ಹೆಣ್ಣಿನ ಚಂದದ ಮುಖಕ್ಕೆ ಕಾರಣವಾಗುತ್ತೆ ಈ ಕಿತ್ತಳೆ ಹಣ್ಣಿನ ಸಿಪ್ಪೆ!
ಚಳಿಗಾಲದಲ್ಲಿ ನಮ್ಮ ದೇಹದ ತೇವಾಂಶವು ಕಡಿಮೆಯಾಗುತ್ತದೆ. ಹಾಗಾಗಿ ತ್ವಚೆ ಮತ್ತು ಮುಖದ ಆರೈಕೆ ಬಹಳ ಮುಖ್ಯ. ಅದರಲ್ಲೂ ಹೆಣ್ಣು ಮಕ್ಕಳಂತೂ ತ್ವಚೆಯ ಆರೈಕೆಗಾಗಿ ಸೂಪರ್ ಮಾರ್ಕೆಟ್’ಗಳಲ್ಲಿ ಸಿಗುವ ಬ್ಯೂಟಿ ಪ್ರೊಡಕ್ಟ್ ಅನ್ನು ಬಳಸುತ್ತಾರೆ. ಅನೇಕ ಪೋಷಕಾಂಶಗಳಿಂದ ಕೂಡಿದ ರಸಭರಿತ ಕಿತ್ತಳೆ ಹಣ್ಣು ನಮ್ಮ ದೇಹಕ್ಕೆ ಉಪಯೋಗವೆಂದು ತಿಳಿದಿದ್ದೀರಿ. ಆದರೆ ಅದರ ಸಿಪ್ಪೆಯಿಂದಲೂ ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸುವ ಶಕ್ತಿಯಿದೆ ಎಂದು ತಿಳಿದಿದೆಯೇ? ಹೆಣ್ಣಿನ ಅಂದ ಹೆಚ್ಚಿಸುವ ಕಿತ್ತಳೆ ಹಣ್ಣಿನ ಸಿಪ್ಪೆಯ ಉಪಯೋಗವನ್ನು ತಿಳಿದುಕೊಳ್ಳೋಣ ಬನ್ನಿ.
ಕಿತ್ತಳೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ವಿಟಮಿನ್ ಸಿ ಹೊಳೆಯುವ ಚರ್ಮಕ್ಕೆ ಸಹಾಯ ಮಾಡುತ್ತದೆ. ಇದು ಚರ್ಮವನ್ನು ಪೋಷಿಸುತ್ತದೆ ಮತ್ತು ಹೊಳಪು ನೀಡುತ್ತದೆ. ಸಿಪ್ಪೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳೂ ಇವೆ ಮತ್ತು ಇದು ಚರ್ಮಕ್ಕೆ ತುಂಬಾ ಲಾಭಕಾರಿ. ಇದರಲ್ಲಿ ಇರುವಂತಹ ಪೋಷಕಾಂಶಗಳು ಚರ್ಮಕ್ಕೆ ನೈಸರ್ಗಿಕವಾಗಿ ಪೋಷಣೆ ನೀಡುವುದು. ಕಪ್ಪು ಕಲೆ, ಮೊಡವೆ, ಬ್ಲ್ಯಾಕ್ ಹೆಡ್ ನಿವಾರಣೆ ಮಾಡಿಕೊಂಡು ನೈಸರ್ಗಿಕ ಕಾಂತಿ ಪಡೆಯಲು ಕಿತ್ತಳೆ ಸಿಪ್ಪೆಯ ಮಾಸ್ಕ್ ತಯಾರಿಸಿಕೊಳ್ಳಬಹುದು.
ಚರ್ಮದ ಆರೈಕೆಯ ಹೆಚ್ಚಿನ ಉತ್ಪನ್ನಗಳಲ್ಲಿ ಕೂಡ ಕಿತ್ತಳೆ ಸಿಪ್ಪೆ ಬಳಸಿಕೊಳ್ಳಲಾಗುತ್ತದೆ. ಕಿತ್ತಳೆಗೆ ಸಂಬಂಧಿಸಿದಂತೆ, ಕಿತ್ತಳೆಗಿಂತ ಸಿಪ್ಪೆಯು ಅತಿ ಹೆಚ್ಚು ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಅಲ್ಲದೆ, ಈ ಸಿಪ್ಪೆಯು ಆಂಟಿಆಕ್ಸಿಡೆಂಟ್ಗಳನ್ನು ಹೊಂದಿದ್ದು, ನಿಯಮಿತ ಬಳಕೆಯಿಂದ ಹೊಳೆಯುವ ಚರ್ಮ ನಿಮ್ಮದಾಗುತ್ತದೆ. ಚರ್ಮದ ವಯಸ್ಸನ್ನು ಕಡಿಮೆ ಮಾಡುತ್ತದೆ. ಸೂಕ್ಷ್ಮ ರೇಖೆಗಳನ್ನು ತೆಗೆದುಹಾಕುತ್ತದೆ ಮತ್ತು ಚರ್ಮದಲ್ಲಿ ಮಂದ ಮತ್ತು ಶುಷ್ಕತೆಯನ್ನು ಉಂಟುಮಾಡುವುದಿಲ್ಲ.
ಕಿತ್ತಳೆ ಸಿಪ್ಪೆಯು ಬ್ಯಾಕ್ಟೀರಿಯಾ ವಿರೋಧಿ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಮೊಡವೆ ಮತ್ತು ಎಣ್ಣೆಯುಕ್ತ ಚರ್ಮಕ್ಕೆ ಉತ್ತಮ ಚಿಕಿತ್ಸೆಯಾಗಿದೆ. ಮುಖದ ಮೇಲಿನ ಕಲೆಗಳು ಮತ್ತು ಪಿಗ್ಮೆಂಟೇಶನ್ಗೆ ಕಿತ್ತಳೆ ಸಿಪ್ಪೆಯು ಅದ್ಭುತ ಪ್ರಯೋಜನಕಾರಿಯಾಗಿದೆ. ಒಣ ರೂಪದಲ್ಲಿ ಕಿತ್ತಳೆ ಸಿಪ್ಪೆಯನ್ನು ಬಳಸುವುದು ಇನ್ನೂ ಉತ್ತಮ.
ನೈಸರ್ಗಿಕವಾಗಿ ಮುಖವನ್ನು ಕಾಂತಿಯುತವಾಗಿಸುವಲ್ಲಿ, ಚರ್ಮದ ಟೋನ್ ಸುಧಾರಿಸುವಿಕೆಯಲ್ಲಿ ಕಿತ್ತಳೆ ಸಿಪ್ಪೆಯಿಂದ ತ್ವರಿತ ಮತ್ತು ಪರಿಣಾಮಕಾರಿ ಫಲಿತಾಂಶಗಳನ್ನು ಪಡೆಯಬಹುದು. ಇದಕ್ಕಾಗಿ ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿ, ಎರಡು ಚಮಚ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಫೇಸ್ ಪ್ಯಾಕ್ ನಂತೆ ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಇದು ತಾಜಾ, ಸ್ಪಷ್ಟ, ಬಿಗಿಯಾದ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ.
ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿಗೆ ಒಂದು ಚಿಟಿಕೆ ಅರಿಶಿನ, ಒಂದು ಚಮಚ ನೈಸರ್ಗಿಕ ಜೇನುತುಪ್ಪವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ರೀತಿ ತಯಾರಿಸಿರಿ. ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ, 5 ರಿಂದ 10 ನಿಮಿಷಗಳ ನಂತರ ನಿಮ್ಮ ಮುಖವನ್ನು ರೋಸ್ ವಾಟರ್ ನಿಂದ ತೊಳೆಯಿರಿ. ಇದು ಚರ್ಮದಿಂದ ಟ್ಯಾನ್ ಅನ್ನು ತೆಗೆದುಹಾಕುತ್ತದೆ. ಆದರೆ, ಮೊಡವೆ ಪೀಡಿತ ಚರ್ಮದ ಮೇಲೆ ಬಳಸಬೇಡಿ.
ಎರಡು ಚಮಚ ಕಿತ್ತಳೆ ಸಿಪ್ಪೆಯ ಪುಡಿ, ಚಿಟಿಕೆ ಸುಣ್ಣ, ಶ್ರೀಗಂಧದ ಪುಡಿ, ನಿಂಬೆ ರಸ ಸೇರಿಸಿ ನಯವಾದ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 30 ನಿಮಿಷಗಳ ನಂತರ ತೊಳೆಯಿರಿ. ಎಣ್ಣೆಯುಕ್ತ ಮೊಡವೆ ಪೀಡಿತ ಚರ್ಮಕ್ಕೆ ಇದು ಒಳ್ಳೆಯದು. ಇದು ಕಂದುಬಣ್ಣವನ್ನು ಹೋಗಲಾಡಿಸುತ್ತದೆ ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
ವಾರದಲ್ಲಿ ಎರಡರಿಂದ ಮೂರು ಬಾರಿ ಕಿತ್ತಳೆ ಸಿಪ್ಪೆಯ ಫೇಸ್ ಮಾಸ್ಕ್ ಹಚ್ಚುವುದರಿಂದ ಈ ಸಮಸ್ಯೆಗಳು ನಿವಾರಣೆಯಾಗುತ್ತದೆ. ಮುಖವು ಕಾಂತಿಯುತವಾಗುವುದಲ್ಲದೆ ಸಂಪೂರ್ಣ ಪೋಷಣೆ ಪಡೆಯುತ್ತದೆ. ಸಿಂಪಲ್ ಆದ ಕಿತ್ತಳೆ ಹಣ್ಣಿನ ಸಿಪ್ಪೆಯ ಫೇಸ್ ಮಾಸ್ಕ್ ಅನ್ನು ಮನೆಯಲ್ಲೇ ತಯಾರಿಸಿ, ಒಮ್ಮೆ ಟ್ರೈ ಮಾಡಿ ನೋಡಿ.