿಳಿಸಿದ್ದು, ಸದ್ಯ ಆಕೆಯ ಪೋಷಕರು ನೀಡಿದ ದೂರನಂತೆ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಗಾಯಾಳು ನೀಡಿದ ದೂರಿನಲ್ಲೇನಿದೆ!?

ಸದ್ರಿ ಪ್ರಕರಣದಲ್ಲಿ ಬಾಲಕಿಯು ಯುವಕನಿಗೆ ಸಾಮಾಜಿಕ ಜಾಲತಾಣವೊಂದರ ಮೂಲಕ ಪರಿಚಯವಾಗಿದ್ದು, ಆ ಹಿನ್ನೆಲೆಯಲ್ಲಿ ಈ ಹಿಂದೆಯೂ ಕೆಲ ಬಾರಿ ಆಕೆಯನ್ನು ಭೇಟಿಯಾಗಿದ್ದ.ಅದರಂತೆ ಘಟನೆ ನಡೆದ ದಿನವೂ ಭೇಟಿಯಾಗಲು ಬಂದಿದ್ದು, ಆಕೆಯೊಂದಿಗೆ ಮಾತನಾಡುತ್ತಿದ್ದ ವೇಳೆ ಜೀಪೊಂದರಲ್ಲಿ ಬಂದ ಅಪರಿಚಿತ ತಂಡವೊಂದು ಕುಮಾರಧಾರ ಬಳಿಯ ಹಳೇ ಕಟ್ಟಡವೊಂದರ ಕೋಣೆಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ, ಕೊಲೆಯತ್ನ ನಡೆಸಿದಲ್ಲದೇ ಜೀವ ಬೆದರಿಕೆ ಹಾಕಿ ನಗದು ಹಾಗೂ ಮೊಬೈಲ್ ಕಸಿದುಕೊಂಡಿದ್ದಾರೆ ಎಂದು ದೂರಲಾಗಿದೆ.

ಸದ್ಯ ಗಾಯಾಳು ನೀಡಿದ ದೂರಿನ ಆಧಾರದಲ್ಲಿ ಅಪರಿಚಿತ 12 ಮಂದಿಯ ವಿರುದ್ಧ ಕಲಂ 323,324,307,365,143,147 ಜೊತೆಗೆ ಐಪಿಸಿ 149 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಸದ್ಯ ಇಡೀ ಪ್ರಕರಣದಲ್ಲಿ ಹಲವು ತಿರುವುಗಳಿದ್ದು,ಲವ್ ಜಿಹಾದ್ ಬಗ್ಗೆ ಹಿಂದೂ ಸಂಘಟನೆಗಳು ಅಲರ್ಟ್ ಆಗಿರುವ ಹೊತ್ತಲ್ಲೇ ಅನ್ಯ ಕೋಮಿನ ಜೋಡಿ ಸುತ್ತಾಟ ನಡೆಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.

ಸಂಜೆ ವೇಳೆಗೆ ಘಟನೆ ನಡೆದಿದ್ದರೂ ಅಲ್ಲಿನ ಪ್ರಮುಖರಿಗೆ ಯಾವುದೇ ಮಾಹಿತಿ ಇರಲಿಲ್ಲ ಹಾಗೂ ಈ ಕೃತ್ಯವನ್ನು ಸಂಘಟನೆಯ ಯುವಕರು ನಡೆಸಿಲ್ಲ ಎನ್ನುವುದು ಅಲ್ಲಿನವರ ಸ್ಪಷ್ಟನೆ. ಹಲ್ಲೆ ಹಾಗೂ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾದವರು ಸ್ಥಳೀಯರೇ ಅಥವಾ ಹೊರಗಿನವರೇ ಎನ್ನುವ ಬಗ್ಗೆ ಸುಬ್ರಹ್ಮಣ್ಯ ಪರಿಸರದಲ್ಲಿ ಅನುಮಾನದ ಮಾತುಗಳು ಕೇಳಿ ಬಂದಿದ್ದು, ಗಾಯಾಳು ನೀಡಿದ ಹೇಳಿಕೆಯಂತೆ SSSPU ಎಂದು ಬರೆದಿರುವ ಟಿ-ಶರ್ಟ್ ಹಾಕಿದ ಯುವಕರು ಯಾರೆನ್ನುವುದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.

ಈ ಬಗ್ಗೆ ಹಿಂದೂ ಹಿತರಕ್ಷಣಾ ವೇದಿಕೆ ಸುಳ್ಯ ತಾಲೂಕು ವತಿಯಿಂದ ಇಂದು ಸುಬ್ರಹ್ಮಣ್ಯ ಠಾಣಾ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಸ್ಥಳಕ್ಕೆ ಜಮಾಯಿಸುತ್ತಿದ್ದಂತೆ ಪೊಲೀಸರು ಪ್ರಮುಖರನ್ನು ಕರೆಸಿ ಮಾತುಕತೆ ನಡೆಸಿದ್ದು, ಬಳಿಕ ಪ್ರತಿಭಟನೆ ಕೈಬಿಡಲಾಯಿತು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಹಲ್ಲೆ ನಡೆಸಿದ ಆರೋಪಿಗಳ ಬಂಧನ ಇನ್ನಷ್ಟೇ ಆಗಬೇಕಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Leave A Reply

Your email address will not be published.