SBI ನಿಂದ ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು | ಸುರಂಗ ಕೊರೆದು ಕೈಚಳಕ ತೋರಿದ ಕಳ್ಳರು

Share the Article

ಕಳ್ಳರು ತಮ್ಮ ಚತುರತೆಯಿಂದ ಕಳ್ಳತನ ಮಾಡಿ ಕೊನೆಗೆ ಸಿಕ್ಕಿಬಿದ್ದಿರುವ ಉದಾಹರಣೆಗಳು ಬೇಕಾದಷ್ಟಿವೆ. ಹಾಗೇ ಇದೀಗ ಕಾನ್ಪುರದಲ್ಲಿ ದರೋಡೆಕೋರರು ಸುರಂಗ ಕೊರೆದು ಅಲ್ಲಿನ SBI ಶಾಖೆಯಿಂದ ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ದರೋಡೆಕೋರರು ಕಾನ್ಪುರದಲ್ಲಿನ ಎಸ್‌ಬಿಐ ಶಾಖೆಗೆ ಕನ್ನ ಹಾಕಿದ್ದು, ಅಲ್ಲಿಗೆ ತೆರಳಲು ಗುಪ್ತ ಮಾರ್ಗವನ್ನು ಬಳಸಿದ್ದಾರೆ. ಅದಕ್ಕೆಂದು ಸುರಂಗ ಕೊರೆದು ಶಾಖೆಯ ಒಳ ನುಗ್ಗಿದ್ದಾರೆ. ನಂತರ ಅಲ್ಲಿರುವ ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿದ್ದಾರೆ.

ಕಳ್ಳರು ಚಿನ್ನವಿರಿಸಿದ್ದ ಲಾಕರ್ ತೆರೆಯಲು ಗ್ಯಾಸ್ ಕಟ್ಟರ್ ಅನ್ನು ಬಳಸಿದ್ದಾರೆ. ಅಲ್ಲದೆ ಖದೀಮರು ಅಲಾರಾಂ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿ ಸ್ಟ್ರಾಂಗ್‌ರೂಮ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ಬೇರೆಡೆಗೆ ತಿರುಗಿಸಿಟ್ಟು ತಮ್ಮ ಕೈಚಳಕ ತೋರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲಿನ ಬ್ಯಾಂಕ್ ಅಧಿಕಾರಿಗಳು, ಸುಮಾರು 1 ಕೋಟಿ ರೂ. ಮೌಲ್ಯದ 1.8 ಕೆಜಿ ಚಿನ್ನಾಭರಣ ಕಳ್ಳತನವಾಗಿದೆ ಎಂದು ತಿಳಿಸಿದ್ದಾರೆ. ಇದೀಗ ಸ್ಥಳದಲ್ಲಿ ಪೊಲೀಸ್ ಕಾರ್ಯಾಚರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Leave A Reply