ಅಡಿಕೆ ಬೆಳೆಗೆ ಭವಿಷ್ಯವಿಲ್ಲ – ಅರಗ ಜ್ಞಾನೇಂದ್ರ
ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿದ್ದು, ಈ ಅಧಿವೇಶನದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ರವರು ಅಡಿಕೆ ಬೆಳೆಗೆ ಪ್ರೋತ್ಸಾಹ ನೀಡಬಾರದು, ಈ ಬೆಳೆಗೆ ಭವಿಷ್ಯವೇ ಇಲ್ಲ ಎಂಬ ಹೇಳಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ವ್ಯಾಪಕವಾಗಿ ವಿಸ್ತಾರವಾಗುತ್ತಿರುವ ಅಡಕೆ ಬೆಳೆಗೆ ಅಂಕುಶ ಬೇಕು. ಅನಿರ್ಬಂಧಿತವಾಗಿ ಅಡಿಕೆ ಬೆಳೆಯುವ ಪ್ರದೇಶ ವಿಸ್ತಾರವಾಗುತ್ತಿದೆ. ಆಂಧ್ರಪ್ರದೇಶ ಒಂದರಲ್ಲೇ 2 ಸಾವಿರ ಎಕ್ಟೇರ್ ನಲ್ಲಿ ಅಡಿಕೆ ಬೆಳೆ ಬರುತ್ತಿದೆ. ಆದ್ದರಿಂದ ಅಡಿಕೆಯ ಭವಿಷ್ಯ ಬಹಳ ದಿನ ಇಲ್ಲ, ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕವಾಗಿ ಅಡಕೆ ಕೃಷಿ ಮಾಡುತ್ತಿರುವ ರೈತರು ಸಂಕಷ್ಟದ ದಿನಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಬಯಲು ಸೀಮೆ ಕಡೆ ಡ್ರಿಪ್ರಿಗೇಷನ್ ಅನ್ನು ತೆಗೆದು ಹಾಕಿದೆ. ಮಲ್ನಾಡಿನಲ್ಲಿ ಎಲಿಗೇಷನ್ ಇಲ್ಲ, ಇಲ್ಲಿ ಡ್ರಿಪ್ರಿಗೇಷನ್ ಗೆ ಅವಕಾಶ ಮಾಡಿಕೊಟ್ಟಿದೆ. ಅಡಿಕೆ ಜಾಸ್ತಿ ಬೆಳೆಯೋದರಲ್ಲಿ ಅರ್ಥವೇ ಇಲ್ಲಾ ಯಾಕೆಂದರೆ ಅದು ನಮ್ಮ ಭವಿಷ್ಯಕ್ಕೆ ಬಹಳ ಮಾರಕವಾಗಲಿದೆ. ರಾಜ್ಯದ ಎಲ್ಲಾ ಕಡೆ ಅಡಿಕೆ ಬೆಳೆಯಲು ಮುಂದಾಗುತ್ತಿದ್ದು, ಮುಂದೊಂದು ದಿನ ಅಡಿಕೆ ಬೆಲೆ ಮತ್ತಷ್ಟು ಕುಸಿತದಿಂದ ಅವರಿಗೆ ಮುಳುವಾಗಲಿದೆ.
ಸಾವಿರಾರು ಕೋಟಿ ರೂಪಾಯಿಗಳನ್ನು ವಿದೇಶದಿಂದ ಹಾಗೂ ವಿಶ್ವ ಬ್ಯಾಂಕ್ ಗಳಿಂದ ಸಾಲ ಪಡೆದು, ಜಲಾಶಯಗಳನ್ನು ಕಟ್ಟಿದ್ದು, ಷರತ್ತುಗಳನ್ನು ಉಲ್ಲಂಘಿಸಿ, ಹಗುರ ಬೆಳೆಗಳ ಬದಲು ಅಡಕೆ ತೋಟಗಳು ಬರುತ್ತಿವೆ, ಇದರಿಂದ ಮುಂದಿನ ದಿನಗಳಲ್ಲಿ, ಸಾಂಪ್ರದಾಯಿಕವಾಗಿ ಅಡಕೆ ಬೆಳೆದು, ಬದುಕನ್ನು ಕಟ್ಟಿಕೊಂಡಿರುವ, ಮಲೆನಾಡು ಹಾಗೂ ಕರಾವಳಿ ಪ್ರದೇಶದ ರೈತರು ಸಂಕಷ್ಟಕ್ಕೆ ತುತ್ತಾಗುವ ಭಯ ಆವರಿಸಿದೆ ಎಂದು ಹೇಳಿದರು.
ವರ್ಷದಲ್ಲಿ ಒಂದು ಕೋಟಿ ಅಡಿಕೆ ಗಿಡಗಳು ನರ್ಸರಿಯಿಂದ ಖಾಲಿಯಾಗುತ್ತಿವೆ. ಈ ಮಟ್ಟದಲ್ಲಿ ಹೋದ್ರೆ ಖಂಡಿತಾ ಅಡಿಕೆಗೆ ಭವಿಷ್ಯವಿಲ್ಲ. ಇದೊಂದು, ಅನಾರೋಗ್ಯಕರ ಬೆಳವಣಿಗೆ ಎಂದ ಸಚಿವರು, ಇಂತಹ ಪ್ರವೃತ್ತಿಗೆ, ಪ್ರೋತ್ಸಾಹ ನೀಡಬಾರದು ಹಾಗೂ ಕಡಿವಾಣ ಹಾಕಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸದ್ಯ ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದ್ದು, ಅಡಿಕೆ ಬೆಳೆಗಾರರಲ್ಲಿ ಆತಂಕ ಹೆಚ್ಚಿದೆ. ಹಲವರು ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದು, ಪರ-ವಿರೋಧದ ಚರ್ಚೆಗಳು ನಡೆಯುತ್ತಿದೆ..