Flood Video : ಹಠಾತ್ ಪ್ರವಾಹಕ್ಕೀಡಾದ ಮೆಕ್ಕಾ| ವೀಡಿಯೋ ವೈರಲ್
ಮೆಕ್ಕಾ ಎನ್ನುವುದು ಮುಸ್ಲಿಂ ಭಾಂದವರಿಗೆ ಒಂದು ಪವಿತ್ರ ತೀರ್ಥಕ್ಷೇತ್ರವಾಗಿದೆ. ಆದರೆ ಮೆಕ್ಕಾದಲ್ಲಿ ಅಕಾಲಿಕ ಮಳೆ ಸುರಿದಿದೆ ಹೌದು ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಅಲ್ಲಿನ ದೊಡ್ಡ ಮಸೀದಿಯಲ್ಲಿಯೂ ಕೂಡ ಪ್ರವಾಹ ಉಂಟಾಗಿದೆ. ಈಗಾಗಲೇ ನವೆಂಬರ್‌ನಲ್ಲಿಯೂ ಮಳೆಯಿಂದಾಗಿ ಕರಾವಳಿ ನಗರವಾದ ಜೆಡ್ಡಾದಲ್ಲಿ ಪ್ರವಾಹಕ್ಕೆ ಇಬ್ಬರು ಬಲಿಯಾಗಿದ್ದರು. ಆದರೆ ಇದೀಗ ಮತ್ತೊಮ್ಮೆ ಮಳೆ ಅಲ್ಲಿ ತೀವ್ರತರವಾದ ಪರಿಸ್ಥಿತಿ ಸೃಷ್ಟಿಸಿದೆ.
ಈಗಾಗಲೇ ಮೆಕ್ಕಾದ ಉತ್ತರದಲ್ಲಿರುವ ಜೆಡ್ಡಾ ಪ್ರಾಂತ್ಯದಲ್ಲಿ ಭಾರೀ ಮಳೆಯೊಂದಿಗೆ ಪ್ರವಾಹ ಮತ್ತು ಗುಡುಗು ಸಹಿತ ಮಳೆಯಾಗುವ ಬಗ್ಗೆ ಹವಾಮಾನ ಕೇಂದ್ರವು ಎಚ್ಚರಿಕೆ ನೀಡಿದೆ.
ಸೌದಿ ಅರೇಬಿಯಾದ ಮೆಕ್ಕಾ ನಗರದಲ್ಲಿ ಶುಕ್ರವಾರ ಡಿಸೆಂಬರ್ 23 ರಂದು ರಾತ್ರಿ ಸುರಿದ ಧಾರಾಕಾರ ಮಳೆಯ ನಂತರ ಹಠಾತ್ ಪ್ರವಾಹ ಸ್ಥಿತಿ ಉಂಟಾಗಿದೆ. ಈ ಪ್ರವಾಹ ನಗರದ ವಾಹನಗಳು ಮತ್ತು ಆಸ್ತಿಪಾಸ್ತಿಗಳಿಗೆ ಭಾರೀ ಹಾನಿಯನ್ನುಂಟು ಮಾಡಿದೆ.
ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಗಿನ ಜಾವದವರೆಗೆ ಮೆಕ್ಕಾದಲ್ಲಿ ಧಾರಾಕಾರ ಮಳೆ ಸುರಿದಿದೆ. ರಾಷ್ಟ್ರೀಯ ಹವಾಮಾನ ಕೇಂದ್ರವು ಶುಕ್ರವಾರ ಮೆಕ್ಕಾ ಪ್ರಾಂತ್ಯದಲ್ಲಿ ಹವಾಮಾನ ಎಚ್ಚರಿಕೆ ನೀಡಿದೆ. ಅಲ್ಲಿನ ರಾನಿಯಾ, ತೈಫ್, ಅದಮ್ ಮತ್ತು ಮೇಸನ್ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಪ್ರಮಾಣದ ಮಳೆಯಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಹಲವು ವಿಮಾನಗಳ ಹಾರಾಟವನ್ನು ಕೂಡ ರದ್ದುಗೊಳಿಸಲಾಗಿದೆ.
ಪ್ರಬಲವಾದ ನೀರಿನ ಪ್ರವಾಹದಲ್ಲಿ ಕಾರುಗಳು ಕೊಚ್ಚಿಹೋಗುತ್ತಿರುವ ವಿಡಿಯೋವನ್ನು ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಚರಂಡಿ ಒಡೆದು ಹೋಗಿದ್ದರಿಂದ ಮಳೆ ನೀರು ರಸ್ತೆಗಳ ಮೇಲೆ ಹರಿದಿದೆ. ಕಿಂಗ್ ಅಬ್ದುಲ್ ಅಜೀಜ್ ವಿಮಾನ ನಿಲ್ದಾಣವನ್ನು ತಲುಪುವ ಮೊದಲು, ವಿಮಾನಗಳ ಬಗ್ಗೆ ಮಾಹಿತಿ ಪಡೆಯಲು ಸೂಚನೆಗಳನ್ನು ನೀಡಲಾಗಿದೆ.
ಮೆಕ್ಕಾಗೆ ಭೇಟಿ ನೀಡಿದ ಯಾತ್ರಾರ್ಥಿಗಳು ಕೂಡ ಮಳೆಯಿಂದಾಗಿ ಭಾರಿ ತೊಂದರೆ ಅನುಭವಿಸಬೇಕಾದ ಪ್ರಸಂಗ ಎದುರಾಗಿದೆ. ಮಳೆಯ ನಂತರ ನಗರದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ವರ್ಷದ ಜನವರಿಯಲ್ಲಿಯೂ ಸಹ, ಸೌದಿಯ ಜನರು ತಾಪಮಾನದಲ್ಲಿ ಭಾರಿ ಏರುಪೇರಾದ ನಂತರ ಭಾರೀ ಹಿಮಪಾತದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.